ಮುಂಬೈ (ಫೆಬ್ರವರಿ 24); ಪಾಂಡಿಚೇರಿಯಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಬಿಜೆಪಿ ನಾಯಕರು ಉರುಳಿಸಿದ್ದಾರೆ. ಇದೀಗ ಮಹಾರಾಷ್ಟ್ರದಲ್ಲೂ ಇದೇ ಕೆಲಸಕ್ಕೆ ಮುಂದಾಗಿದ್ದಾರೆ. ಆದರೆ, ಇಲ್ಲಿ ಬಿಜೆಪಿ ನಾಯಕರ ಕೆಲಸ ನಡೆಯುವುದಿಲ್ಲ. ಮಹಾರಾಷ್ಟ್ರದ ಮಹಾ ವಿಕಾಸ್ ಅಘಾಡಿ ಸರ್ಕಾರ ಪತನ ಮಾಡುವುದು ಅಷ್ಟು ಸುಲಭವಲ್ಲ ಎಂದು ಶಿವಸೇನೆ ಇಂದು ಸ್ಪಷ್ಟಪಡಿಸಿದೆ. ಪಾಂಡಿಚೇರಿಯಲ್ಲಿ ಮುಖ್ಯಮಂತ್ರಿ ನಾರಾಯಣಸ್ವಾಮಿ ಹಾಗೂ ಲೆಫ್ಟಿನೆಂಟ್ ಗೌವರ್ನರ್ ಕಿರಣ್ ಬೇಡಿ ನಡುವೆ ಹಲವು ದಿನಗಳಿಂದ ಜಟಾಪಟಿ ನಡೆಯುತ್ತಲೇ ಇತ್ತು. ಆದರೆ, ಕೊನೆಗೂ ತಮಿಳ್ ಇಸೈ ಸೆಲ್ವಿ ಅವರನ್ನು ಪಾಂಡಿಚೇರಿಗೆ ನೂತನ ಗೌವರ್ನರ್ ಆಗಿ ಕೇಂದ್ರ ಸರ್ಕಾರ ನೇಮಿಸುತ್ತಿದ್ದಂತೆ, ಬಹುಮತ ಸಾಬೀತಿಗೆ ಕರೆ ನೀಡಲಾಗಿತ್ತು. ಈ ವೇಳೆ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಮೂಲಕ ಬಿಜೆಪಿ ಸಿಎಂ ನಾರಾಯಣಸ್ವಾಮಿ ಸರ್ಕಾರವನ್ನು ಬೀಳಿಸುವಲ್ಲಿ ಯಶಸ್ವಿಯಾಗಿತ್ತು.
ಈ ಕುರಿತು ತನ್ನ ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಬರೆದುಕೊಂಡಿರುವ ಶಿವಸೇನೆ, "ಪಾಂಡಿಚೇರಿಯಲ್ಲಿ ಕಾಂಗ್ರೆಸ್-ಡಿಎಂಕೆ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯು ಗವರ್ನರ್ ಆಗಿದ್ದ ಕಿರಣ್ ಬೇಡಿಯನ್ನು ಬಳಸಿಕೊಂಡಿದೆ. ಅದೇ ರೀತಿ ಮಹಾರಾಷ್ಟ್ರದಲ್ಲಿಯೂ ಸರ್ಕಾರ ಬೀಳಿಸುವ ಕನಸು ಕಾಣುತ್ತಿದೆ. ಆದರೆ ಅದು ಎಂದಿಗೂ ಸಾಧ್ಯವಾಗುವುದಿಲ್ಲ.
ಇನ್ನು ನಾಲ್ಕು ತಿಂಗಳಲ್ಲಿ ಪಾಂಡಿಚೇರಿಯಲ್ಲಿ ಅಸೆಂಬ್ಲಿ ಚುನಾವಣೆಗಳಿದ್ದವು. ಅಲ್ಲಿಯವರೆಗೂ ಬಿಜೆಪಿ ಕಾಯಬಹುದಿತ್ತು. ಆದರೆ ಅವರ ಅಧಿಕಾರ ಕಸಿದುಕೊಳ್ಳುವ ಹೆಗ್ಗಳಿಕೆಗಾಗಿ ಸರ್ಕಾರವನ್ನು ಉರುಳಿಸಿದ್ದಾರೆ. ಇದನ್ನು ಪ್ರಜಾಪ್ರಭುತ್ವ ಎನ್ನಲಾದೀತೆ?" ಎಂದು ಸಾಮ್ನಾದಲ್ಲಿ ಆರೋಪಿಸಲಾಗಿದೆ.
"ಇದೀಗ ಪಾಂಡಿಚೇರಿಯಲ್ಲಿ ಸರ್ಕಾರ ಪತನವಾಗಿದೆ. ಮುಂದಿನ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಬಿಜೆಪಿ ನಾಯಕರು ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಆರಂಭಿಸುವ ಯತ್ನದಲ್ಲಿದ್ದಾರೆ ಎಂದು ಬಿಜೆಪಿಯೊಳಗಿನ ಮೂಲಗಳು ತಿಳಿಸಿವೆ. ಮಧ್ಯಪ್ರದೇಶ ಸರ್ಕಾರ ಪತನಗೊಂಡ ನಂತರ ಸಹ ಇದೇ ರೀತಿಯ ಪ್ರಯತ್ನಗಳನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಮಾಡಿತ್ತು. ಆನಂತರ ಬಿಹಾರ ಚುನಾವಣೆ ನಂತರವೂ ಈ ಕುರಿತು ಮಾತುಕತೆಗಳು ನಡೆಯುತ್ತಿದ್ದವು. ಈಗ ಪಾಂಡಿಚೇರಿ ಹಿನ್ನೆಲೆಯಲ್ಲಿ ಅದೇ ಮಾತುಗಳನ್ನಾಡುತ್ತಿದ್ದಾರೆ. ಆದರೆ ದೆಹಲಿ ಬಹಳ ದೂರದಲ್ಲಿದೆ ಎಂಬ ಮಾತಿನ ರೀತಿ ಮಹಾರಾಷ್ಟ್ರವು ಅವರಿಗೆ ಬಹಳ ದೂರದಲ್ಲಿದೆ ಎಂಬುದು ಅರ್ಥವಾಗಲಿ" ಎಂದು ಸಾಮ್ನಾದಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ದೀರ್ಘಾವಧಿಯ ಜೀವನಕ್ಕೆ ಕೇವಲ 9 ಹೆಜ್ಜೆಗಳು: ಜಪಾನಿನ ಜನತೆಯಿಂದ ಆಯುಷ್ಯ ರಹಸ್ಯಗಳನ್ನು ಕಲಿಯಿರಿ..!
"ಮಧ್ಯಪ್ರದೇಶ ಮತ್ತು ಪಾಂಡಿಚೇರಿಯಲ್ಲಿ ಕೇವಲ ಕಾಂಗ್ರೆಸ್ ಆಳ್ವಿಕೆಯಲ್ಲಿತ್ತು. ಆದರೆ ಮಹಾರಾಷ್ಟ್ರದಲ್ಲಿ ಅದಕ್ಕೆ ಶಿವಸೇನೆಯ ರಕ್ಷಣೆಯಿದೆ. ಮೂರು ಪಕ್ಷಗಳು ಒಟ್ಟಾಗಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿವೆ. ಹೀಗಾಗಿ ಮಹಾ ಅಗಾಡಿ ಸರ್ಕಾರ ಪತನವಾಗಲು ನಾವು ಎಂದಿಗೂ ಬಿಡುವುದಿಲ್ಲ ಎಂಬುದನ್ನು ಬಿಜೆಪಿ ಮರೆಯಬಾರದು" ಎಂದು ಶಿವಸೇನೆ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ