ಭಾರತದ ಜೊತೆ ತಾಲಿಬಾನ್ ಸಂಬಂಧ ಹೇಗಿರುತ್ತೆ? ಇಲ್ಲಿದೆ Exclusive ಸಂದರ್ಶನದ ಮಾಹಿತಿ

ಅಫ್ಘನ್ ಜನತೆಗೆ ನೀವು ಏನು ಕೊಡುತ್ತೀರೋ ಅದಕ್ಕೆ ತಕ್ಕ ಪ್ರತಿಫಲ ನಿಮಗೆ ಸಿಗುತ್ತದೆ ಎಂದು ಭಾರತ ಸೇರಿದಂತೆ ವಿವಿಧ ದೇಶಗಳಿಗೆ ತಾಲಿಬಾನ್ ಸ್ಪಷ್ಟ ಸಂದೇಶ ರವಾನಿಸಿದೆ. ನ್ಯೂಸ್18 ಜೊತೆ Exclusive ಸಂದರ್ಶನದಲ್ಲಿ ತಾಲಿಬಾನ್ ವಕ್ತಾರ ಹೇಳಿದ್ದಿದು…

ತಾಲಿಬಾನ್ ಸಂಘಟನೆಯವರು

ತಾಲಿಬಾನ್ ಸಂಘಟನೆಯವರು

  • News18
  • Last Updated :
  • Share this:
ಅಫ್ಘಾನಿಸ್ತಾನದ ಅಶ್ರಫ್ ಘನಿ ನೇತೃತ್ವದ ಸರ್ಕಾರವನ್ನು ಕಿತ್ತೊಗೆದ ತಾಲಿಬಾನ್ ಹೊಸ ಸರ್ಕಾರ ರಚಿಸುವ ಹೊಸ್ತಿಲಲ್ಲಿದೆ. ಅಮೆರಿಕ ಸೇನೆ ಕಾಲ್ತೆಗೆದ ಕೆಲವೇ ದಿನಗಳಲ್ಲಿ ತಾಲಿಬಾನ್ ಬಹುತೇಕ ಅಫ್ಘಾನಿಸ್ತಾವನ್ನು ವಶಪಡಿಸಿಕೊಂಡಿದೆ. ಕೆಲವೇ ದಿನಗಳಲ್ಲಿ ಸರ್ಕಾರದ ರೂಪುರೇಖೆ ಅಂತಿಮಗೊಂಡು ಹೊಸ ಸರ್ಕಾರದ ಘೋಷಣೆ ಆಗುವ ಸಾಧ್ಯತೆ ಇದೆ. ದಿನಗಳೆದಂತೆ ತಾಲಿಬಾನಿಗಳು ತಮ್ಮ ಬಿಗಿಹಿಡಿತ ಹೆಚ್ಚಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಸಮುದಾಯದ ಜೊತೆ ಸಂಬಂಧ ಬೆಳೆಸುವ ಪ್ರಯತ್ನ ಮಾಡುತ್ತಿದೆ. ಇದೇ ವೇಳೆ, ಸಂದಿಗ್ಧ ಸ್ಥಿತಿಯಲ್ಲಿರುವ ಭಾರತದ ಜೊತೆ ಸಂಬಂಧ ಹೇಗಿರಬೇಕೆಂದು ತಾಲಿಬಾನ್ ಒಂದು ಸ್ಪಷ್ಟತೆಯಲ್ಲಿದ್ದಂತಿದೆ. ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಅಭಿವೃದ್ಧಿ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡಿದೆ. ರಸ್ತೆ, ಅಣೆಕಟ್ಟು ಇತ್ಯಾದಿ ಮೂಲಸೌಕರ್ಯ ಯೋಜನೆಗಳನ್ನ ಭಾರತ ರೂಪಿಸಿ ಪ್ರಶಂಸೆಗೆ ಪಾತ್ರವಾಗಿದೆ. ಆದರೆ ಸಾವಿರಾರು ಕೋಟಿ ರೂ ಬಂಡವಾಳದೊಂದಿಗೆ ನಡೆಯುತ್ತಿರುವ ಈ ಚಟುವಟಿಕೆ ಈಗ ತಾಲಿಬಾನ್ ಆಗಮನದೊಂದಿಗೆ ಅನಿಶ್ಚಿತ ಸ್ಥಿತಿಗೆ ಬಂದಿದೆ.

ಅಲ್ಲದೇ ಭಾರತದೊಂದಿಗೆ ಅಫ್ಘಾನಿಸ್ತಾನ ಸಂಬಂಧ ಕಡಿದುಕೊಂಡು ಚೀನಾ ಮತ್ತು ಪಾಕಿಸ್ತಾನದೊಂದಿಗೆ ಆಪ್ತತೆ ಬೆಳೆಸಿಕೊಂಡರೆ ಮುಂದಿನ ಸ್ಥಿತಿ ಏನು ಎಂಬ ಚಿಂತೆ ಭಾರತದ ನೇತಾರರದ್ದಾಗಿದೆ. ಭಾರತದ ಜೊತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ಬಯಕೆ ತಾಲಿಬಾನ್​ಗೆ ಇಲ್ಲವಾ? ಇಂಥ ಹಲವು ಪ್ರಶ್ನೆಗಳು ಸಹಜವಾಗಿಯೇ ಏಳುತ್ತದೆ. ಈ ಬಗ್ಗೆ ಮಾತನಾಡಿರುವ ತಾಲಿಬಾನ್ ಸಂಘಟನೆಯ ವಕ್ತಾರ ಸುಹೇಲ್ ಶಾಹೀನ್ ತಮ್ಮ ನಿಲುವುಗಳನ್ನ ಸ್ಪಷ್ಟಗೊಳಿಸಿದ್ದಾರೆ. ಭಾರತದ ಜೊತೆ ತಾಲಿಬಾನ್​ಗೆ ಇರುವ ಪ್ರಮುಖ ಆಕ್ಷೇಪ ಏನು ಎಂಬುದನ್ನೂ ಅವರು ಬಹಿರಂಗಪಡಿಸಿದ್ದಾರೆ.

ಅಮೆರಿಕದ ಕೈಗೊಂಬೆಯಾಗಿದ್ದ ಅಫ್ಘಾನಿಸ್ತಾನದ ಹಿಂದಿನ ಸರ್ಕಾರಕ್ಕೆ ಭಾರತ ಬೆಂಬಲ ನೀಡಿದ್ದನ್ನು ನಾವು ವಿರೋಧಿಸುತ್ತೇವೆ. ಕಳೆದ 20 ವರ್ಷಗಳಲ್ಲಿ ಭಾರತ ಸೇರಿದಂತೆ ವಿವಿಧ ದೇಶಗಳು ಅಫ್ಘಾನಿಸ್ತಾನದ ಜನರ ಒತ್ತಾಸೆ ಪರವಾಗಿ ನಿಲ್ಲಬೇಕೆಂದು ನಿರೀಕ್ಷಿಸಿದ್ದೆವು. ದೇಶದ ಸ್ವಾತಂತ್ರ್ಯ ಬಯಸುವ ಅಫ್ಘನ್ನರ ಭಾವನೆಯನ್ನು ಈ ದೇಶಗಳು ಗೌರವಿಸಬೇಕಿತ್ತು. ಕೈಗೊಂಬೆಯ ಸರ್ಕಾರವನ್ನು ಬೆಂಬಲಿಸುವ ಬದಲು ಅಫ್ಘನ್ ಜನರಿಗೆ ಬೆಂಬಲ ನೀಡಬೇಕಿತ್ತು ಎಂದು ತಾಲಿಬಾನ್ ವಕ್ತಾರರು ಹೇಳಿದ್ಧಾರೆ.

ಇದನ್ನೂ ಓದಿ: Afghanistan Crisis: ಅಫ್ಘಾನಿಸ್ತಾನದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆ, ಇಂದು ಸರ್ವಪಕ್ಷಗಳ ಸಭೆ ಕರೆದ ಕೇಂದ್ರ

ಇನ್ನು, ಅಫ್ಘನಿಸ್ತಾನದಲ್ಲಿ ಭಾರತ ನಡೆಸುತ್ತಿರುವ ಅಭಿವೃದ್ಧಿ ಯೋಜನೆಗಳ ಭವಿಷ್ಯದ ಬಗ್ಗೆ ಮಾತನಾಡಿದ ಸುಹೇಲ್ ಶಹೀನ್, ಅಫ್ಘಾನಿಸ್ತಾನದ ಜನರ ಒಳಿತಾಗುವ ಒಳ್ಳೆಯ ಯೋಜನೆಗಳು ಇನ್ನೂ ಅಪೂರ್ಣವಾಗಿದ್ದ ಭಾರತ ಅವನ್ನು ಪೂರ್ಣಗೊಳಿಸಬಹುದು ಎಂದು ಸ್ಪಷ್ಟಪಡಿಸಿದ್ದಾರೆ.

ಭಾರತೀಯರನ್ನು ತಾಲಿಬಾನ್ ಅಪಹರಣ ಮಾಡಿದ ಘಟನೆಯ ಸತ್ಯಾಸತ್ಯತೆಯನ್ನು ತಾಲಿಬಾನ್ ವಕ್ತಾರ ಇದೇ ವೇಳೆ ತಳ್ಳಿಹಾಕಿದ್ದಾರೆ. ಕಿಡ್ನಾಪ್ ಪದ ಬಳಕೆಯನ್ನು ನಾನು ಆಕ್ಷೇಪಿಸುತ್ತೇನೆ. ಆಫ್ಘಾನಿಸ್ತಾನದಲ್ಲಿರುವ ವಿವಿಧ ದೇಶಗಳ ರಾಯಭಾರ ಕಚೇರಿ ಹಾಗೂ ರಾಜತಾಂತ್ರಿಕ ಕಚೇರಿಗಳ ಕಾರ್ಯನಿರ್ವಹಣೆಗೆ ನಾವು ಸರಿಯಾದ ವ್ಯವಸ್ಥೆ ಮಾಡುತ್ತೇವೆ ಎಂದು ಮೊದಲೇ ಹೇಳಿದ್ದೇವೆ. ಈ ಕಚೇರಿಗಳಲ್ಲಿ ಸರಿಯಾದ ದಾಖಲೆಗಳು ಇಲ್ಲವೆಂಬ ಕಾರಣಕ್ಕೆ ಕೆಲ ಗಂಟೆಗಳ ಕಾಲ ಅವರನ್ನ ತಡೆದಿದ್ದೆವು. ನಾವು ಏನು ಭರವಸೆ ನೀಡಿದ್ದೆವೋ ಅದಕ್ಕೆ ಬದ್ಧರಾಗಿದ್ಧೇವೆ. ಆದರೆ, ದೇಶದ ಒಳಗೆ ಮತ್ತು ಹೊರಗೆ ನಮ್ಮ ವಿರುದ್ಧ ಅಪಪ್ರಚಾರ ಮಾಡುವ ಸಂಚು ನಡೆಯುತ್ತಿದೆ. ಇಂಥ ವರದಿಗಳನ್ನ ನೀವು ಸರಿಯಾಗಿ ಪರಿಶೀಲಿಸಿದರೆ ಸತ್ಯಾಸತ್ಯತೆ ಗೊತ್ತಾಗುತ್ತದೆ ಎಂದು ಸುಹೇಲ್ ಶಾಹೀನ್ ತಿಳಿಸಿದ್ದಾರೆ.

1996ರಲ್ಲಿ ತಾಲಿಬಾನ್ ಆಡಳಿತ ಇದ್ದಾಗ ಅನೇಕ ಬಾಲಿವುಡ್ ಸಿನಿಮಾಗಳ ಚಿತ್ರೀಕರಣ ನಡೆದಿತ್ತು. ಅಮಿತಾಭ್ ಬಚ್ಚನ್ ಅಭಿನಯದ ಖುದಾ ಗವಾ ಸಿನಿಮಾ ತಂಡದ ಸುರಕ್ಷತೆಗಾಗಿ ತಾಲಿಬಾನ್ ಭಾರೀ ಭದ್ರತೆ ಒದಗಿಸಿತ್ತು. ಈಗಲೂ ತಾಲಿಬಾನ್ ಭಾರತೀಯರ ಜೊತೆ ಅಂಥ ಸಂಬಂಧ ತೋರುತ್ತದೆಯೇ? ಈ ಬಗ್ಗೆ ಮಾತನಾಡಿದ ತಾಲಿಬಾನ್ ವಕ್ತಾರರು, ಅಫ್ಘಾನಿಸ್ತಾನದ ಜನರಿಗೆ ನೀವು ಏನು ಕೊಡುತ್ತೀರೋ ಅದು ವಾಪಸ್ ಸಿಗುತ್ತದೆ ಎಂದು ಹೇಳಿದ್ಧಾರೆ. ಅಫ್ಘಾನಿಸ್ತಾನದ ವಿಚಾರದಲ್ಲಿ ಭಾರತದ ಕ್ರಿಯೆ ಮತ್ತು ನೀತಿ ಏನು ಎಂಬುದರ ಮೇಲೆ ಸ್ಪಂದನೆ ಅವಲಂಬಿತವಾಗಿರುತ್ತದೆ. ನೀವು ಜನರಿಗೆ ಒಳಿತು ಮಾಡುವ ಉದ್ದೇಶ ಇದ್ದರೆ ನಿಮಗೂ ಒಳಿತಾಗುತ್ತದೆ. ಜನರು ನಿಮಗೆ ಸ್ಪಂದಿಸುತ್ತಾರೆ. ಅಫ್ಘಾನಿಸ್ತಾನದ ಜನರಿಗೆ ಉಪಯೋಗವಾಗುವ ಅಣೆಕಟ್ಟು ಇತ್ಯಾದಿ ಯೋಜನೆಗಳನ್ನ ಭಾರತ ಮಾಡುವುದಿದ್ದರೆ ಅದನ್ನು ಜನರು ಸ್ವಾಗತಿಸುತ್ತಾರೆ ಎಂದವರು ಅಭಿಪ್ರಾಯಪಟ್ಟಿದ್ಧಾರೆ.
Published by:Vijayasarthy SN
First published: