Lakhimpur Kheri Massacre: ಉಪ್ರ. ಚುನಾವಣೆಯ ಮೇಲೆ ಪರಿಣಾಮ ಬೀರಲಿದೆಯೇ ಲಖೀಂಪುರ್​ ರೈತ ಹತ್ಯಾಕಾಂಡ; ಬಿಜೆಪಿಯಲ್ಲಿ ತಳಮಳ

ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಹಿರಿಯ ನಾಯಕರ ಸಭೆಯಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಅಲ್ಲದೆ, ಲಖೀಂಪುರ್ ಖೇರಿ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ರಾಜೀನಾಮೆಯನ್ನು ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

ಲಖೀಂಪುರ್​ಖೇರಿ ಹಿಂಸಾಚಾರ.

ಲಖೀಂಪುರ್​ಖೇರಿ ಹಿಂಸಾಚಾರ.

 • Share this:
  ನವ ದೆಹಲಿ (ಅಕ್ಟೋಬರ್​ 12); "ಉತ್ತರಪ್ರದೇಶವನ್ನು (UttaraPradesh) ಗೆದ್ದವರು ಇಡೀ ದೇಶವನ್ನೇ ಗೆದ್ದಂತೆ" ಎಂಬ ನಾಡ್ನುಡಿ ರಾಜಕೀಯ ವಲಯದಲ್ಲಿ ಯಾವಾಗಲೂ ಚಾಲ್ತಿಯಲ್ಲಿರುವ ಅಂಶ. ರಾಜ್ಯದ ಅತ್ಯಂತ ದೊಡ್ಡ ರಾಜ್ಯವಾದ ಉತ್ತರಪ್ರದೇಶ ನಿಜಕ್ಕೂ ಈ ದೇಶದ ಪ್ರಧಾನಿ ಯಾರಾಗಬೇಕು? ಎಂಬುದನ್ನು ನಿರ್ಧರಿಸುತ್ತದೆ. ಇದೇ ಕಾರಣಕ್ಕೆ ಕಳೆದ 70 ವರ್ಷಗಳಿಂದ ಎಲ್ಲಾ ಪ್ರಧಾನಿ ಅಭ್ಯರ್ಥಿಗಳು ಉತ್ತರಪ್ರದೇಶದ ಯಾವುದಾದರೊಂದು ಕ್ಷೇತ್ರದಲ್ಲಿ ಸ್ಪರ್ಧಿಸುವುದು ವಾಡಿಕೆಯಾಗಿದೆ. ಇದೇ ಕಾರಣಕ್ಕೆ ಇಲ್ಲಿನ ಗೆಲುವಿನ ಮೇಲೆ ಎಲ್ಲಾ ಪಕ್ಷಗಳೂ ಕಣ್ಣಿಟ್ಟಿರುತ್ತವೆ. ಈ ರಾಜ್ಯದಲ್ಲಿ ಕಳೆದ ಎರಡೂ ಚುನಾವಣೆಯಲ್ಲಿ ಬಿಜೆಪಿ ಅಭುತಪೂರ್ವ ಗೆಲುವು ದಾಖಲಿಸಿದ್ದ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ (Narendra Modi) ಕೇಂದ್ರದಲ್ಲಿ ಬಹುಮತದ ಸರ್ಕಾರವನ್ನು ರಚಿಸಲು ಸಾಧ್ಯವಾಗಿತ್ತು. ಆದರೆ, ಇದೀಗ ಉತ್ತರಪ್ರದೇಶದ ಲಖೀಂಪುರ್​ ಖೇರಿ (Lakhimpur Kheri Massacre) ರೈತ ಹತ್ಯಾಕಾಂಡ ಬಿಜೆಪಿ ಸರ್ಕಾರಕ್ಕೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಈ ಬೆಳವಣಿಗೆ ಚುನಾವಣೆ (UttaraPradesh Assembly Election) ಮೇಲೆ ಪರಿಣಾಮ ಬೀರಲಿದೆಯೇ? ಎಂದು ಬಿಜೆಪಿ ಚಿಂತಿಸುತ್ತಿದೆ. ಅಲ್ಲದೆ, ಈ ಬಗ್ಗೆ ಚರ್ಚಿಸಲು ದೆಹಲಿಯ ಕಚೇರಿಯಲ್ಲಿ 4 ಗಂಟೆಗಳ ಸಭೆಯನ್ನು ಏರ್ಪಡಿಸಿದೆ ಎಂದು ತಿಳಿದುಬಂದಿದೆ.

  ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯಲಿರುವ ಹಿರಿಯ ನಾಯಕರ ಸಭೆಯಲ್ಲಿ ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ. ಈ ಸಭೆಯಲ್ಲಿ ಅಕ್ಟೋಬರ್​ 03 ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಮಗ ಆಶೀಶ್​ ಮಿಶ್ರಾ ರೈತ ಮೇಲೆ ಕಾರು ಹತ್ತಿಸಿ ನಾಲ್ಕು ಜನರ ಸಾವಿಗೆ ಕಾರಣನಾಗಿದ್ದ ಮತ್ತು ಈ ಮೂಲಕ ಹಿಂಸಾಚಾರಕ್ಕೆ ನಾಂದಿ ಹಾಡಿದ್ದ ವಿಚಾರವನ್ನು ಉಲ್ಲೇಖಿಸಿ ಅಜಯ್ ಮಿಶ್ರಾ ಅವರ ರಾಜೀನಾಮೆಗೂ ಆಗ್ರಹಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

  ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಕಿರಿಯ ಗೃಹ ಸಚಿವ ಅಜಯ್ ಮಿಶ್ರಾ ವಿರುದ್ಧ ಈಗಾಗಲೇ ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ವಿರೋಧ ಕೇಳಿ ಬರುತ್ತಿದೆ. ಅವರ ರಾಜೀನಾಮೆಗೆ ರಾಷ್ಟ್ರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಆದರೆ, ಕೇಂದ್ರ ಸರ್ಕಾರ ಈವರೆಗೆ ಅವರಿಂದ ರಾಜೀನಾಮೆ ಪಡೆದಿಲ್ಲ. ಸದ್ಯಕ್ಕೆ ಅಜಯ್ ಮಿಶ್ರಾ ರಾಜೀನಾಮೆ ನೀಡುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

  ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗಿನ ಸಭೆಯಲ್ಲಿ, ಅಜಯ್ ಮಿಶ್ರಾ ಅವರು ತಮ್ಮ ಮಗ ಘಟನಾ ಸ್ಥಳದಲ್ಲಿ ಇರಲಿಲ್ಲ ಎಂದು ಹೇಳಿದ್ದರು. ಅಗತ್ಯವಿದ್ದಲ್ಲಿ ಅದಕ್ಕೆ ಸಾಕ್ಷಿಯನ್ನೂ ನೀಡುವುದಾಗಿ ತಿಳಿಸಿದ್ದರು. ಇದೀಗ ಪ್ರಮುಖ ಆರೋಪಿ ಅಜಯ್ ಮಿಶ್ರಾ ಪೊಲೀಸ್​ ಕಸ್ಟಡಿಯಲ್ಲಿದ್ದು, ಬಿಜೆಪಿ ನಾಯಕರು ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

  ಬಿಜೆಪಿ ಪಕ್ಷದ ಉನ್ನತ ಮೂಲಗಳ ಪಕ್ಷದ ಸಭೆಯಲ್ಲಿ ಹಿರಿಯ ನಾಯಕರು ಅಜಯ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಉತ್ತರಪ್ರದೇಶ ಉಸ್ತುವಾರಿ ರಾಧಾ ಮೋಹನ್ ಸಿಂಗ್, ಚುನಾವಣಾ ಉಸ್ತುವಾರಿ ಧರ್ಮೇಂದ್ರ ಪ್ರಧಾನ್, ಉತ್ತರಪ್ರದೇಶ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್, ರಾಜ್ಯ ಬಿಜೆಪಿಯ ಸಂಘಟನಾ ಕಾರ್ಯದರ್ಶಿ ಸುನಿಲ್ ಬನ್ಸಾಲ್ ಮತ್ತು ಪಕ್ಷದ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸಭೆಯಲ್ಲಿರಲಿದ್ದು, ಇವರೆಲ್ಲರೂ ರಾಜೀನಾಮೆಗೆ ಗಂಟು ಬೀಳಲಿದ್ದಾರೆ ಎನ್ನಲಾಗಿದೆ.

  ಆದರೆ, ಅಜಯ್​ ಮಿಶ್ರಾ ಉತ್ತರಪ್ರದೇಶದ ಪ್ರಮುಖ ಬ್ರಾಹ್ಮಣ ಸಮುದಾಯಕ್ಕೆ ಸೇರಿದವರು. ಉತ್ತರಪ್ರದೇಶದಲ್ಲಿ ಶೇ.11 ರಷ್ಟು ಬ್ರಾಹ್ಮಣರಿದ್ದಾರೆ. ಸಂಖ್ಯಾತ್ಮಕವಾಗಿ ಬ್ರಾಹ್ಮಣರ ಸಂಖ್ಯೆ ಕಡಿಮೆ ಇದ್ದರೂ ಸಹ ಉತ್ತರಪ್ರದೇಶದ ಚುನಾವಣೆಯಲ್ಲಿ ಇವರ ಮತಗಳು ನಿರ್ಣಾಯಕ. ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ಕ್ಷೇತ್ರಗಳಲ್ಲಿ ದಲಿತ ಮತಬ್ಯಾಂಕ್ ಉತ್ತುಂಗಕ್ಕೇರಿದಾಗ, ಬ್ರಾಹ್ಮಣರು ಮತ್ತು ರಜಪೂತರ ಮತಗಳು ಯೋಗಿ ಆದಿತ್ಯನಾಥ್ ಪಾಲಿಗೆ ವರದಾನವಾಗಿತ್ತು.

  ಕಳೆದ ಹಲವು ದಿನಗಳಿಂದ ಉತ್ತರಪ್ರದೇಶದಲ್ಲಿ ಎರಡನೇ ಅವಧಿಗೂ ಯೋಗಿ ಆದಿತ್ಯನಾಥ್ ಅವರೇ ಮುಖ್ಯಮಂತ್ರಿಯಾಗಬೇಕು, ಅವರನ್ನು ಬೆಂಬಲಿಸಿ ಎಂಬ ಪ್ರಚಾರಗಳು ನಡೆಯುತ್ತಲೇ ಇವೆ. ಬಿಜೆಪಿ ಹಲವು ಸಮುದಾಯಗಳ ಒಲವನ್ನು ಮರಳಿ ಪಡೆಯುವ ಯತ್ನದಲ್ಲಿದ್ದಾರೆ. ಈ ನಡುವೆ ಲಖೀಂಪುರ್​ ಖೇರಿ ಹತ್ಯಾಕಾಂಡ ಉತ್ತರಪ್ರದೇಶ ಸರ್ಕಾರಕ್ಕೆ ಕಪ್ಪು ಚುಕ್ಕೆಯಾಗಿದೆ.

  ಇದನ್ನೂ ಓದಿ: Lakhimpur Kheri Violence- ಕೇಂದ್ರ ಸಚಿವರ ಮಗ ಆಶಿಶ್ 3 ದಿನ ಪೊಲೀಸ್ ಕಸ್ಟಡಿಗೆ

  ಆದರೆ, ಈ ಹತ್ಯಾಕಾಂಡದ ಪ್ರಮುಖ ರುವಾರಿಯಾದ ಸಚಿವ ಸಜಯ್ ಮಿಶ್ರಾ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ತರೈ ಭಾಗದಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದಾರೆ. ಈಗಾಗಲೇ ಇವರ ರಾಜೀನಾಮೆ ಪಡೆಯದೆ ಇರುವುದು ವ್ಯಾಪಕ ಆಕ್ರೋಶಕ್ಕೂ ಕಾರಣವಾಗಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ನಾಯಕರ ಸಭೆಯಲ್ಲಿ ಈ ಬಗ್ಗೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ? ಎಂಬುದು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.
  Published by:MAshok Kumar
  First published: