ಕೊರೊನಾ (Corona) ಹೆಸರು ಕೇಳಿದರೆ ಸಾಕು ಇಡೀ ಜಗತ್ತೇ ಒಮ್ಮೆ ಬೆಚ್ಚಿ ಬೀಳುತ್ತೆ. ಇಂತಹ ಸಂದರ್ಭದಲ್ಲಿ ಮತ್ತೆ ಕೊರೊನಾ ಅಪ್ಪಳಿಸುವ ಸಾಧ್ಯತೆ ಇದೆ ಎಂದರೆ ವಿಶ್ವವೇ ನಡುಗಿ ಹೋಗುತ್ತದೆ. ಈ ಹಿಂದೆ ಕೋವಿಡ್ -19 (Covid-19)ನಿಂದಾಗಿ ಯಾವುದೇ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಏರಿಕೆ ಕಾಣದಿದ್ದರೂ, ಇದರ ರೂಪಾಂತರಗಳ (Covid Veriant) ಹಾವಳಿಯಿಂದಾಗಿ ಕೋವಿಡ್ ಪ್ರಕರಣಗಳು ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಲೇ ಇದೆ. ಇದೀಗ ಮತ್ತೆ ಕೊರೊನಾದ ಹೊಸ ರೂಪಾಂತರ ಭಾರತದಲ್ಲಿ ಕಂಡುಬಂದಿದ್ದು, ಇದರಿಂದ ಜನರೆಲ್ಲರೂ ಆತಂಕದಿಂದಿದ್ದಾರೆ.
ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಸಂಪೂರ್ಣ ವಿಶ್ವವನ್ನೇ ಸ್ತಬ್ಧಗೊಳಿಸಿದ್ದ ಕೋವಿಡ್ 19 ನಿಧಾನಕ್ಕೆ ಏರಿಕೆಯಾಗುತ್ತಿರುವ ಲಕ್ಷಣಗಳು ವರದಿಯಾಗುತ್ತಿವೆ. ಇದೀಗ ಕೋವಿಡ್ ರೂಪಾಂತರಗಳು ಉಲ್ಬಣಕ್ಕೆ ಕಾರಣವಾಗಿದ್ದು ಪ್ರಸ್ತುತ ಭಾರತದಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿದೆ.
ಭಾರತದಲ್ಲಿ ಸೋಂಕು ಏರಿಕೆಯಾಗಲು XBB 1.16 ಕಾರಣ
ಕೋವಿಡ್ 19 ಪ್ರಕರಣಗಳು ಭಾರತದಲ್ಲಿ ಮತ್ತೆ ಏರಿಕೆಯಾಗುತ್ತಿದ್ದು ಹೊಸ ಓಮಿಕ್ರಾನ್ ರೂಪಾಂತರ XBB 1.16 ಕಾಯಿಲೆ ಹೆಚ್ಚಾಗಲು ಮುಖ್ಯ ಕಾರಣ ಎಂಬುದು ತಿಳಿದುಬಂದಿದೆ.
ಇದನ್ನೂ ಓದಿ: ನೀತಾ ಮುಕೇಶ್ ಅಂಬಾನಿಯ ಮನಮೋಹಕ ಭರತನಾಟ್ಯಕ್ಕೆ ಮನಸೋತ ಬಾಲಿವುಡ್ ದಿಗ್ಗಜರು!
ಈ ರೂಪಾಂತರ ಫೆಬ್ರವರಿ ತಿಂಗಳಿನಲ್ಲಿ ಮೊದಲಿಗೆ ಪೂನಾದಲ್ಲಿ ಪತ್ತೆಯಾಯಿತು ಹಾಗೂ ಮಾರ್ಚ್ 5 ರಂದು ಈ ರೂಪಾಂತಕ್ಕೆ XBB 1.16 ಎಂದು ಹೆಸರಿಡಲಾಯಿತು. ಈ ಹೊಸ ರೂಪಾಂತರ ಮಾರಣಾಂತಿಕವೇ, ಈ ಹಿಂದಿನ ರೂಪಾಂತರಗಳಿಗಿಂತ ಭಿನ್ನವೇ, ಮೊದಲಾದ ಅಂಶಗಳನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ತೀವ್ರವಾಗಿ ಹರಡುವ ಸಾಧ್ಯತೆ ಇದೆ
XBB 1.16 ರೂಪಾಂತರವು ಕೋವಿಡ್‌ನ ಮರುಸಂಯೋಜಿತ ವಂಶಾವಳಿಯಾಗಿದೆ ಹಾಗೂ XBB ಕೂಡ ಅದೇ ಗುಂಪಿಗೆ ಸೇರಿದೆ. ಪ್ರಸ್ತುತ ಚಲನೆಯಲ್ಲಿರುವ ಇತರ SARS CoV-2 ವಂಶಾವಳಿಗಳಿಗೆ ಹೋಲಿಸಿದರೆ XBB 1.16 ಓಮಿಕ್ರಾನ್ ರೂಪಾಂತರ ಹೆಚ್ಚು ಬೆಳವಣಿಗೆಯಾಗುವ ಅಂಶಗಳನ್ನು ಪ್ರಕಟಪಡಿಸಿದ್ದು, ತೀವ್ರವಾಗಿ ಹರಡುವ ಸಾಧ್ಯತೆ ಕೂಡ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
XBB 1.16 ಸಬ್‌ವೇರಿಯಂಟ್ ಹೆಚ್ಚಿನ ಸೋಂಕಿನ ಪ್ರಮಾಣದೊಂದಿಗೆ ಹೆಚ್ಚು ಹರಡುವ ರೂಪಾಂತರವಾಗಿದೆ ಎಂದು ತಿಳಿಸಿರುವ ಅಮೆರಿಹೆಲ್ತ್‌ನ ಸಾಂಕ್ರಾಮಿಕ ರೋಗ ತಜ್ಞ, ಸಲಹೆಗಾರ ವೈದ್ಯ ಡಾ ಚಾರು ದತ್ ಅರೋರಾ, ಇದರಲ್ಲಿರುವ ಅಮೈನೋ ಆಮ್ಲಗಳು ಮತ್ತು ನ್ಯೂಕ್ಲಿಯೊಟೈಡ್ ಅನೇಕ ಬದಲಾವಣೆಗಳನ್ನು ಹೊಂದಿದ್ದು ರೋಗನಿರೋಧಕ ಶಕ್ತಿಯನ್ನು ತಪ್ಪಿಸುವ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ.
XBB 1.16 ಓಮಿಕ್ರಾನ್ ರೂಪಾಂತರದ ರೋಗವನ್ನು ಸೂಚಿಸುವ ಲಕ್ಷಣಗಳು
XBB 1.16 ಓಮಿಕ್ರಾನ್ ರೂಪಾಂತರದ ರೋಗಲಕ್ಷಣಗಳು ಓಮಿಕ್ರಾನ್ ರೂಪಾಂತರದ ಅದೇ ರೋಗಲಕ್ಷಣಗಳನ್ನು ಹೋಲುತ್ತವೆ. ಅಂದರೆ ಎರಡು ದಿನಗಳಿಗಿಂತ ಅಧಿಕ ದಿನಗಳ ಕಾಡುವ ತೀವ್ರ ಜ್ವರ, ಕೆಮ್ಮು, ನೋಯುತ್ತಿರುವ ಗಂಟಲು, ದೇಹದಲ್ಲಿ ಕಂಡುಬರುವ ನೋವು, ತೀವ್ರವಾದ ತಲೆನೋವು, ಶೀತ, ಕಿಬ್ಬೊಟ್ಟೆಯ ಅಸ್ವಸ್ಥತೆ.
ರೋಗಿಗಳಲ್ಲಿ ರುಚಿ ಹಾಗೂ ವಾಸನೆಯನ್ನು ಗ್ರಹಿಸಲು ಸಾಧ್ಯವಾಗದಿರುವುದು ರೋಗಲಕ್ಷಣಗಳಲ್ಲಿ ಇದುವರೆಗೆ ಕಂಡುಬಂದಿಲ್ಲ ಅಂತೆಯೇ ಹೆಚ್ಚಿನವರು ಸೌಮ್ಯ ಹಾಗೂ ಮಧ್ಯಮ ರೋಗಲಕ್ಷಣಗಳನ್ನು ಹೊಂದಿದ್ದಾರೆ ಅಂತೆಯೇ ಮನೆಯಲ್ಲಿ ಪ್ರತ್ಯೇಕವಾಗಿದ್ದುಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅರೋರಾ ತಿಳಿಸಿದ್ದಾರೆ.
ಈ ರೀತಿಯ ರೋಗಲಕ್ಷಣಗಳು ಕಂಡುಬಂದರೆ ಕೋವಿಡ್ -19 ಪರೀಕ್ಷೆ ಕೈಗೊಳ್ಳುವಂತೆ ವೈದ್ಯಕೀಯ ತಜ್ಞರು ಶಿಫಾರಸು ಮಾಡಿದ್ದಾರೆ.
ಯಾರಿಗೆ ಅಪಾಯ ಹೆಚ್ಚು?
ಮಕ್ಕಳು, ವಯಸ್ಸಾದವರು, ಹೃದಯ ಸಂಬಂಧಿ ರೋಗಗಳಿಂದ ಬಳಲುವವರು, ಶ್ವಾಸಕೋಶ ಸಮಸ್ಯೆ ಉಳ್ಳವರು, ಮಧುಮೇಹಿಗಳು ಅಂತೆಯೇ ಇನ್ನಿತರ ಕಾಯಿಲೆಗಳಿಂದ ಬಳಲುವವರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕು ಎಂದು ತಜ್ಞರು ಸೂಚಿಸಿದ್ದಾರೆ.
ಬೂಸ್ಟರ್‌ಗಳ ಅಗತ್ಯವಿದೆಯೇ?
ಈಗಿನಂತೆ ಬೂಸ್ಟರ್ ಡೋಸ್‌ಗಳ ಅಗತ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. ಬೂಸ್ಟರ್ ಡೋಸ್‌ಗಳು ಇದೀಗ ಅಗತ್ಯವಿಲ್ಲ ಏಕೆಂದರೆ ನಮ್ಮಲ್ಲಿ ಹೆಚ್ಚಿನವರು ಕನಿಷ್ಟ ಪಕ್ಷ ಒಂದು ಅಥವಾ ಎರಡು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾರೆ.
ಅಂತೆಯೇ ಇನ್ನಷ್ಟು ಜನರು ಎರಡಕ್ಕಿಂತ ಹೆಚ್ಚು ಬಾರಿ ಸೋಂಕಿಗೆ ಒಳಗಾಗಿದ್ದಾರೆ. ಹಾಗಾಗಿ ತೀವ್ರವಾದ ಸೋಂಕುಗಳಿಂದ ಇದು ನಮಗೆ ಪ್ರತಿರಕ್ಷಣೆಯನ್ನು ನೀಡುತ್ತಿದೆ ಎಂದು ಗಂಗಾ ರಾಮ್ ಆಸ್ಪತ್ರೆಯ ವೈದ್ಯರಾದ ಅತುಲ್ ಗೋಗಿಯಾ ತಿಳಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 3,095 ಪ್ರಕರಣಗಳು ದಾಖಲಾಗಿವೆ. ಅಂತೆಯೇ ಸಕ್ರಿಯ ಪ್ರಕರಣಗಳು 15,208 ರಷ್ಟಿದೆ ಎಂದು ವರದಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ