Bharath Subramaniyam: 14 ವರ್ಷದ ಭರತ್ ಸುಬ್ರಮಣಿಯಂಗೆ ಚೆಸ್ ಗ್ರ್ಯಾಂಡ್ ಮಾಸ್ಟರ್ ಪಟ್ಟ

Chess Grand Master: ಇಟಲಿಯಲ್ಲಿ ಇತ್ತೀಚೆಗೆ ನಡೆದ ವರ್ಗಾನಿ ಕಪ್ ಮುಕ್ತ ಚೆಸ್ ಟೂರ್ನಿಯಲ್ಲಿ ಮೂರನೇ ಜಿಎಂ ನಾರ್ಮ್ ಪಡೆಯುವ ಮೂಲಕ 14 ವರ್ಷದ ಭರತ್ ಸುಬ್ರಮಣಿಯಮ್ ಚೆಸ್ ಗ್ರ್ಯಾಂಡ್ ಮಾಸ್ಟರ್ ಪಟ್ಟ ಗಿಟ್ಟಿಸಿದ್ದಾರೆ.

ಮೊದಲ ಜಿಎಂ ನಾರ್ಮ್ ಪಡೆದ ವೇಳೆಯಲ್ಲಿ ಭರತ್ ಸುಬ್ರಮಣಿಯಂ

ಮೊದಲ ಜಿಎಂ ನಾರ್ಮ್ ಪಡೆದ ವೇಳೆಯಲ್ಲಿ ಭರತ್ ಸುಬ್ರಮಣಿಯಂ

  • Share this:
ಚೆನ್ನೈನ 14 ವರ್ಷದ ಭರತ್ ಸುಬ್ರಮಣ್ಯಂ ಭಾರತದ 73 ನೇ ಚೆಸ್ ಗ್ರ್ಯಾಂಡ್‍ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ. ಇಟಲಿಯಲ್ಲಿ ಇತ್ತೀಚೆಗೆ ನಡೆದ ವರ್ಗಾನಿ ಕಪ್ ಓಪನ್‍ನಲ್ಲಿ ತಮ್ಮ ಮೂರನೇ ಮತ್ತು ಅಂತಿಮ ಹಂತ ಪೂರ್ಣಗೊಳಿಸಿದ ನಂತರ ಭಾರತದ 73ನೇ ಚೆಸ್ ಗ್ರ್ಯಾಂಡ್‍ಮಾಸ್ಟರ್ ಪಟ್ಟ ಪಡೆದ ಭರತ್ ಸುಬ್ರಹ್ಮಣ್ಯಂ ದೇಶದ ಘನತೆಯನ್ನು ಹೆಚ್ಚಿಸಿದ್ದಾರೆ. 9 ಸುತ್ತುಗಳಿಂದ 6.5 ಅಂಕಗಳನ್ನು ಗಳಿಸಿದ ಸುಬ್ರಮಣ್ಯಂ ಒಟ್ಟಾರೆ ಸ್ಪರ್ಧೆಯಲ್ಲಿ ಏಳನೇ ಸ್ಥಾನ ಪಡೆದರು. ಈ ಮೂಲಕ ತಮ್ಮ ಮೂರನೇ ಜಿಎಂ ನಾರ್ಮ್ ಅನ್ನು ಪಡೆದುಕೊಂಡರು ಮತ್ತು ಅಗತ್ಯವಿರುವ 2,500 Elo ಮಾರ್ಕ್ ಅನ್ನು ಸಹ ಗಳಿಸಿ ಗ್ರ್ಯಾಂಡ್ ಮಾಸ್ಟರ್ (GM) ಎನಿಸಿಕೊಂಡರು.

ಗಮನಾರ್ಹವಾಗಿ, ಗ್ರ್ಯಾಂಡ್ ಮಾಸ್ಟರ್ ಆಗಲು, ಆಟಗಾರನು ಮೂರು GM ಹಂತಗಳನ್ನು ಪೂರೈಸಬೇಕು ಮತ್ತು 2,500 Elo ಪಾಯಿಂಟ್‍ಗಳ ಲೈವ್ ರೇಟಿಂಗ್ ಅನ್ನು ದಾಟಬೇಕು.

ಅಖಿಲ ಭಾರತ ಚೆಸ್ ಫೆಡರೇಶನ್ (ಎಐಸಿಎಫ್) ಕೂಡ ಹದಿಹರೆಯದವರ ಸಾಧನೆಗೆ ಅಭಿನಂದಿಸಿದೆ. "ಹದಿನಾಲ್ಕು ವರ್ಷದ ಭರತ್ ಸುಬ್ರಮಣ್ಯಂ ತಮ್ಮ ಅಂತಿಮ ಜಿಎಂ ನಾರ್ಮ್ ಅನ್ನು ಪೂರ್ಣಗೊಳಿಸಿದರು. ತದನಂತರ ಇಟಲಿಯಲ್ಲಿ ನಡೆದ ವರ್ಗಾನಿ ಕಪ್ ಓಪನ್‍ನಲ್ಲಿ 2500 ರೇಟಿಂಗ್ ಪಡೆದು ದೇಶದ 73ನೇ ಗ್ರ್ಯಾಂಡ್ ಮಾಸ್ಟರ್ ಆಗಿದ್ದಾರೆ. ಅಖಿಲ ಭಾರತ ಚೆಸ್ ಫೆಡರೇಶನ್ ಭರತ್ ಅವರ ಸಾಧನೆಗಾಗಿ ಅಭಿನಂದನೆ ಸಲ್ಲಿಸುತ್ತದೆ ಎಂದು ಎಐಸಿಎಫ್ ತನ್ನ ವೆಬ್‍ಸೈಟ್‍ನಲ್ಲಿ ಹೇಳಿದೆ.

ಇದನ್ನೂ ಓದಿ: PKL 8: ಪವನ್ ಸೂಪರ್ ರೇಡ್; ಬೆಂಗಳೂರು ಬುಲ್ಸ್​ಗೆ ದಾಖಲೆ ಗೆಲುವು; ಮಣ್ಣುಮುಕ್ಕಿದ ದಬಂಗ್ ಡೆಲ್ಲಿ

ಈ ಮಧ್ಯೆ, ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಭಾರತದ ಮತ್ತೋರ್ವ ಗ್ರ್ಯಾಂಡ್ ಮಾಸ್ಟರ್ ಎಂಆರ್ ಲಲಿತ್ ಬಾಬು ಪ್ರಶಸ್ತಿ ಗೆದ್ದರು. ಒಂಬತ್ತನೇ ಶ್ರೇಯಾಂಕದೊಂದಿಗೆ ಟೂರ್ನಿಯಲ್ಲಿ ಆಡಿದ ಲಲಿತ್ ಅವರು ಸಂಭವನೀಯ 9ರಲ್ಲಿ 7 ಅಂಕಗಳನ್ನು ಗಳಿಸಿದರು. ಎರಡನೇ ಶ್ರೇಯಾಂಕದ ಅಮೆರಿಕದ ಜಿಎಂ ನಿಮನ್ ಹ್ಯಾನ್ಸ್ ಮೋಕ್, ಉಕ್ರೇನ್‍ನ ವಿಟಾಲಿ ಬರ್ನಾಡ್ಸ್ಕಿ ಮತ್ತು ಬಲ್ಗೇರಿಯಾದ ನಗ್ರ್ಯುಲ್ ಸಾಲಿಮೋವಾ ಅವರೂ 7 ಅಂಕಗಳನ್ನ ಗಳಿಸಿದರೂ ಉತ್ತಮ ಟೈ ಬ್ರೇಕ್ ಸ್ಕೋರ್​ನಿಂದ ಲಲಿತ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಆದರೆ ಮೋಕ್ ಮೊದಲ ರನ್ನರ್ ಅಪ್ ಆಗಿ ಆಟ ಮುಗಿಸಿದರು.

ಅಗ್ರ ಶ್ರೇಯಾಂಕದ ಉಕ್ರೇನ್‍ನ ಆ್ಯಂಟನ್ ಕೊರೊಬೊವ್ 6.5 ಅಂಕ ಗಳಿಸಿ ಐದನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕೊರೊಬೊವ್, ಭರತ್ ಸುಬ್ರಮಣಿಯಂ ಸೇರಿ ನಾಲ್ವರು ಆಟಗಾರರು 6.5 ಅಂಕಗಳನ್ನ ಗಳಿಸಿದರೂ ಉತ್ತಮ ಟೈಬ್ರೇಕರ್ ಆಧಾರದ ಮೇಲೆ ಕೊರೊಬೊವ್ 5ನೇ ಸ್ಥಾನ ಪಡೆದರೆ ಭರತ್ ಸುಬ್ರಮಣಿಯಂ 7ನೇ ಸ್ಥಾನ ಗಳಿಸಿದರು.

ಭರತ್ ಸುಬ್ರಮಣ್ಯಂ ಪ್ರಶಸ್ತಿ ಪಡೆದದ್ದು ಹೇಗೆ..?
ಒಬ್ಬ ಚೆಸ್ ಆಟಗಾರನಿಗೆ ಗ್ರ್ಯಾಂಡ್‍ಮಾಸ್ಟರ್ ಪ್ರಶಸ್ತಿ ಸಾಧಿಸಲು ಮೂರು ಜಿಎಂ ಮಾನದಂಡಗಳು ಮತ್ತು 2,500 ಎಲೋ ಪಾಯಿಂಟ್‍ಗಳ ಲೈವ್ ರೇಟಿಂಗ್ ಅಗತ್ಯವಿರುತ್ತದೆ. ಭರತ್ ಸುಬ್ರಮಣ್ಯಂ ಫೆಬ್ರವರಿ 2020ರಲ್ಲಿ ಮಾಸ್ಕೋದಲ್ಲಿ ನಡೆದ ಏರೋಫ್ಲಾಟ್ ಓಪನ್‍ನಲ್ಲಿ ಹನ್ನೊಂದನೇ ಸ್ಥಾನ ಗಳಿಸಿದಾಗ ಅವರ ಮೊದಲ ಜಿಎಂ ಹಂತವನ್ನು ಮುಗಿಸಿದರು. ಅಕ್ಟೋಬರ್ 2021ರಲ್ಲಿ ಬಲ್ಗೇರಿಯಾದಲ್ಲಿ ನಡೆದ ಜೂನಿಯರ್ ರೌಂಡ್‍ಟೇಬಲ್ ಅಂಡರ್ 21 ಪಂದ್ಯಾವಳಿಯಲ್ಲಿ 6.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಗಳಿಸಿದ ನಂತರ ಅವರು ತಮ್ಮ ಎರಡನೇ ಮಾನದಂಡ ಗಳಿಸುವ ಮೂಲಕ ಆ ಆಟವನ್ನು ಮುಂದುವರಿಸಿದರು.

ಇದನ್ನೂ ಓದಿ: IPL 2022: ನಾಯಕರಿಲ್ಲದ ತಂಡಗಳು; ನಾಯಕರಾಗಬಲ್ಲ ಆಟಗಾರರು, ಇಲ್ಲಿದೆ ಡೀಟೇಲ್ಸ್

ಇಟಲಿಯಲ್ಲಿ ನಡೆದ ಪಂದ್ಯಾವಳಿಯನ್ನು ಏಳನೇ ಸ್ಥಾನದಲ್ಲಿ ಮುಗಿಸುವ ಮೂಲಕ ಅವರು ಅಂತಿಮವಾಗಿ ತಮ್ಮ ಮೂರನೇ ಮತ್ತು ಅಂತಿಮ ಜಿಎಂ ಅನ್ನು ಪೂರ್ಣಗೊಳಿಸಿದರು. ಚೆನ್ನೈನಲ್ಲಿ ಜನಿಸಿದ ಈತ 2019ರಲ್ಲಿ ಕೇವಲ 11 ವರ್ಷ ಮತ್ತು ಎಂಟು ತಿಂಗಳ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಆದರು. ಈ ಮಧ್ಯೆ, ಭಾರತದ ಮಿತ್ರಭಾ ಗುಹಾ ಮತ್ತು ಸಂಕಲ್ಪ್ ಗುಪ್ತಾ ಕಳೆದ ವರ್ಷ ನವೆಂಬರ್‌ನಲ್ಲಿ ಗ್ರ್ಯಾಂಡ್ ಮಾಸ್ಟರ್ ಆಗಿ ಹೊರಹೊಮ್ಮಿದ್ದರು.

ಭಾಷಾಂತರ ನೆರವು: ಏಜೆನ್ಸಿ

Published by:Vijayasarthy SN
First published: