ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi) ಅವರು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಭಾರತ್ ಜೋಡೋ ಯಾತ್ರೆಯ (Bharat Jodo Yatra) ಹೆಸರಿನಲ್ಲಿ ಪಾದಯಾತ್ರೆ ನಡೆಸಿದ್ದಾರೆ. ಈ ಪಾದಯಾತ್ರೆ ಜನರ ನಾಡಿಮಿಡಿತ ಅರಿತುಕೊಳ್ಳಲು ರಾಹುಲ್ ಗಾಂಧಿಗೆ ಒಂದೊಳ್ಳೆಯ ವೇದಿಕೆ ಆದರೆ, ಪಕ್ಷ ಸಂಘಟನೆಯ ಹಿತದೃಷ್ಟಿಯಿಂದಲೂ ತುಂಬಾ ಧನಾತ್ಮಕ ಅಂಶಗಳು ಯಾತ್ರೆಯಿಂದ ಕಾಂಗ್ರೆಸ್ ಪಕ್ಷಕ್ಕೆ ದಕ್ಕಿದೆ.
ಈ ಮಧ್ಯೆ ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಏನೇನು ಪರಿಣಾಮಗಳು ಬೀರಬಹುದು ಎಂಬ ಪ್ರಶ್ನೆ ಖಂಡಿತವಾಗಿಯೂ ರಾಜಕೀಯ ಆಸಕ್ತರಲ್ಲಿ ಇದ್ದೇ ಇದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹಲವಾರು ಅಂಶಗಳನ್ನು ಇಟ್ಟುಕೊಂಡು ರಾಷ್ಟ್ರೀಯ ವಾಹಿನಿಯೊಂದು ಸಮೀಕ್ಷೆ ನಡೆಸಿದೆ. ಮೂಡ್ ಆಫ್ ದಿ ನೇಷನ್ (Mood of The Nation) ಹೆಸರಿನಲ್ಲಿ ವಾಹಿನಿಯು ಸರ್ವೇ ನಡೆಸಿದ್ದು, ಅದರಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಮತ್ತು ಅದರಿಂದ ಕಾಂಗ್ರೆಸ್‌ಗೆ ಏನೇನು ಪರಿಣಾಮ ಆಗಬಹುದು ಇನ್ನಿತರ ವಿಚಾರಗಳ ಪ್ರಶ್ನೆಗಳನ್ನು ಜನರಿಗೆ ಕೇಳಿ ಅಭಿಪ್ರಾಯ ಸಂಗ್ರಹಿಸಿದೆ.
ಇದನ್ನೂ ಓದಿ: Rahul Gandhi: ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ರಾಹುಲ್ ಗಾಂಧಿ ಖಂಡಿಸಿದ್ದೇಕೆ? ಇಲ್ಲಿದೆ ನೋಡಿ
ರಾಷ್ಟ್ರೀಯ ವಾಹಿನಿ ನಡೆಸಿದ ಈ ಸಮೀಕ್ಷೆಯಲ್ಲಿ ಒಟ್ಟು 1,40,917 ಮಂದಿ ಭಾಗಿಯಾಗಿದ್ದು, ಅಲ್ಲದೇ ಪ್ರತ್ಯೇಕವಾಗಿ 1,05,008 ಮಂದಿಯ ಅಭಿಪ್ರಾಯಗಳನ್ನು ಸಂಗ್ರಹಿಸಿ ಒಟ್ಟು ಅಭಿಪ್ರಾಯವನ್ನು ವಿಶ್ಲೇಷಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸೆಪ್ಟೆಂಬರ್‌ನಿಂದ ಕನ್ಯಾಕುಮಾರಿಯಿಂದ ಜಮ್ಮು ಕಾಶ್ಮೀರದವರೆಗೆ ಆಯೋಜಿಸಿದ 3500 ಕಿ.ಮೀ ಭಾರತ್ ಜೋಡೋ ಯಾತ್ರೆ ಪಾದಯಾತ್ರೆಯನ್ನು ಜನರು ಹೇಗೆ ಗ್ರಹಿಸಿದ್ದಾರೆ? ಎಂಬ ಬಗ್ಗೆ ಅನೇಕ ಜನ ಕಾಂಗ್ರೆಸ್ ಪಾಲಿಗೆ ಆಶಾದಾಯಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರಾದರೂ ಅದು ಮತವಾಗಿ ಪರಿವರ್ತನೆಯಾಗಬಲ್ಲದು ಎಂಬುದರ ಬಗ್ಗೆ ಅಷ್ಟೇನೂ ಪೂರಕವಾದ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ.
ಭಾರತ್ ಜೋಡೋ ಯಾತ್ರೆ ಬಗ್ಗೆ ಜನರ ಅಭಿಪ್ರಾಯವೇನು?
ರಾಹುಲ್ ಗಾಂಧೀ ದೇಶದ ಉದ್ದಗಲಕ್ಕೂ ಸಂಚರಿಸಿದ ಭಾರತ್ ಜೋಡೋ ಯಾತ್ರೆಯ ಬಗ್ಗೆ ಜನರು ಕುತೂಹಲಕಾರಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ಶೇಕಡಾ 29ರಷ್ಟು ಜನರು ಭಾರತ್ ಜೋಡೋ ಯಾತ್ರೆ ಜನರನ್ನು ಬಹುದೊಡ್ಡ ಮಟ್ಟದಲ್ಲಿ ಸಂಪರ್ಕಿಸಲು ಒಂದೊಳ್ಳೆಯ ಪ್ರಯೋಗ ಎಂದು ಅಭಿಪ್ರಾಯಪಟ್ಟರೆ, 13% ಜನರು ರಾಹುಲ್ ಗಾಂಧಿ ಅವರಿಗೆ ಇದು ಮತ್ತೊಂದು ‘ರಿ ಬ್ರಾಂಡಿಂಗ್’ ಕಾರ್ಯಕ್ರಮ ಎಂದಿದ್ದಾರೆ. ಇನ್ನುಳಿದ ಪೈಕಿ ಶೇಕಡಾ 9ರಷ್ಟು ಜನರು ಭಾರತ್ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆ ಯಾವುದೇ ಪ್ರಯೋಜನವಿಲ್ಲ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್‌ನ್ನು ಮೇಲಕ್ಕೆತ್ತಲು ಯಾರ ನಾಯಕತ್ವ ಬೇಕು?
ಇನ್ನು ಕಾಂಗ್ರೆಸ್ ಪಕ್ಷದ ಪುನಶ್ಚೇತನ ಯಾರಿಂದ ಸಾಧ್ಯ ಎಂಬ ಪ್ರಶ್ನೆಗೆ ಜನರು ವಿಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದು, ಯುವ ನಾಯಕರೇ ಸೂಕ್ತ ಎಂದು ಹೇಳಿದ್ದಾರೆ. ಆ ಪೈಕಿ 26% ಜನರು ರಾಹುಲ್ ಗಾಂಧಿಯ ನಾಯಕತ್ವಕ್ಕೆ ಒಲವು ತೋರಿಸಿದರೆ, 17% ಜನರು ಸಚಿನ್ ಪೈಲಟ್ ಅವರಿಂದ ಕಾಂಗ್ರೆಸ್ ಪಕ್ಷದ ಉದ್ಧಾರ ಸಾಧ್ಯ ಇದೆ ಎಂದು ನಂಬಿದ್ದಾರೆ.
ಇದನ್ನೂ ಓದಿ: Bharat Jodo Yatra: ಚುಮುಗುಡುವ ಚಳಿಗೂ ಡೋಂಟ್ಕೇರ್; ಭಾರತ್ ಜೋಡೋ ಯಾತ್ರೆಯಲ್ಲಿ ಶರ್ಟ್ ಧರಿಸದೇ ರಾಗ ಬೆಂಬಲಿಗರ ಡ್ಯಾನ್ಸ್!
ವಿರೋಧ ಪಕ್ಷವನ್ನು ಮುನ್ನಡೆಸಲು ಯಾರು ಸೂಕ್ತ ಅಭ್ಯರ್ಥಿ?
ದೇಶದಲ್ಲಿ ವಿರೋಧ ಪಕ್ಷವನ್ನು ಮುನ್ನಡೆಸಲು ಯಾರಿಂದ ಸಾಧ್ಯ ಎಂದು ಕೇಳಿದ ಪ್ರಶ್ನೆಗೂ ಜನರು ವಿಶಿಷ್ಟ ಉತ್ತರ ನೀಡಿದ್ದು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗಿಂತ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ರಾಷ್ಟ್ರೀಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂದು ಜನರು ತಿಳಿಸಿದ್ದಾರೆ. ಈ ಪ್ರಶ್ನೆಗೆ ಸಮೀಕ್ಷೆಯಲ್ಲಿ ಜನರು ಪ್ರತಿಪಕ್ಷದ ನಾಯಕತ್ವ ವಹಿಸಲು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೂಕ್ತ ಎಂದು 24% ಜನರು ಹೇಳಿದರೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪರ್ಫೆಕ್ಟ್ ಕ್ಯಾಂಡಿಡೇಟ್ ಎಂದು 20% ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು 13% ಜನರು ರಾಹುಲ್ ಗಾಂಧಿ ಪರ ಒಲವು ತೋರಿದ್ದಾರೆ.
ಪ್ರತಿಪಕ್ಷಗಳ ಮೈತ್ರಿ ಪ್ರಧಾನಿ ಮೋದಿಗೆ ಸವಾಲು ಹಾಕಬಲ್ಲುದೇ?
ದೇಶದಲ್ಲಿ ಪ್ರತಿಪಕ್ಷಗಳ ಒಗ್ಗೂಡುವಿಕೆಗೆ ಪ್ರಮುಖ ನಾಯಕರು ಪ್ರಯತ್ನ ಪಡುತ್ತಲೇ ಇದ್ದಾರೆ. ಪ್ರತಿಪಕ್ಷಗಳು ಒಗ್ಗೂಡಿದರೆ ಪ್ರಧಾನಿ ನರೇಂದ್ರ ಮೋದಿಯನ್ನು ಕಟ್ಟಿ ಹಾಕಲು ಸಾಧ್ಯವೇ ಎಂಬ ಪ್ರಶ್ನೆಗೆ ಜನರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಪ್ರತಿಪಕ್ಷಗಳು ಒಗ್ಗೂಡಿದರೆ ಪ್ರಧಾನಿ ನರೇಂದ್ರ ಮೋದಿಯನ್ನು ಕಟ್ಟಿ ಹಾಕಲು ಸಾಧ್ಯ ಎಂದು ಹೇಳುವವರ ಸಂಖ್ಯೆ ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಲ್ಲಿ 49% ಜನರು ವಿರೋಧ ಪಕ್ಷಗಳ ಮೈತ್ರಿಯಿಂದ ಮೋದಿ ಮಣಿಸಲು ಸಾಧ್ಯ ಎಂದು ಹೇಳಿದ್ದರು. ಈ ವರ್ಷ ಆ ಸಂಖ್ಯೆ 39%ಗೆ ಕುಸಿದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ