ಬಂಕಾ (ಬಿಹಾರ): ಪರೀಕ್ಷೆ(Exam) ಬರೆದು ಕಲ್ಯಾಣ ಮಂಟಪಕ್ಕೆ ಹೋಗಿರುವ, ಅಥವಾ ವಿವಾಹವಾದ (Marriage)ದಿನವೇ ಪರೀಕ್ಷೆ ಬರೆದ ಅನೇಕ ಸುದ್ದಿಗಳನ್ನು ನಾವು ಕೇಳಿರುತ್ತೇವೆ. ಆದರೆ ಮಗುವಿಗೆ ಜನ್ಮ ನೀಡಿದ ದಿನವೇ ಪರೀಕ್ಷೆ ಬರೆದಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ (Hospital) ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳ ನಂತರ, 10 ನೇ ತರಗತಿಯ ಬೋರ್ಡ್ ಪರೀಕ್ಷೆ ಬರೆಯಲು ಯುವತಿಯೊಬ್ಬಳು ಆ್ಯಂಬ್ಯುಲೆನ್ಸ್‌ನಲ್ಲಿ (Ambulance) ಆಸ್ಪತ್ರೆಗೆ ಆಗಮಿಸಿದ್ದಾಳೆ. ಆ ಯುವತಿಯ ಶಿಕ್ಷಣದ (Education) ಮೇಲಿನ ದೃಢ ಸಂಕಲ್ಪದ ಮುಂದೆ ಆಕೆಯ ಅನುಭವಿಸಿದ್ದ ನೋವು ಲೆಕ್ಕವಿಲ್ಲದಂತಾಗಿದೆ. ಈ ಸುದ್ದಿ ಈಗ ವೈರಲ್ ಆಗಿದ್ದು, ನೆಟ್ಟಿಗರು ಯುವತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆಕೆ ಯುವ ಪೀಳೆಗೆ ಪ್ರೇರಣೆ ಎನ್ನುತ್ತಿದ್ದಾರೆ.
ಬಂಕಾ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ರುಕ್ಮಿಣಿ ಕುಮಾರಿ (22) ಅವರು ಬುಧವಾರ ಬೆಳಿಗ್ಗೆ ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಮೂರು ಗಂಟೆಗಳ ನಂತರ ಆಸ್ಪತ್ರೆಯಿಂದ ನೇರ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ವಿಜ್ಞಾನ ಪತ್ರಿಕೆಯನ್ನು ಪರೀಕ್ಷೆ ಬರೆದಿದ್ದಾರೆ. ಆಕೆಗೆ ವೈದ್ಯರು ಹಾಗೂ ಕುಟುಂಬಸ್ಥರು ಪರೀಕ್ಷೆಗೆ ಹೋಗುವುದು ಬೇಡ ಎಂದು ಎಷ್ಟು ಸಲಹೆ ನೀಡಿದರೂ ಆಕೆ ಮಾತ್ರ ಪರೀಕ್ಷೆ ಬರೆಯಲೇಬೇಕೆಂದು ಹಠ ಹಿಡಿದಿದ್ದಾರೆ. ಹಾಗಾಗಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ ಆಕೆಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಇದು ರಾಜ್ಯಾದ್ಯಂತ ಸುದ್ದಿಯಾಗಿದೆ.
ಮೆಚ್ಚುಗೆ ವ್ಯಕ್ತಪಡಿಸಿದ ಅಧಿಕಾರಿ
ಮಗುವಿಗೆ ಜನ್ಮ ನೀಡಿದ ದಿನವೇ ಪರೀಕ್ಷೆ ಬರೆದಿರುವ ಯುವತಿಯ ದಿಟ್ಟತನಕ್ಕೆ ಜಿಲ್ಲಾ ಶಿಕ್ಷಣಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. " ರಾಜ್ಯದಲ್ಲಿ ಮಹಿಳೆಯರ ಶಿಕ್ಷಣಕ್ಕೆ ಸರ್ಕಾರ ಒತ್ತು ನೀಡುತ್ತಿರುವುದು ಜನತೆಯಲ್ಲಿ ದೊಡ್ಡ ಪರಿಣಾವನ್ನುಂಟು ಮಾಡಿದೆ ಎನ್ನುವುದನ್ನು ಈ ಘಟನೆ ಸಾಬೀತುಪಡಿಸಿದೆ. ಅದರಲ್ಲೂ ಪರಿಶಿಷ್ಟ ಜಾತಿಗೆ ಸೇರಿದ ರುಕ್ಮಿಣಿ ಮಗುವಿಗೆ ಜನ್ಮ ನೀಡಿದ ದಿನವೇ ಪರೀಕ್ಷೆ ಬರೆದು ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ " ಎಂದು ಜಿಲ್ಲಾ ಶಿಕ್ಷಣಾಧಿಕಾರಿ ಪವನ್‌ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹಿಂದಿನ ದಿನವೂ ಪರೀಕ್ಷೆ ಬರೆದಿದ್ದ ರುಕ್ಮುಣಿ
ಹೆರಿಗೆಯಾದ ದಿನವಷ್ಟೇ ಅಲ್ಲದೆ, ಹಿಂದಿನ ದಿನವೂ ರುಕ್ಮಿಣಿ ಗಣಿತ ಪರೀಕ್ಷೆ ಬರೆದಿದ್ದರು. ಈ ಕುರಿತು ಮಾತನಾಡಿರುವ ರುಕ್ಮಿಣಿ, ಮಂಗಳವಾರ ಗಣಿತ ಪತ್ರಿಕೆ ಬರೆದಾಗ ಸ್ವಲ್ಪ ಸುಸ್ತಾಗಿತ್ತು. ಹಾಗಾಗಿ ಮರುದಿನ ನಿಗದಿಯಾಗಿದ್ದ ವಿಜ್ಞಾನ ಪತ್ರಿಕೆಯ ಬಗ್ಗೆ ಸ್ವಲ್ಪ ಆತಂಕಗೊಂಡಿದ್ದೆ. ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ನನ್ನನ್ನು ಆಸ್ಪತ್ರೆಗೆ ಸಾಗಿಸಬೇಕಾಯಿತು. ಬೆಳಗ್ಗೆ 6 ಗಂಟೆ ಸಮಯದಲ್ಲಿ ನನಗೆ ಮಗ ಜನಿಸಿದ" ಎಂದು ಹೇಳಿದ್ದಾರೆ.
ಉತ್ತಮ ಅಂಕ ಗಳಿಸುವ ವಿಶ್ವಾಸ
ಒಂದು ಕಡೆ ಆಯಾಸ ಮತ್ತೊಂದು ಕಡೆ ಪರೀಕ್ಷೆ ಬರೆದ ಹೆಮ್ಮೆಯ ಭಾವನೆ ಇದೆ, ನನ್ನ ವಿಜ್ಞಾನದ ಪತ್ರಿಕೆಯೂ ಚೆನ್ನಾಗಿತ್ತು, ನಾನು ಚೆನ್ನಾಗಿ ಅಂಕಗಳನ್ನು ಗಳಿಸುತ್ತೇನೆ ಎಂಬ ವಿಶ್ವಾಸವಿದೆ ಎಂದು ರುಕ್ಮುಣಿ ತಿಳಿಸಿದ್ದಾರೆ.
ಅಪಾರ ನೋವುಂಡು ಮಗುವಿಗೆ ಜನ್ಮ ನೀಡಿದ ದಿನವೇ ಪರೀಕ್ಷೆ ಬರೆಯಬೇಕೆಂದು ಉತ್ಸಾಹ ತೋರಿದ ರುಕ್ಮಿಣಿಗೆ ಆಸ್ಪತ್ರೆಯ ಸಿಬ್ಬಂದಿ ನೆರವಾಗಿದ್ದಾರೆ. ಅಲ್ಲದೆ ರುಕ್ಮುಣಿಗೆ ತನ್ನ ಮಗನಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಬೇಕೆಂಬ ಮಹಾದಾಸೆ ಹೊಂದಿದ್ದಾರೆ. ಹಾಗಾಗಿ ತಾನೂ ಪರೀಕ್ಷೆಯನ್ನು ತಪ್ಪಿಸಿಕೊಂಡು ಕೆಟ್ಟ ಉದಾಹರಣೆಯಾಗಲು ಬಯಸಲ್ಲ ಎಂದು ತಿಳಿಸಿದ್ದಾರೆ.
ತಾಯಿ ಮಗು ಆರೋಗ್ಯವಾಗಿದ್ದಾರೆ
ಆಸ್ಪತ್ರೆಯಲ್ಲಿ ರುಕ್ಮುಣಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಭೋಲಾ ನಾಥ್ " ಹೆರಿಗೆಯಾದ ಮೇಲೆ ಆಕೆ ಸುಸ್ತಾಗಿದ್ದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಎಂದು ನಾವು ರುಕ್ಮಿಣಿಗೆ ಆ ಒಂದು ಪತ್ರಿಕೆಯನ್ನು ಬಿಟ್ಟುಬಿಡು ಎಂದು ಮನವೊಲಿಸಲು ಪ್ರಯತ್ನಿಸಿದೆವು. ಆದರೆ ಆಕೆ ಪರೀಕ್ಷೆ ಬರೆಯಲೇಬೇಕೆಂದು ಅಚಲರಾಗಿದ್ದರು. ಆದ್ದರಿಂದ ನಾವು ಸೂಕ್ತ ವ್ಯವಸ್ಥೆ ಮಾಡಿದೆವು. ಈ ತುರ್ತು ಸಂದರ್ಭದಲ್ಲಿ ಅವಳಿಗೆ ಸಹಾಯ ಮಾಡಲು ಆ್ಯಂಬ್ಯುಲೆನ್ಸ್ ಮತ್ತು ಕೆಲವು ವೈದ್ಯಾಧಿಕಾರಿಗಳನ್ನು ನಿಯೋಜಿಸಿದ್ದೆವು. ಆಕೆ ಪರೀಕ್ಷೆ ಬರೆದಿದ್ದಾಳೆ. ಇದೀಗ ತಾಯಿ ಮತ್ತು ಮಗ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ