YouTubers Village: ಈ ಊರಿನ ಜನರೆಲ್ಲ ಯೂಟ್ಯೂಬರ್ಸ್​; ಎಲ್ರದ್ದೂ ಒಂದೊಂದು ಚಾನಲ್! ಸರ್ಕಾರಿ ಕೆಲಸವೂ ಬೇಡ್ವಂತೆ

ಇಡೀ ಊರ ಮಂದಿ ಯೂಟ್ಯೂಬರ್ಸ್​ ಆದ ಉದಾಹರಣೆ ಎಲ್ಲೂ ಸಿಗೋದು ಡೌಟು. ಹೌದು, ಈ ಗ್ರಾಮದ ಹೆಸರು ತುಳಸಿ ಅಂತ.

ಶೂಟಿಂಗ್​ನಲ್ಲಿ ನಿರತ ಹಳ್ಳಿಗರು

ಶೂಟಿಂಗ್​ನಲ್ಲಿ ನಿರತ ಹಳ್ಳಿಗರು

  • Share this:
ಯೂಟ್ಯೂಬ್ ಚಾನಲ್ ನಡೆಸ್ತಿರೋರನ್ನು ನೀವು ನೋಡಿರಬಹುದು. ನಿಮ್ಮದೂ ಒಂದು ಯೂಟ್ಯೂಬ್ ಚಾನಲ್ ಇರಬಹುದು! ಚೆನ್ನಾಗಿ ಸ್ಮಾರ್ಟ್ ಆಗಿ ಕೆಲಸ ಮಾಡಿ ನಿಮ್ಮ ಚಾನಲ್ ಸಹ ಕ್ಲಿಕ್ ಆದರೆ ಚೆನ್ನಾಗಿಯೇ ಹಣ ಬರುತ್ತೆ ನಿಜ. ಆದರೆ ಯೂಟ್ಯೂಬ್ ಚಾನಲ್​ಗೆಂದೇ ಸರ್ಕಾರಿ ಕೆಲಸವನ್ನೂ (Government Job) ಬಿಡೋರನ್ನು ನೋಡಿದ್ದೀರಾ? ಇಲ್ಲೊಂದು ಊರಿಗೆ ಊರೇ ಯೂಟ್ಯೂಬ್ ವಿಡಿಯೋಸ್ (YouTube Channel) ಮಾಡ್ತಾ ಅದ್ರಲ್ಲಿ ಬರೋ ಹಣದಿಂದಲೇ ಜೀವನ ಮಾಡ್ತಿದೆ! ಇದು ನಂಬಲಿಕ್ಕೆ ಅಸಾಧ್ಯ ಅನಿಸುವಂಥಾ ಸುದ್ದಿ ಅನಿಸಿದರೂ ನಿಜ! ಆದರೆ ಭಾರತದ ಒಂದು ಸಣ್ಣ ಹಳ್ಳಿ ಯೂಟ್ಯೂಬರ್‌ಗಳ ಕೇಂದ್ರವಾಗಿ ಬದಲಾಗಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು! 

ಇತ್ತೀಚಿನ ದಿನಗಳಲ್ಲಿ ಯೂಟ್ಯೂಬ್ ಕೇವಲ ಮನರಂಜನೆ ಅಥವಾ ಶಿಕ್ಷಣಕ್ಕಾಗಿ ಮಾತ್ರವಲ್ಲದೆ ಹಣ ಗಳಿಸುವ ವೇದಿಕೆಯಾಗಿದೆ. ಪ್ರಪಂಚದಾದ್ಯಂತ ಲಕ್ಷಾಂತರ ಜನರು ಯೂಟ್ಯೂಬರ್ ಆಗಿ ತಮ್ಮ ವೃತ್ತಿಯನ್ನು ಮಾಡುತ್ತಿದ್ದಾರೆ. ಆದರೆ ಇಡೀ ಊರ ಮಂದಿ ಯೂಟ್ಯೂಬರ್ಸ್​ ಆದ ಉದಾಹರಣೆ ಎಲ್ಲೂ ಸಿಗೋದು ಡೌಟು. ಹೌದು, ಈ ಗ್ರಾಮದ ಹೆಸರು ತುಳಸಿ ಅಂತ.

ಎಲ್ಲಿದೆ ಈ ಊರು?
ಛತ್ತೀಸ್‌ಗಢದ ರಾಯ್‌ಪುರದಲ್ಲಿದೆ ಈ ತುಳಸಿ ಗ್ರಾಮ. ಈ ಊರಲ್ಲಿ 3,000 ಜನರಿದ್ದು ಅವರಲ್ಲಿ ಬರೋಬ್ಬರಿ 1,000 ಜನರು ಯೂಟ್ಯೂಬರ್‌ಗಳಾಗಿದ್ದಾರೆ!  ಅದರಿಂದಲೇ ಹಣವನ್ನು ಗಳಿಸಿ ತಮ್ಮ ಜೀವನ ನಡೆಸುತ್ತಿದ್ದಾರೆ. ಅಂದರೆ ಇಡೀ ಊರಿನ ಜನಸಂಖ್ಯೆಯ ಸುಮಾರು 30 ಶೇಕಡಾ ಜನರು ಯುಟ್ಯೂಬರ್‌ಗಳೇ ಇದ್ದಾರೆ.

ಸರ್ಕಾರಿ ಉದ್ಯೋಗವೂ ಬೇಡ!
ತುಳಸಿ ಗ್ರಾಮದ ಇಬ್ಬರು ಯುವಕರಾದ ಜ್ಞಾನೇಂದ್ರ ಶುಕ್ಲಾ ಮತ್ತು ಜೈ ವರ್ಮಾ ಯೂಟ್ಯೂಬ್ ವೀಡಿಯೊಗಳನ್ನು ಮಾಡಲು ಪ್ರಾರಂಭಿಸಿದರು. ವಿಶೇಷ ಅಂದ್ರೆ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಲು ಇಬ್ಬರೂ ತಮ್ಮ ಕೆಲಸವನ್ನು ಬಿಟ್ಟಿದ್ದಾರೆ! ಜ್ಞಾನೇಂದ್ರ ಶುಕ್ಲಾ ಅವರು ಮೊದಲು ಎಸ್‌ಬಿಐನಲ್ಲಿ ನೆಟ್‌ವರ್ಕ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ತಿರುವು ಸಿಕ್ಕ ಆ ಘಳಿಗೆ
ಯಾವ್ದೋ ಒಂದು ಘಳಿಗೆಯಲ್ಲಿ ಯೂಟ್ಯೂಬ್ ವೀಡಿಯೊ ನೋಡಿ ನಂದೇ  ಯೂಟ್ಯೂಬ್ ಚಾನಲ್ ಮಾಡ್ಬೇಕು ಅಂತ ತೀರ್ಮಾನ ಮಾಡ್ಬಿಟ್ರು. ಅಂದಹಾಗೆ ಇಲ್ಲಿಯವರೆಗೆ ಅವರು ತಮ್ಮ ಚಾನಲ್‌ನಲ್ಲಿ 250 ಕ್ಕೂ ಹೆಚ್ಚು ವೀಡಿಯೊಗಳನ್ನು ಮಾಡಿದ್ದಾರೆ.  ಒಟ್ಟು  1.15 ಲಕ್ಷ ಚಂದಾದಾರರನ್ನು ಸಂಪಾದಿಸಿದ್ದಾರೆ.

ಟೀಚರ್ ಕೆಲಸ ಬೇಡ, ಯೂಟ್ಯೂಬರ್ ಆಗ್ತೀನಿ!
ಇನ್ನು ಜೈ ವರ್ಮಾ ಅವರ ಕಥೆ ಕೇಳೋದಿದ್ರೆ, ರಸಾಯನಶಾಸ್ತ್ರದಲ್ಲಿ ಎಂಎಸ್​ಸಿ ಮಾಡಿರುವ ಜೈ ವರ್ಮಾ ಅವರು ಖಾಸಗಿ ಕೋಚಿಂಗ್ ಸೆಂಟರ್‌ನಲ್ಲಿ ಅರೆಕಾಲಿಕ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಅಲ್ಲಿ ಅವರು ತಿಂಗಳಿಗೆ 12,000-15,000 ರೂ.  ಸಂಬಳ ಸಿಗ್ತಿತ್ತು.  ಆದರೆ Youtube ನಲ್ಲಿ ಈಗ ಅರು ಸುಮಾರು 30,000-35,000 ರೂ. ದುಡೀತಾರೆ. ತಮ್ಮದೇ ಊರಿನ ಈ ಇಬ್ಬರನ್ನ ನೋಡಿದ ಊರ ಮಂದಿಯೆಲ್ಲ ತಾವೂ ಯೂಟ್ಯೂಬ್​ ಚಾನಲ್ ಬೇರೆ ಬೇರೆ ಥರದ ವಿಡಿಯೋಸ್ ಮಾಡಲು ಶುರು ಮಾಡಿದ್ದಾರೆ.

ಮಹಿಳಾ ಸಬಲೀಕರಣಕ್ಕೂ ಕಾರಣ!
ಮಹಿಳಾ ಕಲಾವಿದೆ ಮತ್ತು ಯೂಟ್ಯೂಬರ್ ಪಿಂಕಿ ಸಾಹು' ಈ    ಯೂಟ್ಯೂಬ್ ಚಾನಲ್​ಗಳು ಹಳ್ಳಿಯ ಮಹಿಳೆಯರನ್ನು ಸಬಲೀಕರಣಗೊಳಿಸಿವೆ.ಮನೆಯಿಂದ ಹೊರಗೇ ಬರದಿದ್ದ ಮಹಿಳೆಯರು ಇಂದು ಕ್ಯಾಮರಾ ಮುಂದೆ ನಿಂತು ಮಾತಾಡ್ತಾರೆ” ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ಇದೇ ಊರಿನ ಯೂಟ್ಯೂಬರ್‌ಗಳಲ್ಲಿ ಒಬ್ಬರಾದ ಸಂದೀಪ್ ಸಾಹು ಮಾತನಾಡಿ, ಹಳ್ಳಿಯಲ್ಲಿ ರಾಮಲೀಲಾ, ನಾಟಕ ಮುಂತಾದವುಗಳ ಮೂಲಕ ಎಲ್ಲರೂ ಪರಸ್ಪರ ಬೆರೆಯುತ್ತಾರೆ. ಯುವಕರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರೂ ನಟನೆಯಲ್ಲಿ ಉತ್ತಮ ಕೌಶಲ್ಯ ಹೊಂದಿದ್ದಾರೆ. ಆದರೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶ ಅಥವಾ ಸರಿಯಾದ ವೇದಿಕೆ ಸಿಕ್ಕಿರಲಿಲ್ಲ. ಆದರೆ ಈಗ ಅದು ಸಿಕ್ಕಿದೆ” ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ನಗಿಸುವ ವಿಡಿಯೋ ಮಾಡೋಕೆ ಸಿಕ್ತು ಸ್ಪೂರ್ತಿ
'Being Chhattisgarhiya' ಹೆಸರಿನ ಯೂಟ್ಯೂಬ್ ಚಾನೆಲ್ 115k ಚಂದಾದಾರರನ್ನು ಹೊಂದಿದೆ.ಈ ಚಾನಲ್​ನಲ್ಲಿ 200 ಕ್ಕೂ ಹೆಚ್ಚು ಹಾಸ್ಯ ವೀಡಿಯೊಗಳಿವೆ. ಒಮ್ಮೆ ಆಸ್ಪತ್ರೆಯಲ್ಲಿ ತೀರಾ ಗಂಭೀರವಾಗಿದ್ದ ರೋಗಿಯೊಬ್ಬರು ಈ ವಿಡಿಯೋ ನೋಡಿ ನಕ್ಕರಂತೆ. ಇದರಿಂದ ಸ್ಪೂರ್ತಿ ಪಡೆದ ಊರವರು ಇನ್ಮೇಲೆ ಹೆಚ್ಚೆಚ್ಚು ನಗಿಸುವ ವಿಡಿಯೋಸ್ ಮಾಡಬೇಕು ಅಂತ ಅಂದುಕೊಂಡಿದ್ದಾರಂತೆ.
Published by:guruganesh bhat
First published: