ಮಹಿಳೆಯನ್ನು ಜೀಪ್ ಮೇಲೆ ಕಟ್ಟಿ ಎಳೆದೊಯ್ದ ಪೊಲೀಸರು!

news18
Updated:September 27, 2018, 6:23 PM IST
ಮಹಿಳೆಯನ್ನು ಜೀಪ್ ಮೇಲೆ ಕಟ್ಟಿ ಎಳೆದೊಯ್ದ ಪೊಲೀಸರು!
  • Advertorial
  • Last Updated: September 27, 2018, 6:23 PM IST
  • Share this:
-ನ್ಯೂಸ್ 18 ಕನ್ನಡ

ಕದ್ದವರು ಸಿಗದಿದ್ದರೆ, ಸಿಕ್ಕಿದವರನ್ನೇ ಕಳ್ಳರನ್ನಾಗಿಸುತ್ತಾರೆಂಬ ಅಪಖ್ಯಾತಿ ಪೊಲೀಸ್ ಇಲಾಖೆ ಮೇಲಿದೆ. ಕೆಲ ಖಾಕಿ ಪೇದೆಗಳು ನಡೆಸುವ ಇಂತಹ ಕೃತ್ಯದಿಂದ ಇಡೀ ಇಲಾಖೆಯ ಮೇಲೆ ಅಪವಾದಗಳು ಕೇಳಿ ಬರುತ್ತಿರುತ್ತದೆ. ಕೆಲ ದಿನಗಳ ಹಿಂದೆ ಪಂಜಾಬ್​ನಲ್ಲೂ ಇಂತಹದೊಂದು ಘಟನೆ ನಡೆದಿದೆ. ಇತ್ತೀಚೆಗೆ ಅಮೃತಸರ ಜಿಲ್ಲೆಯ ಶೆಹಝಾದ ಪ್ರದೇಶದಲ್ಲಿ ಪೊಲೀಸರು  ವ್ಯಕ್ತಿಯೊಬ್ಬರನ್ನು ಬಂಧಿಸಲು ತೆರಳಿದ್ದಾರೆ. ಆದರೆ ಪ್ರಕರಣಕ್ಕೆ ಸಂಬಂಧಿಸಿ ವ್ಯಕ್ತಿ ಸಿಗದಿದ್ದ ಕಾರಣ ಅವರ ಸೊಸೆಯನ್ನು ಬಂಧಿಸಿ ಎಳೆದೊಯ್ದಿದ್ದಾರೆ. ಅದು ಕೂಡ  ನಾಗರೀಕ ಸಮಾಜ ತಲೆ ತಗ್ಗಿಸುವಂತಹ ಅಮಾನವೀಯ ರೀತಿಯಲ್ಲಿ ಎಂಬುದು ವಾಸ್ತವ.

ಕೆಲ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಬಲವಂತ್ ಸಿಂಗ್​ರನ್ನು ಬಂಧಿಸಲು ಆಗಮಿಸಿದ ಪೊಲೀಸರು ಅವರ ಸೊಸೆ 35 ಹರೆಯದ ಜಸ್ವಿಂದರ್ ಕೌರ್​ ಅವರನ್ನು ಬಂಧಿಸಿದ್ದಾರೆ. ಅವರನ್ನು ಪೊಲೀಸ್ ಜೀಪ್​ನ ಮೇಲೆ ಕಟ್ಟಿ ದಾರಿಯುದ್ದಕ್ಕೂ ಮೆರವಣಿಗೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಜೀಪ್​ ಮೇಲಿಂದ ಕೆಳಗೆ ಬಿದ್ದಿರುವ ಕೌರ್​ ಅವರ ಮಣಿಕಟ್ಟು ಸೇರಿದಂತೆ ದೇಹದ ಹಲವು ಭಾಗಗಳಿಗೆ ಗಾಯಗಳಾಗಿವೆ. ಪೊಲೀಸರು ನೀಡಿರುವ ಈ ಕ್ರೂರ ಶಿಕ್ಷೆಯ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಖಾಕಿ ಪಡೆಗಳ ಈ ವರ್ತನೆಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಂಜಾಬ್ ಇನ್ಸ್​ಪೆಕ್ಟರ್ ಜನರಲ್ ಆಫ್ ಪೊಲೀಸ್ ಕುನ್ವಾರ್ ವಿಜಯ್ ಪ್ರತಾಪ್ ಸಿಂಗ್ ಅವರು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಆದರೆ ಈ ಘಟನೆಯನ್ನು ನಿರಾಕರಿಸಿರುವ ಕ್ರೈಮ್ ಇನ್ಸ್​ಪೆಕ್ಟರ್ ತೇಜಿಂದರ್ ಸಿಂಗ್ ಮೌರ್,   ಬಲವಂತ್ ಸಿಂಗ್​ರನ್ನು ಬಂಧಿಸಲು ತೆರಳಿದಾಗ ಪೊಲೀಸ್ ಸಿಬ್ಬಂದಿಗಳ ಮೇಲೆ ಅವರ ಕುಟುಂಬದವರು ದಾಳಿ ಮಾಡಿದ್ದರು. ಅಲ್ಲದೆ ಪೊಲೀಸ್ ವಾಹನಕ್ಕೆ ಹಾನಿ ಮಾಡಲು ಮುಂದಾದಾಗ ಈ ಘಟನೆ ಜರುಗಿದೆ. ಈಗಾಗಲೇ ಆರೋಪಿಯ ಕುಟುಂಬದ ಮೇಲೆ ಭಾರತೀಯ ದಂಡ ಸಂಹಿತೆ ಸೆಕ್ಷನ್ 307 ಕೊಲೆ ಯತ್ನದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೌರ್ ತಿಳಿಸಿದ್ದಾರೆ.

ಈ ಹಿಂದೆ ಶ್ರೀನಗರದಲ್ಲಿಇದೇ ರೀತಿಯ ಅಮಾನವೀಯ ಘಟನೆ  ನಡೆದಿತ್ತು. ಸೇನೆಯ ಮೇಲೆ ಕಲ್ಲೆಸೆಯುತ್ತಿದ್ದ ಪ್ರತಿಭಟನಾಕಾರರಿಂದ ರಕ್ಷಣೆ ಪಡೆಯಲು ಯೋಧರು ಯುವಕನೊಬ್ಬನನ್ನು ಜೀಪ್ ಗೆ ಕಟ್ಟಿಕೊಂಡು ಸಾಗಿದ ದೃಶ್ಯ ವೈರಲ್ ಆಗಿತ್ತು. ಅಲ್ಲದೆ ಸೇನೆಯ ಈ ಕ್ರಮಕ್ಕೆ ದೇಶದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಘಟನೆ ನಡೆದಿರುವುದರಿಂದ ರಕ್ಷಕರೇ ಭಕ್ಷಕರಾಗುತ್ತಿದ್ದಾರೆಂಬ ಆರೋಪಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.
First published:September 27, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ