ತಿರುವನಂತಪುರಂ: ವೈದ್ಯರೇ ದೇವರು ಅಂತಾ ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಹೋದರೆ ಅವರ ಕಾಯಿಲೆಯನ್ನು ದೂರ ಮಾಡೋಕೆ ಪ್ರಯತ್ನ ಪಡ್ತಾರೆ. ತಾವು ಕಲಿತಿರೋ ವಿದ್ಯೆಯ ಮೂಲಕ ಜನಸಾಮಾನ್ಯರ ಸಂಕಷ್ಟವನ್ನು ದೂರ ಮಾಡಲು ಶ್ರಮ ಪಡ್ತಾರೆ. ಆದ್ರೆ ಎಲ್ಲ ವೈದ್ಯರೂ ಹಾಗೇ ಇರ್ತಾರಾ? ಅಂತಾ ಕೇಳಿದ್ರೆ ಖಂಡಿತಾ ಇಲ್ಲ. ಇಲ್ಲೊಂದು ಕಡೆ ಹೊಟ್ಟೆ ನೋವಿನ ಕಾರಣಕ್ಕೆ ಆಸ್ಪತ್ರೆಗೆ ಹೋದ ಮಹಿಳೆಯನ್ನು ತಮ್ಮ ನಿರ್ಲಕ್ಷ್ಯದ ಕಾರಣದಿಂದ ಹಾಸಿಗೆ ಹಿಡಿಯುವಂತೆ ಮಾಡಿದ್ದಾರೆ ಬೇಜವಾಬ್ದಾರಿ ವೈದ್ಯರು.!
ಹೌದು ಈ ಘಟನೆ ಕೇರಳದಲ್ಲಿ ನಡೆದಿದ್ದು, ಈ ವಿಷಯವನ್ನು ಅಸೆಂಬ್ಲಿಯಲ್ಲಿ (Kerala Assembly) ಚರ್ಚಿಸುವ ಮೂಲಕ ಎಡರಂಗದ ಶಾಸಕ ಕೆಬಿ ಗಣೇಶ್ (KB Ganesh) ಅವರು ಮಹಿಳೆಯ ಪರ ಧ್ವನಿಯೆತ್ತಿದ್ದಾರೆ. ಅಲ್ಲದೇ ತಪ್ಪಿತಸ್ಥ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
48 ವರ್ಷದ ಮಹಿಳೆ ಕೆ ಶೀಬಾ ಎಂಬವರು ಮೂರು ತಿಂಗಳ ಹಿಂದೆ ಹೊಟ್ಟೆ ನೋವಿನಿಂದ ಬಳಲಿ ತಿರುವನಂತಪುರಂನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಅವರನ್ನು ತಪಾಸಣೆ ನಡೆಸಿ ಗರ್ಭಕೋಶದ ಶಸ್ತ್ರಚಿಕಿತ್ಸೆ ನಡೆಸಿದ್ದರು. ಆದರೆ ಶಸ್ತ್ರಚಿಕಿತ್ಸೆ ನಡೆದು ಮೂರು ತಿಂಗಳಾದರೂ ಈಗಲೂ ಆ ಮಹಿಳೆಗೆ ಹೊಟ್ಟೆಯಿಂದ ಸ್ರಾವ ಆಗುತ್ತಿದೆ. ಮಹಿಳೆಯ ಈ ಸ್ಥಿತಿಗೆ ಕಾರಣರಾದ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: High Risk Pregnancy: ಈ ಅಭ್ಯಾಸ ಇರುವವರಿಗೆ ಅಪಾಯದ ಗರ್ಭಧಾರಣೆಯಾಗುವ ಸಾದ್ಯತೆ ಅಧಿಕ, ವೈದ್ಯರು ನೀಡೋ ಸಲಹೆ ಹೀಗಿದೆ
ವೈದ್ಯರ ವಿರುದ್ಧ ಸಿಡಿದ ಶಾಸಕ
ಆರಂಭದಲ್ಲಿ ಕೆ ಶೀಬಾ ಅವರನ್ನು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅಲ್ಲಿಂದ ತಿರುವನಂತಪುರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಆಪರೇಷನ್ ನಡೆದು ಮೂರು ತಿಂಗಳಾದರೂ ಅವರಿಗೆ ಸ್ರಾವ ಆಗುತ್ತಿರುವುದು ನಿಂತಿಲ್ಲ. ಹೀಗಾಗಿ ಸಂತ್ರಸ್ತೆಗೆ ತೊಂದರೆ ಉಂಟಾಗಲು ಕಾರಣವೇನು ಅನ್ನೋದನ್ನು ತಿಳಿಯಲು ಈ ವಿಷಯದ ಸಮಗ್ರವಾದ ತನಿಖೆ ನಡೆಸಬೇಕು ಎಂದು ಶಾಸಕ ಕೆಬಿ ಗಣೇಶ್ ಸದನವನ್ನು ಒತ್ತಾಯಿಸಿದ್ದಾರೆ.
'ನನ್ನ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ'
ಈ ವಿಷಯದ ಬಗ್ಗೆ ಸಂತ್ರಸ್ತ ಮಹಿಳೆಯನ್ನು ನ್ಯೂಸ್ 18 ವಾಹಿನಿ ಸಂಪರ್ಕಿಸಿದ್ದು, ಈ ವೇಳೆ ನೋವಿನಿಂದಲೇ ಮಾತನಾಡಿರುವ ಸಂತ್ರಸ್ತ ಮಹಿಳೆ ಕೆ ಶೀಬಾ, ಹಲವು ಆಸ್ಪತ್ರೆಗಳು, ವೈದ್ಯರ ಬಳಿ ನನ್ನ ಸಮಸ್ಯೆ ಹೇಳಿಕೊಂಡರೂ ಇನ್ನೂ ವಾಸಿಯಾಗಿಲ್ಲ. ಕೊಲ್ಲಂನ ಖಾಸಗಿ ಆಸ್ಪತ್ರೆಯಲ್ಲಿ ಮೊದಲಿಗೆ ಚಿಕಿತ್ಸೆ ನಡೆಸಿದ ನಂತರ ನನ್ನ ಹೊಟ್ಟೆಯ ಭಾಗದಲ್ಲಿ ಕೀವು ಗಟ್ಟಿಯಾಗಿತ್ತು. ನನ್ನನ್ನು ತಿರುವನಂತಪುರಂನ ಮೆಡಿಕಲ್ ಕಾಲೇಜಿಗೆ ಕರೆದೊಯ್ದರು. ಅಲ್ಲಿ ಸರ್ಜರಿಯಾದ ಹೊಟ್ಟೆಯ ಭಾಗದಿಂದ ಸ್ರಾವವಾಗಲು ಶುರುವಾಯಿತು. ಹಲವು ಬಾರಿ ಹೊಲಿಗೆ ಹಾಕಿದರೂ ಕಡಿಮೆಯಾಗಿಲ್ಲ. ಈಗ ವೈದ್ಯರ ನಿರ್ಲಕ್ಷ್ಯದಿಂದಾಗಿ ಗಾಯ ಉಲ್ಬಣಗೊಂಡಿದೆ. ಔಷಧಿಗಳು ಕೂಡ ಸ್ಪಂದಿಸುತ್ತಿಲ್ಲ. ಗಾಯವೂ ವಾಸಿಯಾಗಿಲ್ಲ. ನಾನು ನೋವು ತಡೆಯಲಾಗದೆ ಆಸ್ಪತ್ರೆಗೆ ಚಿಕಿತ್ಸೆಗೆ ಹೋದಾಗೆಲ್ಲ ವೈದ್ಯರು ನನಗೆ ಚಿಕಿತ್ಸೆ ನೀಡಲು ನಿರಾಕರಿಸಿ ವೈದ್ಯಕೀಯ ವಿದ್ಯಾರ್ಥಿಗಳನ್ನು ನನಗೆ ನಿಯೋಜಿಸುತ್ತಾರೆ. ನಾನು ನೋವಿನಿಂದ ಒದ್ದಾಡುತ್ತಿದ್ದರೂ ನನ್ನ ಕಷ್ಟ ಯಾರಿಗೂ ಅರ್ಥವಾಗುತ್ತಿಲ್ಲ. ನನ್ನನ್ನು ಆಸ್ಪತ್ರೆಯಲ್ಲಿ ಅಡ್ಮಿಟ್ ಕೂಡ ಮಾಡುತ್ತಿಲ್ಲ. ಇಂತಹ ಸ್ಥಿತಿಯಲ್ಲೂ ನಾನು ಬಸ್ಸಿನಲ್ಲೇ ಆಸ್ಪತ್ರೆಗೆ ಹೋಗುತ್ತಿದ್ದೇನೆ’ ಎಂದು ಸಂತ್ರಸ್ತ ಮಹಿಳೆ ಕೆ ಶೀಬಾ ಕಣ್ಣೀರು ಹಾಕಿದ್ದಾರೆ.
ಇದನ್ನೂ ಓದಿ: Sonia Gandhi: ಸೋನಿಯಾ ಗಾಂಧಿ ಆರೋಗ್ಯದಲ್ಲಿ ಮತ್ತೆ ಏರುಪೇರು, ದೆಹಲಿ ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ
ಮಹಿಳೆಗೆ ಆದ ಅನ್ಯಾಯವನ್ನು ಸದನದಲ್ಲಿ ಪ್ರಸ್ತಾಪ ಮಾಡುತ್ತಲೇ ವೈದ್ಯರ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿರುವ ಶಾಸಕ ಕೆಬಿ ಗಣೇಶ್ ಕುಮಾರ್, ‘ಕೆಲವು ವೈದ್ಯರು ಹೊಡೆತ ತಿನ್ನಲು ಅರ್ಹರು’ ಎಂದು ಕೋಪದಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳಾ ವಿಮೋಚನೆ, ಮಹಿಳಾ ಸುರಕ್ಷತೆ ಅನ್ನೋದು ಕೇವಲ ಮಾತಿನಲ್ಲಿ ಮಾತ್ರ ಇದೆ ಎಂದಿದ್ದಾರಲ್ಲದೇ, ಕೆಲ ವರ್ಷಗಳ ಹಿಂದೆ ಹೊಟ್ಟೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಬಿಟ್ಟ ಘಟನೆಯನ್ನೂ ನೆನಪಿಸಿದ್ದಾರೆ.
ಈ ಪ್ರಕರಣದ ಸಂಬಂಧ ಶಾಸಕ ಕೆಬಿ ಗಣೇಶ್ ಅವರು ‘ಕೆಲ ವೈದ್ಯರೂ ಹೊಡೆತಕ್ಕೂ ಅರ್ಹರು’ ಎಂದು ನೀಡಿರುವ ಹೇಳಿಕೆಯ ವಿರುದ್ಧ ಭಾರತೀಯ ವೈದ್ಯಕೀಯ ಸಂಘ ಆಕ್ರೋಶ ವ್ಯಕ್ತಪಡಿಸಿದ್ದು, ಕಾನೂನು ಹೋರಾಟ ನಡೆಸುವುದಾಗಿ ಹೇಳಿದೆ. ಈ ಮಧ್ಯೆ ಮಹಿಳೆಗೆ ಆದ ಅನ್ಯಾಯದ ಬಗ್ಗೆ ಪ್ರತಿಕ್ರಿಯೆ ನೀಡಲು ಮಹಿಳೆಗೆ ಚಿಕಿತ್ಸೆ ನೀಡಿದ ವೈದ್ಯ ಡಾ ಆರ್‌ಸಿ ಶ್ರೀ ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಗಲೇ ಇಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ