ಜಲ್ಲಿಕಟ್ಟು ಒಂದು ಹೋರಾಟವಷ್ಟೇ, ಮಾತೃಭಾಷೆಯ ವಿಚಾರಕ್ಕೆ ಬಂದರೆ ಯುದ್ಧವೇ ಜರುಗಲಿದೆ; ಕೇಂದ್ರವನ್ನು ಎಚ್ಚರಿಸಿದ ಕಮಲಹಾಸನ್

ಶಾ, ಸುಲ್ತಾನ್, ಅಥವಾ ಸಾಮ್ರಾಟ್ ಯಾರೇ ಬಂದರೂ ಭಾರತದ ದೇಶದಲ್ಲಿ ಎಲ್ಲೆಡೆ ಅಂತರ್ಗತವಾಗಿರುವ ಏಕತೆಯನ್ನು ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಹೀಗಾಗಿ ಇಂತಹ ಪ್ರತ್ಯೇಕತಾವಾದಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ತಮಿಳುನಾಡಿನ ನಟ ರಾಜಕಾರಣಿ ಕಮಲಹಾಸನ್ ಜನರನ್ನು ಎಚ್ಚರಿಸಿದ್ದಾರೆ.​

MAshok Kumar | news18-kannada
Updated:September 16, 2019, 7:25 PM IST
ಜಲ್ಲಿಕಟ್ಟು ಒಂದು ಹೋರಾಟವಷ್ಟೇ, ಮಾತೃಭಾಷೆಯ ವಿಚಾರಕ್ಕೆ ಬಂದರೆ ಯುದ್ಧವೇ ಜರುಗಲಿದೆ; ಕೇಂದ್ರವನ್ನು ಎಚ್ಚರಿಸಿದ ಕಮಲಹಾಸನ್
ತಮಿಳುನಾಡಿನ ಖ್ಯಾತ ನಟ ಮತ್ತು ರಾಜಕಾರಣಿ.
  • Share this:
ಚೆನ್ನೈ (ಸೆಪ್ಟೆಂಬರ್.16); ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಾಮ್ರಾಟ್ ಅಥವಾ ಸುಲ್ತಾನ್ ಯಾರೇ ಬಂದರು ದೇಶದ ಏಕತೆ ಎಂಬ ಶ್ರೀಮಂತ ಪರಂಪರೆಯನ್ನು ಹಿಮ್ಮೆಟ್ಟಿಸುವುದು ಸಾಧ್ಯವಿಲ್ಲ. ಅಕಸ್ಮಾತ್ ಕೇಂದ್ರ ಸರ್ಕಾರ ಹಿಂದಿ ಹೇರಿಕೆಗೆ ಮುಂದಾದರೆ ಈ ದೇಶ ಜಲ್ಲಿಕಟ್ಟುವಿಗಿಂತ ದೊಡ್ಡ ಮಟ್ಟದ ಯುದ್ಧಕ್ಕೆ ಸಾಕ್ಷಿಯಾಗಲಿದೆ ಎಂದು ತಮಿಳುನಾಡಿನ ನಟ-ರಾಜಕಾರಣಿ ಕಮಲಹಾಸನ್ ಕಿಡಿಕಾರಿದ್ದಾರೆ.

ಸೆಪ್ಟೆಂಬರ್.14 ರ ಹಿಂದಿ ದಿವಸದಂದು ಟ್ವೀಟ್ ಮಾಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ, “ಭಾರತದಲ್ಲಿ ಅಸಂಖ್ಯಾತ ಭಾಷೆಗಳಿವೆ. ಪ್ರತಿಯೊಂದು ಭಾಷೆಗೂ ಅದರದೇಯಾದ ಸಾಂಸ್ಕೃತಿಕ ಶ್ರೀಮಂತಿಕೆ ಇದೆ. ಆದರೆ, ಭಾರತವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಲು ಏಕ ಭಾಷೆಯ ಅಗತ್ಯವಿದೆ. ದೇಶದಲ್ಲಿ ಅಧಿಕ ಸಂಖ್ಯೆಯ ಜನ ಬಳಸುವ ಹಿಂದಿ ಭಾಷೆಗೆ ದೇಶವನ್ನು ಒಗ್ಗೂಡಿಸುವ ಶಕ್ತಿ ಇದೆ” ಎಂದು ಟ್ವೀಟ್ ಮಾಡಿದ್ದರು.

ಹೀಗೆ ಟ್ವೀಟ್ ಮಾಡುವ ಮೂಲಕ ಅಮಿತ್ ಶಾ ಬಿಜೆಪಿಯ ಅಜೆಂಡಾವಾದ ಒಂದು ದೇಶ-ಒಂದು ಭಾಷೆ ಎಂಬ ಯೋಜನೆಯನ್ನು ದೇಶದ ಮೇಲೆ ಹೇರುವ ಪರೋಕ್ಷ ಸೂಚನೆಯನ್ನು ರವಾನಿಸಿದ್ದರು. ಆದರೆ, ಅಮಿತ್ ಶಾ ಅವರ ಈ ಹೇಳಿಕೆಯನ್ನು ಕರ್ನಾಟಕ ಸೇರಿದಂತೆ ಹಿಂದಿಯೇತರ ಎಲ್ಲಾ ರಾಜ್ಯಗಳು ಕಟುವಾಗಿ ವಿಮರ್ಶಿಸಿವೆ. ಅನೇಕ ನಾಯಕರು ಕೇಂದ್ರ ಸರ್ಕಾರ ಹಾಗೂ ಅಮಿತ್ ಶಾ ವಿರುದ್ಧ ನಿರಂತರವಾಗಿ ಕಿಡಿಕಾರುತ್ತಿದ್ದಾರೆ. ಇದೀಗ ಈ ಪಟ್ಟಿಗೆ ತಮಿಳುನಾಡಿನ ಖ್ಯಾತ ನಟ ಮತ್ತು ರಾಜಕಾರಣಿ ಕಮಲಹಾಸನ್ ಸಹ ಸೇರ್ಪಡೆಯಾಗಿದ್ದಾರೆ.

ವಿಡಿಯೋ ಸಂದೇಶದ ಮೂಲಕ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆಯನ್ನು ರವಾನಿಸಿರುವ  ಕಮಲಹಾಸನ್, “ಶಾ, ಸುಲ್ತಾನ್, ಅಥವಾ ಸಾಮ್ರಾಟ್ ಯಾರೇ ಬಂದರೂ ಭಾರತದ ದೇಶದಲ್ಲಿ ಎಲ್ಲೆಡೆ ಅಂತರ್ಗತವಾಗಿರುವ ಏಕತೆಯನ್ನು ಪ್ರತ್ಯೇಕಿಸುವುದು ಸಾಧ್ಯವಿಲ್ಲ. ಹೀಗಾಗಿ ಇಂತಹ ಪ್ರತ್ಯೇಕತಾವಾದಿಗಳ ವಿರುದ್ಧ ಎಚ್ಚರಿಕೆಯಿಂದ ಇರಬೇಕು ಎಂದು ಅವರು ಜನರಿಗೆ ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ಜಲ್ಲಿಕಟ್ಟು ಸಂದರ್ಭದಲ್ಲಿ ಕೇಂದ್ರದ ನಿಯಮವನ್ನು ವಿರೋಧಿಸಿ ಚೆನ್ನೈನಲ್ಲಿ ನಡೆದದ್ದು ಕೇವಲ ಒಂದು ಪ್ರತಿಭಟನೆಯಷ್ಟೇ. ಆದರೆ, ಮಾತೃಭಾಷೆಯ ವಿಚಾರಕ್ಕೆ ಬಂದರೆ ಇಡೀ ತಮಿಳುನಾಡು ಹಾಗೂ ಭಾರತ ದೇಶ ದೊಡ್ಡದೊಂದು ಯುದ್ಧಕ್ಕೆ ಸಾಕ್ಷಿಯಾಗಲಿದೆ ಹಾಗೂ ಆ ಯುದ್ಧವನ್ನು ಬರಿಸುವ ಶಕ್ತಿ ಯಾರಿಗೂ ಇಲ್ಲ. ನಾವು ಎಲ್ಲಾ ಭಾಷೆಯನ್ನೂ ಗೌರವಿಸುತ್ತೇವೆ ಆದರೆ, ನಮ್ಮ ಭಾಷೆ ಯಾವಾಗಲೂ ಮಾತೃಭಾಷೆ ತಮಿಳು ಆಗಿರುತ್ತದೆ” ಎಂದು ತಿಳಿಸಿದ್ದಾರೆ.ರಾಷ್ಟ್ರಗೀತೆ ಬಂಗಾಳಿ ಭಾಷೆಯಲ್ಲಿದೆ. ದೇಶದ ಬಹುಪಾಲು ಜನ ರಾಷ್ಟ್ರಗೀತೆಯನ್ನು ಬಂಗಾಳಿ ಭಾಷೆಯಲ್ಲಿ ಅತ್ಯಂತ ಸಂತೋಷದಿಂದ ಹಾಡುತ್ತಿದ್ದಾರೆ. ಅದನ್ನು ಹಾಗೆ ಮುಂದುವರೆಸಲಿದ್ದಾರೆ. ಇದಕ್ಕೆ ಕಾರಣ ಗೀತೆಯನ್ನು ಬರೆದ ಕವಿ ಎಲ್ಲಾ ಭಾಷೆ ಮತ್ತು ಸಂಸ್ಕೃತಿಗಳಿಗೆ ಸರಿಯಾದ ಗೌರವವನ್ನು ನೀಡಿದ್ದರು. ಇದೇ ಕಾರಣಕ್ಕೆ ಈ ಹಾಡು ಇಡೀ ದೇಶದ ಗೀತೆಯಾಯಿತು” ಎಂದು ನೇರಾನೇರ ಕೇಂದ್ರ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಅಮಿತ್ ಶಾ ಟ್ವೀಟ್ ವಿರುದ್ಧ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಸಹ ಕಿಡಿಕಾರಿದ್ದರು. ಈ ಕುರಿತು ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದ ಸಿದ್ದರಾಮಯ್ಯ, “ಹಿಂದಿ ರಾಷ್ಟ್ರ ಭಾಷೆ ಎಂಬ ಸುಳ್ಳು ಪ್ರಚಾರ ನಿಲ್ಲಲಿ. ಅದು ಕನ್ನಡದಂತೆಯೇ 22 ಅಧಿಕೃತ ಭಾಷೆಗಳಲ್ಲಿ ಒಂದು ಎನ್ನುವುದು ತಿಳಿದಿರಲಿ. ಸುಳ್ಳು ಹಾಗೂ ತಪ್ಪು ಮಾಹಿತಿಯಿಂದ ಒಂದು ಭಾಷೆಯನ್ನು ಬೆಳೆಸುವುದು ಸಾಧ್ಯವಿಲ್ಲ” ಎಂದು ಕಿಡಿಕಾರಿದ್ದರು.

ಇನ್ನೂ ಹೆಚ್​.ಡಿ. ಕುಮಾರಸ್ವಾಮಿ, “ಇಂದು ದೇಶದಾದ್ಯಂತ ಕೇಂದ್ರ ಸರ್ಕಾರ ಹಿಂದಿ ದಿವಸ್ ಆಚರಿಸುತ್ತಿದೆ. ಸಂವಿಧಾನದಲ್ಲಿ ಹಿಂದಿಯೊಂದಿಗೆ ಅಧಿಕೃತ ಭಾಷೆ ಎನಿಸಿಕೊಂಡಿರುವ ಕನ್ನಡದ ಭಾಷಾ ದಿವಸವನ್ನು ದೇಶದಾದ್ಯಂತ ಯಾವಾಗ ಆಚರಿಸುತ್ತೀರಿ ನರೇಂದ್ರ ಮೋದಿಯವರೇ? ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು.

ಇನ್ನೂ ಅಮಿತ್ ಶಾ ಹೇಳಿಕೆಯ ವಿರುದ್ಧ ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯ್, ತಮಿಳುನಾಡಿನ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್ ಸೇರಿದಂತೆ ಅನೇಕರು ಕಳೆದ ಎರಡು ದಿನಗಳಿಂದ ಟೀಕಾಪ್ರಹಾರವನ್ನೇ ನಡೆಸುತ್ತಿದ್ದಾರೆ.

ಇದನ್ನೂ ಓದಿ : ಹಿಂದಿ ದಿವಸ್​; ಕೇಂದ್ರದ ಧೋರಣೆ ಹಾಗೂ ಹಿಂದಿ ಹೇರಿಕೆ ವಿರುದ್ಧ ಟ್ವೀಟ್ ಸಮರ ಸಾರಿದ ಸಿದ್ದರಾಮಯ್ಯ, ಕುಮಾರಸ್ವಾಮಿ

First published:September 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading