ನವ ದೆಹಲಿ (ಜುಲೈ 17); ರಾಜಸ್ಥಾನ ಕಾಂಗ್ರೆಸ್ ಸಭೆ ಕರೆದು ಈ ಸಭೆಯಲ್ಲಿ ಹಿರಿಯ ನಾಯಕರ ಜೊತೆಗೆ ಮಾತನಾಡಿ, ತಮ್ಮ ತಕರಾರುಗಳನ್ನು ಮುಂದಿಟ್ಟು ಸಮಸ್ಯೆಯನ್ನು ಬಗೆಹರಿಸಿಕೊಳ್ಳಿ ಎಂದು ರಾಜಸ್ಥಾನದ ಮಾಜಿ ಡಿಸಿಎಂ ಸಚಿನ್ ಪೈಲಟ್ ಅವರಿಗೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಕಿವಿಮಾತು ಹೇಳಿದ್ದಾರೆ ಎನ್ನಲಾಗುತ್ತಿದೆ.
ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಈಗಾಗಲೇ ಸಚಿನ್ ಪೈಲಟ್ ಅವರನ್ನು ರಾಜಸ್ಥಾನದ ಡಿಸಿಎಂ ಹಾಗೂ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಅಲ್ಲದೆ, ಪೈಲಟ್ ಮತ್ತು ಅವರ 18 ಬೆಂಬಲಿಗ ಶಾಸಕರನ್ನು ಶಾಸಕತ್ವ ಸ್ಥಾನದಿಂದ ಏಕೆ ವಜಾ ಮಾಡಬಾರದು? ಎಂದು ಪ್ರಶ್ನಿಸಿ ಸ್ಪೀಕರ್ ಸಚಿನ್ ಪೈಲಟ್ಗೆ ನೊಟೀಸ್ ನೀಡಿದ್ದಾರೆ. ಈ ನೊಟೀಸ್ ವಿರುದ್ಧ ಪೈಲಟ್ ಹೈಕೋರ್ಟ್ ಮೆಟ್ಟಿಲೇರಿದ್ದು ಇಂದು ಮಧ್ಯಾಹ್ನ ಈ ಅರ್ಜಿಯ ವಿಚಾರಣೆ ನಡೆಯಲಿದೆ.
ಈ ಹಿನ್ನೆಲೆಯಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಗುರುವಾರ ಸಂಜೆ ಸಚಿನ್ ಪೈಲಟ್ ಅವರಿಗೆ ಕರೆ ಮಾಡಿ ಮಾತನಾಡಿರುವುದಾಗಿ ಸ್ವತಃ ಖಚಿತಪಡಿಸಿದ್ದಾರೆ. ಈ ವೇಳೆ, “ಪಕ್ಷದಲ್ಲಿ ಮನಸ್ಥಾಪಗಳು ಸಹಜ. ಆದರೆ, ಏನೇ ತಕರಾರಿದ್ದರು ಹಿರಿಯ ಮುಖಂಡರ ಸಭೆ ಕರೆದು ಸಮಸ್ಯೆಯನ್ನು ಮಾತನಾಡಿ ಬಗೆಹರಿಸಿಕೊಳ್ಳಬೇಕು. ಈಗಲೂ ಕಾಂಗ್ರೆಸ್ ಬಾಗಿಲು ತಮಗಾಗಿ ತೆರೆದಿದೆ” ಎಂದು ಪೈಲಟ್ಗೆ ಕಿವಿಮಾತು ಹೇಳಿದ್ದಾಗಿ ಪಿ. ಚಿದಂಬರಂ ತಿಳಿಸಿದ್ದಾರೆ.
ರಾಜಸ್ಥಾನದಲ್ಲಿ ಆಡಳಿತರೂಢ ಸರ್ಕಾರದ ವಿರುದ್ಧ ಸಚಿನ್ ಪೈಲಟ್ ರಾಜಕೀಯ ಬಂಡಾಯ ಆರಂಭಿಸಿ ಒಂದು ವಾರದ ಮೇಲಾಗಿದೆ. ಈ ಅವಧಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ನ ಹಲವಾರು ಹಿರಿಯ ನಾಯಕರು ಪೈಲಟ್ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ. ಆದರೆ, ಯಾರ ಸಂಪರ್ಕಕ್ಕೂ ಈವರೆಗೆ ಸಿಗದ ಪೈಲಟ್ ಪಿ. ಚಿದಂಬರಂ ಅವರ ಜೊತೆಗೆ ಮಾತನಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಪಿ. ಚಿದಂಬರಂ ಕರೆ ಮಾಡಿ ಮಾತನಾಡಿರುವ ಬೆನ್ನಿಗೆ ಪ್ರಿಯಾಂಕಾ ಗಾಂಧಿ, ಅಭಿಷೇಕ್ ಮನು ಸಿಂಗ್ವಿ ಸಹ ಸಚಿನ್ ಪೈಲಟ್ ಅವರೊಂದಿಗೆ ಮಾತನಾಡಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ತಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ಎಂದು ಮತ್ತೆ ಸಚಿನ್ ಪೈಲಟ್ ಒತ್ತಿಹೇಳಿದ್ದಾರೆ. ಅಲ್ಲದೆ, ಸಚಿನ್ ಪೈಲಟ್ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಹೀಗಾಗಿ ಅವರನ್ನು ಪಕ್ಷದಿಂದ ಕಳುಹಿಸಲು ರಾಹುಲ್ ಗಾಂಧಿಗೂ ಇಷ್ಟವಿಲ್ಲ ಎನ್ನಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ