ಬ್ಯಾಂಕ್‌ ಲಾಕರ್ ಸುರಕ್ಷತೆ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ನಿಯಮಗಳೇನು ಗೊತ್ತಾ?

ಒಂದು ವೇಳೆ ಸರಿಯಾದ ಮಾಹಿತಿ ನೀಡಲು ವಿಫಲವಾದರೆ, ನೀವು ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದರೂ ಸಹ ಬ್ಯಾಂಕ್ ನಿಮ್ಮ ಲಾಕರ್ ಸೌಲಭ್ಯವನ್ನು ರದ್ದುಗೊಳಿಸಬಹುದು. ನಿಗದಿತ ಸಮಯ ಮಿತಿಯಲ್ಲಿ ಲಾಕರ್ ಅನ್ನು ನಿರ್ವಹಿಸದಿದ್ದರೆ ಬೇರೊಬ್ಬರಿಗೆ ಹಂಚಿಕೆ ಕೂಡ ಮಾಡಬಹುದು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಈಗಿನ ಕಾಲದಲ್ಲಿ ಕಳ್ಳತನ, ದರೋಡೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಎಷ್ಟೇ ಸುರಕ್ಷಿತವಾಗಿ ಆಭರಣ, ಆಸ್ತಿಪತ್ರ, ಬೆಲೆಬಾಳುವ ವಸ್ತುಗಳನ್ನ ಮನೆಯಲ್ಲಿಟ್ಟರೂ ಒಂದಲ್ಲಾ ಒಂದು ರೀತಿ ಭಯ ಇದ್ದೇ ಇರುತ್ತದೆ. ಹಾಡಹಗಲೇ ಮನೆಗೆ ನುಗ್ಗಿ ಕಳ್ಳತನ ಮಾಡುವ ಖತರ್ನಾಕ್ ಖದೀಮರಿದ್ದಾರೆ. ಮನೆಯಲ್ಲಿ ಬೆಲೆಬಾಳುವ ವಸ್ತುಗಳನ್ನಿಟ್ಟು ಕೆಲ ದಿನಗಳ ಮಟ್ಟಿಗೆ ಹೊರಗೆ ತೆರಳಿದಾಗ ಏನು ಬೇಕಾದರೂ ಆಗಬಹುದು. ಇದೇ ಭಯದಿಂದ ಅನೇಕರು ಮನೆಯಲ್ಲಿ ಆಭರಣ, ಬೆಲೆಬಾಳುವ ವಸ್ತುಗಳನ್ನಿಡುವ ಬದಲು ಬ್ಯಾಂಕ್ ಲಾಕರ್‌ನಲ್ಲಿಡಲು ಬಯಸುತ್ತಾರೆ.

  ಲಾಕರ್‌ಗಳು ಬ್ಯಾಂಕುಗಳು ನೀಡುವ ಸೇವೆಗಳಲ್ಲಿ ಒಂದಾಗಿದೆ. ಇದರ ವಹಿವಾಟಿನಿಂದ ಬ್ಯಾಂಕುಗಳಿಗೆ ಸಾಕಷ್ಟು ಲಾಭವಿದೆ. ಈ ಸೇವೆ ಪಡೆಯಲು ಗ್ರಾಹಕರು ಸೇವಾಶುಲ್ಕ ಭರಿಸಬೇಕಾಗುತ್ತದೆ. ಜೊತೆಗೆ ಕೆಲವು ಸುರಕ್ಷತಾ ಕ್ರಮಗಳನ್ನೂ ಅನುಸರಿಸಬೇಕಾಗುತ್ತದೆ. ಬ್ಯಾಂಕ್ ಲಾಕರ್‌ಗಳಲ್ಲಿ ಚಿನ್ನ, ಹಣ ಮತ್ತು ಬೆಲೆ ಬಾಳುವ ವಸ್ತುಗಳು ಎಷ್ಟು ಸೇಫ್ ಅಂತಾ ಎಂದಾದರೂ ಯೋಚಿಸಿದ್ದೀರಾ? ನಮ್ಮಲ್ಲಿ ಬಹುತೇಕರು ಬ್ಯಾಂಕ್ ಲಾಕರ್‌ಗಳ ಸೌಲಭ್ಯ ಪಡೆದುಕೊಳ್ಳುತ್ತಾರೆ. ಆದರೆ ಅವರು ನಿಯಮಿತವಾಗಿ ತಮ್ಮ ಲಾಕರ್‌ಗಳ ಪರಿಶೀಲನೆ ಮಾಡುವಲ್ಲಿ ವಿಫಲರಾಗುತ್ತಾರೆ.

  ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ)ದ ನಿಯಮಗಳ ಪ್ರಕಾರ ವರ್ಷಕ್ಕೊಮ್ಮೆಯಾದರೂ ನೀವು ಬ್ಯಾಂಕ್ ಲಾಕರ್‌ಗೆ ಭೇಟಿ ನೀಡಬೇಕು. ಇಲ್ಲದಿದ್ದರೆ ನಿಮ್ಮ ಬ್ಯಾಂಕ್ ಲಾಕರ್ ಅನ್ನು ತೆರೆಯಬಹುದು. ಆದಾಗ್ಯೂ ನೀವು ಕಡಿಮೆ ಅಪಾಯ ಮಟ್ಟದಲ್ಲಿದ್ದರೆ ನಿಮಗೆ ಹೆಚ್ಚಿನ ಸಮಯ ಸಿಗಬಹುದು. ಮಧ್ಯಮ ಅಪಾಯದ ವಿಭಾಗಕ್ಕೆ ಸೇರುವವರು ಆರ್‌ಬಿಐ ನಿಯಮಾವಳಿಗಳ ಪ್ರಕಾರ ಲಾಕರ್ 3 ವರ್ಷಗಳಿಗಿಂತ ಹೆಚ್ಚು ಕಾಲ ಕಾರ್ಯನಿರ್ವಹಿಸದೆ ಇದ್ದಲ್ಲಿ ಮಾತ್ರ ಬ್ಯಾಂಕ್ ನೋಟಿಸ್ ಕಳುಹಿಸುತ್ತದೆ. ಹೀಗಾಗಿ ಲಾಕರ್ ಬಾಡಿಗೆ ತೆಗೆದುಕೊಂಡ ಬಾಡಿಗೆದಾರನು ವರ್ಷಕ್ಕೆ ಒಮ್ಮೆಯಾದರೂ ಲಾಕರ್ ತೆಗೆದು ನೋಡಬೇಕು. ಒಂದು ವೇಳೆ ಹಾಗೆ ಮಾಡದಿದ್ದಲ್ಲಿ ಬ್ಯಾಂಕ್ ಬಾಡಿಗೆದಾರರನ್ನು ಸಂಪರ್ಕಿಸಿ ಲಾಕರ್ ತೆಗೆದು ನೋಡುವಂತೆ ತಿಳಿಸುತ್ತದೆ.

  ಇದನ್ನು ಓದಿ: ನೀರವ್ ಮೋದಿ ಬಂಧಿಸಿಡಲು ಸಿದ್ಧವಾಗಿದೆ ಮುಂಬೈನ ಅರ್ಥರ್ ರಸ್ತೆಯ ಜೈಲಿನ ವಿಶೇಷ ಕೊಠಡಿ

  ಹಣಕಾಸಿನ ಅಥವಾ ಸಾಮಾಜಿಕ ಸ್ಥಿತಿ, ವ್ಯವಹಾರ ಚಟುವಟಿಕೆಯ ಸ್ವರೂಪ, ಗ್ರಾಹಕರು ಮತ್ತು ಗ್ರಾಹಕರ ಸ್ಥಳ ಆಧರಿಸಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಕಡಿಮೆ, ಮಧ್ಯಮ, ಹೆಚ್ಚಿನ ರಿಸ್ಕ್ ವಿಭಾಗದಡಿ ಲಾಕರ್ ಸೌಲಭ್ಯ ನೀಡುತ್ತವೆ. ಒಬ್ಬ ವ್ಯಕ್ತಿಗೆ ಲಾಕರ್ ಹಂಚಿಕೆ ಮಾಡುವ ಮೊದಲು ಬ್ಯಾಂಕುಗಳು ಸರಿಯಾದ ಶ್ರದ್ಧೆ ವಹಿಸಬೇಕಾಗುತ್ತದೆ. ಒಂದು ವೇಳೆ ಲಾಕರ್ ಬಳಕೆಯಾಗದಿದ್ದರೆ ಸೌಲಭ್ಯವನ್ನು ನಿರ್ವಹಿಸಲು ಅಥವಾ ಹಿಂಪಡೆಯಲು ಬ್ಯಾಂಕ್ ಬಾಡಿಗೆದಾರರಿಗೆ ನೋಟಿಸ್ ಕಳುಹಿಸಬೇಕಾಗುತ್ತದೆ. ಲಾಕರ್ ಸೌಲಭ್ಯ ಬಳಕೆ ಮಾಡದ ಕಾರಣಕ್ಕೆ ಲಿಖಿತ ಪ್ರತಿಕ್ರಿಯೆ ನೀಡುವಂತೆ ಬ್ಯಾಂಕ್ ಕೇಳಬಹುದು. ಬಾಡಿಗೆದಾರ ನೀಡುವ ಉತ್ತರ ಸಮಂಜಸವಾಗಿದ್ದರೆ, ಅಂದರೆ ನೀವು ಅನಿವಾಸಿ ಭಾರತೀಯ (ಎನ್‌ಆರ್‌ಐ) ಆಗಿದ್ದರೆ, ಕೆಲಸದ ವರ್ಗಾವಣೆಯಿಂದ ನೀವು ನಗರದಲ್ಲಿ ಇರದಿದ್ದರೆ ಅಥವಾ ಇನ್ನಾವುದೋ ನಿಜವಾದ ಕಾರಣವಿದ್ದಾಗ ಲಾಕರ್ ಸೌಲಭ್ಯ ಮುಂದುವರಿಸಲು ಬ್ಯಾಂಕ್ ನಿಮಗೆ ಅನುಮತಿ ನೀಡುತ್ತದೆ.

  ಒಂದು ವೇಳೆ ಸರಿಯಾದ ಮಾಹಿತಿ ನೀಡಲು ವಿಫಲವಾದರೆ, ನೀವು ನಿಯಮಿತವಾಗಿ ಬಾಡಿಗೆ ಪಾವತಿಸುತ್ತಿದ್ದರೂ ಸಹ ಬ್ಯಾಂಕ್ ನಿಮ್ಮ ಲಾಕರ್ ಸೌಲಭ್ಯವನ್ನು ರದ್ದುಗೊಳಿಸಬಹುದು. ನಿಗದಿತ ಸಮಯ ಮಿತಿಯಲ್ಲಿ ಲಾಕರ್ ಅನ್ನು ನಿರ್ವಹಿಸದಿದ್ದರೆ ಬೇರೊಬ್ಬರಿಗೆ ಹಂಚಿಕೆ ಕೂಡ ಮಾಡಬಹುದು. ಹೀಗಾಗಿ ಲಾಕರ್ ಸೌಲಭ್ಯ ಪಡೆದುಕೊಳ್ಳುವವರು ಮೊದಲು ಅದರ ಎಲ್ಲಾ ನಿಯಮಗಳನ್ನು ಸರಿಯಾಗಿ ತಿಳಿದುಕೊಳ್ಳುವುದು ಉತ್ತಮ.
  Published by:HR Ramesh
  First published: