10,000 ಜನರು, 246 ಶಂಕಿತರು: ಒಂದು ಶರ್ಟ್ ಬಟನ್ ಇಟ್ಟುಕೊಂಡು ಕೊಲೆ ಪ್ರಕರಣ ಭೇದಿಸಿದ ಪೊಲೀಸರು

ಅಪರಾಧ ನಡೆದ ಜಾಗದಲ್ಲಿ ಪೊಲೀಸರಿಗೆ ಸಾಕ್ಷ್ಯವಾಗಿ ಸಿಕ್ಕಿದ್ದು ಒಂದು ಪುಟ್ಟ ಶರ್ಟ್ ಬಟನ್. ಆ ಶರ್ಟ್ ಬಟನ್​ನಲ್ಲಿ ‘Rope last stitch’ ಎಂಬ ಅಕ್ಷರಗಳಿದ್ದವಷ್ಟೇ. ಅದು ಬಿಟ್ಟು ಬೇರೆ ಯಾವ ಸುಳಿವೂ ಪೊಲೀಸರಿಗೆ ಇರಲಿಲ್ಲ.

Vijayasarthy SN | news18
Updated:December 18, 2019, 7:56 PM IST
10,000 ಜನರು, 246 ಶಂಕಿತರು: ಒಂದು ಶರ್ಟ್ ಬಟನ್ ಇಟ್ಟುಕೊಂಡು ಕೊಲೆ ಪ್ರಕರಣ ಭೇದಿಸಿದ ಪೊಲೀಸರು
ಪ್ರಾತಿನಿಧಿಕ ಚಿತ್ರ
  • News18
  • Last Updated: December 18, 2019, 7:56 PM IST
  • Share this:
ಔರಂಗಾಬಾದ್(ಡಿ. 18): ಎಷ್ಟೇ ಚಾಕಚಕ್ಯತೆಯಿಂದ ಅಪರಾಧ ಎಸಗಿದರೂ ಅಪರಾಧಿ ಎಲ್ಲಿಯಾದರೂ ಒಂದು ಸಣ್ಣ ಕ್ಲೂ ಬಿಟ್ಟಿರುತ್ತಾನೆ ಎಂಬುದು ಅಪರಾಧ ಜಗತ್ತನ್ನು ಬಲ್ಲವರು ಹೇಳುವ ಮಾತು. ಅನೇಕ ಪ್ರಕರಣಗಳು ಇನ್ನೂ ಬಗೆಹರಿಯದೇ ಉಳಿದಿರಬಹುದು. ಆದರೆ, ಒಂದು ಸಣ್ಣ ಕ್ಲೂ ಇಟ್ಟುಕೊಂಡು ಅಪರಾಧಿಗಳನ್ನು ಹಿಡಿದಿರುವ ಅದೆಷ್ಟೋ ಪ್ರಕರಣಗಳು ಪೊಲೀಸ್ ಫೈಲ್​ಗಳಲ್ಲಿವೆ. ಅಂಥದ್ದೊಂದು ಕುತೂಹಲಕಾರಿ ಪ್ರಕರಣ ಮಹಾರಾಷ್ಟ್ರ ಪೊಲೀಸ್ ಪುಟದಲ್ಲಿ ದಾಖಲಾಗಿದೆ. ಒಂದು ಶರ್ಟ್ ಬಟನ್ ಆಧಾರವಾಗಿಟ್ಟುಕೊಂಡು ಔರಂಗಾಬಾದ್ ನಗರದ ಪೊಲೀಸರು ಏಳು ತಿಂಗಳ ಒಂದು ಕೊಲೆ ಪ್ರಕರಣವನ್ನು ಭೇದಿಸಿದ್ಧಾರೆ.

ಔರಂಗಾಬಾದ್ ಜಿಲ್ಲೆಯ ಸಿಲ್ಲೋದ ನಗರದಲ್ಲಿ ಇದೇ ವರ್ಷ ಮೇ 12ರಂದು ವೈನ್ ಶಾಪ್ ಉದ್ಯೋಗಿ 48 ವರ್ಷದ ಭಿಕನ್ ನಿಲೋಬಾ ಜಾಧವ್ ಎಂಬಾತನ ಕೊಲೆಯಾಗಿತ್ತು. ಇದೀಗ ಪೊಲೀಸರು ಅಜಯ್ ಗುಲಾಬ್​ರಾವ್ ರಗಡೆ (30), ಚೇತನ್ ಅಶೋಕ್ ಗಾಯಕವಾಡ್ (34) ಮತ್ತು ಸಂದೀಪ್ ಅಸಾರಾಮ್ ಗಾಯಕವಾಡ್ ಎಂಬುವವರನ್ನು ಬಂಧಿಸಿದ್ದಾರೆ. ಇವರ ಸುಳಿವು ಸಿಗುವ ಮುನ್ನ ಪೊಲೀಸರು ಪಟ್ಟ ಹರಸಾಹಸ, ತೋರಿದ ಸಂಯಮ ಮತ್ತು ಜಾಣ್ಮೆ ನಿಜಕ್ಕೂ ಪ್ರಶಂಸಾರ್ಹವಾದುದು.

ಇದನ್ನೂ ಓದಿ: ಭಾರತದಲ್ಲಿ ಗಲ್ಲು ಶಿಕ್ಷೆಯ ಇತಿಹಾಸ ಮತ್ತು ಜನಾಭಿಪ್ರಾಯವೇನು? ನೇಣಿಗೆ ಕೊರಳುಕೊಟ್ಟವರ ಸಂಖ್ಯೆ ಎಷ್ಟು? ಇಲ್ಲಿದೆ ಆಸಕ್ತಿಕರ ಮಾಹಿತಿ

ಅಪರಾಧ ನಡೆದ ಜಾಗದಲ್ಲಿ ಪೊಲೀಸರಿಗೆ ಸಾಕ್ಷ್ಯವಾಗಿ ಸಿಕ್ಕಿದ್ದು ಒಂದು ಪುಟ್ಟ ಶರ್ಟ್ ಬಟನ್. ಆ ಶರ್ಟ್ ಬಟನ್​ನಲ್ಲಿ ‘Rope last stitch’ ಎಂಬ ಅಕ್ಷರಗಳಿದ್ದವಷ್ಟೇ. ಅದು ಬಿಟ್ಟು ಬೇರೆ ಯಾವ ಸುಳಿವೂ ಪೊಲೀಸರಿಗೆ ಇರಲಿಲ್ಲ.

ಈ ಅಕ್ಷರಗಳಿರುವ ಬಟನ್​ಗಳನ್ನು ಹೊಂದಿರುವ ಶರ್ಟ್​ಗಳು, ಹಾಗೂ ಅದನ್ನು ಖರೀದಿಸಿದವರನ್ನು ಹುಡುಕುವ ಅತ್ಯಂತ ತ್ರಾಸದಾಯಕ ಸವಾಲು ಪೊಲೀಸರ ಮುಂದಿತ್ತು. ಇಂಥ ಶರ್ಟ್​ಗಳನ್ನು ಮಾರಾಟ ಮಾಡುವ ಆನ್​ಲೈನ್ ಮಾರಾಟಗಾರರನ್ನು ಪೊಲೀಸರು ಸಂಪರ್ಕಿಸಿದರು. ಯಾರ್ಯಾರಿಗೆ ಮಾರಾಟ ಮಾಡಲಾಯಿತು ಎಂಬ ವಿವರ ಪಡೆದರು. ಔರಂಗಾಬಾದ್ ಪೊಲೀಸ್ ಮಹಾನಿರೀಕ್ಷಕ ಮೋಕ್ಷದಾ ಪಾಟೀಲ್ ಹೇಳುವ ಪ್ರಕಾರ, ಆನ್​ಲೈನ್​ನಲ್ಲಿ ಇಂಥ ಶರ್ಟ್​ಗಳನ್ನು ಖರೀದಿಸಿದ 10 ಸಾವಿರ ಜನರ ಪಟ್ಟಿ ಸಿಗುತ್ತದೆ. ಅವರೆಲ್ಲರ ಪೂರ್ವಾಪರಗಳನ್ನು ಅವಲೋಕಿಸಿದ ಪೊಲೀಸರು, ಕ್ರಿಮಿಲನ್ ಹಿನ್ನೆಲೆ ಇರುವ 246 ಮಂದಿಯನ್ನು ಶಾರ್ಟ್​ಲಿಸ್ಟ್ ಮಾಡುತ್ತಾರೆ. ಆದರೆ, ಐದು ರಾಜ್ಯಗಳಲ್ಲಿ ಈ 246 ಮಂದಿ ಹರಡಿರುತ್ತಾರೆ. ಅವರಲ್ಲಿ ಒಬ್ಬೊಬ್ಬರ ಮೇಲೂ ಪೊಲೀಸರು ನಿಗಾ ಇರಿಸುತ್ತಾರೆ.

ಇದನ್ನೂ ಓದಿ: ನಿರ್ಭಯಾ ಅತ್ಯಾಚಾರ ಪ್ರಕರಣ: ಅಪರಾಧಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಜಾ, ಗಲ್ಲು ಶಿಕ್ಷೆಯನ್ನು ಎತ್ತಿ ಹಿಡಿದ ಸುಪ್ರೀಂಕೋರ್ಟ್​

ಈ 246 ಮಂದಿಯ ಪೈಕಿ ರಗಡೆ ಎಂಬಾತ ಮೇ 12ರಂದು ಅಪರಾಧ ನಡೆಯುವ ನಾಲ್ಕು ದಿನ ಮುಂಚೆಯಷ್ಟೇ ಆನ್​ಲೈನ್​ನಿಂದ ಎರಡು ಚಾಕುಗಳನ್ನು ಖರೀದಿ ಮಾಡಿರುವುದನ್ನು ಪೊಲೀಸರು ಪತ್ತೆ ಹಚ್ಚುತ್ತಾರೆ. ಈತನನ್ನು ವಿಚಾರಣೆಗೊಳಪಡಿಸಿದಾಗ ಅಪರಾಧ ಅನಾವರಣಗೊಳ್ಳುತ್ತದೆ. ಚೇತನ್ ಗಾಯಕ್ವಾಡ್ ಮತ್ತು ಸಂದೀಪ್ ಗಾಯಕ್ವಾಡ್ ಎಂಬಿಬ್ಬರೂ ಈ ಕೃತ್ಯದಲ್ಲಿ ಶಾಮೀಲಾಗಿರುವುದು ತಿಳಿದುಬರುತ್ತದೆ. ಚೇತನ್ ಗಾಯಕವಾಡ್ ಈ ಕೃತ್ಯದ ಮಾಸ್ಟರ್ ಮೈಂಡ್ ಆಗಿರುತ್ತಾನೆ.ಈ ಖದೀಮರು ಅಪರಾಧಕ್ಕೆ ಬಳಸಿದ್ದ ಸೆಲ್​ಫೋನ್, ಮೋಟಾರ್ ಸೈಕಲ್ ಮತ್ತು 24 ಸಾವಿರ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ಧಾರೆ. ಪ್ರಕರಣವನ್ನು ಭೇದಿಸಿದ ಪೊಲೀಸ್ ತಂಡಕ್ಕೆ 30 ಸಾವಿರ ರೂ ನಗದು ಬಹುಮಾನ ಘೋಷಿಸಲಾಗಿದೆ. ಇದೇ ವೇಳೆ, ಪ್ರಕರಣದಲ್ಲಿ ವಿಚಾರಣೆ ಇನ್ನೂ ನಡೆಯುತ್ತಿದೆ.

(ಪಿಟಿಐ ವರದಿ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:December 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ