ಉತ್ತರಪ್ರದೇಶ (ಅಕ್ಟೋಬರ್ 23); ಕಳೆದ ತಿಂಗಳು ಉತ್ತರ ಪ್ರದೇಶದ ಹತ್ರಾಸ್ ಎಂಬಲ್ಲಿ 19 ವರ್ಷದ ದಲಿತ ಯುವತಿಯನ್ನು ಅದೇ ಊರಿನ ಮೇಲ್ಜಾತಿ ಯುವಕರು ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದರು. ಕೊಲೆ ಮಾಡುವಾಗ ಆಕೆಯ ನಾಲಿಗೆಯನ್ನೂ ಸಹ ಕತ್ತರಿಸಿ ಅಮಾನವೀಯ ಮೆರೆದಿದ್ದರು. ಈ ವೇಳೆ ಹುಡುಗಿಯ ಬೆನ್ನಿನ ಮೂಲೆ ಸಹ ಸಂಪೂರ್ಣ ಮುರಿದುಹೋಗಿತ್ತು ಎಂಬ ವಿಚಾರ ಮರಣೋತ್ತರ ಪರೀಕ್ಷೆಯಿಂದ ಬಯಲಾಗಿತ್ತು. ಈ ರಾಕ್ಷಸೀಯ ಘಟನೆಯನ್ನು ಖಂಡಿಸಿ ಇಡೀ ದೇಶ ಒಕ್ಕೊರಲಿನಿಂದ ಧ್ವನಿ ಎತ್ತಿದೆ. ಅಲ್ಲದೆ, ಹೋರಾಟಗಳೂ ಸಹ ನಡೆದಿವೆ. ಈ ನಡುವೆ ಅ.29 ರಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆಗೆ ಒತ್ತಾಯಿಸಿ ವಿವಿಧ ಮಹಿಳಾ ಸಂಘಟನೆಗಳು ರಾಷ್ಟ್ರವ್ಯಾಪಿ ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ.
ಅಖಿಲ ಭಾರತ ಪ್ರಜಾಸತ್ಮಾತ್ಮಕ ಮಹಿಳಾ ಸಂಘ, ರಾಷ್ಟ್ರೀಯ ಮಹಿಳಾ ಒಕ್ಕೂಟ, ಅಖಿಲ ಭಾರತ ಪ್ರಗತಿಶೀಲ ಮಹಿಳಾ ಸಂಘ, ಪ್ರಗತಿಶೀತ್ ಮಹಿಳಾ ಸಂಘಟನೆ ಮತ್ತು ಇತರ ಸಂಘ ಸಂಸ್ಥೆಗಳು, ಹೋರಾಟಗಾರರು ಸೇರಿ ದೇಶದಾದ್ಯಂತ ಪ್ರತಿಭಟನೆ ನಡೆಸುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಪ್ರಕರಣದ ತನಿಖೆ ನ್ಯಾಯಯುತವಾಗಿ ನಡೆಯಬೇಕು. ಜೀವಿಸುವ ಹಕ್ಕು, ಜೀವನೋಪಾಯ, ಪ್ರಜಾಪ್ರಭುತ್ವ ಹಕ್ಕುಗಳನ್ನು ರಕ್ಷಿಸಬೇಕು. ಹಿಂಸಾಚಾರ ಮುಕ್ತ ಜೀವನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ.
ಹತ್ರಾಸ್‌ನ 19 ವರ್ಷದ ದಲಿತ ಯುವತಿ ಮೇಲೆ ಸೆ.14 ರಂದು ನಾಲ್ವರು ಮೇಲ್ಜಾತಿಯ ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಸೆ.29 ರಂದು ಯುವತಿ ಸಾವನ್ನಪ್ಪಿದರು, ಮೃತ ಯುವತಿಯ ದೇಹವನ್ನು ಕುಟುಂಬಕ್ಕೆ ಒಪ್ಪಿಸದೇ ಪೊಲೀಸರು ಸುಟ್ಟುಹಾಕಿದ್ದರು. ತಮ್ಮ ಒಪ್ಪಿಗೆಯಿಲ್ಲದೇ ಬಲವಂತವಾಗಿ ಶವಸಂಸ್ಕಾರ ಮಾಡಲಾಯಿತು ಎಂದು ಕುಟುಂಬವು ಆರೋಪಿಸಿದೆ. ಕುಟುಂಬದ ಆರೋಪವನ್ನು ಪೊಲೀಸರು ತಳ್ಳಿ ಹಾಕಿದ್ದಾರೆ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಿದೆ.
"ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ, ಮೇಲ್ಜಾತಿಗೆ ಸೇರಿದ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಠಾಕೂರ್ ಸಮುದಾಯದವರಿಗೆ ಜಾತಿ ಸಭೆಗಳನ್ನು ನಡೆಸಲು ಅವಕಾಶ ನೀಡಿದೆ. ಸಂತ್ರಸ್ತೆಯ ಕುಟುಂಬಕ್ಕೆ ರಕ್ಷಣೆ ನೀಡದೇ, ಬಹಿರಂಗವಾಗಿ ಸವಾಲು ಹಾಕಲು ಅವಕಾಶ ನೀಡುತ್ತಿದೆ" ಎಂದು ಸಂಘಟನೆಗಳು ಆರೋಪಿಸಿವೆ.
"ಅತ್ಯಾಚಾರ ಎಸಗಿರುವ ವಿಚಾರವನ್ನೇ ತನಿಖಾ ಸಂಸ್ಥೆ ನಿರ್ದಯವಾಗಿ ನಿರಾಕರಿಸುತ್ತಿದೆ. ಸಂತ್ರಸ್ತ ಕುಟುಂಬವನ್ನು ಬೆಂಬಲಿಸಿದ ಜನರ ವಿರುದ್ಧ ಪ್ರಕರಣಗಳು ದಾಖಲಾಗಿವೆ" ಎಂದು ಸಂಘಟನೆಗಳು ದೂರಿವೆ.
ಸಿಬಿಐನ ವೆಬ್‌ಸೈಟ್ ಈ ಹಿಂದೆ ತನ್ನ ನೋಯಿಡಾ ಶಾಖೆಯಿಂದ ನೋಂದಾಯಿಸಲ್ಪಟ್ಟ ಎಫ್‌ಐಆರ್ 376, 302 ಸೆಕ್ಷನ್‌ಗಳನ್ನು ಒಳಗೊಂಡಿತ್ತು ಆದರೆ ಈಗ ಇದನ್ನು ಈ ವೆಬ್‌ಸೈಟ್‌ನಿಂದ ತೆಗೆದುಹಾಕಲಾಗಿದೆ. ಈಗ ಸಿಬಿಐ, ಹತ್ರಾಸ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್‌ಐಆರ್ ಆಧಾರದಲ್ಲಿ ತನಿಖೆ ನಡೆಸಲಿದೆ ಎಂದು ಹೇಳಿದೆ. ಈ ಎಫ್‌ಐಆರ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳು ಉಲ್ಲೇಖಿಸಲಾಗಿಲ್ಲ.
ಇದು ತನಿಖೆಯನ್ನು ಆರಂಭದ ಮೊದಲೇ ದುರ್ಬಲಗೊಳಿಸುವ ಸ್ಪಷ್ಟ ಪ್ರಯತ್ನವಾಗಿದೆ. ಈ ಹಿನ್ನೆಲೆಯಲ್ಲಿ ಮಹಿಳಾ ಸಂಘಟನೆಗಳು ಅಕ್ಟೋಬರ್ 29 ರಂದು ದೇಶಾದ್ಯಂತ ಪ್ರತಿಭಟನೆ ನಡೆಸಲಿವೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ