ದೆಹಲಿ ವಾಯುಮಾಲಿನ್ಯ ತಡೆಯಲು ಹೊಸ ಕಾನೂನು: ಸುಪ್ರೀಂಗೆ ತಿಳಿಸಿದ ಕೇಂದ್ರ

ರೈತರು ತಮ್ಮ ಬೆಳೆಯ ತ್ಯಾಜ್ಯ ಸುಡುತ್ತಿರುವುದು.

ರೈತರು ತಮ್ಮ ಬೆಳೆಯ ತ್ಯಾಜ್ಯ ಸುಡುತ್ತಿರುವುದು.

ವಾಯುಮಾಲಿನ್ಯ ನಿಗ್ರಹಕ್ಕೆ ಹೊಸ ಕಾನೂನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ. ಇನ್ನು 4-5 ದಿನಗಳಲ್ಲಿ ಕರಡು ಶಾಸನ ರಚಿಸುತ್ತೇವೆ. ಅಗತ್ಯ ಬಿದ್ದರೆ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರುತ್ತೇವೆ ಎಂದು ಸುಪ್ರೀಂ ಕೋರ್ಟ್ ಬಳಿ ಕೇಂದ್ರ ಸರ್ಕಾರ ಹೇಳಿದೆ.

 • News18
 • 3-MIN READ
 • Last Updated :
 • Share this:

  ನವದೆಹಲಿ(ಅ. 26): ದೆಹಲಿ-ಎನ್​ಸಿಆರ್ ಪ್ರದೇಶದಲ್ಲಿ ಕಂಟಕಪ್ರಾಯವಾಗಿ ಕಾಡುತ್ತಿರುವ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಲು ಹೊಸ ಕಾನೂನನ್ನು ಜಾರಿಗೆ ತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಸ್ವಚ್ಛ ಗಾಳಿ ಉಸಿರಾಡುವ ತನ್ನ ಹಕ್ಕನ್ನು ಕೊಡಿ ಎಂದು ಕೋರಿ ಬಾಲಕನೊಬ್ಬ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ಹೊಸ ಕಾನೂನು ತರುವ ಭರವಸೆ ನೀಡಿದೆ. “ಮಾಲಿನ್ಯ ನಿಯಂತ್ರಿಸಲು ಈಗಿರುವ ವ್ಯವಸ್ಥೆ ಅಷ್ಟೇನೂ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಒಪ್ಪುತ್ತೇವೆ. ಹೊಸ ಕಾನೂನನ್ನು ರೂಪಿಸುತ್ತಿದ್ದು, ಇನ್ನೂ ಅಂತಿಮಗೊಂಡಿಲ್ಲ. ಶೀಘ್ರದಲ್ಲೇ ಕರಡು ಶಾಸನ ಸಿದ್ಧಗೊಳ್ಳುತ್ತದೆ” ಎಂದು ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹತಾ ಮಾಹಿತಿ ನೀಡಿದರು. ಅವರ ಪ್ರಕಾರ ಇನ್ನು 4-5 ದಿನದೊಳಗೆ ಕರಡು ಶಾಸನ ಸಿದ್ಧಗೊಳ್ಳುತ್ತದೆ ಎನ್ನಲಾಗಿದೆ.


  ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೋಬಡೆ ಅವರ ನೇತೃತ್ವದ ನ್ಯಾಯಪೀಠವು ಕೇಂದ್ರದ ಈ ನಿರ್ಧಾರವನ್ನು ಸ್ವಾಗತಿಸಿದೆ. “ಇದು ಸ್ವಾಗತಾರ್ಹ ಹೆಜ್ಜೆಯಾಗಿದೆ. ಈ ಸಮಸ್ಯೆಯನ್ನು ಬಗೆಹರಿಸುವುದು ಸರ್ಕಾರದ ಕರ್ತವ್ಯವೇ ಆಗಿದೆ. ಈ ನಗರದಲ್ಲಿ ಪ್ರತಿಯೊಬ್ಬರಿಗೂ ಕೆಟ್ಟ ಗಾಳಿ ಸಾಕಾಗಿಹೋಗಿದೆ” ಎಂದು ನ್ಯಾಯಪೀಠ ಹೇಳಿತು.


  ಇದನ್ನೂ ಓದಿ: ಎನ್​ಡಿಎ ಸರ್ಕಾರದ ಅವಧಿಯ ಕಲ್ಲಿದ್ದಲು ಹಗರಣ; ಮಾಜಿ ಬಿಜೆಪಿ ಕೇಂದ್ರ ಸಚಿವ ದಿಲೀಪ್​ ರೇಗೆ ಜೈಲು ಶಿಕ್ಷೆ!


  ಇದೇ ವೇಳೆ, ವಾಯು ಮಾಲಿನ್ಯ ನಿಗ್ರಹಕ್ಕೆ ನೇಮಿಸಲಾಗಿದ್ದ ಮಾಜಿ ಸುಪ್ರೀಂ ನ್ಯಾಯಮೂರ್ತಿ ಮದನ್ ಬಿ ಲೋಕೂರ್ ಅವರ ಏಕ ಸದಸ್ಯ ಆಯೋಗದ ನೇಮಕಾತಿ ಮಾಡಿ ಅಕ್ಟೋಬರ್ 16ರಂದು ಹೊರಡಿಸಿದ್ದ ಆದೇಶವನ್ನು ತಾತ್ಕಾಲಿಕವಾಗಿ ತಡೆಹಿಡಿಯಬೇಕು ಎಂದು ಸಾಲಿಸಿಟರ್ ಜನರಲ್ ಅವರು ಕೋರ್ಟ್​ಗೆ ಅರಿಕೆ ಮಾಡಿಕೊಂಡರು. ಆದರೆ ಇದಕ್ಕೆ ಅರ್ಜಿದಾರ ಪರ ವಕೀಲರು ವಿರೋಧಿಸಿದರು. ಹೊಸ ಕಾನೂನು ರೂಪುಗೊಂಡರೂ ಅದು ಈ ವರ್ಷದೊಳಗೆ ಕಾರ್ಯಾಚರಣೆಗೆ ಬರಲು ಸಾಧ್ಯವಿಲ್ಲ. ಅಲ್ಲಿಯವರೆಗೆ ಲೋಕೂರ್ ಆಯೋಗ ಕಾರ್ಯನಿರ್ವಹಿಸಬೇಕು ಎಂದು ಕೋರಿಕೊಂಡರು. ಆದರೆ, ಸರ್ಕಾರದ ಪ್ರಸ್ತಾವನೆಯಲ್ಲಿರುವ ಈ ಕಾನೂನು ಈ ವರ್ಷವೇ ಕಾರ್ಯಾಚರಣೆಗೆ ಬರಲಿದೆ. ಅಗತ್ಯಬಿದ್ದರೆ ಸುಗ್ರೀವಾಜ್ಞೆ ಕೂಡ ಹೊರಡಿಸಲಿದೆ ಎಂದು ಸ್ಪಷ್ಟಪಡಿಸಿದರು.


  ಇದನ್ನೂ ಓದಿ: ಪ್ರಧಾನಿ ಮೋದಿ ಅವರ ಪ್ರತಿಮೆಯನ್ನು ಸುಡುವುದು ನಾಚಿಕೆಗೇಡಿನ ಕೆಲಸ; ಕಾಂಗ್ರೆಸ್​ ವಿರುದ್ಧ ನಡ್ಡಾ ವಾಗ್ದಾಳಿ


  ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಶ್ವಾಸನೆ ನೀಡಿದ ಬಳಿಕ ನ್ಯಾಯಪೀಠವು ಲೋಕೂರ್ ಆಯೋಗ ರಚನೆಯ ಆದೇಶವನ್ನು ತಡೆಹಿಡಿಯಿತು. ನಂತರ ಆದಷ್ಟೂ ಬೇಗ ಕರಡು ಶಾಸನವನ್ನು ಕೋರ್ಟ್​ಗೆ ಸಲ್ಲಿಸಬೇಕು ಎಂದು ಸೂಚಿಸಿತು.


  ವಾಯು ಮಾಲಿನ್ಯದ ವಿಚಾರವಾಗಿ ಸಲ್ಲಿಕೆಯಾಗಿರುವ ಇನ್ನೊಂದು ಪಿಐಎಲ್​ನ ವಿಚಾರಣೆಯನ್ನು ಸುಪ್ರೀ ನ್ಯಾಯಪೀಠ ಅ. 29, ಗುರುವಾರ ಕೈಗೆತ್ತಿಕೊಳ್ಳಲಿದೆ.

  Published by:Vijayasarthy SN
  First published: