ನವದೆಹಲಿ(ಸೆ.29): ಇಂದು ಭಾರತೀಯ ಖ್ಯಾತ ನಟಿ ಹಾಗೂ ನರ್ತಕಿ ಜೋಹ್ರಾ ಸೆಹಗಲ್ ಅವರನ್ನು ಗೂಗಲ್ ಡೂಡಲ್ ಸ್ಮರಿಸಿದೆ. ಸೆಹಗಲ್ ಅವರು ಜಾಗತಿಕವಾಗಿ ಮಾನ್ಯತೆ ಪಡೆದ ಭಾರತದ ಮೊದಲ ಮಹಿಳಾ ನಟಿಯಾಗಿದ್ದಾರೆ. ಗೂಗಲ್ ತನ್ನ ಡೂಡಲ್ ಮೂಲಕ ಅಪ್ರತಿಮ ನಟಿ ಜೋಹ್ರಾ ಸೆಹಗಲ್ ಅವರಿಗೆ ಗೌರವ ಸಮರ್ಪಣೆ ಮಾಡಿದೆ. ಗೂಗಲ್ ವಿಶೇಷ ಡೂಡಲ್ನಲ್ಲಿ ಜೋಹ್ರಾ ಸೆಹಗಲ್ ಶಾಸ್ತ್ರೀಯ ನೃತ್ಯ ಮಾಡುತ್ತಿರುವ ಭಂಗಿ ಇದೆ. ಜೊತೆಗೆ ಹೂವಿನ ಅಲಂಕಾರದ ಆನಿಮೇಟೆಡ್ ಚಿತ್ರವನ್ನು ಹೊಂದಿದೆ. ಜೋಹ್ರಾ ಸೆಹಗಲ್ ಅವರ ವಿಶೇಷ ಡೂಡಲ್ನ್ನು ಕಲಾವಿದೆ ಪಾರ್ವತಿ ಪಿಳ್ಳೆಯವರು ವಿನ್ಯಾಸಗೊಳಿಸಿದ್ದಾರೆ. ಇಂದಿನ ಗೂಗಲ್ ಡೂಡಲ್ನ್ನು ವಿನ್ಯಾಸಗೊಳಿಸಿರುವ ಕಲಾವಿದೆ ಪಾರ್ವತಿ ಪಿಳ್ಳೈ ಅವರು ಜೋಹ್ರಾ ಸೆಹಗಲ್ ಅವರ ಸಾಧನೆಯನ್ನು ಸ್ಮರಿಸಿದ್ದಾರೆ. ಸೆಹಗಲ್ ಅವರು ಅಪ್ರತಿಮ ಭಾರತೀಯ ನಟಿ ಮತ್ತು ನರ್ತಕಿ. ಅಂತರಾಷ್ಟ್ರೀಯ ಮಟ್ಟದಲ್ಲಿ ನಿಜವಾಗಿಯೂ ಮನ್ನಣೆ ಗಳಿಸಿದ ದೇಶದ ಮೊದಲ ಮಹಿಳಾ ನಟಿ ಎಂದು ಪಿಳ್ಳೈ ಶ್ಲಾಘಿಸಿದ್ದಾರೆ.
ಜೋಹ್ರಾ ಸೆಹಗಲ್ ಅವರು ನೀಚ ನಗರ(ಲೋಲಿ ಸಿಟಿ ) ಎಂಬ ಚಿತ್ರಕ್ಕೆ ಮೊದಲ ಬಾರಿಗೆ ಬಣ್ಣ ಹಚ್ಚಿದರು. ಈ ಸಿನಿಮಾ 1946ರಲ್ಲಿ ಕೇನ್ಸ್ ಚಲನಚಿತ್ರೋತ್ಸವದಲ್ಲಿ ಬಿಡುಗಡೆಯಾಯಿತು. ಭಾರತೀಯ ಸಿನಿಮಾದ ಮೊದಲ ಅಂತರಾಷ್ಟ್ರೀಯ ವಿಮರ್ಶಾತ್ಮಕ ಯಶಸ್ಸನ್ನು ವ್ಯಾಪಕವಾಗಿ ಪರಿಗಣಿಸಲಾಗಿರುವ ನೀಚ ನಗರ ಸಿನಿಮಾ ಅತ್ಯುನ್ನತ ಗೌರವವನ್ನು ಪಡೆದಿದೆ.
Namami Gange: ‘ನಮಾಮಿ ಗಂಗೆ’ ಯೋಜನೆಯಡಿ ಆರು ಬೃಹತ್ ಯೋಜನೆಗಳಿಗೆ ಇಂದು ಪ್ರಧಾನಿ ಚಾಲನೆ
ಜೋಹ್ರಾ ಸೆಹಗಲ್ ಅವರ ಪೂರ್ಣ ಹೆಸರು ಸಾಹಿಬ್ಜಾಡಿ ಜೊಹ್ರಾ ಬೇಗಂ ಮುಮ್ತಾಜ್-ಉಲ್ಲಾ ಖಾನ್. ಅವರು ಏಪ್ರಿಲ್ 27, 1912 ರಂದು ಭಾರತದ ಸಹರಾನ್ಪುರದಲ್ಲಿ ಜನಿಸಿದರು. ಸೆಹಗಲ್ ತಮ್ಮ 20ನೇ ವಯಸ್ಸಿನಲ್ಲಿ ಜರ್ಮನಿಯ ಡ್ರೆಸ್ಡೆನ್ನಲ್ಲಿರುವ ಪ್ರತಿಷ್ಠಿತ ಬ್ಯಾಲೆ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಭಾರತೀಯ ನೃತ್ಯ ಪ್ರವರ್ತಕ ಉದಯ್ ಶಂಕರ್ ಅವರೊಂದಿಗೆ ಅಂತರರಾಷ್ಟ್ರೀಯ ಪ್ರವಾಸ ಕೈಗೊಂಡರು. ಅವರು ಭಾರತಕ್ಕೆ ಮರಳಿದ ನಂತರ, ಅವರು ಸಿನಿಮಾ ರಂಗಕ್ಕೆ ಇಳಿದರು.
1945 ರಲ್ಲಿ ಇಂಡಿಯನ್ ಪೀಪಲ್ಸ್ ಥಿಯೇಟರ್ ಅಸೋಸಿಯೇಷನ್ಗೆ ಸೇರಿದರು. 1962 ರಲ್ಲಿ ಇಂಗ್ಲೆಂಡ್ನ ಲಂಡನ್ಗೆ ತೆರಳಿದ ನಂತರ ಸೆಹಗಲ್ ಅವರು ಇಂಟರ್ ನ್ಯಾಷನಲ್ ವೇದಿಕೆಯಲ್ಲಿ ಮಾನ್ಯತೆ ಪಡೆದರು. ಜೊತೆಗೆ ಬ್ರಿಟಿಷ್ ಟೆಲಿವಿಷನ್ ಕ್ಲಾಸಿಕ್ಗಳಲ್ಲಿ “ಡಾಕ್ಟರ್ ಹೂ”(Doctor Who) ಮತ್ತು 1984 ರ ಕಿರುಸರಣಿ “ದಿ ಜ್ಯುವೆಲ್ ಇನ್ ದಿ ಕ್ರೌನ್” ನಲ್ಲಿ ಕೆಲಸ ಮಾಡಿದರು.
ಜೋಹ್ರಾ ಸೆಹಗಲ್ ಅವರು 1998ರಲ್ಲಿ ಪದ್ಮಶ್ರೀ ಪ್ರಶಸ್ತಿ, 2001ರಲ್ಲಿ ಕಾಳಿದಾಸ್ ಸಮ್ಮನ್ ಹಾಗೂ 2010ರಲ್ಲಿ ಪದ್ಮವಿಭೂಷಣ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ