ಅಫ್ಘಾನಿಸ್ತಾನದ(Afghanistan) ಆರ್ಥಿಕ ಪರಿಸ್ಥಿತಿ(Economic Condition) ತೀವ್ರವಾಗಿ ಹದಗೆಟ್ಟಿದ್ದು ಬಡತನದಿಂದ(Poverty) ಜನರು ಕಂಗೆಟ್ಟುಹೋಗಿದ್ದಾರೆ. ಅಫ್ಘಾನಿಸ್ತಾನವನ್ನು ತಾಲಿಬಾನ್(Taliban) ವಶಪಡಿಸಿಕೊಂಡ ಮೇಲಂತೂ ಜನರು ಎರಡು ಹೊತ್ತಿನ ಊಟಕ್ಕೂ(Meal) ಪರದಾಡುವ ಪರಿಸ್ಥಿತಿ ಬಂದಿದೆ. ಅದರಲ್ಲೂ ಒಂಟಿ ಮಹಿಳೆಯರು ಹಾಗೂ ವಿಧವೆಯರ(Widows) ಪಾಡು ಹೇಳತೀರದಾಗಿದೆ.
ಇಲ್ಲಿನ ಹೆರಾತ್‌ನಲ್ಲಿ ವಾಸಿಸುತ್ತಿರುವ ಮಹಿಳೆ ಜಮೀಲಾ. ಎಂಟು ವರ್ಷದ ಹಿಂದೆ ಆಕೆಯ ಪತಿ ಆತ್ಮಹತ್ಯಾ ದಾಳಿಯೊಂದರಲ್ಲಿ ಸಾವಿಗೀಡಾಗಿದ್ದ. ಆಕೆಗೆ 18 ವರ್ಷದ ಅಂಧ ಮಗಳಿದ್ದಾಳೆ. ಹಾಗೆಯೇ ಮಗ 20 ವರ್ಷದವನಾಗಿದ್ದು ಮೈನಿಂಗ್ ಸ್ಫೋಟದಲ್ಲಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾನೆ.
ಜಮೀಲಾ ಮನೆಗೆಲಸದವಳಾಗಿ ಜೀವನ ಸಾಗಿಸುತ್ತಿದ್ದಳು. ಕೆಲವಷ್ಟು ಮನೆಗಳಲ್ಲಿ ಬ್ರೆಡ್ ಬೇಯಿಸುತ್ತಿದ್ದಳು. ಹೆರಾತ್ ವಿಶ್ವವಿದ್ಯಾನಿಲಯದ ಮಾಜಿ ಉಪನ್ಯಾಸಕ ಅಹ್ಮದ್ ನಡೆಸಿದ ಸಂಶೋಧನೆಯ ಪ್ರಕಾರ ಈ ಆದಾಯದಿಂದ ಆಕೆ ತನ್ನ ಮಗಳು ಮತ್ತು ಮಗನನ್ನು ನೋಡಿಕೊಂಡು ಜೀವನ ಸಾಗಿಸಲು ಸಾಧ್ಯವಾಗಿತ್ತು.
ಆದ್ರೆ ಸದ್ಯದ ಪರಿಸ್ಥಿತಿಯಿಂದಾಗಿ ಜಮೀಲಾ ತನ್ನ ಗ್ರಾಹಕರನ್ನು ಕಳೆದುಕೊಂಡಿದ್ದಾಳೆ. ಅವಳು ತನ್ನ ಬಾಡಿಗೆಯನ್ನು ಪಾವತಿಸಲು ಸಾಧ್ಯವಾಗದೇ ಹೆಣಗಾಡುತ್ತಿದ್ದಾಳೆ.
ಅಫ್ಘಾನಸ್ತಾನದಲ್ಲಿ ಹೆಚ್ಚಾದ ಬಡತನದ ಪ್ರಮಾಣ
ಅಫ್ಘಾನಿಸ್ತಾನದಲ್ಲಿ ಬಡತನದ ಪ್ರಮಾಣವೂ ಹೆಚ್ಚಾಗಿದೆ. ಜನರು ಹಸಿವಿನಿಂದ ಬಳಲುತ್ತಿದ್ದಾರೆ. ತಾಲಿಬಾನ್ ಅಫ್ಘಾನಿಸ್ತಾನದ ಮೇಲೆ ಹಿಡಿತ ಸಾಧಿಸಿದಾಗಿನಿಂದ, ಆ ದೇಶ ಸಾರ್ವತ್ರಿಕ ಸಂಕಷ್ಟದ ಅಂಚಿನಲ್ಲಿದೆ. 2018 ರಲ್ಲಿ ಶೇ. 72 ರಷ್ಟಿದ್ದ ಬಡತನ ಪ್ರಮಾಣ ಈಗ ಶೇ. 97ಕ್ಕೆ ಏರಿಕೆಯಾಗಿದೆ ಎಂದು ಅಂದಾಜಿಸಲಾಗಿದೆ.
ತಾಲಿಬಾನ್ ಕಠಿಣ ಕಾನೂನಿನಿಂದ ಇನ್ನಷ್ಟು ಸಂಕಷ್ಟ
ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಮತ್ತು ಹೊರಗೆ ಓಡಾಡುವ ಮಹಿಳೆಯರ ಮೇಲೆ ತಾಲಿಬಾನಿಗಳು ಹೇರಿದ ನಿಷೇಧವು ಅನೇಕ ಮಹಿಳೆಯರ ಉದ್ಯೋಗವನ್ನು ಕಸಿದುಕೊಂಡಿದೆ.
ಈ ಹಿಂದೆ ಅಫ್ಘಾನಿಸ್ತಾನದಲ್ಲಿ ಸುಮಾರು 10% ವಿದ್ಯಾವಂತ ಮಹಿಳೆಯರು ರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು.
ಕಡಿಮೆ ವಿದ್ಯಾವಂತರಾಗಿದ್ದರೆ ಅಂಥವರು ಮನೆಗೆಲಸ, ಬ್ರೆಡ್ ಬೇಯಿಸುವುದು, ಬಟ್ಟೆ ಒಗೆಯುವುದು, ಬಾತ್‌ರೂಂ ಸ್ವಚ್ಛಗೊಳಿಸುವುದು ಮತ್ತು ಸಣ್ಣ ಜಾನುವಾರುಗಳನ್ನು ಸಾಕುವುದು, ಗೋಧಿ, ಜೋಳ ಮತ್ತು ತರಕಾರಿಗಳನ್ನು ಬೆಳೆಯುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು.
ಮಾಸಿಕ ವೇತನವೂ ನಿಂತುಹೋಗಿದೆ!
ಕುಟುಂಬದ ಹುತಾತ್ಮರಿಗೆ ಹಾಗೂ ವಿಕಲಾಂಗರಿಗೆ ಹಿಂದಿನ ಸರ್ಕಾರವು ಮಾಸಿಕ ವೇತನ ನೀಡುತ್ತಿತ್ತು. ಅದು ಅವರ ಊಟ ತಿಂಡಿಗೆ ಸಾಕಾಗುತ್ತಿತ್ತು.
ಇದೀಗ ಜಮೀಲಾ ಹೇಳುವ ಪ್ರಕಾರ ಅಲ್ಲಿನ ಹೊಸ ತಾಲಿಬಾನ್ ಸರ್ಕಾರ ಆ ಮಾಸಿಕ ವೇತನವನ್ನು ನಿಲ್ಲಿಸಿದೆ. ತನ್ನ ಗಂಡ ಹುತಾತ್ಮರೆಂದು ಅವರು ನಂಬುವುದಿಲ್ಲ ಎಂಬುದಾಗಿ ಜಮೀಲಾ ಹೇಳುತ್ತಾಳೆ.
ಹಿಂದೆ ತನ್ನ ಮಗನೂ ಮುನ್ಸಿಪಾಲಿಟಿ ಆಫೀನ್‌ನಲ್ಲಿ ವಾಹನಗಳನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದ. ಪಾರ್ಕಿಂಗ್ ಹಣ ಸಂಗ್ರಹಿಸುತ್ತಿದ್ದ. ಅನೇಕ ವಿಕಲಾಂಗರು ಈ ರೀತಿಯ ಕೆಲಸ ಮಾಡುತ್ತಿದ್ದರು.
ಆದರೆ ಈಗ ನನ್ನ ಮಗ ಸೇರಿದಂತೆ ಎಲ್ಲರೂ ಕೆಲಸ ಕಳೆದುಕೊಂಡಿದ್ದಾರೆ. ಈ ಪಾರ್ಕಿಂಗ್ ಪ್ರದೇಶಗಳಲ್ಲಿ ತಾಲಿಬಾನ್ ತಮ್ಮದೇ ಆದ ಸಿಬ್ಬಂದಿಯನ್ನು ನೇಮಿಸಿಕೊಂಡಿದ್ದಾರೆ ಎಂದು ಜಮೀಲಾ ಹೇಳುತ್ತಾಳೆ.
ಒಂಟಿ ಮಹಿಳೆಯರ ಪರಿಸ್ಥಿತಿ ಇನ್ನಷ್ಟು ಕಷ್ಟ
ತಾಲಿಬಾನ್‌ನ ಕಠಿಣ ಕಾನೂನಿನಿಂದಾಗಿ ಇಲ್ಲಿನ ಮಹಿಳೆಯರು ಹೆಚ್ಚು ಕಷ್ಟಪಡುತ್ತಿದ್ದಾರೆ. ಅದರಲ್ಲೂ ಪುರುಷರಿಲ್ಲದ ವಿಧವೆಯರ ಮನೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ಅಲ್ಲಿನ ಮಹಿಳೆಯರು ಜೀವನ ನಡೆಸಲು, ಮಕ್ಕಳನ್ನು ನೋಡಿಕೊಳ್ಳಲು ಹೆಣಗಾಡುವಂತಾಗಿದೆ.
ಇಲ್ಲಿ ಮಾಧ್ಯಮಿಕ ಮತ್ತು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಮಹಿಳೆಯರು ಶಿಕ್ಷಣ ವಂಚಿತರಾಗಿದ್ದಾರೆ. ಅಲ್ಲದೇ ಕುಟುಂಬದ ಪುರುಷ ಸದಸ್ಯರಿಲ್ಲದೇ ಮಹಿಳೆಯರು ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ.
ಇದನ್ನೂ ಓದಿ: ISRO: ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋಗೆ ಪ್ರಮುಖ ಯಶಸ್ಸು, SSLV-D2 ಉಡಾವಣೆ ಯಶಸ್ವಿ!
ಇಷ್ಟಲ್ಲದೇ ಅಲ್ಲಿ ತಾಲಿಬಾನ್ ಎಲ್ಲಾ ಬ್ಯೂಟಿ ಸಲೂನ್‌ಗಳು, ಸಾರ್ವಜನಿಕ ಸ್ನಾನಗೃಹಗಳು ಮತ್ತು ಮಹಿಳೆಯರಿಗಾಗಿ ಕ್ರೀಡಾ ಕೇಂದ್ರಗಳು, ಮಹಿಳೆಯರಿಗೆ ಉದ್ಯೋಗದ ಪ್ರಮುಖ ಕ್ಷೇತ್ರಗಳನ್ನು ಮುಚ್ಚಲು ಆದೇಶಿಸಿದೆ. ಅಲ್ಲದೇ ಇಲ್ಲಿ ಚಳಿಗಾಲದಲ್ಲಿ ಭೀಕರ ಚಳಿಯಿಂದಾಗಿ ಬಡಜನರ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತದೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ