ಶಿವಮೊಗ್ಗ: ಅತ್ಯಂತ ಹೆಚ್ಚು ಮಹತ್ವಾಕಾಂಕ್ಷೆ ಹೊಂದಿರುವ ಶಿವಮೊಗ್ಗದ ವಿಮಾನ ನಿಲ್ದಾಣ (Shivamogga Airport) ಲೋಕಾರ್ಪಣೆಗೊಳ್ಳಲು ಸಿದ್ಧವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ (BS Yediyurappa) ಅವರ ಕನಸಿನ ಕೂಸಾಗಿರುವ ವಿಮಾನ ನಿಲ್ದಾಣ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ವಿಮಾನಗಳು ಬಂದು ಹೋಗಿ ರನ್ ವೇ ಪರಿಕ್ಷೆ ನಡೆಸಲಾಗಿದೆ. ಉದ್ಘಾಟನೆಗೆ ಅಗತ್ಯವಾಗಿರುವ ಎಲ್ಲಾ ಸಿದ್ಧತೆಗಳು ನಡೆಸಲಾಗಿದೆ. ಇದಕ್ಕಾಗಿ ಶಿವಮೊಗ್ಗ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಎಲ್ಲೆಡೆ ಪ್ರಧಾನಿ ಮೋದಿ (PM Narendra Modi Shivamogga Visit) ಮತ್ತು ಬಿಜೆಪಿ ನಾಯಕರ ಪೋಸ್ಟರ್ ಗಳು ರಾರಾಜಿಸುತ್ತಿವೆ. ಇತ್ತ ನಗರದ ಪ್ರಮುಖ ವೃತ್ತವೊಂದರಲ್ಲಿ ಏರೋಪ್ಲೇನ್ ಮಾದರಿ ಅಳವಡಿಸಲಾಗಿದ್ದು, ಇದು ಕೇಂದ್ರ ಬಿಂದುವಾಗಿದೆ.
ಶಿವಮೊಗ್ಗದ 775 ಎಕರೆ ಪ್ರದೇಶದಲ್ಲ ನಿರ್ಮಾಣಗೊಂಡದೆ ಸುಂದರ ವಿಮಾನ ನಿಲ್ದಾಣ. ರಾಜ್ಯದಲ್ಲಿಯೇ ಬೆಂಗಳೂರು ಹೊರತುಪಡಿಸಿದರೆ, ಅತ್ಯಂತ ಉದ್ದದ ರನ್ ವೇ ಹೊಂದಿರುವ ಏಕೈಕ ವಿಮಾನ ನಿಲ್ದಾಣವೆಂದೇ ಇದು ಖ್ಯಾತಿ ಪಡೆದಿದೆ. ಅಷ್ಟೇ ಅಲ್ಲ, ಇಡೀ ರಾಷ್ಟ್ರದಲ್ಲಿಯೇ ಅತ್ಯಂತ ಕಡಿಮೆ ವೆಚ್ಚ ಅಂದರೆ, 449 ಕೋಟಿ ರೂ. ನಲ್ಲಿ ಕಾಮಗಾರಿ ಮುಗಿದಿರುವ ಏಕೈಕ ವಿಮಾನ ನಿಲ್ದಾಣವೆಂದೇ ಪ್ರಖ್ಯಾತಿ ಪಡೆದುಕೊಂಡಿದೆ. ಫೆಬ್ರವರಿ 27 ರ ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಈ ನಿಲ್ದಾಣವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಪ್ರಧಾನಿ ಮೋದಿ ಕಾರು ಆಗಮನ
ಈಗಾಗಲೇ, ಇದಕ್ಕಾಗಿ ಎಲ್ಲಾ ಅಗತ್ಯ ತಯಾರಿಗಳು ನಡೆಸಲಾಗಿದ್ದು, ಭಾರತೀಯ ವಾಯು ಸೇನೆಯ ಎರಡು ವಿಮಾನಗಳು ಪರಿಕ್ಷಾರ್ಥ ಹಾರಾಟ ಈಗಾಗಲೇ ನಡೆಸಿದೆ. ರನ್ ವೇ, ಎಟಿಸಿ, ಟರ್ಮಿನಲ್ ಎಲ್ಲೆಡೆ ಪರೀಕ್ಷೆ ನಡೆಸಿಯಾಗಿದೆ. ಈಗಾಗಲೇ, ಪ್ರಧಾನಿಯವರು ಟರ್ಮಿನಲ್ನಿಂದ ಏರ್ಪೋರ್ಟ್ ಆವರಣದೊಳಗೆ ನಿರ್ಮಾಣಗೊಂಡಿರುವ ವೇದಿಕೆಗೆ ಆಗಮಿಸಲು ವಾಯುಸೇನೆಯ ವಿಮಾನದಲ್ಲಿ ಪ್ರಧಾನಿ ಮೋದಿಯವರ ಕಾರುಗಳು ಸಹ ಆಗಮಿಸಿದೆ.
2 ಲಕ್ಷ ಜನರ ಆಗಮನದ ನಿರೀಕ್ಷೆ
ಇನ್ನು ಉದ್ಘಾಟನಾ ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕಲಾಗಿದೆ. ಸುಮಾರು 2 ಲಕ್ಷ ಜನರು ಸೇರುವ ನಿರೀಕ್ಷೆ ಹೊಂದಲಾಗಿದೆ.
ಇನ್ನು ಏರ್ಪೋರ್ಟ್ ಆವರಣದಲ್ಲಿಯೇ ಈ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಅಗತ್ಯ ಭದ್ರತೆ ಒದಗಿಸಲು ತಯಾರಿ ನಡೆಸಲಾಗಿದೆ. ಅಲ್ಲದೇ, ಹೆಚ್ಚುವರಿ ಭದ್ರತೆಗಾಗಿ,ಎನ್ಎಸ್ಜಿ ಭದ್ರತಾ ತಂಡಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಭದ್ರತೆಗಾಗಿ ನಿಯೋಜಿಸಲಾಗಿದೆ.
ಕಪ್ಪು ಬಟ್ಟೆ ಧರಿಸಿ ಬರುವಂತಿಲ್ಲ
ಅಲ್ಲದೇ, ಶಿವಮೊಗ್ಗ ಪೊಲೀಸರು ಸೇರಿದಂತೆ, ಅಕ್ಕಪಕ್ಕದ ಜಿಲ್ಲೆಗಳಿಂದಲೂ ಏರ್ಪೋರ್ಟ್ ಹೊರಭಾಗದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಅದರಂತೆ, ಅಂದಿನ ಕಾರ್ಯಕ್ರಮಕ್ಕೆ ಬರುವವರು ಯಾರೂ ಕೂಡ ಕಪ್ಪು ಬಟ್ಟೆ ಧರಿಸಿ ಬರುವಂತಿಲ್ಲ. ಜೊತೆಗೆ ಪರ್ಸ್ ಮತ್ತು ಮೊಬೈಲ್ ಹೊರತುಪಡಿಸಿ, ಬೇರೆ ಯಾವುದೇ ಬ್ಯಾಗ್ಗಳಾಗಲೀ, ಇನ್ನಿತರೇ ಸಂಶಯಾಸ್ಪದ ವಸ್ತುಗಳು ತರುವಂತಿಲ್ಲ ಎಂದು ಈಗಾಗಲೇ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ.
ಇದರ ಜೊತೆಗೆ ಪಾರ್ಕಿಂಗ್ ಸೇರಿದಂತೆ, ವಿವಿಧ ಬಗೆಯ ತಯಾರಿ ಮಾಡಿಕೊಳ್ಳಲಾಗಿದ್ದು, ಏರ್ಪೋರ್ಟ್ಗೆ ತೆರಳುವ ಮಾರ್ಗದಲ್ಲಿಯೇ, ಊಟ-ಉಪಹಾರದ ವ್ಯವಸ್ಥೆ ಮಾಡಲಾಗಿದ್ದು, ಬಂದೋಬಸ್ತ್ ಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಇದನ್ನೂ ಓದಿ: Shivamogga Airport: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದ ಮೊದಲ ವಿಮಾನದಲ್ಲಿ ಇದ್ದವರು ಇವ್ರೇ!
ಸಿಂಗಾರಗೊಂಡ ಶಿವಮೊಗ್ಗ
ಶಿವಮೊಗ್ಗದ ಎ.ಎ. ವೃತ್ತದಲ್ಲಿ ವಿಮಾನದ ಆಕರ್ಷಕ ಮಾಡೆಲ್ವೊಂದು ಇಡಲಾಗಿದ್ದು, ಈ ಮಾಡೆಲ್ ವಿಮಾನದೊಂದಿಗೆ ಜನರು ಸೆಲ್ಫಿಗೆ ಮುಗಿಬಿದಿದ್ದಾರೆ. ಜೊತೆಗೆ ನಗರವನ್ನು ಕೂಡ ಸಿಂಗಾರಗೊಳಿಸಲಾಗಿದ್ದು, ಈ ವಿಮಾನದ ಮಾಡೆಲ್ ಈಗ ಶಿವಮೊಗ್ಗದ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಇದನ್ನೂ ಓದಿ: Shivamogga Airport: ಶಿವಮೊಗ್ಗಕ್ಕೆ ಬಂತು ಪ್ರಧಾನಿ ಮೋದಿ ಕಾರ್!
ಯಾವ ಸಂಸ್ಥೆಗಳು ವಿಮಾನ ಸೇವೆ ನೀಡಿಲಿವೆ?
ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನೆಯ ಒಂದು ತಿಂಗಳ ಒಳಗಾಗಿ ವಿಮಾನ ಹಾರಾಟವೂ ನಡೆಯಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ, ಸ್ಟಾರ್ ಏರ್ಲೈನ್ಸ್ ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆ, ವಿಮಾನ ಹಾರಾಟದ ಆಪರೇಷನ್ಗೆ ಆಸಕ್ತಿ ತೋರಿಸಿದ್ದು, ಶಿವಮೊಗ್ಗ ಜನರು ಈಗ ವಿಮಾನದಲ್ಲಿ ಹಾರಾಡಲು ಉತ್ಸುಕರಾಗಿದ್ದಾರೆ.
ವರದಿ: ವಿನಯ್ ಪುರದಾಳು ನ್ಯೂಸ್ 18 ಶಿವಮೊಗ್ಗ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ