ಬೀಜಿಂಗ್: ಚೀನಾ ದೇಶದ ಮಹಾಪರಿವರ್ತನೆ ಇದೀಗ ಹಿಂದೆ ಸರಿಸಲಾಗದ ಐತಿಹಾಸಿಕ ಪಥ ಪ್ರವೇಶಿಸಿದೆ. ಚೀನಾವನ್ನು ಬೆದರಿಸುತ್ತಿದ್ದ ಕಾಲ ಗತಿಸಿ ಆಗಿದೆ. ಯಾವುದೇ ವಿದೇಶೀ ಶಕ್ತಿಗಳು ಚೀನೀಯರನ್ನು ಬೆದರಿಸಲಾಗಲೀ, ಶೋಷಿಸಲಾಗಲೀ ಅಥವಾ ಗುಲಮರನ್ನಾಗಿಸುವುದಾಗಲೀ ಅವಕಾಶ ಕೊಡುವುದಿಲ್ಲ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಹೇಳಿದ್ದಾರೆ. ಚೈನೀಸ್ ಕಮ್ಯೂನಿಸ್ಟ್ ಪಕ್ಷದ ಶತಮಾನೋತ್ಸವ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಕ್ಸಿ ಜಿನ್ ಪಿಂಗ್, ತಮ್ಮ ವೈರಿ ರಾಷ್ಟ್ರಗಳಿಗೆ ಕಟು ಸಂದೇಶ ರವಾನಿಸಿದ್ದಾರೆ. ಐತಿಹಾಸಿಕ ಟಿಯಾನಾನ್ಮೆನ್ ಸ್ಕ್ವಯರ್ನಲ್ಲಿರುವ ಆಧುನಿಕ ಚೀನಾದ ಕ್ರಾಂತಿಯ ಮಹಾಪುರುಷ ಮಾವೋ ಜೆಡಾಂಗ್ ಅವರ ದೈತ್ಯ ಪ್ರತಿಕೃತಿ ಬಳಿಯ ವೇದಿಕೆ ಮೇಲೆ ನಿಂತು ಕ್ಸಿ ಜಿನ್ಪಿಂಗ್, ಚೀನೀ ಕಮ್ಯೂನಿಸ್ಟ್ ಪಕ್ಷದ ಸಾಧನೆಯನ್ನು ಮನದಟ್ಟುಗೊಳಿಸಿದರು. 1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಎಂದು ಮಾವೋ ಘೋಷಣೆ ಮಾಡಿದ್ದು ಇದೇ ಐತಿಹಾಸಿಕ ಟಿಯಾನ್ಮೆನ್ ಸ್ಕ್ವಯರ್ನಲ್ಲೇ. ಮಾವೋ ಧರಿಸುತ್ತಿದ್ದ ವಿಶೇಷ ಪೋಷಾಕು ರೀತಿಯಲ್ಲೇ ದಿರಿಸು ತೊಟ್ಟಿದ್ದ ಕ್ಸಿ ಜಿನ್ ಪಿಂಗ್, ಚೀನಾದ ಕೋಟ್ಯಂತರ ಜನರನ್ನು ಬಡತನದಿಂದ ಹೊರತಂದು ಚೀನಾದ ಮಹಾ ಪುನಶ್ಚೇತನಕ್ಕೆ ಕಾರಣವಾದ ಕಮ್ಯೂನಿಸ್ಟ್ ಪಕ್ಷದ ಕಾರ್ಯಗಳನ್ನ ಶ್ಲಾಘಿಸಿದರು.
ಇದೇ ವೇಳೆ, ಅವರು ತಮ್ಮ ವೈರಿ ರಾಷ್ಟ್ರಗಳಿಗೆ ಬಹಳ ಕಠಿಣ ಶಬ್ದಗಳಲ್ಲೇ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮೊದಲಾದ ದೇಶಗಳು ಚೀನಾವನ್ನು ಟಾರ್ಗೆಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಚೀನಾದಿಂದ ಈ ಕಡು ಸಂದೇಶ ಹೊರಟಿರುವುದ ಗಮನಾರ್ಹ. ಚೀನಾವನ್ನು ಯಾರೂ ಬೆದರಿಸಲು ಈಗ ಸಾಧ್ಯವಿಲ್ಲ ಎಂದು ಘಂಟಾಘೋಷವಾಗಿ ಹೇಳಿದ ಕ್ಸಿ ಜಿನ್ಪಿಂಗ್, ಒಂದು ವೇಳೆ ಯಾರಾದರೂ ಬೆದರಿಸಲು ಪ್ರಯತ್ನಿಸಿದರೆ 140 ಕೋಟಿಗೂ ಹೆಚ್ಚು ಚೀನಾ ಜನರಿಂದ ನಿರ್ಮಾಣವಾದ ಉಕ್ಕಿನ ಮಹಾಗೋಡೆಯ ಎದುರು ರಕ್ತಪಾತ ಎದುರಿಸಬೇಕಾಗುತ್ತದೆ ಎಂದು ಅಬ್ಬರಿಸಿದರು.
ತನ್ನನ್ನು ಸ್ವತಂತ್ರ ದೇಶವೆಂದು ಪರಿಗಣಿಸಿಕೊಂಡಿರುವ ತೈವಾನ್ ದೇಶವನ್ನು ಚೀನಾ ದೇಶಕ್ಕೆ ಸೇರ್ಪಡೆ ಮಾಡಬೇಕೆನ್ನುವ ವಾದವನ್ನು ಕ್ಸಿ ಜಿನ್ಪಿಂಗ್ ಮುಂದುವರಿಸಿದ್ದಾರೆ. “ಚೀನಾ ಮತ್ತು ತೈವಾನ್ನ ಎಲ್ಲ ಜನರೂ ಕೂಡ ಒಟ್ಟಿಗೆ ಕೆಲಸ ಮಾಡುತ್ತಾ ಒಗ್ಗಟ್ಟಿನಿಂದ ಮುಂದುವರಿಯಬೇಕು. ತೈವಾನ್ ಸ್ವಾತಂತ್ರ್ಯದ ಧ್ವನಿಯನ್ನು ಸಂಪೂರ್ಣವಾಗಿ ಹತ್ತಿಕ್ಕಬೇಕು” ಎಂದು ಚೀನಾ ಅಧ್ಯಕ್ಷರು ಕರೆ ನೀಡಿದರು.
ಇದನ್ನೂ ಓದಿ: ಗುಲ್ಷನ್ ಹತ್ಯೆ ಪ್ರಕರಣ: ದಾವೂದ್ ಬಂಟನ ಜೀವಾವಧಿ ಶಿಕ್ಷೆ ಎತ್ತಿಹಿಡಿದ ಬಾಂಬೆ ಹೈಕೋರ್ಟ್
ಶತಮಾನೋತ್ಸವ ಕಾಣುತ್ತಿರುವ ಚೀನಾ ಕಮ್ಯೂನಿಸ್ಟ್ ಪಕ್ಷ 1921ರಲ್ಲಿ ಉದಯವಾಗಿದ್ದು. ಮಾವೋ ಜೆಡಾಂಗ್ ಹಾಗೂ ಇತರ ಮಾರ್ಕ್ಸ್ವಾದಿ-ಲೆನಿನ್ವಾದಿ ಚಿಂತಕರ ಗುಂಪು ಚೀನಾದಲ್ಲಿ ಕಮ್ಯೂನಿಸ್ಟ್ ಪಕ್ಷದ ರ್ಸಥಾಪನೆ ಮಾಡಿದರು. ಅಲ್ಲಿಂದೀಚೆ ಈ ಪಕ್ಷ ಬೃಹದಾಕಾರವಾಗಿ ಬೆಳೆದಿದೆ. ವಿಶ್ವದ ಅತ್ಯಂತ ಶಕ್ತಿಯುತ ರಾಜಕೀಯ ಸಂಘಟನೆಗಳಲ್ಲಿ ಒಂದೆನಿಸಿದೆ. 9 ಕೋಟಿಗೂ ಹೆಚ್ಚು ಸದಸ್ಯರನ್ನು ಹೊಂದಿರುವ ಚೀನೀ ಕಮ್ಯೂನಿಸ್ಟ್ ಪಕ್ಷ ತನ್ನ ದೇಶದಲ್ಲಿ ಆಗಾಗ ತಲೆ ಎತ್ತುವ ಭಿನ್ನಮತದ ಧ್ವನಿ, ಪ್ರಜಾಪ್ರಭುತ್ವದ ಧ್ವನಿಯನ್ನು ಉಕ್ಕಿನ ಕೈಗಳ ಮೂಲಕ ಹತ್ತಿಕ್ಕುತ್ತಾ ಬರುತ್ತಿದೆ. ಹಾಂಕಾಂಗ್ನ ಪ್ರಜಾಪ್ರಭುತ್ವ ಹೋರಾಟವನ್ನು ಅಡಗಿಸಲು ಸಕಲ ಬಲವನ್ನು ಚೀನಾ ಪ್ರಯೋಗಿಸುತ್ತಿದೆ. ಹಾಗೆಯೇ, ಉಯ್ಘರ್ ಮುಸ್ಲಿಮರ ಬಂಡಾಯವನ್ನೂ ಚಾಕಚಕ್ಯತೆಯಿಂದ ಹತ್ತಿಕ್ಕುತ್ತಿದೆ. ಹೀಗಾಗಿ, ಸಿಸಿಪಿ ಅತ್ಯಂತ ಪ್ರಬಲ ರಾಜಕೀಯ ಸಂಘಟನೆಯಾಗಿ ನಿಂತಿದೆ.
(ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ