ಇ.ಡಿ. ಬಿಗಿ ಮುಷ್ಠಿಯಲ್ಲಿರುವ ಡಿಕೆಶಿಗೆ ಮತ್ತೊಂದು ಸಂಕಷ್ಟ, ದೆಹಲಿ ಮನೆ ಮೇಲೆ ಸಿಬಿಐ ದಾಳಿ

CBI Raid on DK Shivakumar: ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೊಳಗಾಗಿ ಸದ್ಯ ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಡಿಕೆ ಶಿವಕುಮಾರ್​ ಅವರಿಗೆ ಸಿಬಿಐ ಅಧಿಕಾರಿಗಳಿಂದ ಮತ್ತೊಂದು ಸಂಕಷ್ಟ ಎದುರಾಗಿದೆ.

MAshok Kumar | news18-kannada
Updated:October 21, 2019, 3:13 PM IST
  • Share this:
ನವ ದೆಹಲಿ (ಅಕ್ಟೋಬರ್​ 21); ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಡಿಕೆ ಶಿವಕುಮಾರ್​ ಇಡಿ ನ್ಯಾಯಾಂಗ ಬಂಧನದಲ್ಲಿರುವಾಗಲೇ ದೆಹಲಿಯ ಸಫ್ಧರ್​ಜಂಗ್ ರಸ್ತೆಯಲ್ಲಿರುವ ಅವರ ಒಡೆತನದ ಮತ್ತೊಂದು​ ನಿವಾಸದ ಮೇಲೆ ಇಂದು ಸಿಬಿಐ ಅಧಿಕಾರಿಗಳು ದಿಢೀರ್  ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ತೆರಿಗೆ ಇಲಾಖೆ ಅಧಿಕಾರಿಗಳು ಕಳೆದ ವರ್ಷ ಬೆಂಗಳೂರಿನಲ್ಲಿರುವ ಡಿ.ಕೆ. ಶಿವಕುಮಾರ್​ ಮನೆ ಹಾಗೂ ಅವರ ಒಡೆತನದ ರೆಸಾರ್ಟ್​ ಮೇಲೆ ದಾಳಿ ನಡೆಸಿ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿದ್ದರು. ಆದರೆ, ಈ ದಾಳಿ ಸಂಭವಿಸಿದ ಕೆಲವೇ ದಿನಗಳಲ್ಲಿ ಡಿಕೆಶಿ ದೆಹಲಿಯ ಪ್ರತಿಷ್ಠಿತ ಸಫ್ದರ್​ ಜಂಗ್​ ರಸ್ತೆಯಲ್ಲಿ ಮತ್ತೊಂದು ಐಶಾರಾಮಿ ಮನೆಯನ್ನು ಖರೀದಿಸಿದ್ದರು. ಇದೇ ಕಾರಣಕ್ಕೆ ಸಿಬಿಐ ಅಧಿಕಾರಿಗಳು ಈ ಮನೆ ಮೇಲೂ ದಾಳಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಜಾರಿ ನಿರ್ದೇಶನಾಲಯ ಅಧಿಕಾರಿಗಳ ವಿಚಾರಣೆಯಲ್ಲಿದ್ದ ಡಿ.ಕೆ. ಶಿವಕುಮಾರ್ ಅವರನ್ನು ಅಧಿಕೃತವಾಗಿ ಕಳೆದ ಸೆಪ್ಟೆಂಬರ್​ 3 ರಂದು ಇಡಿ ಅಧಿಕಾರಿಗಳು ಇಡಿ ವಿಶೇಷ ನ್ಯಾಯಾಲಯದಿಂದ ನ್ಯಾಯಾಂಗ ಬಂಧನಕ್ಕೆ ಪಡೆದಿದ್ದರು. ಕಳೆದ 6 ವಾರಗಳಿಂದ ಇಡಿ ವಶದಲ್ಲಿ ತಿಹಾರ್​ ಜೈಲಿನಲ್ಲಿರುವ ಡಿ.ಕೆ. ಶಿವಕುಮಾರ್ ದೆಹಲಿ ಹೈಕೋರ್ಟ್​ ಹಾಗೂ ಸುಪ್ರೀಂ ಕೋರ್ಟ್​ನಲ್ಲಿ ಜಾಮೀನಿಗಾಗಿ ಪ್ರಯತ್ನಿಸುತ್ತಿದ್ದಾರೆ. ಆದರೂ, ಈವರೆಗೆ ಜಾಮೀನು ಲಭ್ಯವಾಗಿಲ್ಲ. ಅಲ್ಲದೆ, ಡಿಕೆಶಿ ಜಾಮೀನು ಅರ್ಜಿ ಕುರಿತು ಕಾಯ್ದಿರಿಸಿದ್ದ ತೀರ್ಪನ್ನು ಇಂದು ಸಂಜೆ ವೇಳೆಗೆ ಪ್ರಕಟಿಸುವುದಾಗಿ ದೆಹಲಿ ಹೈಕೋರ್ಟ್​ ತಿಳಿಸಿತ್ತು. ​

ಈ ನಡುವೆ ಇಂದು ಬೆಳಗ್ಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ತಿಹಾರ್​ ಜೈಲಿಗೆ ತೆರಳಿ ಡಿ.ಕೆ. ಶಿವಕುಮಾರ್​ ಅವರನ್ನು ಭೇಟಿ ಮಾಡಿ ಬಂದಿದ್ದರು. ಅಲ್ಲದೆ, ಸಂಜೆ ಕಾಂಗ್ರೆಸ್​ ಪಕ್ಷದ ಹಂಗಾಮಿ ರಾಷ್ಟ್ರಾಧ್ಯಕ್ಷೆ ಸೋನಿಯಾ ಗಾಂಧಿ ಸಹ ಡಿಕೆಶಿ ಅವರನ್ನು ಭೇಟಿ ಮಾಡಲು ತಿಹಾರ್ ಜೈಲಿಗೆ ತೆರಳಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ, ಅಷ್ಟರೊಳಗೆ ಸಿಬಿಐ ಅಧಿಕಾರಿಗಳು ಡಿಕೆಶಿ ಅವರಿಗೆ ಸೇರಿದ ಮತ್ತೊಂದು ದೆಹಲಿ ನಿವಾಸದ ಮೇಲೆ ದಾಳಿ ಸಂಘಟಿಸಿರುವುದು ಹತ್ತಾರು ಅನುಮಾನಗಳಿಗೆ ಕಾರಣವಾಗಿದೆ.   ​

ಇದನ್ನೂ ಓದಿ : ತಮಿಳು ವಿಶ್ವದ ಅತ್ಯಂತ ಪ್ರಾಚೀನ ಮತ್ತು ಶ್ರೇಷ್ಠ ಭಾಷೆ; ಮುಂದುವರೆದ ಪ್ರಧಾನಿ ಮೋದಿ ತಮಿಳು ಭಾಷಾ ಪ್ರೇಮ

First published: October 21, 2019, 1:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading