ಲಂಡನ್: ಪ್ರತಿ ಹೆಣ್ಣಿಗೂ ತಾಯಿಯಾಗುವ ನವಮಾಸಗಳು ಅತ್ಯಂತ ಮುಖ್ಯ. ಪುಟ್ಟ ಜೀವವೊಂದು ತನ್ನೊಳಗೆ ಬೆಳಯುತ್ತಿರೋದನ್ನು ಸಂಭ್ರಮಿಸೋ ಹೆಣ್ಣು, ಅಷ್ಟೇ ಆತಂಕಗಳನ್ನು ಎದುರಿಸುತ್ತಾಳೆ. ಯಾವುದೇ ತೊಂದರೆಯಾಗದೇ ಮಗು ತನ್ನ ಮಡಿಲು ಸೇರಲಿ ಅಂತ ಬಯಸುತ್ತಾಳೆ. ಜಗತ್ತಿನ ಯಾವುದೇ ಭಾಗದಲ್ಲಾದ್ರೂ ತಾಯಿಯ ಮಮತೆ ಒಂದೆಯೇ. ಬಸುರಿಯಾದಗಿನಿಂದ ಮಗು ಜನಿಸೋವರೆಗು ಅತ್ಯಂತ ಜಾಗರೂಕತೆಯಿಂದ ಇರಬೇಕಾಗುತ್ತೆ. ಆರೋಗ್ಯವಂತ ಮಗುವಿನ ಮುಖ ಪ್ರಸವದ ಅಷ್ಟೂ ನೋವನ್ನು ಮರೆಸುತ್ತೆ. ಬ್ರಿಟನ್ನ ತಾಯಿಯೊಬ್ಬರು ಇಂಥಹದ್ದೇ ಸಂಭ್ರಮದಲ್ಲಿ ತೇಲುತ್ತಿದ್ದಾರೆ. ಬ್ರಿಟನ್ನಲ್ಲೇ 2ನೇ ಅತ್ಯಂತ ದೊಡ್ಡ ಮಗುವಿಗೆ ಜನ್ಮ ನೀಡಿ ಸೈ ಎನಿಸಿಕೊಂಡಿದ್ದಾರೆ.
21 ವರ್ಷದ ಅಂಬರ್ ಕಂಬರ್ಲ್ಯಾಂಡ್ ಎಂಬುವರು 9 ತಿಂಗಳುಗಳ ಹಿಂದೆ ಗರ್ಭವತಿಯಾಗಿದ್ದರು. ಸುಂದರ ಮಗುವಿನ ನಿರೀಕ್ಷೆಯಲ್ಲಿದ್ದ ಅಂಬರ್ ಎಲ್ಲಾ ಮುನ್ನೆಚ್ಚರಿಕೆಗಳ ಜೊತೆ ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಮೊದಲ ತ್ರೈಮಾಸಿಕದಲ್ಲಿ ಎಲ್ಲವೂ ಸಾಮಾನ್ಯವಾಗೇ ಇತ್ತು. ಆದರೆ ತಿಂಗಳುಗಳು ಉರುಳುತ್ತಾ ಹೊಟ್ಟೆ ಬೃಹದಾಕಾರವಾಗಿ ಕಾಣಲಾರಂಭಿಸಿತು. ಅವಳಿ-ಜವಳಿ ಇರಬಹುದು, ಇಲ್ಲವೇ ತ್ರಿವಳಿ ಇರಬಹುದು. ಅದಕ್ಕಾಗೇ ಇಷ್ಟು ದೊಡ್ಡ ಹೊಟ್ಟೆ ಬರುತ್ತಿದೆ ಎಂದು ವೈದ್ಯರು ಅಂದಾಜಿಸಿದ್ದರು.
ಆದರೆ ಪರೀಕ್ಷೆ ನಡೆಸಿದ ವೈದ್ಯರಿಗೂ ಅಚ್ಚರಿ ಕಾದಿತ್ತು. ಅಂಬರ್ ಒಂದೇ ಮಗುವಿಗೆ ಗರ್ಭವತಿಯಾಗಿದ್ದರು. ಅಲ್ಲಿನ ಕಾನೂನಿನ ಪ್ರಕಾರ ಮಗುವಿನ ಲಿಂಗವನ್ನು ತಿಳಿಯಬಹುದಾಗಿದ್ದು, ಅಂಬರ್ ಹೆಣ್ಣು ಮಗುವಿಗೆ ಜನ್ಮ ನೀಡಲಿದ್ದಾರೆ ಎಂದು ಗೊತ್ತಾಗಿತ್ತು. ನೋಡನೋಡುತ್ತಿದ್ದಂತೆ ನವಮಾಸಗಳು ತುಂಬಿದಾಗ ಅಂಬರ್ ಹೊಟ್ಟೆ ಯಾರೂ ಊಹಿಸದಷ್ಟು ದೊಡ್ಡದಾಗಿತ್ತು. ಏ.16ರಂದು ಅಂಬರ್ ಯಾವುದೇ ತೊಂದರೆ ಇಲ್ಲದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಸಾಮಾನ್ಯವಾಗಿ ಜನಿಸುವ ಮಕ್ಕಳು 3.5 ಕೆಜಿಗಿಂತಲೂ ಕಡಿಮೆ ತೂಕವಿರುತ್ತಾರೆ. ಆದರೆ ಅಂಬರ್ ಜನ್ಮ ನೀಡಿದ ಹೆಣ್ಣು ಮಗು ಬರೋಬ್ಬರಿ 5.8 ಕೆಜಿ ತೂಕವಿತ್ತು. ಬ್ರಿಟನ್ ದೇಶದಲ್ಲಿ ಜನಿಸಿದ 2ನೇ ಅತಿ ದೊಡ್ಡ ಮಗು ಎಂಬ ಹೆಗ್ಗಳಿಕೆಯೂ ಈ ಗಜಲಕ್ಷ್ಮಿಯ ಮುಡಿಗೇರಿದೆ. ಈ ಮೊದಲು 2012ರಲ್ಲಿ ಮಹಿಳೆಯೊಬ್ಬರು 6 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದರು.
ಈಗ ತಾನೆ ಹುಟ್ಟಿದ ಮಗುವಿಗೆ 2-3 ವರ್ಷದ ಮಕ್ಕಳ ಸೈಜ್ನ ಬಟ್ಟೆ ಖರೀದಿಸಬೇಕಾಗಿದೆಯಂತೆ. ಇನ್ನು ತಾಯಿ ತುಂಬಾ ಹೊತ್ತು ಮಗುವನ್ನು ಎತ್ತಿ ಆಡಿಸಲು ಕಷ್ಟವಾಗುತ್ತಿದೆಯಂತೆ. ಗುಂಡು ಗುಂಡಾಗಿರುವ ಮಗುವನ್ನು ನೋಡಲು ಅಕ್ಕಪಕ್ಕದ ಮನೆಯವರು, ಸಂಬಂಧಿಕರು, ಸ್ನೇಹಿತರು ಮುಗಿ ಬೀಳುತ್ತಿದ್ದಾರಂತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ