ರಾಯಚೂರು: ಮನೆ ತೊರೆದು ಬಂದು ಭಿಕ್ಷಾಟನೆಗೆ ನಿಂತ, ಮನುಷ್ಯತ್ವದಿಂದ ದೈವತ್ವಕ್ಕೇರಿದ ಸಂತ. ಭಿಕ್ಷೆ ಬೇಡಿದ ಹಣದಿಂದಲೇ ದಾಸೋಹ, ಕೈಯಲ್ಲಿರೋ ಬಿಡಿಗಾಸೂ ದಾನ ಧರ್ಮಕ್ಕೆ ಮೀಸಲು! ಇದು ಸರ್ಕಾರಿ ದೇವಸ್ಥಾನದಲ್ಲಿ ಭಿಕ್ಷುಕರೋರ್ವರು ನಡೆಸುತ್ತಿರುವ (Beggar Emotional Story) ದಾಸೋಹದ ಕಥೆ! ಇವರು ಅಂತಿಂಥಾ ಭಿಕ್ಷುಕರಲ್ಲ, ಭಿಕ್ಷೆ ಬೇಡಿದ ಹಣದಿಂದ ಜೋಳ ಖರೀದಿಸಿ ತಾವೇ ನುಚ್ಚು ಹೊಡಿಸಿಕೊಂಡು ಬರ್ತಾರೆ. ಮೊಸರು, ತರಕಾರಿ ಖರೀದಿಸಿ ಜೋಳದ ನುಚ್ಚು ಮಜ್ಜಿಗೆ ಮಾಡಿ ದಾಸೋಹ ಮಾಡ್ತಾರೆ. ಕ್ಷೇತ್ರಕ್ಕೆ ಆಗಮಿಸೋ ಭಕ್ತರಿಗೆ ತಮ್ಮ ಕೈಯಾರೇ ಅಡುಗೆ ಮಾಡಿ ಉಣ ಬಡಿಸ್ತಾರೆ.
ಅಂದಿನ ಭಿಕ್ಷೆಯ ಹಣ ಅಂದಿನ ಊಟಕ್ಕಾದ್ರೆ ಸಾಕು. ಹೆಚ್ಚಿನ ಹಣವನ್ನ ದಾಸೋಹಕ್ಕೆ ಮೀಸಲಿಡೋ ಉದಾತ್ತ ಭಿಕ್ಷುಕರಿವರು.
ಮೂಲತಃ ಹುಬ್ಬಳ್ಳಿಯ ಇವ್ರು 3 ಮಕ್ಕಳ ತಂದೆ!
ಮೂಲತಃ ಹುಬ್ಬಳ್ಳಿ ತಾಲೂಕಿನ ಪಾಳೆ ಎಂಬ ಗ್ರಾಮದವರಾದ ಗುರುನಾಥಗೌಡ ಅವ್ರೇ ಈ ಕಾಯಕಯೋಗಿ ಭಿಕ್ಷುಕ. ಗ್ರಾಮ ಪಂಚಾಯತ್ ಚೇರ್ಮನ್ ಆಗಿಯೂ ಕೆಲಸ ಮಾಡಿದ್ದ ಇವ್ರಿಗೆ ಮೂರು ಮಕ್ಕಳ ಚಂದದ ಸಂಸಾರವೂ ಇತ್ತು. ಆದ್ರೆ ಆ ಜೀವನದ ಜಂಜಾಟ ಸಾಕಾಗಿ ಊರುಬಿಟ್ಟು ಬಂದ್ರು.
ರಾಯಚೂರಿನಲ್ಲಿ ನೆಲೆನಿಂತ್ರು
ರಾಯಚೂರು ಜಿಲ್ಲೆಯ ಲಿಂಗಸೂಗೂರಿನ ಗುರುಗುಂಟಾ ಅಮರೇಶ್ವರ ದೇವಸ್ಥಾನವೇ ಈ ಭಿಕ್ಷುಕರ ನೆಲೆ. ಸಮಾಜದಿಂದ ಗಳಿಸಿದ ಹಣವನ್ನ ಸಮಾಜದ ಒಳಿತಿಗೇ ಬಳಸ್ಬೇಕು ಅನ್ನೋ ಗುರುನಾಥಗೌಡರು ದೇವಸ್ಥಾನಗಳ ಅಭಿವೃದ್ಧಿಗೂ ಶ್ರಮಿಸ್ತಿದ್ದಾರೆ.
ಸಿಎಂ ಬೊಮ್ಮಾಯಿಗೂ ಪರಿಚಯವಿದೆಯಂತೆ!
ಅಷ್ಟೇ ಅಲ್ಲ ಕಣ್ರೀ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೂ ಈ ಭಿಕ್ಷುಕರ ಪರಿಚಯವಿದೆಯಂತೆ. ಸಿಎಂ ಬೊಮ್ಮಾಯಿಯವ್ರ ಮೇಲೆ ಆಕಾಶದಷ್ಟು ಅಭಿಮಾನವನ್ನು ಈ ಭಿಕ್ಷುಕ ಹೊಂದಿದ್ದಾರೆ.
ಇದನ್ನೂ ಓದಿ: Success Story: ಬಸಳೆ ಬೆಳೆದು ತಿಂಗಳಿಗೆ 40 ಸಾವಿರ ಆದಾಯ ಗಳಿಸ್ತಿರೋ ಕರಾವಳಿ ಕೃಷಿಕ!
ಗುರುನಾಥಗೌಡರು ಹುಬ್ಬಳ್ಳಿಯ ಸಿದ್ಧಾರೂಢ ಮಠದಲ್ಲಿ ಈ ಮೊದಲು ದನ ಕರು ಮೇಯಿಸ್ತಿದ್ರಂತೆ. ಆದ್ರೆ ಏನನ್ನಿಸ್ತೋ ಏನೋ, ಕುಟುಂಬ ಜೀವನದಿಂದ ಬೇರ್ಪಟ್ಟು ಅಮರೇಶ್ವರ ಸನ್ನಿಧಿಯಲ್ಲಿ ನೆಲೆನಿಂತ್ರಂತೆ. ಇಲ್ಲೇ ಕಳೆದ 2 ವರ್ಷಗಳಿಂದ ಭಿಕ್ಷಾಟನೆ, ಜೊತೆಗೆ ಸಮಾಜಸೇವೆಯನ್ನೂ ಮಾಡ್ತಿದ್ದಾರಂತೆ.
ದೇವಸ್ಥಾನದಲ್ಲಿ ಮಿನುಗುತ್ತಿದೆ ಭಿಕ್ಷುಕ ಕೊಡಿಸಿದ ಬಲ್ಬ್!
ಗುರುನಾಥ ಗೌಡರು ಸಾಮಾನ್ಯ ಭಿಕ್ಷುಕ ಅಂದಿರೋದು ಸುಮ್ನೇ ಅಲ್ಲ, ಪಾಳುಬಿದ್ದಿದ್ದ ಶಿವಲಿಂಗ, ಬಸವನ ಮೂರ್ತಿಗಳನ್ನ ಇವ್ರೇ ಸ್ಥಾಪನೆ ಮಾಡಿದ್ದಾರಂತೆ. ದೇವಸ್ಥಾನದಲ್ಲಿ ಯಾವುದೇ ವಸ್ತು ಕಡಿಮೆ ಬಿದ್ರೆ ಪೂರೈಸೋಕೆ ತುದಿಗಾಲ ಮೇಲೆ ನಿಂತಿರ್ತಾರೆ! ಈಗ್ಲೂ ಸರ್ಕಾರಿ ದೇವಸ್ಥಾನದಲ್ಲಿ ಭಿಕ್ಷುಕ ಕೊಡಿಸಿದ ವಿದ್ಯುತ್ ಬಲ್ಬ್ಗಳೇ ಮಿನುಗುತ್ತಿವೆ.
ಇದನ್ನೂ ಓದಿ: Uttara Kannada: ಈ ಹೋಟೆಲ್ಗೆ ಮರುಜೀವ ನೀಡಿದ ಕಾಂತಾರ!
ಭಿಕ್ಷೆ ಬೇಡಿ ಜೀವನ ನಡೆಸಿದ್ರೂ ದಾನ ಮಾಡೋ ಇವ್ರಿಗೆ ರಾಯಚೂರಿನ ಜನರು ಸೆಲ್ಯೂಟ್ ಹಾಕ್ತಿದ್ದಾರೆ. ನೀವೂ ರಾಯಚೂರಿಗೆ ಹೋದ್ರೆ ನೀವೂ ಈ ದಾನಶೂರ ಭಿಕ್ಷುಕರನ್ನು ಒಮ್ಮೆ ಮೀಟ್ ಮಾಡ್ಬಹುದು ನೋಡಿ.
ಮಾಹಿತಿ, ವಿಡಿಯೋ ವರದಿ: ವಿಶ್ವನಾಥ್ ಎಚ್, ರಾಯಚೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ