ಚೆನ್ನೈ: ನಟಿ ಕಮ್ ರಾಜಕಾರಣಿ ಗಾಯತ್ರಿ ರಘುರಾಮ್ (Gayathri Raghuram) ಬಿಜೆಪಿ (BJP) ಪಕ್ಷಕ್ಕೆ ರಾಜೀನಾಮೆ (Resign) ನೀಡಿದ್ದಾರೆ. ತಮಿಳುನಾಡು (Tamilnadu) ಬಿಜೆಪಿಯಲ್ಲಿ ಆಂತರಿಕ ಕಿತ್ತಾಟ - ಅಧ್ಯಕ್ಷರ ನಡೆಗೆ ಬೇಸತ್ತು ಬಿಜೆಪಿ ನಾಯಕಿ ಗಾಯತ್ರಿ ರಘುರಾಮ್ ಮಂಗಳವಾರ ರಾಜೀನಾಮೆ ನೀಡಿದ್ದು, ಪಕ್ಷ ತೊರೆಯುವುದಕ್ಕೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai) ಒಂದು ಕಾರಣವಾದರೆ, ಮತ್ತೊಂದು ಬಿಜೆಪಿ ಪಕ್ಷದಲ್ಲಿ ಮಹಿಳೆಯರಿಗೆ ಗೌರವವಿಲ್ಲ ಎಂದು ಆರೋಪಿಸಿದ್ದಾರೆ. ರಕ್ಷಣೆ ಇಲ್ಲದ ಪಕ್ಷದಲ್ಲಿ ಇರುವುದಕ್ಕಿಂತ ದೂರ ಸರಿದು ಟ್ರೋಲ್ ಆಗುವುದು ಉತ್ತಮ. ಇಂದು ನಾನು ಈ ನಿರ್ಧಾರ ಕೈಗೊಳ್ಳುವುದಕ್ಕೆ ಅಣ್ಣಾಮಲೈ ಕಾರಣ. ಈ ಕ್ರೆಡಿಟ್ ಅವರಿಗೆ ಸಲ್ಲಬೇಕು ಎಂದು ಹರಿಹಾಯ್ದಿದ್ದಾರೆ.
I have taken the decision with heavy heart to resign from TNBJP for not giving opportunity for an enquiry, equal rights & respect for women. Under Annamalai leadership women are not safe. I feel better to be trolled as an outsider.
.@narendramodi .@AmitShah @JPNadda @blsanthosh
— Gayathri Raguramm 🇮🇳🚩 (@Gayathri_R_) January 2, 2023
ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ ಮತ್ತು ಸಮಾನ ಅವಕಾಶ ಸಿಗ್ತಿಲ್ಲ
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಮಹಿಳೆಯರಿಗೆ ಗೌರವ ಮತ್ತು ಸಮಾನ ಅವಕಾಶಗಳು ಸಿಗುತ್ತಿಲ್ಲ. ಹೀಗಾಗಿ ಪಕ್ಷ ತೊರೆಯಲು ಇಷ್ಟವಿಲ್ಲದಿದ್ದರೂ ಭಾರವಾದ ಹೃದಯದಿಂದ ರಾಜೀನಾಮೆ ನೀಡುತ್ತಿದ್ದೇನೆ. ಅಣ್ಣಾಮಲೈ ನಾಯಕತ್ವದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ. ಇದ್ದಕ್ಕಿಂತ ಪಕ್ಷದಿಂದ ದೂರ ಸರಿದು ಹೊರಗೆ ಟ್ರೋಲ್ ಆಗುವುದು ಉತ್ತಮ ಎಂದು ತಿಳಿಸಿದ್ದಾರೆ.
ಬಿಜೆಪಿಯಿಂದ ಗಾಯತ್ರಿ ರಘುರಾಮನ್ ಅಮಾನತುಗೊಳಿಸಿದ್ದ ಅಣ್ಣಾಮಲೈ
ಕಳೆದ ವರ್ಷ ನವೆಂಬರ್ನಲ್ಲಿ ಸೂರ್ಯ ಶಿವ-ಡೈಸಿ ಆಡಿಯೊ ಆಡಿಯೋ ವೈರಲ್ ಆದ ವಿಚಾರ ಕುರಿತಂತೆ ಗಾಯತ್ರಿ ರಘುರಾಮ್ ಅವರನ್ನು ಅಣ್ಣಾಮಲೈ ಅಮಾನತುಗೊಳಿಸಿದ್ದರು. ಅಲ್ಲದೇ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಅಳಿಯ ಶಬರೇಶನ್ ಅವರನ್ನು ಭೇಟಿಯಾಗಿದ್ದಕ್ಕೆ ಗಾಯತ್ರಿ ಅವರನ್ನುಅಣ್ಣಾಮಲೈ ಬೆಂಬಲಿಗರು ಸೋಶಿಯಲ್ ಮೀಡಿಯಾದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು.
ಶಬರೇಶನ್ ಹಾಗೂ ನಾನು ಇಬ್ಬರೂ ಸ್ನೇಹಿತರಾಗಿದ್ದು, ಸಮಾರಂಭವೊಂದರಲ್ಲಿ ಭೇಟಿಯಾಗಿದ್ದೆವು ಅಷ್ಟೇ ಅಂದರೂ ನನ್ನನ್ನು ನಿರಂತರವಾಗಿ ಟಾರ್ಗೆಟ್ ಮಾಡಲಾಗಿತ್ತು ಎಂದು ಅರೋಪಿಸಿದ್ದಾರೆ.
ಅಣ್ಣಾಮಲೈ ಒಬ್ಬ ಸುಳ್ಳುಗಾರ ಅಂದ ಗಾಯತ್ರಿ ರಘುರಾಮ್
ಅಲ್ಲದೇ ಅಣ್ಣಾಮಲೈ ಒಬ್ಬ ಸುಳ್ಳುಗಾರ ಎಂದು ಕರೆದ ಗಾಯತ್ರಿ ಅವರು, ಇಂದು ನಾನು ಈ ಆತುರದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅಣ್ಣಾಮಲೈ ಕಾರಣ, ಈ ಕ್ರೆಡಿಟ್ ಅವರಿಗೆ ಸಲ್ಲಬೇಕು. ಇನ್ನು ಮುಂದೆ ನಾನು ಅಣ್ಣಾಮಲೈ ಬಗ್ಗೆ ಯೋಚಿಸದೇ ಇರಲು ಬಯಸುತ್ತೇನೆ. ಆತ ಸುಳ್ಳುಗಾರ ಮತ್ತು ಅಧಾರ್ಮಿಕ ನಾಯಕ ಎಂದು ಅಣ್ಣಾಮಲೈ ವಿರುದ್ಧ ಕಿಡಿಕಾರಿದ್ದಾರೆ.
ಅಣ್ಣಾಮಲೈ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಬೆದರಿಕೆಯೊಡ್ಡಿದ ಗಾಯತ್ರಿ ಅವರು, ಎಲ್ಲಾ ವೀಡಿಯೊಗಳು ಮತ್ತು ಆಡಿಯೋಗಳನ್ನು ಒಪ್ಪಿಸಲು ನಾನು ಪೊಲೀಸರಿಗೆ ದೂರು ನೀಡಲು ಸಿದ್ಧನಿದ್ದೇನೆ. ನನಗೆ ತೊಂದರೆ ನೀಡುತ್ತಿರುವ ಅಣ್ಣಾಮಲೈ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದರು
ಅಣ್ಣಾ ಮಲೈ ನಾಯಕತ್ವದ ಪಕ್ಷದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂದು ಆರೋಪಿಸುವುದರ ಜೊತೆಗೆ, ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. 6 ತಿಂಗಳು ಪಕ್ಷದಿಂದ ಅಮಾನತುಗೊಳಿಸಿದ್ದರು. ಪಕ್ಷದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪಕ್ಷಕ್ಕೆ ಸಂಬಂಧಿಸಿದ ಯಾವುದೇ ವಿಷಯಗಳನ್ನು ನನ್ನೊಂದಿಗೆ ಹಂಚಿಕೊಳ್ಳದಂತೆ ತಡೆದರು. ನಿರಂತರವಾಗಿ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪ ನನ್ನ ಮೇಲೆ ಹಾಕಲಾಯಿತು' ಪಕ್ಷದ ಅಧ್ಯಕ್ಷರ ವಿರುದ್ಧ ದೂರಿದ್ದಾರೆ.
ಇದನ್ನೂ ಓದಿ: Elections: 2 ದಿನ, ದಕ್ಷಿಣದ 4 ರಾಜ್ಯಗಳಿಗೆ ನಮೋ ಭೇಟಿ: 2024ರ ಎಲೆಕ್ಷನ್ಗೆ ಬಿಜೆಪಿಗೆ ಹೊಸ ಗುರಿ, ಮೋದಿ ನಡೆಯೇ ಸಾಕ್ಷಿ!
ನಾನು ಹಿಂದೂ ಧರ್ಮವನ್ನು ಬಲವಾಗಿ ನಂಬುತ್ತೇನೆ
ನನ್ನ ಹೃದಯ ಮತ್ತು ಆತ್ಮಸಾಕ್ಷಿಯಲ್ಲಿ ನಾನು ಹಿಂದೂ ಧರ್ಮವನ್ನು ಬಲವಾಗಿ ನಂಬುತ್ತೇನೆ. ಅದನ್ನು ರಾಜಕೀಯ ಪಕ್ಷವೊಂದರಿಂದ ಪಡೆಯಬೇಕಿಲ್ಲ. ದೈವ ಮತ್ತು ಧರ್ಮಾಚರಣೆಗೆ ದೇವಸ್ಥಾನಕ್ಕೆ ಹೋಗುತ್ತೇನೆ. ದೇವರು ಎಲ್ಲೆಲ್ಲೂ ಇದ್ದಾನೆ. ನನ್ನೊಳಗೂ ಇದ್ದಾನೆ' ಎಂದೆಲ್ಲಾ ಟ್ವೀಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ