ಸುಮಾರು 10 ವರ್ಷಗಳ ಕಾಲ ತನ್ನೊಟ್ಟಿಗೆ ಸಂಸಾರ ನಡೆಸಿದ ಪತ್ನಿ ಶಾಲಿನಿ ತಲ್ವಾರ್ ತಮ್ಮ ಪತಿ ಬಾಲಿವುಡ್ ಗಾಯಕ ಯೋ ಯೋ ಹನಿ ಸಿಂಗ್ ವಿರುದ್ಧ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಿರುವುದಾಗಿ ಆರೋಪಿಸಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದು, ತಮಗೆ ತಮ್ಮ ಗಂಡನಿಂದ ರಕ್ಷಣೆ ಒದಗಿಸುವಂತೆ ಇತ್ತೀಚೆಗೆ ನ್ಯಾಯಾಲಯದ ಮೊರೆ ಹೋಗಿದ್ದರು.ಆದರೆ, ಈಗ ತಮ್ಮ ಮೌನ ಮುರಿದು ಮಾತನಾಡಿದ ಹನಿ ಸಿಂಗ್ ತಮ್ಮ ಪತ್ನಿ ಮಾಡಿದಂತಹ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದಿದ್ದಾರೆ.
ಹನಿ ಸಿಂಗ್ ಪತ್ನಿ ಶಾಲಿನಿ ತಾನು ದಾಖಲಿಸಿದ ಪ್ರಕರಣದಲ್ಲಿ ತನ್ನನ್ನು ಒಂದು ಪ್ರಾಣಿಗಿಂತಲೂ ಕೀಳಾಗಿ ನೋಡಿಕೊಂಡಿರುವುದನ್ನು ಬರೆದಿದ್ದಾರೆ ಮತ್ತು ಪತಿ ಮಾತ್ರವಲ್ಲದೆ, ತನ್ನ ಅತ್ತೆ, ಮಾವ ಸಹ ಮಾನಸಿಕ ಮತ್ತು ದೈಹಿಕವಾಗಿ ನೋವನ್ನುಂಟು ಮಾಡಿರುವುದಾಗಿ ಹೇಳಿದ್ದರು.
ಇಷ್ಟು ದಿನಗಳವರೆಗೆ ಸುಮ್ಮನಿದ್ದ ಗಾಯಕ ಈಗ ತಮ್ಮ ಪತ್ನಿಯ ಆರೋಪಗಳ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಹನಿ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದ ಪುಟದಲ್ಲಿ ಹೇಳಿಕೆಯನ್ನು ಹಂಚಿಕೊಂಡಿದ್ದು "ನನ್ನ ಪತ್ನಿ ಶಾಲಿನಿ ಮಾಡಿದ ಸುಳ್ಳು ಆರೋಪಗಳಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ ಮತ್ತು ಈ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದು ಬರೆದಿದ್ದಾರೆ.
"ಈ ಹಿಂದೆ ನನ್ನ ಹಾಡಿನ ಸಾಲುಗಳ ಬಗ್ಗೆ, ನನ್ನ ಆರೋಗ್ಯದ ಬಗ್ಗೆ ಮತ್ತು ಸುದ್ದಿ ಮಾಧ್ಯಮಗಳಲ್ಲಿ ನನ್ನ ಬಗ್ಗೆ ನಕಾರಾತ್ಮಕ ವರದಿಗಳನ್ನು ಪ್ರಸಾರ ಮಾಡಿದ್ದರೂ ನಾನು ಯಾವುದೇ ಹೇಳಿಕೆ ಬಿಡುಗಡೆ ಮಾಡಿರಲಿಲ್ಲ, ಆದರೆ ಈಗ ನನ್ನ ಜೊತೆಗೆ 10 ವರ್ಷಗಳ ಕಾಲ ಸಂಸಾರ ಮಾಡಿದ ನನ್ನ ಪತ್ನಿಯೇ ನನ್ನ ಬಗ್ಗೆ ಹಾಗು ನನ್ನ ತಂದೆ ತಾಯಿಯ ಬಗ್ಗೆ ಮಾಡುತ್ತಿರುವ ಸುಳ್ಳು ಆರೋಪಗಳನ್ನು ಸಹಿಸಿಕೊಂಡು ಇರಲು ಮನಸ್ಸಿಗೆ ತುಂಬಾ ನೋವಾಗುತ್ತಿದೆ, ಅದಕ್ಕಾಗಿ ನನ್ನ ಹೇಳಿಕೆ ಬಿಡುಗಡೆ ಮಾಡಿದ್ದೇನೆ", ಎಂದು ಹನಿ ಸಿಂಗ್ ಬರೆದುಕೊಂಡಿದ್ದಾರೆ.
"ನಾನು ಈ ಆರೋಪಗಳ ಬಗ್ಗೆ ಏನು ಮಾತಾಡಲೂ ಇಷ್ಟಪಡುವುದಿಲ್ಲ, ಏಕೆಂದರೆ ಈ ಪ್ರಕರಣ ನ್ಯಾಯಾಲಯದಲ್ಲಿದೆ ಮತ್ತು ನನಗೆ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಸಂಪೂರ್ಣವಾದ ನಂಬಿಕೆ ಮತ್ತು ಗೌರವವಿದ್ದು ಸತ್ಯ ಅತೀ ಶೀಘ್ರದಲ್ಲಿಯೇ ಹೊರ ಬೀಳಬಹುದೆಂಬ ನಂಬಿಕೆ ನನಗಿದೆ" ಎಂದೂ ಬರೆದುಕೊಂಡಿದ್ದಾರೆ.
"ನ್ಯಾಯಾಲಯವು ನನ್ನ ವಿರುದ್ಧ ಮಾಡಿದಂತಹ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಲು ಅನುಮತಿ ಮಾಡಿಕೊಟ್ಟದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ದಯವಿಟ್ಟು ನನ್ನ ಅಭಿಮಾನಿಗಳಲ್ಲಿ ವಿನಂತಿ ಏನಂದರೆ ಈ ಆರೋಪಗಳ ಬಗ್ಗೆ ನೀವು ಈಗಲೇ ತೀರ್ಮಾನಕ್ಕೆ ಬರದೇ ನ್ಯಾಯಾಲಯದ ತೀರ್ಪಿಗಾಗಿ ಕಾಯಿರಿ" ಎಂದು ಗಾಯಕ ಕೇಳಿಕೊಂಡಿದ್ದಾರೆ.
"ನನಗೆ ಗೊತ್ತಿದೆ. ಪ್ರಾಮಾಣಿಕತೆಗೆ ಎಂದಿಗೂ ಮೋಸ ಆಗುವುದಿಲ್ಲ ಮತ್ತು ನನಗೆ ಉತ್ತಮವಾದ ಹಾಡುಗಳನ್ನು ನೀಡಲು ಸದಾ ಪ್ರೇರೇಪಿಸುವಂತಹ ಅಭಿಮಾನಿಗಳು ಮತ್ತು ಹಿತೈಷಿಗಳಿಗೆ ನಾನು ಸದಾ ಚಿರಋಣಿ" ಎಂದು ತಮ್ಮ ಹೇಳಿಕೆಯಲ್ಲಿ ಬರೆದಿದ್ದಾರೆ.
ಶಾಲಿನಿ ಜೊತೆಗೆ ಹನಿ ಸಿಂಗ್ 2011ರಲ್ಲಿ ಮದುವೆ ಆಗಿದ್ದು, ಈ ವರ್ಷದ ಆರಂಭದಲ್ಲಿ ದಂಪತಿ ತಮ್ಮ 10ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು ಎಂದು ಹೇಳಲಾಗಿದೆ. ಹನಿ ಸಿಂಗ್ ಜತೆ ಹನಿಮೂನ್‌ಗೆ ಹೋದಾಗಲೇ ಹೊಡೆದಿದ್ದರು ಎಂದು ಮತ್ತು ಗಾಯಕನಿಗೆ ಅನೇಕ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಇದೆ ಎಂದೂ ಪತ್ನಿ ಆರೋಪಿಸಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.