ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ಭೂತಾನ್ ದೇಶದ ಪಾರೋ ಎಫ್ಸಿ ವಿರುದ್ಧದ ಹಣಾಹಣಿಯಲ್ಲಿ ಭರ್ಜರಿಯಾಗಿ ಗೆದ್ದಿದೆ. ಈ ಮೂಲಕ ಎಎಫ್ಸಿ ಕಪ್ನ ಅರ್ಹತಾ ಸುತ್ತಿನ ಹಂತಿಮ ಹಂತ ತಲುಪಿದೆ. ನಿನ್ನೆ ಸಂಜೆ ಪಾರೋ ಎಫ್ಸಿ ವಿರುದ್ಧ ನಡೆದ ಎರಡನೇ ಲೆಗ್ ಪಂದ್ಯದಲ್ಲಿ ಬಿಎಫ್ಸಿ 9-1 ಗೋಲುಗಳಿಂದ ಸೋಲಿಸಿತು. ಭೂತಾನ್ನ ಟಿಂಫುನಲ್ಲಿ ನಡೆದಿದ್ದ ಮೊದಲ ಲೆಗ್ನಲ್ಲಿ 1-0 ಯಿಂದ ಗೆದ್ದಿದ್ದ ಬೆಂಗಳೂರಿಗರು ಒಟ್ಟಾರೆ 10-1 ಗೋಲುಗಳಿಂದ ಈ ಹಣಾಹಣಿ ಜಯಿಸಿದ್ದಾರೆ.
ಶ್ರೀ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಎರಡನೇ ಲೆಗ್ ಪಂದ್ಯ ನಿರೀಕ್ಷೆಮೀರಿ ಏಕಪಕ್ಷೀಯವೆನಿಸಿತು. ಮಿಡ್ಫೀಲ್ಡರ್ ಥೋಂಗ್ ಹಾವೋಕಿಪ್ ಬರೋಬ್ಬರಿ 4 ಗೋಲು ಗಳಿಸಿದರು. ಜಮೈಕಾದ ಡೇಶೋರ್ನ್ ಬ್ರೌನ್ 3 ಗೋಲು ಹೊಡೆದರೆ, ಇನ್ನಿತರ ಎರಡು ಗೋಲುಗಳು ಜುವನನ್ ಗೋಂಜಾಲೆಜ್ ಮತ್ತು ನಿಲಿ ಪೆರ್ಡೋಮೋ ಅವರಿಂದ ಬಂದವು. ವಿಶೇಷ ಅಂದರೆ, ಬೆಂಗಳೂರು ತಂಡದ ಮಾಜಿ ಆಟಗಾರ ಛೆಂಚೋ ಗ್ಯೆಲ್ಶೆನ್ ಅವರೇ ಪಾರೋ ಎಫ್ಸಿ ಪರ ಗೋಲು ಗಳಿಸಿದರು. ಸ್ಟಾರ್ ಆಟಗಾರ ಸುನೀಲ್ ಛೇಟ್ರಿ ಅವರ ಅನುಪಸ್ಥಿತಿಯಲ್ಲೂ ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡ ಇಷ್ಟು ಅನಾಯಾಸ ಗೆಲುವು ಸಾಧಿಸಿರುವುದು ಗಮನಾರ್ಹ. ಗಾಯದ ಕಾರಣದಿಂದಾಗಿ ಛೇಟ್ರಿ ಅವರಿಗೆ ವಿಶ್ರಾಂತಿ ನೀಡಲಾಗಿದೆ.
ಇದನ್ನೂ ಓದಿ: ತಾರಕಕ್ಕೇರಿದ ರಾಹುಲ್-ನೀಶಮ್ ಜಗಳ; ಟ್ವಿಟ್ಟರ್ನಲ್ಲಿ ಕಿವೀಸ್ ಆಟಗಾರನಿಗೆ ಕನ್ನಡಿಗನಿಂದ ಖಡಕ್ ವಾರ್ನಿಂಗ್
ಈಗ ಎಎಫ್ಸಿ ಕಪ್ನ ಅರ್ಹತಾ ಸುತ್ತಿನ ಕೊನೆಯ ಹಂತದಲ್ಲಿ ಬೆಂಗಳೂರು ಎಫ್ಸಿ ತಂಡ ಮಾಲ್ಡೀವ್ಸ್ ದೇಶದ ಮಾಜಿಯಾ ತಂಡದ ಸವಾಲು ಎದುರಿಸಲಿದೆ. ಎರಡು ಲೆಗ್ಗಳಲ್ಲಿ ಪಂದ್ಯ ನಡೆಯಲಿದೆ. ಫೆ. 19ರಂದು ಮಾಲ್ಡೀವ್ಸ್ನಲ್ಲಿ ಮೊದಲ ಲೆಗ್ ಪಂದ್ಯ ನಡೆಯುತ್ತದೆ. ಫೆ. 26ರಂದು ಬೆಂಗಳೂರಿನಲ್ಲಿ ಎರಡನೇ ಲೆಗ್ ಪಂದ್ಯ ನಡೆಯಲಿದೆ.
ಮಾಜಿಯಾ ತಂಡದ ವಿರುದ್ಧ ಬೆಂಗಳೂರು ಎಫ್ಸಿ ಗೆದ್ದರೆ ಎಎಫ್ಸಿ ಕಪ್ನ ಪ್ರಧಾನ ಹಂತಕ್ಕೆ ಅರ್ಹತೆ ಪಡೆಯಲಿದೆ. ಇ ಗುಂಪಿನಲ್ಲಿ ಸ್ಥಾನ ಪಡೆಯಲಿದೆ. ಹಾಲಿ ಐ-ಲೀಗ್ ಚಾಂಪಿಯನ್ ಚೆನ್ನೈ ಸಿಟಿ ಎಫ್ಸಿ ಕೂಡ ಇದೇ ಗುಂಪಿನಲ್ಲಿದೆ. ಬಾಂಗ್ಲಾದೇಶದ ಬಶುಂಧರಾ ಕಿಂಗ್, ಮಾಲ್ಡೀವ್ಸ್ನ ಟಿಸಿ ಸ್ಪೋರ್ಟ್ಸ್ ಕ್ಲಬ್, ಚೆನ್ನೈ ಸಿಟಿ ಮತ್ತು ಬೆಂಗಳೂರು ಎಫ್ಸಿ/ಮಾಜಿಯಾ ತಂಡಗಳು ಈ ಇ ಗುಂಪಿನಲ್ಲಿವೆ. ಮಾರ್ಚ್ 11ರಿಂದ ಇದರ ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ: IPL 2020: ಆರ್ಸಿಬಿ ಫ್ರಾಂಚೈಸಿ ಮಾಡಿದ ಕೆಲಸ ಕಂಡು ದಂಗಾದ ಅಭಿಮಾನಿಗಳು; ಚಹಾಲ್ ಕೂಡ ಶಾಕ್!
ಎಎಫ್ಸಿ ಕಪ್ನಲ್ಲಿ ಈಗಾಗಲೇ ಮೂರು ಬಾರಿ ಆಡಿರುವ ಬೆಂಗಳೂರು ಎಫ್ಸಿ ತಂಡ ಒಮ್ಮೆ ಫೈನಲ್ವರೆಗೂ ಹೋಗಿ ಭಾರತದ ಮಟ್ಟಿಗೆ ಇತಿಹಾಸ ನಿರ್ಮಿಸಿತ್ತು. ಏಷ್ಯಾದ ಘಟಾನುಘಟಿ ತಂಡಗಳು ಕಣದಲ್ಲಿರುವ ಎಎಫ್ಸಿ ಕಪ್ ಟೂರ್ನಿಯನ್ನು ಬೆಂಗಳೂರಿಗರು ಈ ಬಾರಿ ಜಯಿಸಿ ಹೊಸ ಇತಿಹಾಸ ನಿರ್ಮಿಸುತ್ತಾ ಎಂಬ ಕುತೂಹಲವಿದೆ.
ಇದೇ ವೇಳೆ, ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಬೆಂಗಳೂರು ಎಫ್ಸಿ ತಂಡ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಅಸಾಧ್ಯವಾಗಿದೆ. 16 ಸುತ್ತುಗಳ ನಂತರ ಬಿಎಫ್ಸಿ 29 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದೆ. ಇನ್ನೆರಡು ಸುತ್ತುಗಳಷ್ಟೇ ಬಾಕಿ ಇದ್ದು ಅಗ್ರ ಸ್ಥಾನಕ್ಕೇರುವ ದಾರಿ ಬಂದ್ ಆಗಿದೆ. ಗೋವಾ ಎಫ್ಸಿ ಅಥವಾ ಕೋಲ್ಕತಾ ತಂಡಕ್ಕೆ ಈ ಬಾರಿಯ ಐಎಸ್ಎಲ್ ಚಾಂಪಿಯನ್ ಪಟ್ಟ ದಕ್ಕಬಹುದು.
ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್ಚಾಟ್ನಲ್ಲೂ ಹಿಂಬಾಲಿಸಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ