ಉಪಸಮರದ ಬಳಿಕ ಹೆಚ್ಚಾಯ್ತು ಯಡಿಯೂರಪ್ಪ ಕೈಬಲ; ಎರಡನೇ ಮಗನಿಗೆ ಸಜ್ಜಾಗುತ್ತಿದೆ ವೇದಿಕೆ

ಯಡಿಯೂರಪ್ಪ ಅವರ ಆಪ್ತ ವಲಯದ ಪ್ರಕಾರ ವಿಜಯೇಂದ್ರ ಅವರದ್ದು ಉಜ್ವಲ ಪ್ರತಿಭೆ. ಈಗ್ಗೆ ಕೆಲವಾರು ವರ್ಷಗಳಿಂದ ಮಾತ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರಾದರೂ ಇವರು ಸಾಕಷ್ಟು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ಧಾರೆ.

news18
Updated:December 12, 2019, 1:12 PM IST
ಉಪಸಮರದ ಬಳಿಕ ಹೆಚ್ಚಾಯ್ತು ಯಡಿಯೂರಪ್ಪ ಕೈಬಲ; ಎರಡನೇ ಮಗನಿಗೆ ಸಜ್ಜಾಗುತ್ತಿದೆ ವೇದಿಕೆ
ವಿಜಯೇಂದ್ರಗೆ ಸಿಹಿ ತಿನಿಸುತ್ತಿರುವ ಬಿಎಸ್​ವೈ
  • News18
  • Last Updated: December 12, 2019, 1:12 PM IST
  • Share this:
ಬೆಂಗಳೂರು(ಡಿ. 12): ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಇಬ್ಬರು ಮಕ್ಕಳು ರಾಜಕಾರಣದಲ್ಲಿ ಸಾಕಷ್ಟು ಕಾಲದಿಂದ ಗುರುತಿಸಿಕೊಂಡಿದ್ದಾರೆ. ಆದರೆ, ಯಡಿಯೂರಪ್ಪ ಅವರ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಇರಲಿಲ್ಲ. ಯಡಿಯೂರಪ್ಪ ಅವರ ರಾಜಕೀಯ ಇನ್ನಿಂಗ್ಸ್ ಅವರಿಗೇ ನಿಂತು ಹೋಗಬೇಕು. ಅವರ ಮಕ್ಕಳಿಗೆ ಮಣೆ ಹಾಕಬಾರದು ಎಂದು ಬಿಜೆಪಿಯೊಳಗೇ ಪ್ರತಿರೋಧಗಳು ವ್ಯಕ್ತವಾಗುತ್ತಿದ್ದವು. ಆದರೆ, ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಪಡೆದದ್ದು ಯಡಿಯೂರಪ್ಪ ಅವರ ಬಲವನ್ನು ನೂರ್ಮಡಿ ಹೆಚ್ಚಿಸಿದೆ. ಅದರ ಬೆನ್ನಲ್ಲೇ ಯಡಿಯೂರಪ್ಪ ಎರಡನೇ ಮಗ ಬಿ.ವೈ. ವಿಜಯೇಂದ್ರ ಅವರ ಹೆಸರು ಹೆಚ್ಚು ಪ್ರವರ್ದಮಾನಕ್ಕೆ ಬರುತ್ತಿದೆ.

ಉಪಚುನಾವಣೆ ಫಲಿತಾಂಶ ಪ್ರಕಟವಾದ ನಂತರ ವಿಜಯೇಂದ್ರ ಅವರು ತಮ್ಮ ತಂದೆಯ ಆಶೀರ್ವಾದ ಪಡೆಯುತ್ತಿರುವ ದೃಶ್ಯ ಮಾಧ್ಯಮಗಳಲ್ಲಿ ವಿವಿಧ ಕೋನಗಳಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ. ಕೆ.ಆರ್. ಪೇಟೆ ಕ್ಷೇತ್ರದ ಇತಿಹಾಸದಲ್ಲೇ ಬಿಜೆಪಿ ಮೊದಲ ಬಾರಿಗೆ ದಿಗ್ವಿಜಯ ಸಾಧಿಸಿತ್ತು. ಯಡಿಯೂರಪ್ಪ ಅವರ ಹುಟ್ಟೂರಾದ ಬೂಕನಕೆರೆ ಇದೇ ಕ್ಷೇತ್ರದಲ್ಲಿದ್ದರೂ ಬಿಜೆಪಿ ಯಾವತ್ತೂ ಕೂಡ ಇಲ್ಲಿ ಪ್ರಬಲ ಸ್ಪರ್ಧೆ ಒಡ್ಡಿದ್ದಿಲ್ಲ. ಈ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಬಂದ ಅಚ್ಚರಿ ಗೆಲುವಿನ ಹಿಂದೆ ವಿಜಯೇಂದ್ರ ಅವರ ಶ್ರಮ ಇದ್ದದ್ದನ್ನು ತಳ್ಳಿಹಾಕಲು ಸಾಧ್ಯವಿಲ್ಲ. ತಮ್ಮ ತಂದೆಗೆ ಜನ್ಮನೀಡಿದ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಿಯೇ ತೀರುತ್ತೇನೆಂದು ಪಣತೊಟ್ಟು ವಿಜಯೇಂದ್ರ ಅಖಾಡಕ್ಕಿಳಿದಿದ್ದರು. ಒಂದು ತಿಂಗಳು ಇಡೀ ಕ್ಷೇತ್ರದಲ್ಲಿ ತಿರುಗಾಡಿ ಬಿಜೆಪಿಯ ಅಲೆಯನ್ನು ಎಬ್ಬಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಇದನ್ನೂ ಓದಿ: ಬಿಜೆಪಿಯಲ್ಲಿ ಮುಗಿಯದ ಡಿಸಿಎಂ ಹುದ್ದೆ ಹಂಚಿಕೆ ತಲೆ ಬಿಸಿ; ಇಲ್ಲದ ಸ್ಥಾನಕ್ಕೆ ಆಕಾಂಕ್ಷಿಗಳ ಸಂಖ್ಯೆ ನಾಲ್ಕು..!

ಯಡಿಯೂರಪ್ಪ ಅವರಿಗಿರುವುದು ಐವರು ಮಕ್ಕಳು ಅವರಲ್ಲಿ ಮೂವರು ಹೆಣ್ಮಕ್ಕಳಾದರೆ ಇಬ್ಬರು ಗಂಡು ಮಕ್ಕಳು. ಮೂರೂ ಹೆಣ್ಮಕ್ಕಳು ರಾಜಕಾರಣದಲ್ಲಿಲ್ಲ. ಹಿರಿಯ ಮಗ ಬಿ.ವೈ. ರಾಘವೇಂದ್ರ ಅವರು ಸಾಕಷ್ಟು ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿದ್ದಾರೆ. ಬಿಜೆಪಿಯ ಭದ್ರಕೋಟೆ ಎನಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಅವರು ಸಂಸದರಾಗಿ ಆಯ್ಕೆಯಾಗಿದ್ದಾರೆ.

ಇನ್ನು, ಕಿರಿಯ ಮಗ ಬಿ.ವೈ. ವಿಜಯೇಂದ್ರ ಅವರು ಬೆಂಗಳೂರಿನಲ್ಲೇ ಬೆಳೆದವರು. ಕಾನೂನು ಪದವೀಧರರು. ತುಸು ಅಂತರ್ಮುಖಿಯಾದ ಇವರು ಮಾತಾಡುವುದು ಕಡಿಮೆ. ಆದರೆ, ಜನರ ಮಾತುಗಳನ್ನ ಆಲಿಸುವ ಸ್ವಭಾವ ಇವರಿಗೆ ಇದೆ. ಆದರೆ, ಯಡಿಯೂರಪ್ಪ ಅವರ ಆಪ್ತ ವಲಯದ ಪ್ರಕಾರ ವಿಜಯೇಂದ್ರ ಅವರದ್ದು ಉಜ್ವಲ ಪ್ರತಿಭೆ. ಈಗ್ಗೆ ಕೆಲವಾರು ವರ್ಷಗಳಿಂದ ಮಾತ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರಾದರೂ ಇವರು ಸಾಕಷ್ಟು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ಧಾರೆ.

ಬಿ.ವೈ. ವಿಜಯೇಂದ್ರ ಹೆಚ್ಚು ಸುದ್ದಿಯಾಗಿದ್ದು 2018ರ ವಿಧಾನಸಭಾ ಚುನಾವಣೆಯ ವೇಳೆಯಲ್ಲೇ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಡಾ. ಯತೀಂದ್ರ ಅವರು ಸ್ಪರ್ಧಿಸಿದ್ದ ವರುಣಾ ಕ್ಷೇತ್ರಕ್ಕೆ ವಿಜಯೇಂದ್ರ ಅವರನ್ನು ನಿಲ್ಲಿಸಲು ಯಡಿಯೂರಪ್ಪ ನಿರ್ಧರಿಸಿದ್ದರು. ವರುಣಾ ಕ್ಷೇತ್ರದಲ್ಲಿ ಕೆಲ ದಿನಗಳ ಕಾಲ ವಿಜಯೇಂದ್ರ ಮಿಂಚಿನ ಸಂಚಾರ ನಡೆಸಿ ಪಕ್ಷದ ಸಂಘಟನಾ ಕೆಲಸಗಳನ್ನೂ ಮಾಡಿದ್ದರು. ಆದರೆ, ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿಂದಾಗಿ ವಿಜಯೇಂದ್ರಗೆ ಟಿಕೆಟ್ ಸಿಗಲಿಲ್ಲ. ಆಗಿನಿಂದಲೂ ಅವರು ರಾಜಕಾರಣದ ಮುಖ್ಯಭೂಮಿಕೆಗೆ ಬರದೇ ತೆರೆ ಮರೆಯಲ್ಲೇ ತಮ್ಮ ಕೆಲಸ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್​-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡ ಕಾರಣ ಜೆಡಿಎಸ್​ ಸೋಲಬೇಕಾಯ್ತು; ಎಚ್​​.ಡಿ ರೇವಣ್ಣಯಡಿಯೂರಪ್ಪ ಅವರ ಆಡಳಿತದಲ್ಲಿ ವಿಜಯೇಂದ್ರ ಅವರದ್ದೇ ಹಸ್ತಕ್ಷೇಪ ಇರುತ್ತದೆ. ಅವರೇ ಎಲ್ಲಾ ಆಡಳಿತ ನಿರ್ವಹಿಸುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಮುಖ್ಯಮಂತ್ರಿಗಳ ಕಚೇರಿಯಲ್ಲಿ ವಿಜಯೇಂದ್ರ ಅವರ ಪಾತ್ರ ಏನೂ ಇಲ್ಲ ಎಂದು ಸ್ವಯಂ ಯಡಿಯೂರಪ್ಪ ಅವರೇ ಸ್ಪಷ್ಟೀಕರಣ ಕೊಡಬೇಕಾಯಿತು. ಆದರೂ ಕೂಡ ಸರ್ಕಾರದಲ್ಲಿ ವಿಜಯೇಂದ್ರ ಅವರ ಪ್ರಭಾವ ಬಹಳಷ್ಟಿದೆ ಎಂಬ ಮಾತು ಕೇಳಿಬರುವುದು ಈಗಲೂ ನಿಂತಿಲ್ಲ. ಈ ಬಗ್ಗೆ ನ್ಯೂಸ್18 ಜೊತೆ ಮಾತನಾಡಿದ ವಿಜಯೇಂದ್ರ, ತಮ್ಮ ಮೇಲಿನ ಆರೋಪಗಳನ್ನು ಬಲವಾಗಿ ನಿರಾಕರಿಸುತ್ತಾರೆ.

“ನಮ್ಮ ತಂದೆ ಮಂಡ್ಯ ಜಿಲ್ಲೆಯಲ್ಲಿ ಜನಿಸಿದರೂ ನಾವು ಅಲ್ಲಿ ಯಾವತ್ತೂ ಚುನಾವಣೆಯನ್ನೇ ಗೆದ್ದಿದ್ದಿಲ್ಲ. ಈ ಬಾರಿ ನಾವು ಅಲ್ಲಿ ಗೆಲ್ಲುತ್ತೇವೆ ಎಂದು ನನ್ನ ಅಪ್ಪನಿಗೆ ಭರವಸೆ ಕೊಟ್ಟಿದ್ದೆ. ಕೆಆರ್ ಪೇಟೆಯಲ್ಲಿ ಗೆಲ್ಲುವ ಹೊಣೆಯನ್ನು ಹೊತ್ತಿದ್ದೆ. ನಾನೇ ಎಲ್ಲವನ್ನೂ ನಿರ್ವಹಿಸಿದೆ. ಇಲ್ಲಿ ಬಿಜೆಪಿ ಸೋಲಬಹುದೆಂಬ ಭಯದಲ್ಲಿ ಕೆಆರ್ ಪೇಟೆಯ ಚುನಾವಣೆಯ ಹೊಣೆಯನ್ನು ಹೊತ್ತುಕೊಳ್ಳಲು ಯಾರೂ ತಯಾರಿರಲಿಲ್ಲ. ಆದರೆ, ನನಗೆ ವಿಶ್ವಾಸ ಇತ್ತು” ಎಂದು ವಿಜಯೇಂದ್ರ ತಿಳಿಸಿದರು.

ಕೆಆರ್ ಪೇಟೆಯಲ್ಲಿ ಜಾತಿ ಸಮೀಕರಣವನ್ನು ಬಹಳ ಜಾಗರೂಕತೆಯಿಂದ ಅವಲೋಕಿಸಿದ ಬಳಿಕ ವಿಜಯೇಂದ್ರ ಅವರು ಜೆಡಿಎಸ್ ಭದ್ರಕೋಟೆಯಲ್ಲಿ ಪೂರ್ಣ ಪ್ರಮಾಣದ ದಾಳಿ ನಡೆಸಿ ಬಿಜೆಪಿ ಅಭ್ಯರ್ಥಿ ನಾರಾಯಣಗೌಡರನ್ನು ಗೆಲ್ಲಿಸಿದರು.

ಇದನ್ನೂ ಓದಿ: ಭಾರತೀಯ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿ ನೋಡುವ ಹುನ್ನಾರ; ಸಿಎಬಿ ಕುರಿತು ಅಮೆರಿಕನ್ ಕಾಂಗ್ರೆಸ್ ಕಿಡಿ

ಕೆಆರ್ ಪೇಟೆ ಜೊತೆಗೆ ಇತರ 11 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದ್ದು ಯಡಿಯೂರಪ್ಪ ಜೊತೆಗೆ ವಿಜಯೇಂದ್ರರ ವರ್ಚಸ್ಸಿಗೂ ಪುಷ್ಟಿ ಸಿಕ್ಕಿದೆ. ಬಿಜೆಪಿ ವಲಯದಲ್ಲಿ ವಿಜಯೇಂದ್ರರನ್ನು ಟೀಕಿಸುತ್ತಿದ್ದವರ ಬಾಯಿಗೆ ಬೀಗ ಹಾಕಿದಂತಾಗಿದೆ ಎಂದು ಪಕ್ಷದ ಮೂಲಗಳು ಹೇಳುತ್ತವೆ.

ಹೊಸ ಗೆಲುವಿನ ಬೆನ್ನಲ್ಲೇ ಈಗ ಬಿಎಸ್​ವೈ ಸರ್ಕಾರದಲ್ಲಿ ವಿಜಯೇಂದ್ರಗೆ ಮಂತ್ರಿಸ್ಥಾನ ಕೊಡಬೇಕು. ಯಡಿಯೂರಪ್ಪಗೆ ಉತ್ತರಾಧಿಕಾರಿ ತಯಾರಾಗಲು ಇದು ಸಕಾಲ ಎಂಬ ಕೂಗು ಕೇಳಿಬರುತ್ತಿದೆ. ಆದರೆ, ವಿಜಯೇಂದ್ರ ಮಾತ್ರ ತನಗೆ ಅಧಿಕಾರದಲ್ಲಿ ಆಸಕ್ತಿ ಇಲ್ಲ. ಪಕ್ಷ ವಹಿಸುವ ಕೆಲಸವನ್ನು ನಿಭಾಯಿಸಿಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ಧಾರೆ.

“ಅಪ್ಪನಿಗೆ ಹೋಲಿಸಿದರೆ ನಾನಿನ್ನೂ ಹಸುಗೂಸು. ನನಗೆ ಇನ್ನಷ್ಟು ಅನುಭವ ಮತ್ತು ಅವಕಾಶಗಳು ಅಗತ್ಯವಿದೆ” ಎಂದವರು ತಿಳಿಸುತ್ತಾರೆ.

ಆದರೆ, ಯಡಿಯೂರಪ್ಪ ಅವರ ಆಪ್ತ ವಲಯ ಮಾತ್ರ ವಿಜಯೇಂದ್ರರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದೆ. ಅವರೇನಾದರೂ ಈಗಲೇ ಸಕ್ರಿಯ ರಾಜಕಾರಣಕ್ಕೆ ಬಂದರೆ ತಂದೆಯ ಸ್ಥಾನ ತುಂಬುವ ಮಟ್ಟಕ್ಕೆ ಬೆಳೆಯಬಲ್ಲರು ಎಂಬ ಆಶಾಭಾವನೆಯನ್ನು ಅವರುಗಳು ವ್ಯಕ್ತಪಡಿಸುತ್ತಾರೆ.

(ವರದಿ: ಡಿಪಿ ಸತೀಶ್)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: December 12, 2019, 1:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading