Abhimanyu Mishra - ಅಭಿಮನ್ಯು ಮಿಶ್ರಾ ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್

ಭಾರತೀಯ ಮೂಲದ ಅಭಿಮನ್ಯು ಮಿಶ್ರಾ 12 ವರ್ಷ ನಾಲ್ಕು ತಿಂಗಳಲ್ಲಿ ಚೆಸ್ ಗ್ರ್ಯಾಂಡ್ ಮಾಸ್ಟರ್ ಪಟ್ಟ ಗಳಿಸಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ಸಾಧನೆ ಮಾಡಿದ ವಿಶ್ವ ದಾಖಲೆ ಅವರದ್ದು.

ಅಭಿಮನ್ಯು ಮಿಶ್ರಾ

ಅಭಿಮನ್ಯು ಮಿಶ್ರಾ

  • Share this:
ಬೆಂಗಳೂರು: ಭಾರತೀಯ ಮೂಲದ ಅಮೆರಿಕನ್ ಚೆಸ್ ಪ್ರತಿಭೆ ಅಭಿಮನ್ಯು ಮಿಶ್ರಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ವಿಶ್ವದ ಅತ್ಯಂತ ಕಿರಿಯ ವಯಸ್ಸಿನಲ್ಲಿ (12 ವರ್ಷ ನಾಲ್ಕು ತಿಂಗಳು 25 ದಿನ) ಗ್ರ್ಯಾಂಡ್ ಮಾಸ್ಟರ್ ಆಗಿ ವಿಶ್ವ ದಾಖಲೆ ಬರೆದಿದ್ದಾರೆ. 19 ವರ್ಷಗಳ ಹಿಂದಿನ ದಾಖಲೆ ಮುರಿದಿದ್ದಾರೆ. ವಿಶ್ವದ ಅಗ್ರಗಣ್ಯ ಚೆಸ್ ಅಟಗಾರ ಸೆರ್ಗೇಯ್ ಕರ್ಜಾಕಿನ್ ಅವರಿಗೆ ಗ್ರ್ಯಾಂಡ್ ಮಾಸ್ಟರ್ ಪಟ್ಟ ಸಿಕ್ಕಾಗ ವಯಸ್ಸು 12 ವರ್ಷ ಏಳು ತಿಂಗಳಾಗಿತ್ತು. ಅವರಿಗಿಂತ ಕಿರಿಯ ವಯಸ್ಸಿನಲ್ಲಿ ಅಭಿಮನ್ಯು ಗ್ರ್ಯಾಂಡ್ ಮಾಸ್ಟರ್ ಎನಿಸಿದ್ದಾರೆ. ಹಂಗರಿಯ ಬುಡಾಪೆಸ್ಟ್ ನಗರದಲ್ಲಿ ಇತ್ತೀಚೆಗೆ ನಡೆದ ವೆಜೆರ್​ಕೆಪ್ಜೋ ಜಿಎಂ ಮಿಕ್ಸ್ ಚೆಸ್ ಟೂರ್ನಿಯಲ್ಲಿ ಅಭಿಮನ್ಯು ಮಿಶ್ರಾಗೆ ಮೂರನೇ ಹಾಗೂ ಕೊನೆಯ ಗ್ರ್ಯಾಂಡ್ ಮಾಸ್ಟರ್ ನಾರ್ಮ್ ಸಿಕ್ಕಿದೆ.

ಗ್ರ್ಯಾಂಡ್ ಮಾಸ್ಟರ್ ಪಟ್ಟ ಗಳಿಸಲು ಆಟಗಾರ ಕನಿಷ್ಠ ಇಂಟರ್​ನ್ಯಾಷನಲ್ ಮಾಸ್ಟರ್ ಆಗಿರಬೇಕು. ಹಾಗೂ ಮೂರು ಟೂರ್ನಿಗಳಲ್ಲಿ ಜಿಎಂ ನಾರ್ಮ್​​ಗಳನ್ನ ಗೆಲ್ಲಬೇಕಾಗುತ್ತದೆ. ಕುತೂಹಲವೆಂದರೆ ಅಮೆರಿಕದ ಅಭಿಮನ್ಯು ಮಿಥುನ್ ಕಳೆದ ವರ್ಷ ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಇಂಟರ್ ನ್ಯಾಷನಲ್ ಮಾಸ್ಟರ್ ಆಗಿ ಹೊರಹೊಮ್ಮಿದ್ದರು. ಭಾರತದ ಆರ್ ಪ್ರಗ್ನಾನಂದ ಅವರ ದಾಖಲೆಯನ್ನು ಮುರಿದಿದ್ದರು. ಈ ವರ್ಷ (2021) ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅವರು ಎರಡು ಜಿಎಂ ನಾರ್ಮ್ ಸಂಪಾದಿಸಿದ್ದರು. ಆದರೆ, ಕೋವಿಡ್ ಕಾರಣದಿಂದ ಹೆಚ್ಚು ಟೂರ್ನಿಗಳಲ್ಲಿ ಆಡಲು ಸಾಧ್ಯವಾಗಲಿಲ್ಲ. ಬುಡಾಪೆಸ್ಟ್​ನಲ್ಲಿ ಅವರಿಗೆ ಆ ಸುವರ್ಣಾವಕಾಶ ಸಿಕ್ಕಿತು. ಈ ಟೂರ್ನಿಯ 9 ಸುತ್ತುಗಳಲ್ಲಿ 7 ಅಂಕ ಗಳಿಸಿ ಜಿಎಂ ನಾರ್ಮ್ ಪಡೆದರು. ಸದ್ಯ ಒಟ್ಟಾರೆ ಚೆಸ್ ವೃತ್ತಿಜೀವನದಲ್ಲಿ ಅವರ ಇಲೋ ರೇಟಿಂಗ್ ಕೂಡ 2400ರ ಗಡಿ ದಾಟಿದೆ.

ಇದನ್ನೂ ಓದಿ: Aditi Ashok: ಟೋಕಿಯೋ ಒಲಂಪಿಕ್ಸ್‌ಗೆ ಅರ್ಹತೆ ಪಡೆದ ಬೆಂಗಳೂರಿನ ಗಾಲ್ಫರ್ ಅದಿತಿ ಅಶೋಕ್

ಅಭಿಮನ್ಯು ಮಿಶ್ರಾ ಅವರ ತಂದೆ ಹೇಮಂತ್ ಮಿಶ್ರಾ ಹಾಗೂ ತಾಯಿ ಸ್ವಾತಿ ಶರ್ಮಾ ಭಾರತ ಮೂಲದವರು. ಅಮೆರಿಕದ ನ್ಯೂಜೆರ್ಸಿ ಸಂಜಾತ ಅಭಿಮನ್ಯು ಕೇವಲ ಎರಡೂವರೆ ವರ್ಷ ವಯಸ್ಸಿನಲ್ಲೇ ಚೆಸ್ ಪಾನ್ ನಡೆಗಳನ್ನ ಕಲಿತಿದ್ದರು. ಐದನೇ ವಯಸ್ಸಿನಲ್ಲಿ ತನ್ನ ತಂದೆಯನ್ನೇ ಸೋಲಿಸುವ ಮಟ್ಟಕ್ಕೆ ಆಟದಲ್ಲಿ ನಿಷ್ಣಾತನಾಗಿದ್ದ. ಆಗಲೇ ಸ್ಥಳೀಯ ಟೂರ್ನಿಗಳಲ್ಲಿ ಪಾಲ್ಗೊಂಡು ಮಿಂಚತೊಡಗಿದ್ದ. ಈತನ ಚೆಸ್ ಪ್ರತಿಭೆಯನ್ನು ಆರಂಭದಲ್ಲೇ ಗುರುತಿಸಿದ್ದ ಕೋಚ್ ಅರುಣ್ ಪ್ರಸಾದ್ ಒಂದು ಪ್ರಸಂಗವನ್ನು ಹೀಗೆ ನೆನಪಿಸಿಕೊಳ್ಳುತ್ತಾರೆ: “ಆತ ಕೇವಲ 9ನೇ ವಯಸ್ಸಿನಲ್ಲಿದ್ದಾಗ 70 ವರ್ಷದ ಅನುಭವಿ ಆಟಗಾರರೊಬ್ಬರನ್ನು ಮಿಂಚಿನ ಗತಿಯಲ್ಲಿ ಸೋಲಿಸಿದ್ದ. ನನಗೆ ಹೊಸ ಇತಿಹಾಸ ನಿರ್ಮಾಣದ ಸುಳಿವು ಸಿಕ್ಕಿತ್ತು. ಈತ ಮಾಮೂಲಿಯ ಹುಡುಗನಲ್ಲ ಎಂದು ನನಗೆ ಬಹಳ ಬೇಗ ಅರಿವಾಯಿತು. ಆತ ಏನೇ ನೋಡಿದರೂ ಎಲ್ಲವನ್ನೂ ನೆನಪಲ್ಲಿಟ್ಟುಕೊಳ್ಳುತ್ತಾನೆ. 2014, 2015ರ ವರ್ಷದಲ್ಲಿ ನಡೆದ ಗೇಮ್​ಗಳ ಎಲ್ಲಾ ಮೂವ್​ಗಳು ಈತನ ತಲೆಯಲ್ಲಿ ರಿಜಿಸ್ಟರ್ ಆಗಿವೆ” ಎಂದು ಕೋಚ್ ಹೇಳುತ್ತಾರೆ.

ಈ ಚೈಲ್ಡ್ ಪ್ರಾಜಿಡಿ ಮುಂದೊಂದು ದಿನ ವಿಶ್ವ ಚಾಂಪಿಯನ್ ಆಗುತ್ತಾನಾ ಎಂಬುದನ್ನು ಕಾದುನೋಡಬೇಕು. ಈ ಹಿಂದೆ ವಿಶ್ವದ ಅತ್ಯಂತ ಕಿರಿಯ ಗ್ರ್ಯಾಂಡ್ ಮಾಸ್ಟರ್​ಗಳೆಂದು ದಾಖಲೆ ಬರೆದಿದ್ದ ಪೆಟ್ರೋಸಿಯನ್, ಬೋರಿಸ್ ಸ್ಪಾಸ್​ಕಿ, ಬಾಬಿ ಫಿಶರ್, ಜುಡಿತ್ ಪೋಲ್ಗರ್, ಸೆರ್ಗೇ ಕರ್ಜಾಕಿನ್ ಅವರ ಪೈಕಿ ಕರ್ಜಾಕಿನ್ ಹೊರತುಪಡಿಸಿ ಉಳಿದ ನಾಲ್ವರು ಚೆಸ್ ಆಟಗಾರರು ವಿಶ್ವ ಚಾಂಪಿಯನ್ ಆಗಿ ಸಾಧನೆ ಮಾಡಿದ್ದರು.

ಇನ್ನು, ಅಭಿಮನ್ಯು ಮಿಶ್ರಾಗೆ ಚೆಸ್ ಆಟ ಪರಮ ಇಷ್ಟ. ಇದರ ಜೊತೆಗೆ ಬಹಳ ವಿಡಿಯೋ ಗೇಮ್​ಗಳನ್ನ ಆಡುತ್ತಾನೆ. ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆಯುವ ಹಂಬಲವೂ ಈತನಿಗೆ ಇದೆ. ಕ್ರೀಡೆಯಲ್ಲಿ ಈತನ ಫೇವರಿಟ್ ಎಂದರೆ ದಾಖಲೆವೀರ ಈಜುಪಟು ಮೈಕೇಲ್ ಫೆಲ್ಪ್ಸ್. ಚೆಸ್​ನಲ್ಲಿ ಈತನಿಗೆ ಗ್ಯಾರಿ ಕ್ಯಾಸ್ಪರೋವ್ ಅಚ್ಚುಮೆಚ್ಚು.
Published by:Vijayasarthy SN
First published: