ರಾಜಸ್ಥಾನದಲ್ಲಿ ಕಾಂಗ್ರೆಸ್‌ ಉಳಿಸಲು ಶ್ರಮಿಸಿದರೇ ವಸುಂಧರಾ ರಾಜೇ?; ಕೊನೆಗೂ ಮೌನ ಮುರಿದ ಮಾಜಿ ಸಿಎಂ

ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಮೂರು ದಶಕಗಳಿಂದ ಪಕ್ಷದ ಸಿದ್ಧಾಂತಕ್ಕೆ ಕಟ್ಟುಬಿದ್ದು ಜನ ಸೇವೆ ಮಾಡುತ್ತಿದ್ದೇನೆ. ನಮಗೆ ಪಕ್ಷವೇ ಮೊದಲು ಎಂದು ಹೇಳುವ ಮೂಲಕ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ ಟೀಕಾಕಾರರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ.

ವಸುಂಧರಾ ರಾಜೇ

ವಸುಂಧರಾ ರಾಜೇ

  • Share this:
ಜೈಪುರ; ರಾಜಸ್ಥಾನ ರಾಜಕೀಯ ಬಿಕ್ಕಟ್ಟು ಮತ್ತು ಮಿತ್ರ ಪಕ್ಷಗಳು ತಮ್ಮ ಮೇಲೆ ಮಾಡಿರುವ ಟೀಕೆಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೇ, “ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಮೂರು ದಶಕಗಳಿಂದ ಜನರಿಗೆ ಸೇವೆ ಸಲ್ಲಿಸುತ್ತಿದ್ದೇನೆ. ನಾನು ಎಂದಿಗೂ ಪಕ್ಷ ಮತ್ತು ಸಿದ್ಧಾಂತದ ಜೊತೆಗೆ ನಿಲ್ಲುತ್ತೇನೆ. ಆದರೆ, ಕೆಲವರು ಭ್ರಮೆಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಟ್ವೀಟ್ ಮೂಲಕ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಕಳೆದ ಒಂದು ವಾರದಿಂದ ರಾಜಸ್ಥಾನದ ರಾಜಕೀಯ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಒಂದು ಹಂತದಲ್ಲಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ತಮ್ಮ ಬೆಂಬಲಿತ ಶಾಸಕರ ಜೊತೆ ದೆಹಲಿಗೆ ತೆರಳಿ ಬಿಜೆಪಿ ನಾಯಕರ ಜೊತೆಗೆ ಸರ್ಕಾರ ಬೀಳಿಸುವ ಕುರಿತು ಚರ್ಚೆ ನಡೆಸಿದ್ದರು. ಇನ್ನೇನು ಅಶೋಕ್ ಗೆಹ್ಲೋಟ್ ಸರ್ಕಾರ ಕುಸಿಯಲಿದ ಎನ್ನುವಷ್ಟರಲ್ಲಿ ಕಾಂಗ್ರೆಸ್ ಜೈಪುರದಲ್ಲಿ ಶಾಸಕರ ಸಭೆ ಕರೆದು ತಮಗೆ 102 ಶಾಸಕರ ಬೆಂಬಲ ಇದೆ ಎಂದು ತೋರಿಸಿಕೊಳ್ಳುವ ಮೂಲಕ ಸರ್ಕಾರವನ್ನು ಉಳಿಸಿಕೊಂಡಿತ್ತು.

ಆದರೆ, ರಾಜ್ಯ ರಾಜಕಾರಣದಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳು ನಡೆಯುತ್ತಿರುವ ಇದೇ ವೇಳೆಯಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಮೌನಕ್ಕೆ ಜಾರಿದ್ದು, ಯಾವುದೇ ರಾಜಕೀಯ ತಂತ್ರ ಹೆಣೆಯಲು ಮುಂದಾಗದೆ ಇದ್ದದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತ್ತು.ಇದರ ಬೆನ್ನಿಗೆ ವಸುಂಧರಾ ರಾಜೇ ವಿರುದ್ಧ ಸರಣಿ ಆರೋಪ ಮಾಡಿದ್ದ ಬಿಜೆಪಿ ಮಿತ್ರಪಕ್ಷವಾದ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೆನಿವಾಲ್ ಅವರು “ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ತಮ್ಮ ಹತ್ತಿರದ ಕಾಂಗ್ರೆಸ್ ಶಾಸಕರನ್ನು ಕರೆದು ಅಶೋಕ್ ಗೆಹ್ಲೋಟ್ ಅವರನ್ನು ಬೆಂಬಲಿಸುವಂತೆ ಕೇಳಿಕೊಂಡಿದ್ದಾರೆ. ಅವರು ಸಿಕಾರ್ ಮತ್ತು ನಾಗೌರ್ ಜಿಲ್ಲೆಗೆ ಸೇರಿದ ಪ್ರತಿಯೊಬ್ಬ ಜಾಟ್ ಸಮುದಾಯದ ಶಾಸಕರನ್ನು ಕರೆದು ಸಚಿನ್ ಪೈಲಟ್ ನಿಂದ ದೂರವಿರುವಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ನನ್ನ ಬಳಿ ಪುರಾವೆಗಳಿವೆ” ಎಂದು ಆರೋಪಿಸಿದ್ದರು.

ಈ ಎಲ್ಲಾ ಆರೋಪಗಳಿಗೆ ಕೊನೆಗೂ ಮೌನ ಮುರಿದಿರುವ ವಸುಂಧರಾ ರಾಜೇ, “ನಾನು ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆ. ಮೂರು ದಶಕಗಳಿಂದ ಪಕ್ಷದ ಸಿದ್ಧಾಂತಕ್ಕೆ ಕಟ್ಟುಬಿದ್ದು ಜನ ಸೇವೆ ಮಾಡುತ್ತಿದ್ದೇನೆ. ನಮಗೆ ಪಕ್ಷವೇ ಮೊದಲು” ಎಂದು ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ : ವಸುಂಧರಾ ರಾಜೇ ಸ್ವತಃ ಮುಂದೆ ನಿಂತು ರಾಜಸ್ಥಾನದ ಕಾಂಗ್ರೆಸ್‌ ಸರ್ಕಾರವನ್ನು ಉಳಿಸಿದರೇ?; ಬಿಜೆಪಿ ಮಿತ್ರಪಕ್ಷಗಳ ಆರೋಪ

ಅಲ್ಲದೆ, “ ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧವೂ ಕಿಡಿಕಾರಿರುವ ಅವರು, “COVID-19 ರಾಜ್ಯದಲ್ಲಿ 500 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಪ್ರಕರಣಗಳ ಸಂಖ್ಯೆ 28,000 ಕ್ಕಿಂತಲೂ ಹೆಚ್ಚಿದೆ. ಮಿಡತೆಗಳು ರೈತರ ಹೊಲಗಳ ಮೇಲೆ ದಾಳಿ ಮಾಡುತ್ತಿವೆ, ಮಹಿಳೆಯರ ಮೇಲಿನ ಅಪರಾಧಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ, ರಾಜ್ಯದಾದ್ಯಂತ ವಿದ್ಯುತ್ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಹೀಗಾಗಿ ಆಡಳಿತ ಸರ್ಕಾರ ಜನರ ಬಗ್ಗೆ ಯೋಚಿಸಿ” ಎಂದು ಟ್ವೀಟ್ ಮೂಲಕ ಸಲಹೆ ನೀಡಿದ್ದಾರೆ.
Published by:MAshok Kumar
First published: