UP CM Oath: ಶುಕ್ರವಾರ 2ನೇ ಬಾರಿಗೆ ಯುಪಿ ಸಿಎಂ ಆಗಿ ಯೋಗಿ ಪ್ರಮಾಣವಚನ: 4 ಮಂದಿಗೆ ಡಿಸಿಎಂ ಪಟ್ಟ?

ಪ್ರಮಾಣವಚನ ಕಾರ್ಯಕ್ರಮ ಸಂಜೆ 4 ಗಂಟೆಗೆ ಲಕ್ನೋದ ಶಹೀದ್ ಪಥ್‌ನಲ್ಲಿರುವ ಇಕಾನಾ ಕ್ರೀಡಾಂಗಣದಲ್ಲಿ ನಡೆಯಲಿದೆ. ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ.

ಮೋದಿ-ಯೋಗಿ (ಸಂಗ್ರಹ ಚಿತ್ರ)

ಮೋದಿ-ಯೋಗಿ (ಸಂಗ್ರಹ ಚಿತ್ರ)

  • Share this:
ನವದೆಹಲಿ, ಮಾ. 24: ದೇಶದ ಅತಿ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ (Uttar Pradesh) ಮತ್ತೆ ದೊಡ್ಡ ಮಟ್ಟದ ಗೆಲುವು ಸಾಧಿಸಿ ಅಧಿಕಾರ ಉಳಿಸಿಕೊಂಡಿರುವ ಬಿಜೆಪಿಯ (BJP) ನಾಯಕ ಯೋಗಿ ಆದಿತ್ಯನಾಥ್ (Yogi Adithyanath) ಅವರು ಮಾರ್ಚ್ 25ರಂದು ಎರಡನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ (Oath Taking As Chief Minister Of Uttar Pradesh) ಸ್ವೀಕರಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮ ಸಂಜೆ 4 ಗಂಟೆಗೆ ಲಕ್ನೋದ (Lucknow) ಶಹೀದ್ ಪಥ್‌ನಲ್ಲಿರುವ ಇಕಾನಾ ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಕಾರ್ಯಕ್ರಮದಲ್ಲಿ ಮೋದಿ ಮತ್ತಿತರರು ಭಾಗಿ
ಯೋಗಿ ಆದಿತ್ಯನಾಥ್ ಅವರಿಗೆ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರು ಪ್ರಮಾಣವಚನ ಬೋಧಿಸಲಿದ್ದಾರೆ. ಪ್ರಮಾಣವಚನ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.‌ ನಡ್ಡಾ, ಬಿಜೆಪಿ ಆಳ್ಬಿಕೆ ಇರುವ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: 3 MLA Join BJP: VIP ಪಕ್ಷದಿಂದ ಗೆದ್ದು ದಿಢೀರ್ ಪಕ್ಷ ಬಿಟ್ಟು BJP ಸೇರಿದ ಮೂವರು ಶಾಸಕರು

3 ಅಥವಾ 4 ಡಿಸಿಎಂ ಸಾಧ್ಯತೆ
ಪ್ರಚಂಡ ಬಹುಮತ ನೀಡಿದ ದೊಡ್ಡ ರಾಜ್ಯ ಉತ್ತರ ಪ್ರದೇಶದಲ್ಲಿ ಪ್ರದೇಶ ಮತ್ತು ಜಾತಿ ಲೆಕ್ಕಾಚಾರಗಳಿಗೆ ಅನುಸಾರವಾಗಿ ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿ ಸ್ಥಾನಗಳನ್ನು ಸೃಷ್ಟಿ ಮಾಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯೋಗಿ ಆದಿತ್ಯನಾಥ್ ಅವರಲ್ಲದೆ ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿಗಳು ಕೂಡ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ. ಬ್ರಜೇಶ್ ಪಾಠಕ್, ಶ್ರೀಕಾಂತ್ ಶರ್ಮಾ, ಬೇಬಿ ರಾಣಿ ಮೌರ್ಯ, ದಿನೇಶ್ ಶಾಮ ಮತ್ತು ಕೇಶವ್ ಪ್ರಸಾದ್ ಮೌರ್ಯ ಹೆಸರುಗಳು ಪರಿಗಣನೆಯಲ್ಲಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕೆಲವು ಸಚಿವರ ಪ್ರಮಾಣವಚನ ಸ್ವೀಕಾರ
ಯೋಗಿ ಆದಿತ್ಯನಾಥ್ ಮತ್ತು ಮೂರು ಅಥವಾ ನಾಲ್ಕು ಉಪ ಮುಖ್ಯಮಂತ್ರಿಗಳ ಜೊತೆಗೆ ನಾಳೆ ಕೆಲವು ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಂತಹ ಕೆಲವು ಸಂಭವನೀಯರ ವಿವರಗಳು ಹೀಗಿವೆ.

ಸ್ವತಂತ್ರ ದೇವ್ ಸಿಂಗ್: ಇವರು ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷರು. ಎಲ್ಲರಿಗೂ ಅತ್ಯಂತ ಸುಲಭವಾಗಿ ಸಿಗುವ ನಾಯಕರೆಂದೇ ಹೇಳಲಾಗುತ್ತದೆ. ಸದ್ಯ ವಿಧಾನ ಪರಿಷತ್ ಸದಸ್ಯರಾಗಿರುವ ಸ್ವತಂತ್ರ ದೇವ್ ಸಿಂಗ್ ಅವರು ಯೋಗಿ ಆದಿತ್ಯನಾಥ್ ಅವರ ನಿಕಟವರ್ತಿ ಕೂಡ ಹೌದು. ಹಾಗಾಗಿ  ಅವರು ಹೊಸ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬ್ರಜೇಶ್ ಪಾಠಕ್: ಹಿಂದಿನ ಯೋಗಿ ಸರ್ಕಾರದಲ್ಲಿ ಕಾನೂನು ಸಚಿವ ಮತ್ತು ಯುಪಿಯಲ್ಲಿ ಬಿಜೆಪಿಯ ಬ್ರಾಹ್ಮಣ ನಾಯಕ. ಬ್ರಾಹ್ಮಣ ಸಮುದಾಯಕ್ಕೆ ಆದ್ಯತೆ ನೀಡಲೇಬೇಕೆಂದು ಇವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ.

ಶ್ರೀಕಾಂತ್ ಶರ್ಮಾ: ಹೈಕಮಾಂಡ್ ನಾಯಕರ ಸಮೀಪವರ್ತಿ ಶ್ರೀಕಾಂತ್ ಶರ್ಮಾ ಹೊಸ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ತಿಳಿಸಿವೆ.

ಕುನ್ವಾರ್ ಬ್ರಿಜೇಶ್ ಸಿಂಗ್: ಯಾದವರು ಮತ್ತು ಮುಸ್ಲಿಮರು ಗಣನೀಯ ಸಂಖ್ಯೆಯಲ್ಲಿ ಇರುವ ದೇವಬಂದ್ ಕ್ಷೇತ್ರದಿಂದ ಗೆದ್ದಿರುವ ಕುನ್ವಾರ್ ಬ್ರಿಜೇಶ್ ಸಿಂಗ್ ಸಚಿವ ಸಂಪುಟ ಸೇರುವುದು ಖಚಿತ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: BJP ಗೆದ್ದರೆ ರಾಜಕೀಯವನ್ನೇ ತೊರೆಯುವೆ.. ದೆಹಲಿ ಸಿಎಂ ಕೇಜ್ರಿವಾಲ್ ಸವಾಲನ್ನು ಸ್ವೀಕರಿಸುತ್ತಾ ಕೇಸರಿ ಪಕ್ಷ?

ಅದಿತಿ ಸಿಂಗ್: ಅದಿತಿ ಸಿಂಗ್ ರಾಯ್ಬರೇಲಿ ಸದರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದು ನಂತರ ಬಿಜೆಪಿ ಸೇರಿದ್ದರು‌. ಈಗ ಬಿಜೆಪಿಯಿಂದಲೂ ಗೆದ್ದಿದ್ದಾರೆ. ಇವರ ತಂದೆ ಅಖಿಲೇಶ್ ಸಿಂಗ್ ಅವರು ಕೂಡ ಹಲವು ವರ್ಷಗಳಿಂದ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಕಾಂಗ್ರೆಸ್ ತೊರೆದು ಬಂದಿರುವ ಹಿನ್ನೆಲೆಯಲ್ಲಿ ಇವರಿಗೆ ಸಚಿವ ಸಂಪುಟದಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಸಿಮ್ ಅರುಣ್ ಅಥವಾ ರಾಜೇಶ್ವರ್ ಸಿಂಗ್: ಕನೌಜ್ ಗೆದ್ದಿರುವ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಅಥವಾ ಜಾರಿ ನಿರ್ದೇಶನಾಲಯದ ಅಧಿಕಾರಿ ರಾಜೇಶ್ವರ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಇದಲ್ಲದೆ ಮಾಜಿ ಸಚಿವರಾದ ಸತೀಶ್ ಮಹಾನ, ಅಶುತೋಷ್ ಟಂಡನ್, ಜಿತಿನ್ ಪ್ರಸಾದ ಮತ್ತು ಸುರೇಶ್ ಖನ್ನಾ ಅವರನ್ನು ಪರಿಗಣಿಸಲಾಗಿದೆ. ಎಸ್‌ಸಿಯಾಗಿರುವ ಬೇಬಿ ರಾಣಿ ಮೌರ್ಯ ಅವರಿಗೆ ಗೌರವಾನ್ವಿತ ಸ್ಥಾನ ಸಿಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶದ 403 ಕ್ಷೇತ್ರಗಳ ಪೈಕಿ ಬಿಜೆಪಿ 255 ಕ್ಷೇತ್ರಗಳನ್ನು ಗೆದ್ದಿದೆ ಮತ್ತು ಶೇಕಡಾ 41.29 ರಷ್ಟು ಮತ ಪಡೆದಿದೆ. ಸಮಾಜವಾದಿ ಪಕ್ಷವು ಶೇಕಡಾ 32% ರಷ್ಟು ಮತ ಗಳಿಸಿ 111 ಸ್ಥಾನಗಳನ್ನು ಮಾತ್ರ ಗೆದ್ದಿದೆ. ಕಾಂಗ್ರೆಸ್ ಎರಡು ಸ್ಥಾನಗಳನ್ನು ಮತ್ತು ಬಹುಜನ ಸಮಾಜ ಪಕ್ಷವು ಒಂದು ಸ್ಥಾನಗಳನ್ನು ಮಾತ್ರ ಗೆದ್ದಿವೆ.
Published by:Kavya V
First published: