ಹಿಟ್ಲರ್ ಕಾಲದ ಕಹಿ ನೆನಪು ಜೀವಂತ; 500 ಕಿಲೋ ಬಾಂಬ್ ನಿಷ್ಕ್ರಿಯಗೊಳಿಸಿದ ಜರ್ಮನ್ನರು


Updated:August 27, 2018, 9:40 PM IST
ಹಿಟ್ಲರ್ ಕಾಲದ ಕಹಿ ನೆನಪು ಜೀವಂತ; 500 ಕಿಲೋ ಬಾಂಬ್ ನಿಷ್ಕ್ರಿಯಗೊಳಿಸಿದ ಜರ್ಮನ್ನರು

Updated: August 27, 2018, 9:40 PM IST
- ನ್ಯೂಸ್18 ಕನ್ನಡ

ಫ್ರಾಂಕ್​ಫುರ್ಟ್: ಎಪತ್ತು ವರ್ಷಗಳ ಹಿಂದೆ ಎರಡನೇ ವಿಶ್ವ ಮಹಾಯುದ್ಧದ ವೇಳೆ ಹಾಕಲಾಗಿದ್ದ ಬಾಂಬುಗಳು ಈಗಲೂ ಜರ್ಮನಿಯನ್ನು ಬಾಧಿಸುತ್ತಿವೆ. ಆ ದೇಶದಲ್ಲಿ ಪ್ರತೀ ವರ್ಷವೂ ಒಂದಿಲ್ಲೊಂದು ಬಾಂಬುಗಳು ಪತ್ತೆಯಾಗುತ್ತಲೇ ಇವೆ. ಕಳೆದ ವಾರ ಲುಡ್​ವಿಶಫೆನ್ ನಗರದಲ್ಲಿ 1,100 ಪೌಂಡ್ (500 ಕಿಲೋ) ತೂಕದ ಬೃಹತ್ ಬಾಂಬ್​ವೊಂದು ಪತ್ತೆಯಾಗಿತ್ತು. ನಿನ್ನೆ ಭಾನುವಾರ ತಜ್ಞರು ಈ ಬಾಂಬನ್ನು ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾದರು. ಆದರೆ, ಈ ಕಾರ್ಯ ಮಾಡುವ ಮುನ್ನ ಸ್ಥಳದಿಂದ ಕೆಲ ಕಿಲೋಮೀಟರ್​ವರೆಗಿನ ವ್ಯಾಪ್ತಿ ಪ್ರದೇಶದ 18,500 ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಯಿತು. ಒಂದೆರಡು ಗಂಟೆಯಲ್ಲೇ ನುರಿತ ತಜ್ಞರು ಈ ಬೃಹತ್ ಬಾಂಬ್ ಡಿಪ್ಯೂಸ್ ಮಾಡಿದರು.

ಎರಡನೇ ವಿಶ್ವ ಮಹಾಸಮರದಲ್ಲಿ ಹಿಟ್ಲರ್ ಆಡಳಿತದ ಜರ್ಮನಿಯ ಮೇಲೆ ಅಮೆರಿಕ ನೇತೃತ್ವದ ಮಿತ್ರ ರಾಷ್ಟ್ರಗಳು ಬಾಂಬ್​ಗಳ ಸುರಿಮಳೆಯನ್ನೇ ಮಾಡಿದ್ದರು. ಆದರೆ ಅಂಥ ಶೇ. 15ರಷ್ಟು ಬಾಂಬ್​ಗಳು ಸಿಡಿಯದೇ ಉಳಿದುಬಿಟ್ಟಿವೆ. ಕಾಲಾಂತರದಲ್ಲಿ ಆ ಬಾಂಬ್​ಗಳು ಭೂಮಿಯೊಳಗೆಯೇ ಹುದುಗಿಹೋಗಿವೆ. ಕಳೆದ ಹಲವಾರು ವರ್ಷಗಳಿಂದ ಈ ಬಾಂಬುಗಳು ಜರ್ಮನಿಯಾದ್ಯಂತ ಪತ್ತೆಯಾಗುತ್ತಲೇ ಇವೆ. ಕಟ್ಟಡ ನಿರ್ಮಾಣಕ್ಕೆಂದು ನೆಲ ಅಗೆದಾಗ ಹಲವು ಸಿಕ್ಕಿವೆ. ಕೈ ಮುಷ್ಟಿಯಷ್ಟು ಗಾತ್ರದಿಂದ ಹಿಡಿದು ಐದಾರು ಅಡಿಯವರೆಗೂ ಈ ಬಾಂಬ್​ಗಳಿವೆ. ಕಳೆದ ವರ್ಷವಂತೂ ಫ್ರಾಂಕ್​ಫುರ್ಟ್ ನಗರದಲ್ಲಿ 1,800 ಕಿಲೋ ತೂಕದ ಭಾರೀ ಗಾತ್ರದ ಬಾಂಬ್ ಸಿಕ್ಕಿತ್ತು. 60 ಸಾವಿರ ಜನರನ್ನು ತೆರವುಗೊಳಿಸಿ ನಂತರ ಆ ಬಾಂಬನ್ನು ನಿಷ್ಕ್ರಿಯಗೊಳಿಸಲಾಗಿತ್ತು.

ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಹಲವು ಬಾರಿ ಬಾಂಬ್ ಸಿಡಿದು ತಜ್ಞರು ಸಾವನ್ನಪ್ಪಿದ ದುರಂತಗಳು ನಡೆದಿವೆ. ಹಾಗೆಯೇ ಕಾಡ್ಗಿಚ್ಚು ಹಬ್ಬಿದಾಗ ಅಲ್ಲಲ್ಲಿ ಹುದುಗಿದ ಬಾಂಬ್​ಗಳು ಬೆಂಕಿಯ ಶಾಖದಿಂದಾಗಿ ಸ್ಫೋಟಗೊಂಡ ಪ್​ರಕರಣಗಳು ಹಲವಾರು ಇವೆ. ಹೀಗಾಗಿ, ಕಾಡ್ಗಿಚ್ಚಿನ ವೇಳೆ ಬೆಂಕಿ ನಂದಿಸಲು ಹೋಗುವ ಅಗ್ನಿಶಾಮಕ ಸಿಬ್ಬಂದಿಗೆ ಯಾವಾಗಲೂ ಈ ಬಾಂಬ್​ಗಳದ್ದೇ ಚಿಂತೆಯಾಗಿರುತ್ತದೆ.
First published:August 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ