ನವದೆಹಲಿ: ದೇಶದ ರಾಜಕಾರಣ ಅಪರಾಧಿಗಳಿಂದ ತುಂಬಿರುವುದು ವಿಷಾಧಕರ ಸಂಗತಿ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ, “ಎಲ್ಲಾ ರಾಜಕೀಯ ಪಕ್ಷಗಳೂ ಕ್ರಿಮಿನಲ್ ಪೂರ್ವಾಪರ ಹೊಂದಿರುವ ತಮ್ಮ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪಕ್ಷದ ವೆಬ್ಸೈಟಿನಲ್ಲಿ ಕಡ್ಡಾಯವಾಗಿ ಹಾಕಬೇಕು” ಎಂದು ಖಡಕ್ ಸೂಚನೆ ನೀಡಿದೆ.
ರಾಜಕಾರಣವನ್ನು ಅಪರಾಧೀಕರಿಸುತ್ತಿರುವ ವಿಚಾರದ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡು ರಾಜಕೀಯ ಪಕ್ಷಗಳಿಗೆ ಚಾಟಿ ಬೀಸಿರುವ ಸುಪ್ರೀಂ ಕೋರ್ಟ್, “ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಯಾಗಿ ಕ್ರಿಮಿನಲ್ ಹಿನ್ನೆಲೆ ಇಲ್ಲದ ವ್ಯಕ್ತಿಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲವೇಕೆ? ಓರ್ವ ವ್ಯಕ್ತಿಯ ಯಕಶ್ಚಿತ್ ಗೆಲುವು ಆತನ ಕ್ರಿಮಿನಲ್ ಹಿನ್ನೆಲೆಯನ್ನು ಸಮರ್ಥಿಸಲು ಸಾಧ್ಯವಿಲ್ಲ.
ಹೀಗಾಗಿ ಅಭ್ಯರ್ಥಿ ಚುನಾವಣೆಯಲ್ಲಿ ಆಯ್ಕೆಯಾದ 48 ಗಂಟೆಯ ಒಳಗಾಗಿ ಅಥವಾ ನಾಮಪತ್ರ ಸಲ್ಲಿಸುವ ಮೊದಲೇ ಆತನ ಸಂಪೂರ್ಣ ಕ್ರಿಮಿನಲ್ ಹಿನ್ನೆಲೆ ಹಾಗೂ ಆತನಿಗೆ ಪಕ್ಷ ಟಿಕೆಟ್ ನೀಡಲು ಕಾರಣವೇನು? ಎಂಬ ವಿಚಾರಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ ಹಾಗೂ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಅಲ್ಲದೆ, ಅದನ್ನು ಪಕ್ಷದ ಅಧಿಕೃತ ವೆಬ್ಸೈಟಿನಲ್ಲೂ ದಾಖಲಿಸಬೇಕು” ಎಂದು ತಾಕೀತು ಮಾಡಿದೆ.
ರಾಜಕಾರಣದಲ್ಲಿ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗಳ ಭಾಗವಹಿಸುವಿಕೆಯ ಕುರಿತು ಸೆಪ್ಟೆಂಬರ್ 2018ರಲ್ಲೇ ಕಳವಳ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್ ಪಂಚ ಸದಸ್ಯ ಪೀಠ, “ಚುನಾವಣೆಗೆ ಸ್ಪರ್ಧಿಸುವ ಎಲ್ಲಾ ಅಭ್ಯರ್ಥಿಗಳೂ ಸ್ಫರ್ಧೆಗೂ ಮುನ್ನವೇ ತಮ್ಮ ಕ್ರಿಮಿನಲ್ ಪೂರ್ವಾಪರಗಳನ್ನು ಚುನಾವಣಾ ಆಯೋಗಕ್ಕೆ ನೀಡಬೇಕು” ಎಂದು ಸೂಚಿಸಿತ್ತು.
"ರಾಜಕೀಯಲ್ಲಿ ಕಲುಷಿತ ಪ್ರವಾಹ ಹೆಚ್ಚಾಗಿದ್ದು, ಇದನ್ನು ಶುದ್ಧೀಕರಿಸುವ ಅಗತ್ಯವಿದೆ. ಹೀಗಾಗಿ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿರುವ ವ್ಯಕ್ತಿಗಳನ್ನು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸದಂತೆ ತಡೆಯಬೇಕು. ಇದಕ್ಕೆ ಪೂರಕವಾದ ಕಾನೂನುಗಳನ್ನು ರೂಪಿಸಿ ಕ್ರಿಮಿನಲ್ಗಳನ್ನು ರಾಜಕೀಯ ಪ್ರವೇಶಿಸದಂತೆ ತಡೆಯುವುದು, ರಾಜಕೀಯವನ್ನು ಅಪರಾಧೀಕರಿಸುವ ಮಾರಕತೆಯನ್ನು ಗುಣಪಡಿಸುವುದು ಸಂಸತ್ತಿಗೆ ಬಿಟ್ಟ ವಿಚಾರ" ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಇಂದು ನೀಡಿರುವ ತೀರ್ಪು ಮಹತ್ವದ್ದೆನಿಸಿಕೊಂಡಿದೆ. ಅಲ್ಲದೆ, ಸಂಸತ್ನಲ್ಲಿ ಶೇ.43ರಷ್ಟು ಜನ ಸಂಸದರು ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ ಎಂದು ಕೋರ್ಟ್ ವಿಷಾಧ ವ್ಯಕ್ತಪಡಿಸಿದೆ.
ಇದನ್ನೂ ಓದಿ : ಎಸ್ಸಿ-ಎಸ್ಟಿ ಮೀಸಲಾತಿ: ಸುಪ್ರೀಂ ತೀರ್ಪು ವಿರೋಧಿಸಿ ಫೆ. 23ಕ್ಕೆ ಭಾರತ್ ಬಂದ್ಗೆ ಆಜಾದ್ ಕರೆ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ