TCS ಕಂಪನಿಯು ಕಳೆದ ತಿಂಗಳು ತನ್ನ 90% ಉದ್ಯೋಗಿಗಳು (Employees) ಮನೆಯಿಂದಲೇ ಕೆಲಸ (Work From Home) ಮಾಡುತ್ತಿದ್ದಾರೆ ಎಂದು ವರದಿ ಮಾಡಿದೆ. ಕೋವಿಡ್ -19ನ ಬದಲಾಗುತ್ತಿರುವ ಸ್ವಭಾವದಿಂದಾಗಿ, ಇನ್ಫೋಸಿಸ್ (Infosys) ಕೂಡಾ ತನ್ನ ಕಚೇರಿಗಳನ್ನು ಪುನಃ ತೆರೆಯಲು ಎಚ್ಚರಿಕೆಯ ವಿಧಾನ ಅಳವಡಿಸಿಕೊಳ್ಳುತ್ತಿದೆ. ಐಟಿ ಸಂಸ್ಥೆಗಳು (IT Companies) ತಮ್ಮ ಕಚೇರಿಗಳನ್ನು ಯಾವಾಗ ಮರು ತೆರೆಯಲು ಯೋಚಿಸುತ್ತಿವೆ ಎಂಬುದನ್ನು ಇಲ್ಲಿ ತಿಳಿಯಿರಿ .ಭಾರತದಲ್ಲಿ ಹೆಚ್ಚುತ್ತಿರುವ ಓಮಿಕ್ರಾನ್, ಕೋವಿಡ್-19 ಪ್ರಕರಣಗಳ ಭೀತಿಯಿಂದಾಗಿ ಇಂಡಿಯಾ Inc. ಹೊಸ ವರ್ಷದಲ್ಲಿ ಮತ್ತೊಮ್ಮೆ ರಿಮೋಟ್ ವರ್ಕಿಂಗ್ ಮಾಡೆಲ್ ಅನ್ನು ಆಯ್ಕೆ ಮಾಡಿದೆ. ಈ ನಿಟ್ಟಿನಲ್ಲಿ ಮನೆಯಿಂದ ಕೆಲಸ ಮಾಡುವ ಮಾದರಿಯನ್ನು ದೇಶಾದ್ಯಂತ ಹಲವಾರು ಕಂಪನಿಗಳು ಅಳವಡಿಸಿಕೊಂಡಿವೆ. ಕಾಗ್ನಿಜೆಂಟ್ನಿಂದ ಹಿಡಿದು ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ವರೆಗೆ, ಪ್ರಮುಖ ಕಂಪನಿಗಳು ಉದ್ಯೋಗಿಗಳಿಗೆ ಮತ್ತೆ ಮನೆಯಿಂದಲೇ ಕೆಲಸ ಮಾಡಲು ವಿನಂತಿಸಿಕೊಂಡಿವೆ.
ಹೈಬ್ರಿಡ್ ವರ್ಕಿಂಗ್ ಮಾದರಿ
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಸೇರಿದಂತೆ ಬಹುತೇಕ ಐಟಿ ಕಂಪನಿಗಳು ಜನವರಿಯಿಂದ 50-70% ಉದ್ಯೋಗಿಗಳೊಂದಿಗೆ ಕಚೇರಿಗಳನ್ನು ಮರು ತೆರೆಯುವ ಯೋಜನೆ ಹಮ್ಮಿಕೊಂಡಿದ್ದವ . ಹೊಸ ಕೋವಿಡ್-19 ರೂಪಾಂತರದ ಓಮಿಕ್ರಾನ್ ಸಾಂಕ್ರಾಮಿಕವಾಗಿ ಹರಡುವ ಸ್ವಭಾವದ ಪರಿಣಾಮವಾಗಿ, ಆ ಯೋಜನೆಗೆ ಸದ್ಯಕ್ಕೆ ತಡೆಹಿಡಿಯಲಾಗಿದೆ. ನಮ್ಮ ದೇಶದ ರಾಜಧಾನಿಯೂ ಸೇರಿದಂತೆ ವಿವಿಧ ರಾಜ್ಯಗಳು ಹೈಬ್ರಿಡ್ ವರ್ಕಿಂಗ್ ಮಾದರಿಗಳನ್ನು ಇದೀಗ ಜಾರಿಗೆ ತಂದಿವೆ.
ಇದನ್ನೂ ಓದಿ: Covid 19: ಇಲ್ಲಿ ನಿಮಗೆ ಕೋವಿಡ್ ಇದ್ಯಾ ಇಲ್ವಾ ಅಂತ ನಾಯಿಗಳು ಗುರುತಿಸುತ್ತವೆ, ಇದರ ರಿಸಲ್ಟ್ ಯಾವಾಗ್ಲೂ ಸರಿಯಾಗೇ ಇರುತ್ತಂತೆ!
ರಿಮೋಟ್ ವರ್ಕಿಂಗ್ ಮಾಡೆಲ್
ಜನವರಿ 11 ರಂದು ದೆಹಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಬಿಡುಗಡೆ ಮಾಡಿದ ಪರಿಷ್ಕೃತ ಮಾರ್ಗಸೂಚಿಗಳ ಪ್ರಕಾರ, ಕೆಲವನ್ನು ಹೊರತುಪಡಿಸಿ ಎಲ್ಲಾ ಖಾಸಗಿ ಕಚೇರಿಗಳನ್ನು ತಕ್ಷಣವೇ ಮುಚ್ಚಲಾಗುವುದು . ಅಗತ್ಯ ಸೇವಾ ಕಂಪನಿಗಳಿಗೆ ಮಾತ್ರ ಕಚೇರಿಗಳನ್ನು ನಡೆಸಲು ಅವಕಾಶ ನೀಡಲಾಗುವುದು ಮತ್ತು ಉಳಿದವು ವೈರಸ್ ಹರಡುವಿಕೆ ತಡೆಗಟ್ಟುವ ಸಲುವಾಗಿ ರಿಮೋಟ್ ವರ್ಕಿಂಗ್ ಮಾಡೆಲ್ನಲ್ಲಿ ಕೆಲಸ ನಿರ್ವಹಿಸಲಿರುವುವು.
ಉದ್ಯೋಗಿಗಳ ಸುರಕ್ಷತೆಗೆ ಆದ್ಯತೆ
ಆರೋಗ್ಯ ಮತ್ತು ಸುರಕ್ಷತೆಯನ್ನು ಗೌರವಿಸುವ ಕಂಪನಿಯಾಗಿ, ಕಾಗ್ನಿಜೆಂಟ್ ವರ್ಕ್ ಫ್ರಮ್ ಹೋಂ ಮಾದರಿ ಮುಂದುವರಿಸುವುದಾಗಿ ಹೇಳಿದೆ. ನಮ್ಮ ಉದ್ಯೋಗಿಗಳು, ಗುತ್ತಿಗೆದಾರರು, ಕುಟುಂಬಗಳು, ಗ್ರಾಹಕರು ಮತ್ತು ಸಮುದಾಯಗಳ ಆರೋಗ್ಯ ಹಾಗೂ ಸುರಕ್ಷತೆಗೆ ನಾವು ಬದ್ಧರಾಗಿದ್ದೇವೆ ಎಂದು ಕಂಪನಿ ಹೇಳಿದೆ. HCL ಟೆಕ್ನಾಲಜೀಸ್ ಕಂಪನಿಯು ಉದ್ಯೋಗಿಗಳನ್ನು ಕಚೇರಿಗೆ ಮರಳಿ ಕರೆಯುವ ಮುನ್ನ ಕೋವಿಡ್ -19 ರೂಪಾಂತರಗಳ ಹೊರಹೊಮ್ಮುವಿಕೆ ಮತ್ತು ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳುವುದಾಗಿ ಹೇಳಿಕೆ ನೀಡಿತು. ನೋಯ್ಡಾ ಮೂಲದ ಈ ಕಂಪನಿಯು ಸಹ ಪರಿಸ್ಥಿತಿ ಸುಧಾರಿಸುವವರೆಗೆ ಹೈಬ್ರಿಡ್ ವರ್ಕಿಂಗ್ ಮಾಡೆಲ್ಗಳನ್ನು ಮುಂದುವರಿಸಲು ಬಯಸುತ್ತಿದೆ.
ಇದನ್ನೂ ಓದಿ: Omicron: ಬೂಸ್ಟರ್ ಡೋಸ್ ತಗೊಂಡ್ರೂ ಬಿಡಲ್ಲ ಈ ಓಮೈಕ್ರಾನ್, ಎಲ್ಲರನ್ನೂ ಕಾಡುತ್ತೆ ಅಂತಿದ್ದಾರೆ ತಜ್ಞರು
ಮರಳಿ ಕಚೇರಿಗಳಿಗೆ ಹಿಂದಿರುಗುವ ಸಾಧ್ಯತೆ?
ದೇಶದಲ್ಲಿ ಬದಲಾಗುತ್ತಿರುವ ಕೋವಿಡ್ -19 ಪರಿಸ್ಥಿತಿಯಿಂದಾಗಿ , ಇನ್ಫೋಸಿಸ್ ತನ್ನ ಕಚೇರಿಗಳನ್ನು ಪುನಃ ತೆರೆಯುವಾಗ ಎಚ್ಚರಿಕೆ ವಹಿಸುತ್ತಿದೆ. "ನಾವು ವರ್ಷದ ಬಹುಪಾಲು ಹೈಬ್ರಿಡ್ ಮೋಡ್ನಲ್ಲೇ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ" ಎಂದು ಇನ್ಫೋಸಿಸ್ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮಾನವ ಸಂಪನ್ಮೂಲ ಮುಖ್ಯಸ್ಥ ರಿಚರ್ಡ್ ಲೋಬೋ ಹೇಳಿದ್ದಾರೆ. "ಪರಿಸ್ಥಿತಿಯು ಸ್ಥಿರವಾಗಿ ಉಳಿದುಕೊಂಡರೆ, ಸೋಂಕಿನ ಪ್ರಮಾಣ ಕಡಿಮೆಯಾದರೆ ಮತ್ತು ವ್ಯಾಕ್ಸಿನೇಷನ್ ಹೆಚ್ಚಿದರೆ ಇನ್ಫೋಸಿಸ್ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮರಳಿ ಕಚೇರಿಗಳಿಗೆ ಹಿಂದಿರುಗುವ ಸಾಧ್ಯತೆಯಿದೆ" ಎಂದೂ ಅವರು ಹೇಳಿದರು.
ಕೇಂದ್ರ ಸರ್ಕಾರವು ಈ ಹಿಂದೆ ಕೋವಿಡ್ -19 ಹೊಸ ಅಲೆಯ ಸಮಯದಲ್ಲಿ ಅಂಡರ್ ಸೆಕ್ರೆಟರಿ ಮಟ್ಟಕ್ಕಿಂತ ಕೆಳಗಿರುವ ತನ್ನ ಶೇಕಡಾ 50ರಷ್ಟು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದ್ದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಆದೇಶದ ಮೇರೆಗೆ ಗರ್ಭಿಣಿ ಉದ್ಯೋಗಿಗಳು ಮತ್ತು ಅಂಗವಿಕಲ ವ್ಯಕ್ತಿಗಳು ಕಚೇರಿಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ