Afghanistan Crisis; 126 ಭಾರತೀಯರನ್ನು ಹೊತ್ತು ಕಾಬೂಲ್​ನಿಂದ ಭಾರತಕ್ಕೆ ಹೊರಟ ಕೊನೆಯ ಏರ್ ಇಂಡಿಯಾ ವಿಮಾನ!

ಸೆಪ್ಟೆಂಬರ್ 11 ದಾಳಿಯ ನಂತರ ಯುನೈಟೆಡ್ ಸ್ಟೇಟ್ಸ್ 20 ವರ್ಷಗಳ ಹಿಂದೆ ಕಾಬೂಲ್​ನಿಂದ ತಾಲಿಬಾನ್​ಗಳನ್ನು ಹೊರಹಾಕಲ್ಪಟ್ಟ ನಂತರ ಈಗ ಈ ಘಟನೆ ನಡೆದಿದೆ. ಇದೀಗ ಅಫ್ಘಾನಿಸ್ಥಾನ ಸಂಪೂರ್ಣವಾಗಿ ತಾಲಿಬಾನಿಗಳ ಹತೋಟಿಗೆ ಹೋಗಿದೆ.

ಏರ್​ ಇಂಡಿಯಾ

ಏರ್​ ಇಂಡಿಯಾ

 • Share this:
  ತಾಲಿಬಾನ್ ಬಂಡುಕೋರರು ಮಿಂಚಿನ ಕಾರ್ಯಾಚರಣೆ ನಡೆಸಿ ಆಫ್ಘಾನಿಸ್ಥಾನವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಹಾಲಿ ಅಧ್ಯಕ್ಷ ಅಶ್ರಫ್ ಘಾನಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ಆಫ್ಘಾನ್​ನಲ್ಲಿ ಆಂತರಿಕ ಬಿಕ್ಕಟ್ಟು ತಲೆದೋರಿದ್ದು, ಎಲ್ಲೆಡೆ ಭಯದ ವಾತಾವರಣ ನಿರ್ಮಾಣವಾಗಿದೆ. ಆಂತರಿಕ ಕಲಹದಿಂದ ಭಯಭೀತಿಗೊಂಡಿರುವ ಅಲ್ಲಿನ ಜನರು ಆ ದೇಶ ಬಿಟ್ಟು ಹೊರಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆ. ಕಾಬೂಲ್​ನಲ್ಲಿ ನೆಲೆಸಿರುವ ಭಾರತೀಯರನ್ನು ದೇಶಕ್ಕೆ ವಾಪಸ್ ಕರೆದು ತರಲಾಗುತ್ತಿದೆ. 126 ಭಾರತೀಯ ಪ್ರಯಾಣಿಕರನ್ನು ಹೊತ್ತ ಏರ್ ಇಂಡಿಯಾ ವಿಮಾನ ಕಾಬೂಲ್​ನಿಂದ ನಿರ್ಗಮಿಸಿದ್ದು, ಇಂದು ಮಧ್ಯರಾತ್ರಿ ನವದೆಹಲಿ ಬಂದು ತಲುಪುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ಕಾಬೂಲ್​ನಿಂದ ಉಳಿದ ಎಲ್ಲ ವಿಮಾನಗಳನ್ನು ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ. ಕಾಬೂಲ್ ವಾಯುಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆ ತೀವ್ರಗೊಂಡಿರುವುದರಿಂದ ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

  ಏತನ್ಮಧ್ಯೆ, ಕಾಬೂಲ್ ಸುತ್ತಮುತ್ತ ಹಾಗೂ ಕಾಬೂಲ್​ ಒಳಗೆ ತಾಲಿಬಾನ್ ಬಂಡುಕೋರರು ನುಗ್ಗಿರುವ ಕಾರಣ ಕಾಬೂಲ್​ನಲ್ಲಿ ಇರುವ ಭಾರತೀಯ ನಾಗರಿಕರು ಮತ್ತು ರಾಯಭಾರ ಸಿಬ್ಬಂದಿಯನ್ನು ಸುರಕ್ಷತವಾಗಿ ಅಲ್ಲಿಂದ ಕರೆ ತರಲು ಭಾರತ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಸರ್ಕಾರವು ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿ ಮತ್ತು ಕಾಬೂಲ್‌ನಲ್ಲಿರುವ ಭಾರತೀಯ ನಾಗರಿಕರ ಜೀವಕ್ಕೆ ಯಾವುದೇ ಅಪಾಯವನ್ನುಂಟು ಮಾಡುವುದಿಲ್ಲ ಮತ್ತು ತುರ್ತು ಸ್ಥಳಾಂತರದ ಅಗತ್ಯವಿದ್ದಲ್ಲಿ ಯೋಜನೆಗಳನ್ನು ಈಗಾಗಲೇ ಅಂತಿಮಗೊಳಿಸಲಾಗಿದೆ ಎಂದು ಹೇಳಿದೆ.

  ಅಫ್ಘಾನಿಸ್ತಾನದಲ್ಲಿನ ಕ್ಷಿಪ್ರ ಬೆಳವಣಿಗೆಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾವು ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಯ ಜೀವಕ್ಕೆ ಯಾವುದೇ ಅಪಾಯವನ್ನುಂಟು ಮಾಡಲು ಬಿಡುವುದಿಲ್ಲ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಬೂಲ್‌ನಲ್ಲಿ ಭಾರತೀಯ ಸಿಬ್ಬಂದಿ ಮತ್ತು ನಾಗರಿಕರನ್ನು ಯಾವಾಗ ಸ್ಥಳಾಂತರಿಸಲಾಗುವುದು ಎಂಬ ಪ್ರಶ್ನೆಗೆ ಇಲ್ಲಿನ ಪರಿಸ್ಥಿತಿ ಮೇಲೆ ಅದು ಅವಲಂಬಿತವಾಗಿದೆ ಎಂದು ಅವರು ಹೇಳಿದರು.


  ಇದನ್ನು ಓದಿ: Afghanistan Crisis; ಕಾಬೂಲ್ ಪ್ರವೇಶಿಸಿದ ತಾಲಿಬಾನಿಗಳು, ಅಧಿಕಾರದಿಂದ ಕೆಳಗಿಳಿದ ಅಶ್ರಫ್ ಘಾನಿ

  ತಾಲಿಬಾನ್ ಬಂಡುಕೋರರು ದೇಶವನ್ನು ಆಕ್ರಮಿಸಿಕೊಳ್ಳಬಹುದು ಎನ್ನುವ ಕಲ್ಪನೆ ಕೂಡ ಯಾರಿಗೂ ಇರಲಿಲ್ಲ. ತಾಲಿಬಾನ್ ಆಕ್ರಮಣಕಾರಿ ನಡೆಗೆ ಆತಂಕಗೊಂಡಿರುವ ಅಮೆರಿಕ, ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತನ್ನ ರಾಜತಾಂತ್ರಿಕ ಸಿಬ್ಬಂದಿ, ಅಧಿಕಾರಿ ವರ್ಗವನ್ನು ಸ್ಥಳಾಂತರಿಸುವ ಕಾರ್ಯದಲ್ಲಿ ನೆರವಾಗಲು ಹೆಚ್ಚಿನ ಸಂಖ್ಯೆಯಲ್ಲಿ ತನ್ನ ಸೇನಾಪಡೆಗಳನ್ನು ಕಳುಹಿಸಿತ್ತು. ಇದೀಗ ತಾಲಿಬಾನ್ ಬಂಡುಕೋರರು ಕಾಬೂಲ್​ ಪ್ರವೇಶಿಸುತ್ತಿದ್ದಂತೆ ಹೆಲಿಕಾಪ್ಟರ್ ಮೂಲಕ ತನ್ನ ರಾಯಭಾರಿ ಸಿಬ್ಬಂದಿಯನ್ನು ಸ್ಥಳಾಂತರ ಮಾಡಿದೆ. ಇನ್ನು 90 ದಿನಗಳಲ್ಲಿ ಕಾಬೂಲ್ ತಾಲಿಬಾನ್ ವಶವಾಗಲಿದೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಕಳೆದ ವಾರವಷ್ಟೇ ಭವಿಷ್ಯ ನುಡಿದಿತ್ತು. ಅದರಂತೆ ತಾಲಿಬಾನ್ ಉಗ್ರರು ಆಘ್ಘಾನಿಸ್ತಾನವನ್ನು ವಶಕ್ಕೆ ಪಡೆದಿದಿದ್ದಾರೆ.
  ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಅವರು, ಕಾಬೂಲ್​ಅನ್ನು ಶಾಂತಿಯುತವಾಗಿ ಒಪ್ಪಿಸುವ ಸಂಬಂಧ ಗುಂಪುಗಳ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ. "ತಾಲಿಬಾನ್ ಹೋರಾಟಗಾರರು ಶಾಂತಿಯುತ ಮತ್ತು ತೃಪ್ತಿದಾಯಕ ಅಧಿಕಾರದ ವರ್ಗಾವಣೆಯನ್ನು ಒಪ್ಪಿಕೊಳ್ಳುವವರೆಗೂ ಕಾಬೂಲ್‌ನ ಎಲ್ಲಾ ಪ್ರವೇಶದ್ವಾರಗಳಲ್ಲೂ ಸಿದ್ಧರಾಗಿರುತ್ತಾರೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ತಾಲಿಬಾನ್ ಉಗ್ರರು ಭಾನುವಾರ ಆಫ್ಘಾನಿಸ್ಥಾನ ರಾಜಧಾನಿ ಕಾಬೂಲ್​ ಪ್ರವೇಶಿಸಿದರು. ಆ ಬಳಿಕ ನಡೆದ ಹಲವು ಕ್ಷಿಪ್ರ ಬೆಳೆವಣಿಗೆಗಳಲ್ಲಿಅಧ್ಯಕ್ಷ ಅಶ್ರಫ್ ಘಾನಿ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸೆಪ್ಟೆಂಬರ್ 11 ದಾಳಿಯ ನಂತರ ಯುನೈಟೆಡ್ ಸ್ಟೇಟ್ಸ್ 20 ವರ್ಷಗಳ ಹಿಂದೆ ಕಾಬೂಲ್​ನಿಂದ ತಾಲಿಬಾನ್​ಗಳನ್ನು ಹೊರಹಾಕಲ್ಪಟ್ಟ ನಂತರ ಈಗ ಈ ಘಟನೆ ನಡೆದಿದೆ. ಇದೀಗ ಅಫ್ಘಾನಿಸ್ಥಾನ ಸಂಪೂರ್ಣವಾಗಿ ತಾಲಿಬಾನಿಗಳ ಹತೋಟಿಗೆ ಹೋಗಿದೆ.
  Published by:HR Ramesh
  First published: