ಯುಕೆಗೆ (UK) ಅಧ್ಯಯನ ನಿಮಿತ್ತವಾಗಿ ಬರುವ ಹಲವಾರು ಭಾರತೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ವೀಸಾಗಳನ್ನು ಪರಿಣಿತ ಕಾರ್ಮಿಕ ವೀಸಾಗಳನ್ನಾಗಿ (Visa) ಪರಿವರ್ತಿಸುತ್ತಿದ್ದು ಯುಕೆಗೆ ಬಂದ ಕೆಲವೇ ತಿಂಗಳುಗಳಲ್ಲಿ ತಮ್ಮ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಇಡುತ್ತಿದ್ದಾರೆ. ಯುಕೆಯಲ್ಲಿ ಸಾಕಷ್ಟು ಉದ್ಯೋಗವಕಾಶಗಳಿವೆ ಅಂತೆಯೇ ಇಲ್ಲಿ ಮಾನವ ಸಂಪನ್ಮೂಲದ ಕೊರತೆಯೂ ಇರುವುದರಿಂದ ಭಾರತದ ಹಲವಾರು ವಿದ್ಯಾರ್ಥಿಗಳು ಓದಿಗೆ ವಿರಾಮ ಹಾಕಿ ಉದ್ಯೋಗಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬುದಾಗಿ ವರದಿಗಳು ಉಲ್ಲೇಖಿಸಿವೆ. ಆರೋಗ್ಯ ರಕ್ಷಣೆ, ಹೋಮ್ಕೇರ್ ಮುಂತಾದ ಕೆಲವು ಕ್ಷೇತ್ರಗಳಲ್ಲಿ ನುರಿತ ಉದ್ಯೋಗಿಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಯುಕೆಯಲ್ಲಿರುವ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ತಮ್ಮ ವೀಸಾವನ್ನು ನುರಿತ ಉದ್ಯೋಗಿಗಳಾಗಿ ಬದಲಾಯಿಸುತ್ತಿದ್ದಾರೆ ಎಂದು ಶೈಕ್ಷಣಿಕ ಸಲಹೆಗಾರರು ತಿಳಿಸಿದ್ದಾರೆ.
ಪ್ರಸ್ತುತ, ಸುಮಾರು 10% ವಿದ್ಯಾರ್ಥಿಗಳು ಈಗಾಗಲೇ ತಮ್ಮ ವೀಸಾಗಳನ್ನು ನುರಿತ ವೃತ್ತಿಪರರಾಗಿ ಪರಿವರ್ತಿಸಿದ್ದಾರೆ ಎಂಬುದು ತಿಳಿದು ಬಂದಿದ್ದು, ಈ ವಿದ್ಯಾರ್ಥಿಗಳು ಈಗಾಗಲೇ ಕಾರ್ಮಿಕ ವೀಸಾಗಳನ್ನು ಪಡೆದುಕೊಂಡಿದ್ದು ನಿಯಮಿತ ಉದ್ಯೋಗಗಳಲ್ಲಿ ದುಡಿಯುತ್ತಿದ್ದಾರೆ ಎಂಬುದು ವರದಿಯಾಗಿದೆ.
ಪ್ರಕ್ರಿಯೆ ಕಾನೂನುಬದ್ಧವೇ?
ಪಂಜಾಬ್ನ ಅತ್ಯಂತ ಹಳೆಯ ಶೈಕ್ಷಣಿಕ ಸಲಹಾ ಸಂಸ್ಥೆಗಳಲ್ಲಿ ಒಂದಾಗಿರುವ ಧವನ್ ಎಜುಕೇಶನಲ್ ಕನ್ಸಲ್ಟೆನ್ಸಿಯ ಮಾಲೀಕ ಚಿತ್ರೇಶ್ ಧವನ್ ಈ ಕುರಿತು ಅನಿಸಿಕೆ ಹಂಚಿಕೊಂಡಿದ್ದು, ವಿದ್ಯಾರ್ಥಿ ವೀಸಾಗಳನ್ನು ಕಾರ್ಮಿಕ ವೀಸಾಗಳನ್ನಾಗಿ ಪರಿವರ್ತಿಸುತ್ತಿರುವ ಪ್ರಕ್ರಿಯೆ ಕಾನೂನುಬದ್ಧವಾಗಿದೆ ಎಂದು ತಿಳಿಸಿದ್ದಾರೆ. ಅರ್ಜಿ ಸಲ್ಲಿಸುವ ಸಂಸ್ಥೆಗಳ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ವೀಸಾಗಳನ್ನು ವಿದ್ಯಾರ್ಥಿಗಳು ಬದಲಾಯಿಸಿಕೊಳ್ಳಬಹುದು ಎಂದು ಚಿತ್ರೇಶ್ ಹೇಳಿದ್ದಾರೆ. ನಿರ್ದಿಷ್ಟ ಅವಧಿಯವರೆಗೆ ಪರವಾನಗಿಯನ್ನು ಪಡೆದುಕೊಳ್ಳುವ ಅವಕಾಶ ಕೂಡ ಇದ್ದು, ಇದನ್ನು ಎರಡು ವರ್ಷ ಇಲ್ಲವೇ ಐದು ವರ್ಷಗಳ ಕಾಲ ಮುಂದೂಡಬಹುದು ಎಂದು ಚಿತ್ರೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಎಂಜಿನಿಯರಿಂಗ್ ಆದವರಿಗೆ ಏರೋನಾಟಿಲ್ ಡೆವಲಪ್ಮೆಂಟ್ ಏಜೆನ್ಸಿಯಲ್ಲಿದೆ ಉದ್ಯೋಗಾವಕಾಶ
ಉದ್ಯೋಗಕ್ಕೆ ಅನುಸಾರವಾಗಿ ವೀಸಾ ಪರವಾನಗಿ ವಿಸ್ತರಣೆ
ವಿದ್ಯಾರ್ಥಿಗಳು ಭವಿಷ್ಯದ ಉದ್ಯೋಗಕ್ಕೆ ಅನುಸಾರವಾಗಿ ಪರವಾನಗಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಬಹುದು. ಇಲ್ಲಿಯವರೆಗೆ ಸುಮಾರು 90% ವಿದ್ಯಾರ್ಥಿಗಳು ತಮ್ಮ ಕೋರ್ಸ್ಗಳನ್ನು ಪೂರ್ಣಗೊಳಿಸುತ್ತಿದ್ದಾರೆ ಆದರೆ ವೀಸಾಗಳನ್ನು ಬದಲಾಯಿಸುವ ಪ್ರವೃತ್ತಿ ಹೆಚ್ಚುತ್ತಿದೆ ಎಂಬುದು ಚಿತ್ರೇಶ್ ಧವನ್ ಹೇಳಿಕೆಯಾಗಿದೆ.
ವಿದ್ಯಾರ್ಥಿಗಳಿಗೆ ಇದು ಲಾಭದಾಯಕವೇ?
ಕೆಲಸದ ಪರವಾನಗಿಯನ್ನು ವೇಗವಾಗಿ ಬಯಸುವ ವಿದ್ಯಾರ್ಥಿಗಳಿಗೆ ವೀಸಾ ಬದಲಾವಣೆ ಸಾಕಷ್ಟು ಪ್ರಯೋಜನಕಾರಿಯಾದುದು ಎಂಬುದು ಕನ್ಸಲ್ಟೆಂಟ್ ಗುರುಪ್ರೀತ್ ಸಿಂಗ್ ಮಾತಾಗಿದೆ. ಯುಕೆಯಲ್ಲಿ ಉದ್ಯೋಗ ಮಾಡುವುದು ಹೆಚ್ಚಿನ ವಿದ್ಯಾರ್ಥಿಗಳ ಗುರಿಯಾಗಿದ್ದು, ಶಿಕ್ಷಣವನ್ನು ಪೂರ್ಣಗೊಳಿಸುವ ಇರಾದೆ ಇವರಿಗಿರುವುದಿಲ್ಲ ಹಾಗಾಗಿ ಇಂತಹ ವಿದ್ಯಾರ್ಥಿಗಳಿಗೆ ವೀಸಾ ಪರಿವರ್ತಿಸಲು ಸಾಧ್ಯವಾದರೆ ಸೆಮಿಸ್ಟರ್ ಪ್ರಕಾರವಾಗಿ ಕೋರ್ಸ್ ಪೂರ್ಣಗೊಳಿಸುವ ಅಗತ್ಯವಿರುವುದಿಲ್ಲ ಹೀಗಾಗಿ ಶಿಕ್ಷಣಕ್ಕೆ ಖರ್ಚುಮಾಡುವ ದೊಡ್ಡ ಮೊತ್ತದ ಹಣವನ್ನು ಉಳಿಸಬಹುದು ಎಂಬುದು ಅವರ ಮಾತಾಗಿದೆ. ಈಗಾಗಲೇ ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಅರ್ಹತೆಯನ್ನು ಪಡೆದಿರುವ ವಿದ್ಯಾರ್ಥಿಗಳ ಮುಖ್ಯ ಗುರಿ ಯುಕೆಗೆ ಬಂದು ಉದ್ಯೋಗ ಗಿಟ್ಟಿಸುವುದಾಗಿದೆ. ಇದಕ್ಕೆ ಸುಲಭವಾದ ವಿಧಾನವೆಂದರೆ ಅಧ್ಯಯನ ವೀಸಾವನ್ನು ಪಡೆದುಕೊಳ್ಳುವುದಾಗಿದೆ. ತದನಂತರ ಇದನ್ನು ಉದ್ಯೋಗಿ ವೀಸಾವನ್ನಾಗಿ ಪರಿವರ್ತಿಸಬಹುದಾಗಿದೆ.
ಉದ್ಯೋಗ ಹಾಗೂ ಶಿಕ್ಷಣ ಎರಡನ್ನೂ ನಿಭಾಯಿಸುತ್ತಿರುವ ವಿದ್ಯಾರ್ಥಿಗಳು
ಅಧ್ಯಯನ ವೀಸಾದ ಮೂಲಕ ಯುಕೆಗೆ ಬರುವ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ವೀಸಾವನ್ನು ಉದ್ಯೋಗಿ ವೀಸಾವನ್ನಾಗಿ ಪರಿವರ್ತಿಸಿಕೊಳ್ಳುತ್ತಾರೆ ಹಾಗೂ ಪೂರ್ಣ ಸಮಯ ಉದ್ಯೋಗಿಗಳಾಗಿ ಯುಕೆಯಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಯುಕೆಗೆ ಪ್ರವೇಶ ಪಡೆದುಕೊಳ್ಳಲು ಹಾಗೂ ಉತ್ತಮ ಸಂಪಾದನೆಗೆ ಅಧ್ಯಯನ ವೀಸಾ ಉತ್ತಮ ವಿಧಾನವಾಗಿದ್ದರೂ ವಿದ್ಯಾರ್ಥಿಗಳು ದಾಖಲಾಗಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬುದು ಗುರುಪ್ರೀತ್ ಮಾತಾಗಿದೆ. ಇನ್ನು ಕೆಲವು ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಂಡೇ ಕಡಿಮೆ ಸಮಯ ಕೆಲವೊಂದು ಕೋರ್ಸ್ಗಳನ್ನು ಮಾಡುತ್ತಾರೆ ಎಂದು ಗುರುಪ್ರೀತ್ ತಿಳಿಸಿದ್ದಾರೆ. ಈ ಮೂಲಕ ಶಿಕ್ಷಣ ಹಾಗೂ ಉದ್ಯೋಗ ಎರಡನ್ನೂ ಈಡೇರಿಸಿಕೊಳ್ಳುವ ವಿದ್ಯಾರ್ಥಿಗಳೂ ಇದ್ದಾರೆ ಎಂದು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ