ನವದೆಹಲಿ, ಮಾ. 16: ಕೇಂದ್ರ ಸರ್ಕಾರ ಕಳೆದ ವರ್ಷ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ನ್ಯಾಯಯುತವಾಗಿ, ಶಾಂತವಾಗಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿಗಳು ಮತ್ತು ದಲಾಲ್ ಗಳು ಎಂದು ಹೇಳಿದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ವಿರುದ್ಧ ದೆಹಲಿಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಸಾಕ್ಷಿ ಮಹಾರಾಜ್ ಅವರ ಪ್ರತಿಕೃತಿಯನ್ನು ದಹಿಸಿದ್ದಾರೆ.
ದೆಹಲಿಯಲ್ಲಿ ಇರುವ ಸಂಸದ ಸಾಕ್ಷಿ ಮಹಾರಾಜ್ ಅವರ ಸರ್ಕಾರಿ ಮನೆ ಎದುರು ಪ್ರತಿಕೃತಿ ದಹನ ಮಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು, ಸಾಕ್ಷಿ ಮಹಾರಾಜ್ ಅವರ ರೈತ ವಿರೋಧಿ ಮನೋಸ್ಥಿತಿಯ ಬಗ್ಗೆ ಕಿಡಿ ಕಾರಿದರು. ದೇಶದ ಅನ್ನದಾತರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಳೆದ ವರ್ಷ ಕೇಂದ್ರ ಸರ್ಕಾರ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದಾರೆ. ಈ ಹೋರಾಟದ ವೇಳೆ ನೂರಾರು ರೈತರು ಹುತಾತ್ಮರಾಗಿದ್ದಾರೆ. ಆದರೆ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ರೈತರನ್ನೇ ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಭಾರತ ಯುವ ಕಾಂಗ್ರೆಸ್ ಮಾಧ್ಯಮ ವಿಭಾಗದ ಉಸ್ತುವಾರಿ ರಾಹುಲ್ ರಾವ್, 'ಮೋದಿ ಸರ್ಕಾರದ ಸಂಸದರ ವರ್ತನೆ ನಾಚಿಕೆಗೇಡಿನದಿಂದ ಕೂಡಿದೆ. ಮೋದಿ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಕಾರ್ಪೋರೇಟ್ ಗಳ ಪರ ಕೆಲಸ ಮಾಡುತ್ತಿದೆ. ರೈತರು ಇಲ್ಲದಿದ್ದರೆ ದೇಶವಿಲ್ಲ ಎಂಬುದನ್ನು ಬಿಜೆಪಿ ಮತ್ತು ಆರ್ಎಸ್ಎಸ್ ಅರ್ಥಮಾಡಿಕೊಳ್ಳಬೇಕು. ದೇಶದ ಯುವಕರು ರೈತರ ಜೊತೆಗೆ ಇದ್ದಾರೆ. ನಾವು ರೈತರಿಗಾಗಿ ದೃಢವಾಗಿ ಹೋರಾಡುತ್ತೇವೆ ಎಂದು ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಹೇಳಿದ್ದಾರೆ.
ಮೋದಿ ಸರ್ಕಾರ ಮತ್ತು ಬಿಜೆಪಿ ಬಂಡವಾಳಶಾಹಿಗಳ ಪರವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ರೈತರ ಬೇಡಿಕೆಗಳನ್ನು ಈಡೇರಿಸಲು ಸಾಧ್ಯವಾಗದೆ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಿದ್ದಾರೆ. ಇದು ರೈತರಿಗೆ ಮಾತ್ರ ಮಾಡಿದ ಅವಮಾನ ಅಲ್ಲ. ದೇಶದ ಪ್ರತಿ ನಾಗರಿಕನಿಗೂ ಮಾಡಿದ ಅಪಮಾನ. ಈ ಮೂಲಕ ಜನಾದೇಶಕ್ಕೆ ಮೋದಿ ಸರ್ಕಾರ ಅವಮಾನ ಮಾಡುತ್ತಿದೆ. ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿರುವುದಾಗಿ ಪ್ರಕಟಣೆ ತಿಳಿಸಿದೆ.
ಇದನ್ನು ಓದಿ: Praveen Kumar IPS - ಹಿಂದೂ ಧರ್ಮದ ಅವಹೇಳನ ಆರೋಪ: ಸ್ವೇರೋ ಚಳವಳಿಯ ರೂವಾರಿ ನೀಡಿದ ಪ್ರತಿಕ್ರಿಯೆ ಇದು
ಕೇಂದ್ರ ಸರ್ಕಾರವು ರೈತ ವಿರೋಧಿಯಾಗಿದೆ. ದೇಶದ ಪ್ರಧಾನಿ ಸಂಸತ್ತಿನಲ್ಲಿ ಚಳವಳಿಗಾರರನ್ನು 'ಆಂದೋಲನ್ ಜೀವಿ' ಎಂದು ಕರೆಯುತ್ತಾರೆ. ಅವರ ಪಕ್ಷದ ಸಂಸದರು ತಮ್ಮ ಹಕ್ಕುಗಳನ್ನು ಬಯಸುವ ರೈತರನ್ನು ಭಯೋತ್ಪಾದಕರು, ಖಲಿಸ್ತಾನಿ ಮತ್ತು ದಲಾಲ್ ಗಳು ಎಂದು ಕರೆಯುತ್ತಾರೆ. ಈ ಹೇಳಿಕೆಗಳು ಅವರ ನೀತಿ ಮತ್ತು ಉದ್ದೇಶಗಳನ್ನು ಸ್ಪಷ್ಟಪಡಿಸುತ್ತವೆ. ಇವರ ವಿರುದ್ಧವಾಗಿ ಮತ್ತು ರೈತರ ಪರವಾಗಿ ಭಾರತೀಯ ಯುವ ಕಾಂಗ್ರೆಸ್ ಹೋರಾಡುತ್ತಿದೆ ಮತ್ತು ಇನ್ನೂ ಹೆಚ್ಚಿನ ಹೋರಾಟ ಮಾಡಲಿದೆ ಎಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ