ಎರಡೂವರೆ ವರ್ಷದ ಹಿಂದೆ ಈ ಕೋವಿಡ್-19 (Covid 19) ಸಾಂಕ್ರಾಮಿಕ ರೋಗದ ಹಾವಳಿ ಶುರುವಾದಾಗ ಇಡೀ ಜಗತ್ತಿನಾದ್ಯಂತ ಈ ಲಾಕ್ಡೌನ್ ಗಳನ್ನು ಹೇರಿ, ಮಾಸ್ಕ್ ಹಾಕ್ಕೊಳ್ಳಿ, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಅಂತೆಲ್ಲಾ ಸರ್ಕಾರದವರು ಪದೇ ಪದೇ ಜನರಿಗೆ ಎಚ್ಚರಿಸುತ್ತಲೇ ಇದ್ದರು. ಹೀಗಿದ್ದೂ ಅನೇಕರು ತಮ್ಮ ಪ್ರಾಣವನ್ನು ಕಳೆದುಕೊಂಡರು. ಆನಂತರ ಕೋವಿಡ್ ಲಸಿಕೆಗಳನ್ನು ಕಂಡು ಹಿಡಿದರು ಮತ್ತು ಎಲ್ಲರೂ ಲಸಿಕೆಯನ್ನು ತಪ್ಪದೆ ತಗೊಳ್ಳಿ ಅಂತ ಹೇಳಿ ಎಲ್ಲರಿಗೂ ಲಸಿಕೆ ಕೊಡಿಸುವ ವ್ಯವಸ್ಥೆಗಳನ್ನು ಆಯಾ ದೇಶಗಳು ಮಾಡಿಕೊಂಡವು. ಬಹುತೇಕವಾಗಿ ಈ ಲಸಿಕೆಯ (Vaccination) ಎರಡು ಡೋಸ್ ಗಳನ್ನು ಎಲ್ಲರೂ ತೆಗೆದುಕೊಂಡರು. ಆದರೂ ಸಹ ಅನೇಕ ಕಡೆಗಳಲ್ಲಿ ಲಸಿಕೆ ತೆಗೆದುಕೊಂಡವರೂ ಸಹ ಮತ್ತೆ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಬಲಿಯಾಗಿರುವ ಸುದ್ದಿಗಳು ಹರಿದಾಡಿದ್ದವು ಅಂತ ಹೇಳಬಹುದು.
ಈಗೇಕೆ ನಾವು ಇದರ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ ನಿಮಗೆ ಅನ್ನಿಸಬಹುದು. ಇಲ್ಲೊಬ್ಬ ವ್ಯಕ್ತಿ ಹೀಗೆ ಕೋವಿಡ್ ಲಸಿಕೆ ಹಾಕಿಸ್ಕೊಂಡು ಪ್ರಾಣ ಬಿಟ್ಟಿದ್ದಾನೆ ಅಂತ ಅವನ ಕುಟುಂಬದವರು ಹೇಳಿದ್ದಕ್ಕೆ ಈಗ ಸಿಂಗಾಪುರ್ ಸರ್ಕಾರ 1.4 ಕೋಟಿ ರೂಪಾಯಿ ಪರಿಹಾರ ಘೋಷಿಸಿದೆ.
ವ್ಯಕ್ತಿ ಕೋವಿಡ್ ಲಸಿಕೆ ಹಾಕಿಸ್ಕೊಂಡ 21 ದಿನಗಳ ನಂತರ ಪ್ರಾಣ ಬಿಟ್ಟಿದ್ದಾರಂತೆ..
2021 ರಲ್ಲಿ 28 ವರ್ಷದ ಬಾಂಗ್ಲಾದೇಶದ ವ್ಯಕ್ತಿಯ ಸಾವು ಬಹುಶಃ ಲಸಿಕೆಯಿಂದ ಸಂಭವಿಸಿದೆ ಎಂದು ಸಿಂಗಾಪುರ್ ಸರ್ಕಾರ ಹೇಳಿದೆ. ಯುವಕನ ಸಾವಿನ ಬಗ್ಗೆ ಆರೋಗ್ಯ ಸಚಿವಾಲಯ ಮಾತನಾಡಿ ಕೋವಿಡ್-19 ಲಸಿಕೆಗೆ ಸಂಬಂಧಿಸಿದ ಮೊದಲ ಸಾವಿನ ವರದಿಗಳ ನಂತರ ಈ ಮಾಹಿತಿ ಹೊರಬಿದ್ದಿದೆ.
ಕೋವಿಡ್-19 ಲಸಿಕೆ ಪಡೆದ 21 ದಿನಗಳ ನಂತರ ವೈದ್ಯಕೀಯ ಅಪಘಾತವು ವ್ಯಕ್ತಿಯ ಸಾವಿಗೆ ಕಾರಣವಾಯಿತು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಜುಲೈ 9, 2021 ರಂದು ಆಫೀಸಿನಲ್ಲಿ ಕೂತು ಕೆಲಸ ಮಾಡುತ್ತಿರುವ ಸಮಯದಲ್ಲಿ ಹಠಾತ್ತನೆ ಕೆಳಕ್ಕೆ ಕುಸಿದು ಬಿದ್ದು ಪ್ರಾಣ ಬಿಟ್ಟಿದ್ದಾರೆ ಅಂತ ಸರ್ಕಾರ ತಿಳಿಸಿದೆ.
ಇದನ್ನೂ ಓದಿ: ಗರ್ಭಿಣಿಯರೇ ಎಚ್ಚರ! ನೀವು ಪ್ಯಾರಾಸಿಟಮಲ್ ಮಾತ್ರೆ ತಿಂತೀರಾ? ಹಾಗಿದ್ದರೆ ಅಡ್ಡಪರಿಣಾಮ ಇಲ್ಲಿ ತಿಳಿಯಿರಿ
ಈ ಘಟನೆ ನಡೆಯುವ 21 ದಿನಗಳ ಮೊದಲು ಅವರು ಮಾಡೆರ್ನಾ-ಸ್ಪೈಕ್ವಾಕ್ಸ್ ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದರಂತೆ ಎಂದು ಹೇಳಲಾಗುತ್ತಿದೆ.
ಪ್ರಾಣ ಬಿಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ಘೋಷಿಸಿದ ಸರ್ಕಾರ
ಸಚಿವಾಲಯದ ವ್ಯಾಕ್ಸಿನ್ ಇಂಜುರಿ ಫೈನಾನ್ಶಿಯಲ್ ಅಸಿಸ್ಟೆನ್ಸ್ ಪ್ರೋಗ್ರಾಂ ಅಡಿಯಲ್ಲಿ ಅವರ ಕುಟುಂಬಕ್ಕೆ ಈಗ 2,25,000 ಯುಎಸ್ ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ 1.4 ಕೋಟಿ ರೂಪಾಯಿಯನ್ನು ಪರಿಹಾರವಾಗಿ ಘೋಷಿಸಿದೆ.
ರಾಷ್ಟ್ರೀಯ ವ್ಯಾಕ್ಸಿನೇಷನ್ ಕಾರ್ಯಕ್ರಮದ ಅಡಿಯಲ್ಲಿ, ಸಿಂಗಾಪುರದಲ್ಲಿರುವ ನಾಗರಿಕರು, ಅಲ್ಲಿಯೇ ವಾಸವಾಗಿರುವ ಖಾಯಂ ನಿವಾಸಿಗಳು, ದೀರ್ಘಾವಧಿಯ ವೀಸಾಗಳನ್ನು ಮತ್ತು ಅಲ್ಪಾವಧಿಯ ವೀಸಾಗಳನ್ನು ಹೊಂದಿರುವ ಬೇರೆ ರಾಷ್ಟ್ರದ ಕೆಲವು ವ್ಯಕ್ತಿಗಳು ಉಚಿತ ಲಸಿಕೆಯನ್ನು ಪಡೆಯುವುದಕ್ಕೆ ಅರ್ಹರಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ಸಾವಿನ ಬಗ್ಗೆ ಏನ್ ಹೇಳ್ತಾರೆ ಆರೋಗ್ಯ ಸಚಿವಾಲಯದ ಅಧಿಕಾರಿಗಳು?
"ಕೋವಿಡ್-19 ಲಸಿಕೆಯು ನಿಮ್ಮನ್ನು ತೀವ್ರ ಕಾಯಿಲೆಯಿಂದ ರಕ್ಷಿಸುತ್ತದೆ, ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ನಮ್ಮ ಆರೋಗ್ಯ ವ್ಯವಸ್ಥೆಯನ್ನು ಅತಿರೇಕದಿಂದ ರಕ್ಷಿಸುತ್ತದೆ" ಎಂದು ಹೇಳುತ್ತಾ 28 ವರ್ಷದ ವ್ಯಕ್ತಿಯ ಸಾವಿನ ಬಗ್ಗೆ ಮಾತನಾಡಿದ ಆರೋಗ್ಯ ಸಚಿವಾಲಯದ ಅಧಿಕಾರಿಗಳು "ಸಾವಿಗೆ ಕಾರಣವನ್ನು ಮಯೋಕಾರ್ಡಿಟಿಸ್ ಎಂದು ಪ್ರಮಾಣೀಕರಿಸಲಾಗಿದೆ. ಸಂಭವನೀಯತೆಯನ್ನು ಗಮನಿಸಿದರೆ ಇದು ಕೋವಿಡ್-19 ಲಸಿಕೆಗೆ ಸಂಬಂಧಿಸಿದೆ ಎಂದು ಕಂಡುಕೊಂಡಿದ್ದೇವೆ” ಅಂತ ಹೇಳಿದ್ದಾರೆ.
ಸಿಂಗಾಪುರವು ಇಲ್ಲಿಯವರೆಗೆ 1.7 ಕೋಟಿ ಡೋಸ್ ಕೋವಿಡ್-19 ಲಸಿಕೆಯನ್ನು ಸ್ವೀಕರಿಸಿದೆ. ಇನ್ನು ಮಯೋಕಾರ್ಡಿಟಿಸ್ ತುಂಬಾನೇ ವಿರಳವಾಗಿ ಸಂಭವಿಸುತ್ತದೆ ಅಂತ ಹೇಳಲಾಗುತ್ತಿದೆ.
"ವೈದ್ಯಕೀಯವಾಗಿ ದುರ್ಬಲ ಮತ್ತು ತೀವ್ರ ಕಾಯಿಲೆಯ ಹೆಚ್ಚಿನ ಅಪಾಯದಲ್ಲಿರುವವರಿಗೆ" ಅವರ ಕೊನೆಯ ಡೋಸ್ ನ ಒಂದು ವರ್ಷದ ನಂತರ ಬೂಸ್ಟರ್ ಡೋಸ್ ಅನ್ನು ಪಡೆಯುವಂತೆ ಆರೋಗ್ಯ ಸಚಿವಾಲಯ ಶಿಫಾರಸು ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ