ನವ ದೆಹಲಿ (ಮಾರ್ಚ್ 01); ಹಿಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಅತ್ಯಾಚಾರ ಪ್ರಕರಣಗಳು ಸಂಭವಿಸಿದರೆ, ಪಂಚಾಯ್ತಿ ಕಟ್ಟೆಗಳಲ್ಲಿ ಕುಳಿತು ವಿಚಾರಣೆ ನಡೆಸಿ ಅತ್ಯಾಚಾರ ಆರೋಪಿಗೆ ಆ ಹುಡುಗಿಯನ್ನು ಮದುವೆ ಮಾಡಿಕೊಡುವುದು ವಾಡಿಕೆ. ಹಳೆಯ ವಿಷ್ಣುವರ್ಧನ್ ಸಿನಿಮಾಗಳಲ್ಲೂ ಸಹ ಇಂತಹ ದೃಶ್ಯಗಳನ್ನು ನೀವು ನೋಡಿರುತ್ತೀರಿ. ಆದರೆ, ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ, ಕೋರ್ಟ್ ವ್ಯವಸ್ಥೆಗೆ ವಿಶೇಷ ಸ್ಥಾನಮಾನ ನೀಡುವ ಈ ದೇಶದಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಪಂಚಾಯ್ತಿ ಕಟ್ಟೆಗಳಂತೆ ತೀರ್ಪು ನೀಡಿದರೆ ಹೇಗಿರ ಬೇಡ. ಇಂಯಹ ಪ್ರಸಂಗವನ್ನು ಊಹಿಸುವುದೂ ಕಷ್ಟ. ಆದರೆ, ಇಂತಹದ್ದೊಂದು ಅಪರೂಪದ ಘಟನೆಗೆ ಇಂದು ಸುಪ್ರೀಂ ಕೋರ್ಟ್ ಸಾಕ್ಷಿಯಾಗಿದೆ.
ಅತ್ಯಾಚಾರದ ಆರೋಪದ ಮೇಲೆ ಬಂಧಿತನಾಗಿದ್ದ ವ್ಯಕ್ತಿಯೊಬ್ಬ ಬಂಧನದಿಂದ ತಪ್ಪಿಸಿಕೊಳ್ಳಲು ರಕ್ಷಣೆ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ. ಆದರೆ, ಜಾಮೀನು ಅರ್ಜಿಯ ವಿಚಾರಣೆ ವೇಳೆ ಸರ್ಕಾರಿ ನೌಕರನನ್ನು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, "ಅತ್ಯಾಚಾರದ ಆರೋಪ ಹೊರಿಸಿರುವ ಮಹಿಳೆಯನ್ನು ಮದುವೆಯಾಗಲು ಸಾಧ್ಯವೇ?" ಎಂದು ಕೇಳುವ ಮೂಲಕ ಇಡೀ ದೇಶ ಅಚ್ಚರಿಗೆ ಒಳಗಾಗುವಂತೆ ಮಾಡಿದೆ.
ಮಹಾರಾಷ್ಟ್ರ ರಾಜ್ಯ ವಿದ್ಯುತ್ ಉತ್ಪಾದನಾ ಕಂಪನಿಯಲ್ಲಿ ತಂತ್ರಜ್ಞನಾಗಿ ಕಾರ್ಯನಿರ್ವಹಿಸುತ್ತಿರುವ ಮೋಹಿತ್ ಸುಭಾಷ್ ಚೌವಾಣ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಇಂತಹ ಪ್ರಶ್ನೆ ಕೇಳಿದೆ. ಮೋಹಿತ್ ಸುಭಾಷ್ ಚೌವಾಣ್ ವಿರುದ್ಧ ಶಾಲಾ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪವಿದ್ದು, ಆತನ ಮೇಲೆ ಫೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾನೂನಿನ ಅಡಿಯಲ್ಲಿ ದೂರು ದಾಖಲಾಗಿದೆ.
ಈ ಸಂಬಂಧ ಇಂದು ವಿಚಾರಣೆ ವೇಳೆ ಮಾತನಾಡಿರುವ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ, "ನೀವು ಬಾಲಕಿಯನ್ನು ಮದುವೆಯಾಗಲು ಬಯಸಿದರೆ, ನಾವು ನಿಮಗೆ ಸಹಾಯ ಮಾಡಬಹುದು. ಇಲ್ಲದಿದ್ದರೆ, ನೀವು ನಿಮ್ಮ ಕೆಲಸವನ್ನು ಕಳೆದುಕೊಂಡು ಜೈಲಿಗೆ ಹೋಗುತ್ತೀರಿ. ನೀವು ಹುಡುಗಿಯನ್ನು ಮೋಹಿಸಿದ್ದೀರಿ, ಅವಳ ಮೇಲೆ ಅತ್ಯಾಚಾರ ಮಾಡಿದ್ದೀರಿ" ಎಂದು ಆರೋಪಿಯ ಎದುರು ವಿಭಿನ್ನ ಆಯ್ಕೆಯನ್ನಿಟ್ಟಿದ್ದಾರೆ.
ಅತ್ಯಾಚಾರದ ದೂರು ದಾಖಲಿಸಲು ಬಾಲಕಿ ಪೊಲೀಸ್ ಠಾಣೆಗೆ ಹೋದಾಗಲೂ ಸಹ ಆರೋಪಿಯ ತಾಯಿ ಮದುವೆಯ ಪ್ರಸ್ತಾಪ ಇಟ್ಟಿದ್ದರು. ಆಗ ಆಕೆ ನಿರಾಕರಿಸಿದ್ದಳು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ನಂತರ ಠಾಣೆಯಲ್ಲಿ, ಬಾಲಕಿಗೆ 18 ವರ್ಷ ತುಂಬಿದ ನಂತರ ಮದುವೆ ನಡೆಯುತ್ತದೆ ಎಂದು ಒಂದು ದಾಖಲೆಯನ್ನು ರಚಿಸಲಾಗಿತ್ತು. ಈಗ ಅತ್ಯಾಚಾರ ನಡೆಸಿದ್ದ ವ್ಯಕ್ತಿ ಆಕೆಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ಅತ್ಯಾಚಾರ ದೂರು ದಾಖಲಾಗಿದೆ ಎಂದು ಆರೋಪಿ ಚೌವಾಣ್ ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಲಾದ ಪ್ರಶ್ನೆಯೊಂದರ ಪ್ರಕಾರ, ಮುಖ್ಯ ನ್ಯಾಯಾಧೀಶರು ಆರೋಪಿಗೆ "ನೀವು ಆಕೆಯನ್ನು ಮದುವೆಯಾಗುತ್ತೀರಾ?" ಎಂದು ಪ್ರಶ್ನಿಸಿದ್ದಾರೆ. ಜೊತೆಗೆ "ಬಾಲಕಿ ಮೇಲೆ ದೌರ್ಜನ್ಯ ನಡೆಸುವ ಮತ್ತು ಅತ್ಯಾಚಾರ ಮಾಡುವ ಮೊದಲು ನೀವು ಸರ್ಕಾರಿ ನೌಕರ ಎಂಬುದು ನಿಮಗೆ ತಿಳಿದಿರಬೇಕಿತ್ತು" ಎಂದಿದ್ದಾರೆ.
ಮುಂದುವರೆದು, "ನಾವು ನಿಮ್ಮನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿಲ್ಲ. ನೀವು ಮದುವೆಯಾಗಲು ಬಯಸಿದರೆ ನಮಗೆ ತಿಳಿಸಿ. ಇಲ್ಲದಿದ್ದರೆ ಆಕೆಯನ್ನು ಮದುವೆಯಾಗುವಂತೆ ನಾವು ಒತ್ತಾಯಿಸುತ್ತಿದ್ದೇವೆ ಎಂದು ನೀವು ಹೇಳುತ್ತೀರಿ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿ ಪರ ವಕೀಲರು ಅರ್ಜಿದಾರರೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದರು.
ನಂತರ ಅರ್ಜಿದಾರ ಸುಪ್ರೀಂ ಕೋರ್ಟ್ ನ್ಯಾಯಾದೀಶರ ಮುಂದೆ "ಆರಂಭದಲ್ಲಿ ನಾನು ಅವಳನ್ನು ಮದುವೆಯಾಗಲು ಬಯಸಿದ್ದೆ, ಆದರೆ ಆಕೆ ನಿರಾಕರಿಸಿದಳು, ನಾನು ಈಗಾಗಲೇ ಮದುವೆಯಾಗಿರುವುದರಿಂದ ಈಗ ನನಗೆ ಮದುವೆಯಾಗಲು ಸಾಧ್ಯವಿಲ್ಲ" ಎಂದಿದ್ದಾರೆ. ಜೊತೆಗೆ ವಿಚಾರಣೆ ಇನ್ನು ನಡೆಯುತ್ತಿದೆ ಮತ್ತು ಆರೋಪ ಪಟ್ಟಿಯನ್ನು ಇನ್ನೂ ರೂಪಿಸಲಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಕೋವಿಡ್ ಲಸಿಕೆಯ ಅಗತ್ಯ ನನಗಿಲ್ಲ; ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೀಗೆ ಹೇಳಿದ್ದು ಏಕೆ ಗೊತ್ತಾ?
"ನಾನು ಸರ್ಕಾರಿ ನೌಕರ, ನನ್ನನ್ನು ಬಂಧಿಸಿದರೆ ನನ್ನನ್ನು ಕೆಲಸದಿಂದ ಅಮಾನತುಗೊಳಿಸಲಾಗುವುದು ಎಂದು ನ್ಯಾಯಾಲಯಕ್ಕೆ ಆರೋಪಿ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಮುಖ್ಯ ನ್ಯಾಯಮೂರ್ತಿ ಬೊಬ್ಡೆ, "ಅದಕ್ಕಾಗಿಯೇ ನಾವು ನಿಮಗೆ ಈ ಯೋಜನೆ ನೀಡಿದ್ದೇವೆ. ನಾವು ನಾಲ್ಕು ವಾರಗಳ ಕಾಲ ಬಂಧನವನ್ನು ತಡೆ ಹಿಡಿಯುತ್ತೇವೆ. ನಂತರ ನೀವು ನಿಯಮಿತ ಜಾಮೀನುಗಾಗಿ ಅರ್ಜಿ ಸಲ್ಲಿಸಿ" ಎಂದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ