Mamata Banerjee: 'ನಾನು ಎಂದಿಗೂ ತಲೆಬಾಗುವುದಿಲ್ಲ'; ವೀಲ್​ ಚೇರ್​ನಲ್ಲೇ ಚುನಾವಣೆ ರ‍್ಯಾಲಿ ನಡೆಸಿದ ಮಮತಾ ಬ್ಯಾನರ್ಜಿ

ಮುಂಬರುವ ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಲ್ಲಿ ಮಾರ್ಚ್ 10ರಂದು ನಾಮಪತ್ರ ಸಲ್ಲಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಅವರ ಮೇಲೆ ದಾಳಿ ಸಂಭವಿಸಿತ್ತು. ಕೆಲವು ಅಪರಿಚಿತ ಜನರು ಮಮತಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.

ವೀಲ್​ ಚೇರ್​ನಲ್ಲೇ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ.

ವೀಲ್​ ಚೇರ್​ನಲ್ಲೇ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ.

 • Share this:
  ಕೋಲ್ಕತ್ತಾ (ಮಾರ್ಚ್​ 14); ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಳೆದ ಬುಧವಾರ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಕೆಗೆ ತೆರಳಿದ್ದ ಸಂದರ್ಭದಲ್ಲಿ ಕೆಲವರು ಅವರ ಮೇಲೆ ಹಲ್ಲೆ ನಡೆಸಿದ್ದರು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಿಎಂ ಮಮತಾ ಬ್ಯಾನರ್ಜಿಯ ಸುತ್ತ ಪೊಲೀಸ್​ ಬಂದೋಬಸ್ತ್​ ಇಲ್ಲದ ಸಮಯದಲ್ಲಿ ನಾಲ್ಕು ಅಥವಾ ಐದು ಜನರಿಂದ ಅವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿತ್ತು. ಈ ಹಲ್ಲೆಯಿಂದ ಅವರ ಕಾಲಿನ ಭಾಗಕ್ಕೆ ತೀವ್ರ ಗಾಯಗಳಾಗಿದ್ದು, ಅವರನ್ನು ಮತ್ತೆ ಕೋಲ್ಕತ್ತಾಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೀಗ ಚಿಕಿತ್ಸೆ ಮುಗಿಸಿ ಮತ್ತೆ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿರುವ ಮಮತಾ ಬ್ಯಾನರ್ಜಿ ವೀಲ್ ಚೇರ್​ನಲ್ಲಿ ಕುಳಿತೇ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಈ ವೇಳೆ ಬಿಜೆಪಿ ನಾಯಕರಿಗೆ ಕಟು ಎಚ್ಚರಿಕೆ ನೀಡಿರುವ ಮಮತಾ ಬ್ಯಾನರ್ಜಿ, "ನಾನು ಎಂದಿಗೂ ಯಾರು ಎದುರಿಗೂ ತಲೆ ಬಾಗುವುದಿಲ್ಲ. ನೆನಪಿರಲಿ ಗಾಯಗೊಂಡ ಹುಲಿ ಹೆಚ್ಚು ಅಪಾಯಕಾರಿ" ಎಂದು ಎಚ್ಚರಿಸಿದ್ದಾರೆ.  ನಂದಿಗ್ರಾಮದಲ್ಲಿ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಆರೋಪಿಸಿದ ನಂತರ ಮಮತಾ ಬ್ಯಾನರ್ಜಿ ಮೊದಲಬಾರಿಗೆ ಸಮಾವೇಶವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವಾಗಲೇ ಹೇಳಿಕೆ ನೀಡಿದ್ದ ಮಮತಾ ಬ್ಯಾನರ್ಜಿ, ಬೆಂಬಲಿಗರಲ್ಲಿ ಶಾಂತಿ ಕಾಪಾಡುವಂತೆ ಕರೆ ನೀಡಿದ್ದರು. ಅಲ್ಲದೆ ಒಂದೆರಡು ದಿನಗಳಲ್ಲಿ ಪ್ರಚಾರಕ್ಕೆ ಹಿಂತಿರುಗಲಿದ್ದು, ಅಗತ್ಯವಿದ್ದರೆ ವೀಲ್ ಚೇರ್ ಬಳಕೆ ಮಾಡುವುದಾಗಿ ಘೋಷಿಸಿದ್ದರು.

  ಇಂದು (ಮಾ.14) ಗಾಂಧಿ ಮೂರ್ತಿಯಿಂದ ಹಜ್ರಾಕ್ಕೆ ವೀಲ್‌ ಚೇರ್‌ನಲ್ಲಿಯೇ ರೋಡ್ ಶೋ ನಡೆಸಿದ ಅವರು ನಂತರ ಮಧ್ಯಾಹ್ನ ಹಜ್ರಾದಲ್ಲಿ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. "ನಾವು ಧೈರ್ಯದಿಂದ ಹೋರಾಡುತ್ತೇವೆ! ನಾನು ಇನ್ನೂ ಸಾಕಷ್ಟು ನೋವಿನಲ್ಲಿದ್ದೇನೆ. ಆದರೆ ನನ್ನ ಜನರ ನೋವು ನನಗಿಂತಲೂ ದೊಡ್ಡದು ಎಂದು ಭಾವಿಸುತ್ತೇನೆ. ನಮ್ಮ ಪುಣ್ಯ ಭೂಮಿಯನ್ನು ರಕ್ಷಿಸುವ ಈ ಹೋರಾಟದಲ್ಲಿ, ನಾವು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದೇವೆ. ಹೆಚ್ಚು ತೊಂದರೆಗಳನ್ನು ಅನುಭವಿಸಿದ್ದೇವೆ. ಆದರೆ ನಾವು ಎಂದಿಗೂ ಹೇಡಿಯಂತೆ ತಲೆಬಾಗುವುದಿಲ್ಲ! ಎಂದು ಹೇಳಿದ್ದಾರೆ.

  ಈ ವಾರದ ಆರಂಭದಲ್ಲಿ ಗಾಯಗೊಂಡಿದ್ದ ಮಮತಾ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿಕಿತ್ಸೆಯ ಬಳಿಕ ಮಾರ್ಚ್ 12 ರಂದು ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಅವರ ಎಡ ಪಾದದ ಮೂಳೆಗೆ ತೀವ್ರವಾದ ಗಾಯಗಳಾಗಿದ್ದು, ಬಲ ಭುಜ, ಮುಂದೋಳು ಮತ್ತು ಕುತ್ತಿಗೆಗೂ ಗಾಯಗಳಾಗಿದೆ ಎಂದು ಸರ್ಕಾರಿ ಎಸ್‌ಎಸ್‌ಕೆಎಂ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿತ್ತು.

  ಮುಂಬರುವ ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಲ್ಲಿ ಮಾರ್ಚ್ 10ರಂದು ನಾಮಪತ್ರ ಸಲ್ಲಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಅವರ ಮೇಲೆ ದಾಳಿ ಸಂಭವಿಸಿತ್ತು. ಕೆಲವು ಅಪರಿಚಿತ ಜನರು ಮಮತಾ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ ಚುನಾವಣಾ ವೀಕ್ಷಕರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವರದಿಯಲ್ಲಿ, "ಮಮತಾ ಬ್ಯಾನರ್ಜಿ ಅವರ ಗಾಯಕ್ಕೆ ನಂದಿಗ್ರಾಮದಲ್ಲಿ ನಡೆದಿರುವ ಘಟನೆ ಕಾರಣವಲ್ಲ. ಅದು ಆಕಸ್ಮಿಕವಾಗಿದ್ದು, ಇದೊಂದು ಯೋಜಿತ ದಾಳಿಯಾಗಿರಲಿಲ್ಲ" ಎಂದು ತಿಳಿಸಿದ್ದಾರೆ.

  ವಿಶೇಷ ವೀಕ್ಷಕ ಅಜಯ್ ನಾಯಕ್, ರಾಜ್ಯ ಚುನಾವಣೆಗಾಗಿ ಪಶ್ಚಿಮಬಂಗಾಳದ ವಿಶೇಷ ಪೊಲೀಸ್ ವೀಕ್ಷಕರಾಗಿರುವ ವಿವೇಕ್ ದುಬೆ ವರದಿ ಸಿದ್ಧಪಡಿಸಿದ್ದರು ಎಂದು ಸಿಇಒ ಕಚೇರಿಯ ಮೂಲಗಳು ತಿಳಿಸಿವೆ.

  ಇದನ್ನೂ ಓದಿ: AP Municipal Election Results 2021: ಆಂಧ್ರಪ್ರದೇಶ ಸ್ಥಳೀಯ ಚುನಾವಣೆ; ಜಗನ್​ಮೋಹನ್​ ರೆಡ್ಡಿ ನೇತೃತ್ವದ ವೈಎಸ್​ಆರ್​ ಕಾಂಗ್ರೆಸ್​ಗೆ ಭಾರೀ ಮುನ್ನಡೆ

  ಆಕಸ್ಮಿಕ ಘಟನೆಯಿಂದಾಗಿ ಮಮತಾ ಅವರು ಗಾಯಗೊಂಡಿದ್ದಾರೆ. ಘಟನೆಯು ಯೋಜಿತ ದಾಳಿಯಾಗಿರಲಿಲ್ಲ. ಇದು ಆಕಸ್ಮಿಕವಾಗಿ ನಡೆದಿದೆ ಎಂದು ವರದಿಯನ್ನು ಉಲ್ಲೇಖಿಸಿ ಮೂಲಗಳು ತಿಳಿಸಿವೆ. ಘಟನೆಯ ಸಮಯದಲ್ಲಿ ಹಾಜರಿದ್ದ ಪ್ರತ್ಯಕ್ಷ ಸಾಕ್ಷಿಗಳು ಒದಗಿಸಿದ ವಿವರಗಳು ಹಾಗೂ ಅವರಿಂದ ಸಂಗ್ರಹಿಸಿದ ವೀಡಿಯೊವನ್ನು ವರದಿಯು ಗಣನೆಗೆ ತೆಗೆದುಕೊಂಡಿದೆ.

  ಸ್ಥಳೀಯ ಪೊಲೀಸರು ಹಾಗೂ ಸಿಎಂ ಭದ್ರತಾ ಸಿಬ್ಬಂದಿ ಜನಸಂದಣಿಯನ್ನು ನಿಯಂತ್ರಿಸಲು ವಿಫಲವಾಗಿದ್ದರು. ಇದು ಅನಪೇಕ್ಷಿತ ಪರಿಸ್ಥಿತಿಗೆ ಕಾರಣವಾಯಿತು ಎಂದು ಮೂಲಗಳು ವರದಿಯನ್ನು ಉಲ್ಲೇಖಿಸಿ ತಿಳಿಸಿವೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲಿನ ದಾಳಿಯು ಟಿಎಂಸಿ ಹಾಗೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರ ನಡುವೆ ಜಟಾಪಟಿಗೆ ಕಾರಣವಾಗಿತ್ತು.
  Published by:MAshok Kumar
  First published: