ಭಾರತದಲ್ಲಿ ಸಾಮಾಜಿಕ ಮಾಧ್ಯಮವನ್ನು (Social Media) ನಿಯಂತ್ರಿಸುವ ಕಾನೂನುಗಳು ಸಾಕಷ್ಟು ಕಟ್ಟುನಿಟ್ಟಾಗಿದ್ದು ಕಂಪನಿಯು ಅವುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಟ್ವಿಟರ್ ಮಾಲೀಕರು ಹಾಗೂ ಶತಕೋಟ್ಯಾಧಿಪತಿ ಎಲೋನ್ ಮಸ್ಕ್ ಹೇಳಿಕೆ ನೀಡಿದ್ದಾರೆ. ಐಟಿ ನಿಯಮಗಳಿಗೆ ಇತ್ತೀಚಿನ ತಿದ್ದುಪಡಿಯ ಬಗ್ಗೆ ಭಾರತ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿರುವ ಹಾಸ್ಯನಟ ಕುನಾಲ್ ಕಮ್ರಾ, ಇದು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ ಎಂಬ ಹೇಳಿಕೆ ನೀಡಿದ್ದರು. 2002ರ ಗುಜರಾತ್ ಗಲಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ (PM Modhi) ಪಾತ್ರದ ಕುರಿತು ಬ್ರಿಟಿಷ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (BBC) ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದ ವಿಷಯವನ್ನು ನಿರ್ಬಂಧಿಸುವ ಪ್ರಶ್ನೆಗೆ ಪ್ರತಿಕ್ರಿಯಿಸುವಾಗ ಮಸ್ಕ್ ಪ್ರತಿಕ್ರಿಯೆ ನೀಡಿದ್ದಾರೆ.
ಆ ಸನ್ನಿವೇಶದ ನಿಖರವಾದ ಚಿತ್ರಣ ನನಗೆ ತಿಳಿದಿಲ್ಲ ಹಾಗೂ ಆ ಪರಿಸ್ಥಿತಿಯಲ್ಲಿ ನಿಖರವಾಗಿ ಏನಾಯಿತು ಎಂಬುದರ ಬಗ್ಗೆ ಜ್ಞಾನವೂ ನನಗಿಲ್ಲ ಎಂದು ತಿಳಿಸಿರುವ ಮಸ್ಕ್, ಭಾರತದಲ್ಲಿ ಸಾಮಾಜಿಕ ಮಾಧ್ಯಮದ ನಿಯಮಗಳು ಸಾಕಷ್ಟು ಕಟ್ಟುನಿಟ್ಟಾಗಿವೆ ಮತ್ತು ನಾವು ದೇಶದ ಕಾನೂನುಗಳನ್ನು ಮೀರಿ ಹೋಗಲು ಸಾಧ್ಯವಿಲ್ಲ ಎಂದು ಮಸ್ಕ್ ಪತ್ರಕರ್ತರೊಂದಿಗಿನ ಟ್ವಿಟರ್ ಸ್ಪೇಸ್ ಸಂವಾದದಲ್ಲಿ ತಿಳಿಸಿದ್ದಾರೆ.
ಕಾನೂನಿನ ಅನುಸರಿಸವುದು ಮುಖ್ಯ
ನಮ್ಮ ಜನರು ಜೈಲಿಗೆ ಹೋಗಬೇಕೇ ಅಥವಾ ಕಾನೂನು ಕ್ರಮಗಳನ್ನು ಅನುಸರಿಸಬೇಕೇ ಎಂಬ ಆಯ್ಕೆ ನಮ್ಮ ಮುಂದಿದ್ದರೆ, ನಾವು ಕಾನೂನಿನ ಅನುಸರಣೆ ಮಾಡಬೇಕಾಗುತ್ತದೆ ಎಂದು ಮಸ್ಕ್ ತಿಳಿಸಿದ್ದಾರೆ. ವಾಕ್‌ಸ್ವಾತಂತ್ರ್ಯದ ಬಗ್ಗೆ ಮಸ್ಕ್ ತಮ್ಮ ನಿಲುವಿನ ಇಂಗಿತ ವ್ಯಕ್ತಪಡಿಸಿರುವುದು ಇದು ಎರಡನೆಯ ಬಾರಿಯಾಗಿದೆ.
ಟ್ವಿಟರ್ ಕಾರ್ಯನಿರ್ವಹಿಸುವ ದೇಶಗಳ ಕಾನೂನಿಗೆ ಸಂಸ್ಥೆಯು ಒಳಪಟ್ಟಿರಬೇಕು ಎಂಬ ತತ್ವಕ್ಕೆ ಮಸ್ಕ್ ಬದ್ಧವಾಗಿದ್ದು, ತಾನು ಸ್ವಾತಂತ್ರ್ಯದ ಪ್ರತಿಪಾದಕ ಎಂದು ಉಲ್ಲೇಖಿಸಿದ್ದಾರೆ.
ಭಾರತದಲ್ಲಿನ ಪ್ರಮುಖ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತದ ಮಾಹಿತಿ ತಂತ್ರಜ್ಞಾನ ನಿಯಮಗಳು 2021, ರ ನೀತಿಗಳನ್ನು ಅನುಸರಿಸಬೇಕು. ಈ ನಿಟ್ಟಿನಲ್ಲಿ ಮಧ್ಯವರ್ತಿಗಳು ಹೆಚ್ಚು ಶ್ರಮಿಸಬೇಕು.
ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 7,000 ಕೋವಿಡ್ ಪ್ರಕರಣ ದಾಖಲು; XBB 1.16 ರೂಪಾಂತರ ಮಟ್ಟ ಹಾಕಲು ರಾಜ್ಯಗಳು ಹೇಗೆ ತಯಾರಿ ನಡೆಸಿವೆ?
ಒಂದು ವೇಳೆ ನಿಯಮ ಮೀರಿ ಬಳಕೆದಾರರು ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡಿದ ಯಾವುದೇ ಹಾನಿಕಾರಕ ವಿಷಯಕ್ಕೆ ಹೊಣೆಗಾರರಾಗಿರುವುದರಿಂದ ಅವರ ಸುರಕ್ಷತೆಗೆ ಹಾನಿಯಾಗಬಹುದು. ಅಲ್ಲದೇ ಇದು ಕಂಪನಿಗಳ ವಿರುದ್ಧ ಕಾನೂನು ಕ್ರಮ ಮತ್ತು ವ್ಯಪಾರ ನಷ್ಟಕ್ಕೆ ಕಾರಣವಾಗಬಹುದು.
ಸೇಫ್ ಹಾರ್ಬರ್ ಪ್ರೊಟೆಕ್ಷನ್ ನಿಬಂಧನೆ
ಸೇಫ್ ಹಾರ್ಬರ್ ಪ್ರೊಟೆಕ್ಷನ್ ನಿಬಂಧನೆಯು ಇಂಟರ್ನೆಟ್ ಪ್ಲಾಟ್ಫಾರ್ಮ್ಗಳಿಗೆ ಒದಗಿಸಲಾದ ಕಾನೂನು ರಕ್ಷಣೆಯಾಗಿದೆ. ಇದು ಬಳಕೆದಾರರು ತಮ್ಮ ಪ್ಲಾಟ್ಫಾರ್ಮ್ಗಳಲ್ಲಿ ಪೋಸ್ಟ್ ಮಾಡಿದ ವಿಷಯಕ್ಕೆ ಕಾನೂನು ಹೊಣೆಗಾರಿಕೆಯಿಂದ ಪ್ರತಿರಕ್ಷಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಬಳಕೆದಾರರ ಎಲ್ಲಾ ಪೋಸ್ಟ್ಗಳನ್ನು ಇಂಟರ್ನೆಟ್ ಪ್ಲಾಟ್ಫಾರ್ಮ್ಗಳು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನುವುದನ್ನು ಈ ನಿಬಂಧನೆ ಒಪ್ಪುತ್ತದೆ. ಜೊತೆಗೆ ಬಳಕೆದಾರರಿಗೆ ಕಾನೂನು ವಿನಾಯಿತಿ ಒದಗಿಸುತ್ತದೆ.
ಇದನ್ನೂ ಓದಿ: ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ರೈಲ್ವೇ ಇಲಾಖೆ! ವಂದೇ ಮೆಟ್ರೋ ಆರಂಭದ ಬಗ್ಗೆ ರೈಲ್ವೆ ಸಚಿವರಿಂದ ಮಹತ್ವದ ಮಾಹಿತಿ
ಐಟಿ ನಿಯಮಗಳ ಪ್ರಕಾರ ಕಂಪನಿಗಳು ಕುಂದುಕೊರತೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿಬೇಕು. ಇಲ್ಲವಾದರೆ ಅಪರಾಧವಾಗಿ ಜೈಲು ಶಿಕ್ಷೆಗೆ ಕಾರಣವಾಗಬಹುದು.
ಕಾಂಗ್ರೆಸ್ ಟೂಲ್ ಕಿಟ್ ಹಗರಣ
ಕಾಂಗ್ರೆಸ್ ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ 2021 ರಲ್ಲಿ ದೆಹಲಿ ಪೊಲೀಸರು ನೋಟೀಸ್ ನೀಡಲು ದೆಹಲಿ ಮತ್ತು ಗುರ್ಗ್ರಾಂನ ಟ್ಟಿಟರ್ ಆಫೀಸ್ ಗೆ ಭೇಟಿ ನೀಡಿದ್ದರು. ಮೇ 2021 ರಲ್ಲಿ ಜಾರಿಗೆ ಬಂದ ಹೊಸ ಐಟಿ ನಿಯಮಗಳನ್ನು ಅನುಸರಿಸದಿದ್ದಕ್ಕಾಗಿ ಟ್ವಿಟರ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಇನ್ನೂ ಸರ್ಕಾರವು ಕಳೆದ ವಾರ ಐಟಿ ನಿಯಮಗಳನ್ನು ತಿದ್ದುಪಡಿ ಮಾಡಿ ಸರ್ಕಾರಕ್ಕೆ ಸಂಬಂಧಿಸಿದ ಅಗತ್ಯದ ಇಲ್ಲವೇ ದಾರಿ ತಪ್ಪಿಸುವ ವಿಷಯವನ್ನು ಗುರುತಿಸಲು ಕೇಂದ್ರ ನೇಮಿಸಿದ ಸಂಸ್ಥೆಯನ್ನು ಕಡ್ಡಾಯ ಮಾಡಿದೆ.
ಈ ನಿಟ್ಟಿನಲ್ಲಿ ಸಾಮಾಜಿಕ ಮಾಧ್ಯಮ ಆ ರೀತಿಯ ಸೂಚನೆಗಳನ್ನು ಅನುಸರಿಸುವುದು ಉತ್ತಮ. ಇಲ್ಲವಾದ್ರೆ ಸೇಫ್ ಹಾರ್ಬರ್ ಪ್ರೊಟೆಕ್ಷನ್ ಕಳೆದುಕೊಳ್ಳುವ ಸಂಭವವಿದೆ. ಇದು ಕೆಲವು ಡಿಜಿಟಲ್ ಮಾಧ್ಯಮದ ಕೆಂಗಣ್ಣಿಗೆ ಕಾರಣವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ