ಜಪಾನಲ್ಲಿದೆ ಅತಿರೇಕ ನಿಯಮ; ಊಟಕ್ಕೆ 3 ನಿಮಿಷ ಮುಂಚೆ ಹೋಗಿದ್ದಕ್ಕೆ ಸರಕಾರಿ ನೌಕರನಿಗಾದ ಕಥೆ ಏನು ಗೊತ್ತಾ?


Updated:June 21, 2018, 4:08 PM IST
ಜಪಾನಲ್ಲಿದೆ ಅತಿರೇಕ ನಿಯಮ; ಊಟಕ್ಕೆ 3 ನಿಮಿಷ ಮುಂಚೆ ಹೋಗಿದ್ದಕ್ಕೆ ಸರಕಾರಿ ನೌಕರನಿಗಾದ ಕಥೆ ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ

Updated: June 21, 2018, 4:08 PM IST
- ನ್ಯೂಸ್18 ಕನ್ನಡ

ಟೋಕಿಯೋ: ಭಾರತದಲ್ಲಿ ಸರಕಾರಿ ಕೆಲಸದ ಬಗ್ಗೆ ದಂತಕಥೆಗಳೇ ಇವೆ. ಸರಕಾರಿ ಅಧಿಕಾರಿಗಳು, ನೌಕರರು ಯಾವಾಗ ಸೀಟಲ್ಲಿ ಇರುತ್ತಾರೆ, ಇರೋದಿಲ್ಲ ಆ ದೇವರಿಗೇ ಗೊತ್ತು. ಅನೇಕ ಇಲಾಖೆಗಳಲ್ಲಿ ಸರಕಾರಿ ನೌಕರರಿಗೆ ಕೆಲಸದ ಹೊಣೆಗಾರಿಕೆ ಹೇಳೋರಿಲ್ಲ, ಕೇಳೋರಿಲ್ಲ ಎಂಬ ದೂರು ಸಾಮಾನ್ಯ. ಆದರೆ, ಜಪಾನ್ ದೇಶದಲ್ಲಿ ಇದು ಉಲ್ಟಾ. ಅಲ್ಲಿನ ಜನರು ದಿನಕ್ಕೆ 15 ಗಂಟೆ ಕೆಲಸ ಮಾಡುತ್ತಾರೆ ಎಂಬ ದಂತಕಥೆಗಳುಂಟು. ಅವು ಎಷ್ಟರಮಟ್ಟಿಗೆ ನಿಜವೋ ಗೊತ್ತಿಲ್ಲ, ಆದರೆ, ಕೆಲಸದ ವಿಚಾರದಲ್ಲಿ ಅಲ್ಲಿ ಕಟ್ಟುನಿಟ್ಟಿನ ನಿಯಮಗಳಿರುವುದಂತೂ ಹೌದು. ಖಾಸಗಿ ಕಂಪನಿಗಳಂತೆ ಸರಕಾರಿ ಕಚೇರಿಯಲ್ಲೂ ಕೆಲಸದ ವಿಚಾರದಲ್ಲಿ ಖಡಕ್ ನಿಯಮಗಳಿವೆಯಂತೆ. ಹಲವೊಮ್ಮೆ ಇದು ಅತಿರೇಕಕ್ಕೆ ಹೋಗುವುದುಂಟು. ಅಂಥದ್ದೊಂದು ಘಟನೆ ವರದಿಯಾಗಿದೆ. ಊಟಕ್ಕೆ ನಿಗದಿತ ಸಮಯಕ್ಕಿಂತ ಮೂರ್ನಾಲ್ಕು ನಿಮಿಷ ಬೇಗ ಹೋದರೆಂಬ ಕಾರಣಕ್ಕೆ 64 ವರ್ಷದ ಹಿರಿಯ ಸರಕಾರಿ ನೌಕರರೊಬ್ಬರ ಮಾನ ಹರಾಜು ಹಾಕಿದ ಘಟನೆ ಜಪಾನ್​ನ ಕೋಬೆ ನಗರದಲ್ಲಿ ನಡೆದಿದೆ. ಈ ಘಟನೆಯು ಕೆಲಸದ ವಿಚಾರದಲ್ಲಿ ಜಪಾನಿಯರಿಗಿರುವ ಶ್ರದ್ಧೆ ಬಗ್ಗೆ ಕೆಲವರಿಗೆ ಒಂದು ಕ್ಷಣ ಗೌರವ ಮೂಡಿಸಬಹುದು. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಜನರು ತೀವ್ರ ಟೀಕೆಗೆ ಒಳಗಾಗಿದೆ. ಅಷ್ಟಕ್ಕೂ ಜಪಾನ್​ನ ಜಲಮಂಡಳಿ ಕಚೇರಿಯ ಆ ವೃದ್ಧ ನೌಕರ ಮಾಡಿದ ಅಪರಾಧವಾದರೂ ತೀರಾ ನಗಣ್ಯವೇ.

ಆ ಕಚೇರಿಯಲ್ಲಿ 12-1ಗಂಟೆಯವರೆಗೆ ಲಂಚ್ ಬ್ರೇಕ್ ಇದೆ. ಆ ಸಮಯದೊಳಗೆ ಊಟ ಮಾಡಿ ಬರಬೇಕು. ಆದರೆ, ಆ ದುರದೃಷ್ಟ ನೌಕರ 12 ಗಂಟೆಗೆ ಕೆಲ ಕ್ಷಣಗಳ ಮೊದಲು ಊಟಕ್ಕೆ ಏಳುತ್ತಿದ್ದರು. ಇದು ನಿಯಮಬಾಹಿರವಂತೆ. ಏಳು ತಿಂಗಳಲ್ಲಿ ಒಟ್ಟು 26 ಬಾರಿ ಅವರು ನಿಗದಿತ ಸಮಯಕ್ಕಿಂತ ಮುಂಚೆ ಊಟಕ್ಕೆ ಹೋಗಿದ್ದಾರೆಂದು ಲೆಕ್ಕ ಹೇಳಲಾಗಿದೆ. ಇವರು 26 ಬಾರಿ ಬೇಗ ಹೋದ ಸಮಯವನ್ನು ಲೆಕ್ಕ ಹಾಕಿದರೆ ಮೊತ್ತವು 3-4 ನಿಮಿಷ ಆಗಬಹುದು ಅಷ್ಟೇ.

ಇದು ಜಪಾನ್​ನಲ್ಲಿ ಮಹಾಪರಾಧವೆಂಬಂತೆ ಬಿಂಬಿಸಲಾಗಿದೆ. 4 ನಿಮಿಷ ತಡವಾಗಿದ್ದಕ್ಕೆ ಆ ನೌಕರನ ಅರ್ಧ ದಿನದ ಸಂಬಳ ಕಟ್ ಮಾಡಲಾಗಿದೆ. ಅಷ್ಟೇ ಆಗಿದ್ದರೆ ಪರವಾಗಿರುತ್ತಿರಲಿಲ್ಲ. ಆ ಜಲಮಂಡಳಿಯ ಅಧಿಕಾರಿಯೊಬ್ಬರು ಪತ್ರಿಕಾಗೋಷ್ಠಿಯನ್ನೇ ಕರೆದು ಎಲ್ಲರ ಸಮ್ಮುಖದಲ್ಲೇ 64 ವರ್ಷದ ನೌಕರರನ್ನು ದಬಾಯಿಸಿದರಂತೆ. ಈ ವಿಚಾರವು ಜಪಾನ್​ನ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆಯಂತೆ. ಸಿಗರೇಟು ಸೇದಲು ಎದ್ದು ಹೋಗುವ ಸಮಯವನ್ನು ಎಲ್ಲಿ ಬಿಡುತ್ತೀರಿ ಎಂದೊಬ್ಬ ಟ್ವೀಟ್ ಮಾಡಿದ್ದಾನೆ. ನಾವೇನು ಬಾತ್​ರೂಮಿಗೂ ಹೋಗುವ ಸ್ವಾತಂತ್ರ್ಯ ಹೊಂದಿಲ್ಲವಾ ಎಂದೊಬ್ಬ ಪ್ರಶ್ನಿಸಿದ್ದಾನೆ.

ಜಪಾನಿನಲ್ಲಿ ಕಚೇರಿ ಸಮಯದ ಶಿಸ್ತುಪಾಲನೆಯ ಘಟನೆಗಳು ಈ ಹಿಂದೆ ಹಲವು ಬಾರಿ ವರದಿಯಾಗಿವೆ. ಕೆಲ ತಿಂಗಳ ಹಿಂದೆ ಮತ್ತೊಬ್ಬ ಸರಕಾರಿ ನೌಕರ ಲಂಚ್ ಬಾಕ್ಸ್ ಕೊಳ್ಳುವ ಸಲುವಾಗಿ ಬೇಗ ಕಚೇರಿ ಬಿಡುತ್ತಿದ್ದ ಕಾರಣಕ್ಕೆ ಆತನನ್ನ ಅಮಾನತು ಮಾಡಲಾಗಿತ್ತು. ಆರು ತಿಂಗಳಲ್ಲಿ ಒಟ್ಟು ಆತ ಗೈರಾಗಿದ್ದ ಒಟ್ಟು ಮೊತ್ತ 55 ಗಂಟೆಯಾಗಿತ್ತಂತೆ.

ಜಪಾನ್​ನ ಈ ಕಠೋರ ನಿಯಮಗಳು ಭಾರತೀಯ ಸರಕಾರಿ ಸಂಸ್ಥೆಗಳಿಗೆ ಅನ್ವಯಿಸಿದರೆ ಶೇ. 90ರಷ್ಟು ನೌಕರರು ಕೆಲಸ ಕಳೆದುಕೊಳ್ಳಬೇಕಾದೀತೇನೋ..!
First published:June 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...