ಇಲ್ಲಿಯವರೆಗೆ ಸೀಟು ಹಂಚಿಕೆ ಕುರಿತು ಎಐಎಡಿಎಂಕೆ ಮತ್ತು ಡಿಎಂಡಿಕೆ ನಡುವೆ ನಡೆದ ಎರಡು ಸುತ್ತಿನ ಮಾತುಕತೆ ವಿಫಲವಾಗಿದೆ. ಡಿಎಂಡಿಕೆ ಕನಿಷ್ಠ 23 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರೆ, ಎಐಎಡಿಎಂಕೆ 10-12 ಸ್ಥಾನಗಳನ್ನು ನೀಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ.
ಚೆನ್ನೈ (ಮಾರ್ಚ್ 02); ತಮಿಳುನಾಡು ವಿಧಾನಸಭೆ ಚುನಾವಣೆಗೆ ಈಗಾಗಲೇ ದಿನಾಂಕ ನಿಗದಿಯಾಗಿದ್ದು, ಚುನಾವಣಾ ಪ್ರಚಾರದ ಕಣ ದಿನದಿಂದ ದಿನಕ್ಕೆ ರಂಗೇರುತ್ತಲೇ ಇದೆ. ಸೋಲು ಗೆಲುವಿನ ಲೆಕ್ಕಾಚಾರಗಳೂ ಆರಂಭವಾಗಿದ್ದು, ಎಲ್ಲಾ ಪ್ರಮುಖ ಪಕ್ಷಗಳ ನಡುವೆ ಮೈತ್ರಿ ಮಾತುಕತೆಯೂ ನಡೆಯುತ್ತಿದೆ. ಈ ನಡುವೆ ತಮಿಳುನಾಡಿನಲ್ಲಿ ಈವರೆಗೆ ಎಐಎಡಿಎಂಕೆ ಜೊತೆಗೆ ಎನ್ಡಿಎ ಮೈತ್ರಿಕೂಟದಲ್ಲಿ ಕಾಣಿಸಿಕೊಂಡಿದ್ದ ಡಿಎಂಡಿಕೆ ಪಕ್ಷ ದಿಢೀರೆಂದು ಮೈತ್ರಿಯಿಂದ ಹೊರ ನಡೆದಿದ್ದು, ಇದೀಗ ತಮಿಳುನಾಡು ರಾಜಕೀಯದಲ್ಲಿ ಪ್ರಮುಖ ತಿರುವಾಗಿ ಪರಿಗಣಿಸಲ್ಪಟ್ಟಿದೆ. ಎಐಎಡಿಎಂಕೆ ಮತ್ತು ಡಿಎಂಡಿಕೆ ಪಕ್ಷಗಳ ನಡುವೆ ಸೀಟು ಹಂಚಿಕೆಯಲ್ಲಿ ಮನಸ್ತಾಪ ಉಂಟಾಗಿದ್ದು, ನಟ ಮತ್ತು ಡಿಎಂಡಿಕೆ ಪಕ್ಷದ ಮುಖ್ಯಸ್ಥ ವಿಜಯಕಾಂತ್ ತಾವು ಈ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ವಿಜಯಕಾಂತ್ ಅವರೇ ತಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಪಕ್ಷವೂ ಸ್ಪಷ್ಟಪಡಿಸಿದೆ.
ಡಿಎಂಡಿಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ವಿಜಯಕಾಂತ್ ಅವರ ಸೋದರ ಮಾವ ಎಲ್.ಕೆ.ಸುದೀಶ್ ಸೋಮವಾರ ಈ ಕುರಿತು ಟ್ವೀಟ್ ಮಾಡಿದ್ದು, "ವಿಜಯಕಾಂತ್ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ, ನಮ್ಮ ಚಿಹ್ನೆ ಢಮರುಗ, ಡಿಎಂಡಿಕೆ ಪಕ್ಷದ ಧ್ವಜವೇ ನಮ್ಮ ಧ್ವಜವಾಗಿದ್ದು, ಅದರಡಿಯಲ್ಲಿಯೇ ಚುನಾವಣೆಯನ್ನು ಎದುರಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.
ಡಿಎಂಡಿಕೆ ಎನ್ಡಿಎ ಮೈತ್ರಿಯ ಭಾಗವಾಗಿದ್ದು, ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಒಪ್ಪಿಕೊಂಡಿತ್ತು. ಆದರೆ ಸೀಟು ಹಂಚಿಕೆಯಲ್ಲಿ ಮನಸ್ತಾಪ ಉಂಟಾದ ಕಾರಣ ಡಿಎಂಡಿಕೆ ಇದೀಗ ಮೈತ್ರಿಯಿಂದ ಹೊರನಡೆದಿದೆ. ಆದರೂ ಈ ಕುರಿತು ಪಕ್ಷದ ಉನ್ನತ ನಾಯಕರು ಇಂದು ಸಂಜೆಯ ವೇಳೆಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
ಇಲ್ಲಿಯವರೆಗೆ ಸೀಟು ಹಂಚಿಕೆ ಕುರಿತು ಎಐಎಡಿಎಂಕೆ ಮತ್ತು ಡಿಎಂಡಿಕೆ ನಡುವೆ ನಡೆದ ಎರಡು ಸುತ್ತಿನ ಮಾತುಕತೆ ವಿಫಲವಾಗಿದೆ. ಡಿಎಂಡಿಕೆ ಕನಿಷ್ಠ 23 ಸ್ಥಾನಗಳಲ್ಲಿ ಸ್ಪರ್ಧಿಸಲು ಬಯಸಿದ್ದರೆ, ಎಐಎಡಿಎಂಕೆ 10-12 ಸ್ಥಾನಗಳನ್ನು ನೀಡಲು ಸಿದ್ಧವಾಗಿದೆ ಎಂದು ಮೂಲಗಳು ತಿಳಿಸಿವೆ. ಎಐಎಡಿಎಂಕೆ ಬಿಜೆಪಿ ಮತ್ತು ಪಿಎಂಕೆ ಸೇರಿದಂತೆ ಇತರ ಮಿತ್ರರಾಷ್ಟ್ರಗಳಿಗೆ ಹೆಚ್ಚಿನ ಸ್ಥಾನಗಳನ್ನು ನೀಡುತ್ತಿದೆ ಎಂದು ಡಿಎಂಡಿಕೆ ಮೂಲಗಳು ತಿಳಿಸಿವೆ ಮತ್ತು ಅವರೂ ಸಹ 20 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವುದು ನ್ಯಾಯಸಮ್ಮತ ಎಂದು ವಾದಿಸಿದೆ.
2011 ರಲ್ಲಿ ಡಿಎಂಡಿಕೆ ಪಕ್ಷವು ಚುನಾವಣೆಯಲ್ಲಿ ಉತ್ತಮ ಫಲಿತಾಂಶವನ್ನು ಕಂಡಿತ್ತು. ಏಕಾಂಗಿಯಾಗಿ ಸ್ಪರ್ಧಿಸಿ 30ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಈ ವೇಳೆ ವಿಜಯಕಾಂತ್ ಅವರನ್ನು ಕಿಂಗ್ ಮೇಕರ್ ಆಗಿ ನೋಡಲಾಯಿತು. ಆದರೆ, ಆದರೆ, 2016 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಡಿಎಂಡಿಕೆ ಸ್ಪರ್ಧಿಸಿದ್ದ ಎಲ್ಲಾ 103 ಸ್ಥಾನಗಳಲ್ಲಿ ಸೋಲನುಭವಿಸಿತ್ತು. ಸ್ವತಃ ಸಿಎಂ ಅಭ್ಯರ್ಥಿ ವಿಜಯಕಾಂತ್ ಕೂಡ ತಮ್ಮ ಠೇವಣಿ ಕಳೆದುಕೊಂಡಿದ್ದರು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ