ಸಿಎಂ ಜಗನ್ ಮೋಹನ್ ರೆಡ್ಡಿ
ಅಮರಾವತಿ(ಮಾ.03): ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್) ಪ್ರಕ್ರಿಯೆಗೆ ಸಹಕಾರ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಸಿಎಂ ಜಗನ್ ಮೋಹನ್ ರೆಡ್ಡಿ ಕೇಂದ್ರ ಸರ್ಕಾರಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಜಗನ್ ಮೋಹನ್ ರೆಡ್ಡಿ, ಎನ್‌ಪಿಆರ್‌ನಲ್ಲಿ ಪ್ರಸ್ತಾಪಿಸಲಾದ ಕೆಲವು ಪ್ರಶ್ನೆಗಳು ನನ್ನ ರಾಜ್ಯದ ಅಲ್ಪಸಂಖ್ಯಾತರನ್ನು ಆತಂಕಕ್ಕೆ ದೂಡಿದೆ. ಎನ್ಆರ್ಪಿಯೂ ಇವರ ಮನಸ್ಸಿನಲ್ಲಿ ಅಭದ್ರತೆ ಸೃಷ್ಟಿಸಿದೆ. ವೈಎಸ್ಆರ್ ಕಾಂಗ್ರೆಸ್ನಲ್ಲಿ ವಿಸ್ತಾರವಾಗಿ ಸಮಾಲೋಚನೆ ನಡೆಸಿದ ಬಳಿಕ 2010ರಲ್ಲಿ ಚಾಲ್ತಿಯಲ್ಲಿದ್ದ ಷರತ್ತುಗಳನ್ನೇ ಎನ್‌ಪಿಆರ್‌ನಲ್ಲಿ ಅಳವಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಲು ನಿರ್ಧರಿಸಿದ್ದೇವೆ ಎಂದರು.
ಇನ್ನು, 2010ರಲ್ಲಿದ್ದ ಷರತ್ತುಗಳನ್ನೇ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರತಿಯಲ್ಲಿ ಅಳವಡಿಸುವಂತೆ ಕೇಂದ್ರಕ್ಕೆ ಮನವಿ ಮಾಡಲಿದ್ದೇವೆ. ಮುಂದಿನ ವಿಧಾನಸಭಾ ಅಧಿವೇಶದಲ್ಲಿ ಸಿಎಎ ಮತ್ತು ಎನ್ಆರ್ಸಿ ಸಂಬಂಧ ಒಂದು ನಿರ್ಣಯ ಅಂಗೀಕರಿಸಲಿದ್ದೇವೆ ಎಂದು ಮತ್ತೊಂದು ಟ್ವೀಟ್ನಲ್ಲಿ ಜಗನ್ ಬರೆದುಕೊಂಡಿದ್ದಾರೆ.
ಎನ್ಆರ್ಸಿ ಮತ್ತು ಎನ್‌ಪಿಆರ್ ಜಾರಿಗೆ ತರಲು ಹಿಂದೇಟು ಹಾಕುತ್ತಿರುವ ರಾಜ್ಯಗಳ ಪಾಲಿಗೆ ಆಂಧ್ರಪ್ರದೇಶವೂ ಸೇರಿಕೊಂಡಿದೆ. ದೇಶದ ವಿವಿದೆಢೆಗಳಲ್ಲಿ ಪೌರತ್ಬ ತಿದ್ದುಪಡಿ ಕಾಯ್ದೆ, ಎನ್ಆರ್ಸಿ ಮತ್ತು ಎನ್ಪಿಆರ್ಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದು ಕೆಲವೆಡೆ ಹಿಂಸಾತ್ಮಕ ರೂಪ ಪಡೆದಿದೆ. ಕೇರಳ, ರಾಜಸ್ಥಾನ, ಮಧ್ಯಪ್ರದೇಶ, ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಈ ಕಾಯ್ದೆ ಅನುಷ್ಠಾನಕ್ಕೆ ತರುವುದಿಲ್ಲ ಎಂದು ಹೇಳಿವೆ. ಇತ್ತೀಚೆಗೆ ಈ ರಾಜ್ಯಗಳ ಸಾಲಿಗೆ ತೆಲಂಗಾಣವೂ ಸೇರ್ಪಡೆಯಾಗಿದೆ.
ಇದನ್ನೂ ಓದಿ: ‘ಜನಗಣತಿ ಮಾಡಿ, ಆದರೆ ಎನ್‌ಪಿಆರ್ ಮತ್ತು ಎನ್ಆರ್ಸಿಗೆ ಸಹಕಾರ ಸಾಧ್ಯವಿಲ್ಲ‘: ಕೇರಳ ಖಡಕ್ ಸಂದೇಶ
ಈ ಹಿಂದೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲೇ ಎನ್ಆರ್ಸಿ, ಪೌರತ್ವ ಕಾಯ್ದೆ ಬಗ್ಗೆ ಹಲವರು ಆತಂಕ ವ್ಯಕ್ತಪಡಿಸಲು ಪ್ರಾರಂಭಿಸಿದರು. ಎನ್‌ಪಿಆರ್ ಬಗ್ಗೆಯೂ ಅನುಮಾನದ ದೃಷ್ಟಿ ಇರಿಸಿದ್ದರು. ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, ಎನ್ಆರ್ಸಿಗೂ ಎನ್ಪಿಆರ್ಗೂ ಯಾವುದೇ ಸಂಬಂಧವಿಲ್ಲ. ಭಾರತಾದ್ಯಂತ ಎನ್ಆರ್ಸಿ ಜಾರಿಗೊಳಿಸುವ ಬಗ್ಗೆ ಇನ್ನೂ ಚರ್ಚೆ ನಡೆದಿಲ್ಲ ಎಂದೂ ಅಮಿತ್ ಶಾ ಸ್ಪಷ್ಟಪಡಿಸಿದ್ಧಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿರುವ ಹೊತ್ತಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಯೋಜನೆ ಜಾರಿಗೊಳಿಸಿದೆ. ಈಗಾಗಲೇ ಕೇಂದ್ರ ಸಚಿವ ಸಂಪುಟ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಕಾರ್ಯಕ್ಕೆ ಅನುಮೋದನೆ ನೀಡಿದ್ದು, ಯೋಜನೆ ಜಾರಿ ಮಾಡಲಾಗಿದೆ. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಬಗ್ಗೆ ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿದ ಮಧ್ಯೆಯೇ ಕೇಂದ್ರ ಗೃಹ ಇಲಾಖೆ ಮತ್ತೊಂದು ಆದೇಶ ಹೊರಡಿಸಿದೆ. ನೋಂದಣಿ ಪರಿಷ್ಕರಣೆ ವೇಳೆ ಯಾವುದೇ ಮಾಹಿತಿ ನೀಡಲು ನಿರಾಕರಿಸಿದರೆ ಅಥವಾ ಸರಿಯಾದ ಮಾಹಿತಿ ನೀಡದಿದ್ದರೆ ಒಂದು ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಹೇಳಿದೆ. ಪೌರತ್ವ ಕಾಯ್ದೆಯ 17ನೇ ನಿಯಮದ ಪ್ರಕಾರ ನೋಂದಣಿ ಪರಿಷ್ಕರಣೆ ಮಾಹಿತಿ ನೀಡಲು ನಿರಾಕರಿಸಿದವರಿಗೆ 1 ಸಾವಿರ ರೂ. ದಂಡ ವಿಧಿಸಬಹುದಾಗಿದೆ. ಇಂತಹ ಒಂದು ಕಾನೂನಿದ್ದರು 2011 ಮತ್ತು 2015 ಜನಗಣತಿ ಪ್ರಕ್ರಿಯೆ ಸಂದರ್ಭದಲ್ಲಿ ನಿಯಮ ಪಾಲಿಸಿರಲಿಲ್ಲ. ಆದರೀಗ ಈ ನಿಯಮ ಪಾಲಿಸುವಂತೆ ಅಧಿಕಾರಿಗಳಿಗೆ ಕೇಂದ್ರ ಗರಹ ಇಲಾಖೆ ಆದೇಶಿಸಿದೆ.
First published:
March 3, 2020, 8:50 PM IST