ಕೆಲವೊಮ್ಮೆ ಮೂಢನಂಬಿಕೆಗಳು ಜೀವವನ್ನ ಬಲಿ ಪಡೆದುಕೊಂಡಿರುವ ಪ್ರಕರಣಗಳು ಆಗಾಗ ವರದಿ ಆಗುತ್ತಿರುತ್ತವೆ. ಇದೀಗ ಅಂತಹುವುದೇ ಒಂದು ಪ್ರಕರಣ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ. ಜೀವಂತವಾಗಿರುವಾಗಲೇ ಸಮಾಧಿ ಆದರೆ ಅಮರತ್ವ ಸಿಗುತ್ತದೆ ಎಂದು ನಂಬಿದ್ದ ಸ್ವಘೋಷಿತ ಕಾಲಜ್ಞಾನಿ ಒಬ್ಬನನ್ನು, ಆತನ ಇಚ್ಚೆಯಂತೆ ಆತನ ಪತ್ನಿ (Wife) ಜೀವಂತ ಸಮಾಧಿ ಮಾಡಿದ್ದಾಳೆ. ಆದರೆ , ತನ್ನ ಪ್ರವಾಸದಿಂದ ಮನೆಗೆ ಮರಳಿದ ಅವರ ಮಗಳು (Daughter) ಆ ಸಂಗತಿಯ ಬಗ್ಗೆ ತಿಳಿದು, ಕೂಡಲೇ ಅದರ ಬಗ್ಗೆ ಪೊಲೀಸರಿಗೆ ವರದಿ ಮಾಡಿದ್ದಾಳೆ. ಈ ವಿಚಿತ್ರ ಘಟನೆಯು ತಮಿಳುನಾಡಿನ ಪೆರುಂಬಕ್ಕಂ (Perumbakkam, Tamilnadu) ಎಂಬಲ್ಲಿ ನಡೆದಿದೆ.
ಮಾಧ್ಯಮ ವರದಿಯೊಂದರ ಪ್ರಕಾರ, ಪೆರುಂಬಕ್ಕಂನ ಕಲೈಂಗಾರ್ ಕರುಣಾನಿಧಿ ನಗರದ ನಿವಾಸಿ ನಾಗರಾಜ್ ಎಂಬಾತ ಸ್ವಯಂ ಘೋಷಿತ ಕಾಲಜ್ಞಾನಿ ಆಗಿದ್ದ ಮತ್ತು ಆತ ತಾನು ದೇವರೊಂದಿಗೆ ಸಂಭಾಷಣೆ ನಡೆಸಿರುವೆ ಎಂದು ಹೇಳಿಕೊಳ್ಳುತ್ತಿದ್ದ. ತಾನು ತಮಿಳುನಾಡಿನಲ್ಲಿರುವ ಕೆಲವು ದೇವಾಲಯಗಳಿಗೆ ಭೇಟಿ ನೀಡಿದ ನಂತರ ದೈವಿಕ ಆಶೀರ್ವಾದ ಪಡೆದಿರುವುದಾಗಿ ಆತ ಹೇಳಿಕೊಳ್ಳುತ್ತಿದ್ದ. ಆ ವ್ಯಕ್ತಿ ತನ್ನ ಮನೆಯ ಹಿತ್ತಲಿನಲ್ಲಿ ದೇವಾಲಯವೊಂದನ್ನು ನಿರ್ಮಿಸಿದ್ದ ಮತ್ತು ಜನರಿಗೆ ತಮ್ಮ ಭವಿಷ್ಯ ತಿಳಿಯಲು ಅಲ್ಲಿಗೆ ಬರುವಂತೆ ಆಹ್ವಾನ ನೀಡುತ್ತಿದ್ದ.
ಜೀವಂತ ಸಮಾಧಿ ಮಾಡುವಂತೆ ಹೇಳಿದ
ಈ ಹಿನ್ನೆಲೆಯಲ್ಲಿ, ನವಂಬರ್ 16ರಂದು ನಾಗರಾಜ್ಗೆ ಎದೆ ನೋವು ಕಾಣಿಸಿಕೊಂಡಿತು. ಆತ ತನ್ನ ಮಡದಿಗೆ ಸದ್ಯದಲ್ಲೆ ತಾನು ಸಾಯಲಿದ್ದೇನೆ. ಆದರೆ ತನ್ನ ದೇಹದಲ್ಲಿ ಕೊಂಚ ಪ್ರಾಣ ಉಳಿದಿರುವಾಗಲೇ , ತನ್ನನ್ನು ಜೀವಂತವಾಗಿ ಸಮಾಧಿ ಮಾಡಬೇಕು ಎಂದು ಹೆಂಡತಿಗೆ ವಿನಂತಿ ಮಾಡಿಕೊಂಡ. ಹಾಗೆ ಮಾಡುವುದರಿಂದ ತಾನು ಅಮರತ್ವ ಪಡೆಯಲು ಸಹಾಯ ಆಗುತ್ತದೆ ಎಂದು ಕೂಡ ಆತ ಹೇಳಿದ.
ಇದನ್ನೂ ಓದಿ: Pataal Lok: ಇದುವೇ ನೋಡಿ ಭಾರತದ ಪಾತಳಲೋಕ: 3 ಸಾವಿರ ಅಡಿಯಲ್ಲಿರುವ 12 ಗ್ರಾಮಗಳನ್ನು ತಲುಪಿಲ್ಲ ಮಹಾಮಾರಿ ಕೋವಿಡ್
ಆತನ ಪತ್ನಿ ಲಕ್ಷ್ಮೀ ತನ್ನ ಗಂಡನ ಮನವಿಗೆ ಒಪ್ಪಿಗೆ ಸೂಚಿಸಿದಳು. ಮರುದಿನ ಗುಂಡಿ ತೋಡಲು ಇಬ್ಬರು ವ್ಯಕ್ತಿಗಳನ್ನು ಕರೆದುಕೊಂಡು ಬಂದಳು. ನೀರಿನ ತೊಟ್ಟಿ ನಿರ್ಮಿಸಲು ಗುಂಡಿಯನ್ನು ಅಗೆಯಿಸುತ್ತಿರುವುದಾಗಿ ಆಕೆ ಅವರಿಬ್ಬರಿಗೆ ಹೇಳಿದಳು.
ಕುಳಿಯ ಭಂಗಿಯಲ್ಲಿ ಪತಿಯ ಜೀವಂತ ಸಮಾಧಿ
ನವಂಬರ್ 17ರಂದು ನಾಗರಾಜ್ನನ್ನು ಪತ್ನಿ ಲಕ್ಷ್ಮೀ , ಆ ಗುಂಡಿಯಲ್ಲಿ ಕುಳಿತ ಭಂಗಿಯಲ್ಲಿ ಸಮಾಧಿ ಮಾಡಿದ್ದಳು. ಆಕೆ ಆತನನ್ನು ಸಮಾಧಿ ಮಾಡುವಾಗ ಅವನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದ ಎಂದು ವರದಿ ತಿಳಿಸಿದೆ.
ವೃತ್ತಿಯಲ್ಲಿ ಒಬ್ಬ ಟೆಕ್ಕಿಯಾಗಿರುವ ಆ ದಂಪತಿಯ ಮಗಳು ತಮಿಳರಸಿ ಈ ಘಟನೆ ನಡೆಯುವಾಗ ಮನೆಯಲ್ಲಿ ಇರಲಿಲ್ಲ. ಆಕೆ ತನ್ನ ಪ್ರವಾಸದಿಂದ ಶುಕ್ರವಾರ ಮನೆಗೆ ಹಿಂದಿರುಗಿದಳು. ಆದರೆ ತನ್ನ ತಂದೆ ಮನೆಯಿಂದ ನಾಪತ್ತೆ ಆಗಿರುವುದನ್ನು ಕಂಡು ಆಕೆಗೆ ಆಘಾತವಾಯಿತು.
ಈ ಕುರಿತು ತನ್ನ ತಾಯಿ ಯಾವುದೇ ಪ್ರತಿಕ್ರಿಯೆ ನೀಡದೆ ಸುಮ್ಮನಿರುವುದನ್ನು ಕಂಡು ಸಂಶಯಗೊಂಡ ಅಕೆ, ತಾಯಿಯನ್ನು ನಿರಂತರವಾಗಿ ಪಶ್ನಿಸಿದಳು. ಕೊನೆಗೂ ಲಕ್ಷ್ಮೀ ತಾನು ಗಂಡ ನಾಗರಾಜ್ನನ್ನು ಸಮಾಧಿ ಮಾಡಿರುವುದಾಗಿ ಮಗಳ ಬಳಿ ಒಪ್ಪಿಕೊಂಡಳು.
ತಾಯಿಯಿಂದ ಈ ವಿಷಯವನ್ನು ಕೇಳಿ ಆಘಾತಕ್ಕೆ ಒಳಗಾದ ಮಗಳು ತಮಿಳರಸಿ, ಕೂಡಲೇ ಆ ಕುರಿತು ಪೆರುಂಬಕ್ಕಂ ಪೊಲೀಸರಿಗೆ ಒಂದು ದೂರು ನೀಡಿದ್ದಾಳೆ. ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ನಾಗರಾಜನ ಶವವನ್ನು ಹೊರ ತೆಗೆದಿದ್ದಾರೆ.
ಸಮಾಧಿ ಮಾಡಲ್ಪಟ್ಟ ಸಂದರ್ಭದಲ್ಲಿ ನಾಗರಾಜ, ಜೀವಂತವಾಗಿ ಇದ್ದನೇ ಅಥವಾ ಸಾವನ್ನಪ್ಪಿದ್ದನೇ ಎಂಬುವುದನ್ನು ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ತಿಳಿಸಲು ಸಾಧ್ಯ ಎಂದು ಪೆರುಂಬಕ್ಕಂ ಪೋಲೀಸರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ