ನವದೆಹಲಿ(ಸೆಪ್ಟೆಂಬರ್.22): ಯುವಕರಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಮತ್ತು ರೈತ ವಿರೋಧಿ ಮಸೂದೆಗಳನ್ನು ವಿರೋಧಿಸಿ ಸಾವಿರಾರು ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಇಂದು ನವದೆಹಲಿಯ ಸಂಸತ್ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಭಾರತೀಯ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಸಂಸತ್ತಿಗೆ ಘೆರಾವ್ ಹಾಕಲು ಪ್ರಯತ್ನಿಸಿದರು. ಆಗ ಮಾರ್ಗ ಮಧ್ಯದಲ್ಲಿ ಪೊಲೀಸರು ತಡೆದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶ್ರೀನಿವಾಸ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯುವಕರ ಮತ್ತು ರೈತರ ವಿರೋಧಿಯಾಗಿದೆ. ಮೋದಿ ತಮ್ಮ ಕೈಗಾರಿಕೋದ್ಯಮಿ ಗೆಳೆಯರಿಗೆ ಅನುಕೂಲವಾಗುವಂತೆ ಕಾನೂನುಗಳನ್ನು ತರುತ್ತಿದ್ದಾರೆ. ಈ ಜನ ವಿರೋಧಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿದ್ದರೆ ಯುವ ಕಾಂಗ್ರೇಸ್ ಬೀದಿಗಿಳಿದು ಸತ್ಯಾಗ್ರಹ ನಡೆಯಲಿದೆ. ಈಗ ಈ ಮೂಕ ಮತ್ತು ಕಿವುಡರನ್ನು ಜಾಗೃತಗೊಳಿಸಲು ಇಂದು ನಾವು ಸಂಸತ್ತಿಗೆ ಮುತ್ತಿಗೆ ಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪ್ರತಿಭಟನೆ ವೇಳೆ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಕೃತಿಗಳನ್ನು ಸುಟ್ಟುಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಯುವಜನರಲ್ಲಿ ಹೆಚ್ಚುತ್ತಿರುವ ನಿರುದ್ಯೋಗದ ಬಗ್ಗೆ ಕೇಂದ್ರ ಸರ್ಕಾರವನ್ನು ಜಾಗೃತಗೊಳಿಸಲು ಭಾರತೀಯ ಯುವ ಕಾಂಗ್ರೆಸ್ ಈಗಾಗಲೇ 'ರೋಜ್ಗರ್ ದೋ' ಅಭಿಯಾನವನ್ನು ನಡೆಸುತ್ತಿದೆ ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಯುವಕರಿಂದ ಮತಗಳನ್ನು ಪಡೆಯುತ್ತಾರೆ, ಆದರೆ, ಯುವಕರು ಉದ್ಯೋಗ ಕೇಳಿದಾಗ, ಅವರ ಸರ್ಕಾರ ಲಾಠಿ ರುಚಿ ತೋರಿಸುತ್ತದೆ. ಇಂಥದೇ ಕಾರಣಕ್ಕೆ ರಾಹುಲ್ ಗಾಂಧಿ ಅವರು ಈ ಸರ್ಕಾರವನ್ನು 'ಸೂಟ್-ಬೂಟ್ ಕಾ ಸರ್ಕಾರ' ಎಂದು ಹೇಳಿದ್ದಾರೆ. ಈ ಸರ್ಕಾರ 130 ಕೋಟಿ ಭಾರತೀಯರಿಗಾಗಿ ಕೆಲಸ ಮಾಡುತ್ತಿಲ್ಲ ಎರಡರಿಂದ ನಾಲ್ಕು ಜನ ಕೈಗಾರಿಕೋದ್ಯಮಿಗಳಿಗೆ ಕೆಲಸ ಮಾಡುತ್ತಿದೆ. ಇದರ ಆದ್ಯತೆಗಳು ಯುವಕರಿಗೆ ಉದ್ಯೋಗ ನೀಡುವುದಲ್ಲ, ತಮ್ಮ ಕೈಗಾರಿಕೋದ್ಯಮಿ ಸ್ನೇಹಿತರಿಗೆ ಲಾಭ ನೀಡುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ಕಳೆದ 6 ವರ್ಷಗಳಿಂದ ಯುವಕರಿಗೆ ದ್ರೋಹ ಮಾಡುತ್ತಿದ್ದಾರೆ ಮತ್ತು ಪ್ರತಿವರ್ಷ 2 ಕೋಟಿ ಉದ್ಯೋಗ ಕೊಡುವ ಭರವಸೆ ನೀಡಿದ್ದರು. ಆದರೆ, ಈಗ ಇರುವ ಉದ್ಯೋಗಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಈಗ ರೈತರಿಗೆ ವಿರುದ್ಧವಾಗಿರುವ ಕಾನೂನುಗಳನ್ನು ತರಲಾಗಿದೆ. ಅವರು ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಅಚಲವಾಗಿದ್ದರೆ, ನಾವು ಪ್ರಜಾಪ್ರಭುತ್ವವನ್ನು ಉಳಿಸಲು ನಾವು ದೃಢ ನಿಶ್ಚಯವನ್ನು ಹೊಂದಿದ್ದೇವೆ ಎಂದು ಶ್ರೀನಿವಾಸ್ ಹೇಳಿದ್ದಾರೆ.
ಇದನ್ನೂ ಓದಿ : ಅಮಾನತುಗೊಂಡ ಸಂಸದರ ಪರ ನಿಂತ ವಿಪಕ್ಷಗಳು; ರಾಜ್ಯಸಭೆಗೆ ಬಹಿಷ್ಕಾರ, 3 ಬೇಡಿಕೆಗಳು
ಕೇಂದ್ರ ಸರ್ಕಾರವು ಯುವಜನರು ಮತ್ತು ರೈತರ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ. ರೈತರು ಮತ್ತು ಯುವಕರು ತಮ್ಮ ಹಕ್ಕುಗಳಿಗಾಗಿ ಬೇಡಿಕೆ ಎತ್ತಿದಾಗ, ಈ ಸೊಕ್ಕಿನ ಬಿಜೆಪಿ ಸರ್ಕಾರ ವಿರೋಧವನ್ನು ಸಹಿಸುವುದಿಲ್ಲ ಮತ್ತು ಯುವಕರನ್ನು ಮತ್ತು ರೈತರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಇದಕ್ಕೂ ಮೊದಲು ಯುವ ಕಾಂಗ್ರೆಸ್ ಪಂಜಾಬಿನಲ್ಲಿ ಕಿಸಾನ್ ಆಕ್ರೋಶ್ ಸಮಾವೇಶವನ್ನು ಆಯೋಜಿಸಿತ್ತು. ಈಗ ಯೂತ್ ಕಾಂಗ್ರೆಸ್ ರೈತರು ಮತ್ತು ಯುವಕರ ವಿಷಯದ ಬಗ್ಗೆ ಧ್ವನಿ ಎತ್ತಿದೆ. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರದ ಜನವಿರೋಧಿ ನೀತಿಗಳನ್ನು ಬಹಿರಂಗಪಡಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ