ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಆಳ್ವಿಕೆ ಕೊನೆಗೊಂಡಿದ್ದು ತಾಲಿಬಾನ್ ಸರ್ಕಾರ ಆರಂಭವಾಗಿದೆ. ತಾಲಿಬಾನ್ ಆಳ್ವಿಕೆಯಲ್ಲಿ ಹಿಂದೂ ಮತ್ತು ಸಿಖ್ಖ್ ಧರ್ಮದವರು ನಿಜಕ್ಕೂ ಆತಂಕ ಎದುರಿಸುತ್ತಿದ್ದಾರೆ. ಭಾರತದಲ್ಲೂ ಸಹ ಅಲ್ಲಿನ ಹಿಂದೂ-ಸಿಖ್ಖರನ್ನು ಭಾರತಕ್ಕೆ ಕರೆತರಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಅಲ್ಲದೆ, ಅಲ್ಲಿನ 200ಕ್ಕೂ ಅಧಿಕ ಸಿಖ್ಖರನ್ನು ರಕ್ಷಿಸಬೇಕು ಎಂದು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಸಹ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು. ಹೀಗಾಗಿ ಭಾರತ ಸರ್ಕಾರ ಭಾರತೀಯರ ರಕ್ಷಣೆಗೆ ಎರಡು ಸೇನಾ ವಿಮಾನವನ್ನು ಅಫ್ಘಾನ್ಗೆ ಕಳುಹಿಸಿತ್ತು. ಆದರೆ, ಅಫ್ಘನ್ನಲ್ಲಿ ಸಿಲುಕಿರುವ ಅಲ್ಪ ಸಂಖ್ಯಾತ ಹಿಂದೂಗಳು, ಹಿಂದೂ ರಾಷ್ಟ್ರೀಯವಾದಿ ಸರ್ಕಾರವಿರುವ ಮತ್ತು ಬಹುಸಂಖ್ಯಾತ ದೇಶವಾದ ಭಾರತವನ್ನು ತಲುಪುವುದಕ್ಕಿಂತ ಅಮೆರಿಕ ಅಥವಾ ಕೆನಡಾಕ್ಕೆ ಹೋಗಲು ಆದ್ಯತೆ ನೀಡಿದ್ದಾರೆ ಎಂದು ವರದಿಯಾಗಿದೆ.
ಅಫ್ಘನ್ನಲ್ಲಿರುವ ಹಿಂದೂಗಳು ಭಾರತಕ್ಕೆ ಆಗಮಿಸಿದರೂ ಸಹ ವಲಸಿಗರಿಗೆ ಇಲ್ಲಿ ಉದ್ಯೋಗಾವಕಾಶಗಳು ಇಲ್ಲ. ಭಾರತದಲ್ಲಿ ಅವರಿಗೆ ಭವಿಷ್ಯ ಇಲ್ಲ. ಇದೇ ಕಾರಣಕ್ಕೆ ಅಫ್ಘನ್ ಹಿಂದೂಗಳು ಭಾರತಕ್ಕೆ ಆಗಮಿಸಲು ಬಯಸುತ್ತಿಲ್ಲ, ಬದಲಾಗಿ ಅಮೆರಿಕ ಅಥವಾ ಕೆನಡಾಕ್ಕೆ ವಲಸೆ ಹೋಗುವುದಕ್ಕೆ ಮನಸ್ಸು ಮಾಡಿದ್ದಾರೆ ಎಂದು ವರದಿಯಾಗಿದೆ.
ಕೊರೋನಾ ಸಾಂಕ್ರಾಮಿಕ ರೋಗದ ಕಾರಣಕ್ಕೆ ಭಾರತದ ಆರ್ಥಿಕತೆಯು ಈಗಾಗಲೇ ಪಾತಾಳಕ್ಕೆ ಕುಸಿದಿದೆ. ಅಲ್ಲದೆ, ಆ ಮಹಾ ಆರ್ಥಿಕ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳಲು ತತ್ತರಿಸುತ್ತಿದೆ. ಮುಂದಿನ ದಿನಗಳಲ್ಲಿ ಯಾವುದೇ ಚೇತರಿಕೆಯ ಲಕ್ಷಣಗಳೂ ಕಾಣಿಸುತ್ತಿಲ್ಲ. ಐಎಂಎಫ್ ತನ್ನ ಹಿಂದಿನ ಬೆಳವಣಿಗೆಯ ಮುನ್ಸೂಚನೆಯನ್ನು ಶೇ.12.5 ರಿಂದ8.5 ಪ್ರತಿಶತಕ್ಕೆ ಇಳಿಸಿತ್ತು.
"ಮಾರ್ಚ್-ಮೇ ತಿಂಗಳಲ್ಲಿ ತೀವ್ರವಾದ ಎರಡನೇ ಕೋವಿಡ್ ತರಂಗದ ನಂತರ ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ನಿರೀಕ್ಷೆಗಳನ್ನು ಕಡಿಮೆ ಮಾಡಲಾಗಿದೆ ಮತ್ತು ಆ ಹಿನ್ನಡೆಯಿಂದ ಆತ್ಮವಿಶ್ವಾಸದಲ್ಲಿ ನಿಧಾನವಾಗಿ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ" ಎಂದು ಐಎಂಎಫ್‌ನ ಇತ್ತೀಚಿನ ವರ್ಲ್ಡ್ ಎಕನಾಮಿಕ್ ಔಟ್ಲುಕ್ ವರದಿ ಹೇಳಿದೆ.
ಹಿಂದೂ ರಾಷ್ಟ್ರೀಯವಾದಿ ಮೋದಿ ಸರ್ಕಾರದ ಅಡಿಯಲ್ಲಿ ದೇಶದ ಮಾನವ ಹಕ್ಕುಗಳ ಪರಿಸ್ಥಿತಿಯೂ ಹದಗೆಟ್ಟಿದೆ. ಯುಎಸ್ ಸೆನೆಟರ್‌ಗಳು ಮತ್ತು ಯುರೋಪಿಯನ್ ಯೂನಿಯನ್ ಅದರ ಬಗ್ಗೆ ಕಳವಳ ವ್ಯಕ್ತಪಡಿಸಿವೆ. ಇದೇ ಕಾರಣಕ್ಕೆ ಅಫ್ಘನ್ನಲ್ಲಿರುವ ಹಿಂದೂಗಳು ಭಾರತಕ್ಕೆ ಮರಳಲು ಹಿಂಜರಿಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಭಾರತವು ಹಿಂದುಗಳು ಮತ್ತು ಸಿಖ್ಖರಿಗೆ ಮಾತ್ರ ಏಕೆ ಆಶ್ರಯ ನೀಡುತ್ತಿದೆ?
ತಾಲಿಬಾನ್ಗಳು ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಅಲ್ಲಿನ ಜನ ಹೆದರಿ ದೇಶ ಬಿಡಲು ಮುಂದಾಗಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತುರ್ತು ಸ್ಥಳಾಂತರಕ್ಕಾಗಿ ವೀಸಾಗಳನ್ನು ನೀಡುವಲ್ಲಿ ಅಫ್ಘಾನಿಸ್ತಾನದ ಸಿಖ್ಖರು ಮತ್ತು ಹಿಂದೂಗಳಿಗೆ 'ಆದ್ಯತೆ' ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮನೆಗಳಿಗೆ ನುಗ್ಗಿ ಮದುವೆಯಾಗುವುದಾಗಿ ಹೆಣ್ಣುಮಕ್ಕಳನ್ನು ಎಳೆದೊಯ್ದು ತಾಲಿಬಾನಿಗಳಿಂದ ಗ್ಯಾಂಗ್ ರೇಪ್!
ಏಕೆಂದರೆ ಮೋದಿಯ ಈ ನಿರ್ಧಾರ ಬಿಜೆಪಿಯ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆಗೆ ಅನುಗುಣವಾಗಿಯೇ ಇದೆ. ಈ ಮಸೂದೆಯು ಮುಸ್ಲಿಮರನ್ನು ಹೊರತುಪಡಿಸಿ ಉಳಿದ ಧರ್ಮದವರನ್ನು ದೇಶಕ್ಕೆ ಮುಕ್ತ ಆಹ್ವಾನ ನೀಡುತ್ತದೆ. ಇದು ಹಿಂದೂ ರಾಷ್ಟ್ರೀಯವಾದಿ ಸರ್ಕಾರವು ದೇಶದ ಮುಸ್ಲಿಂ ಅಲ್ಪಸಂಖ್ಯಾತರ ಕಡೆಗೆ ತಾರತಮ್ಯದ ಭಾವನೆಯನ್ನು ಹೊಂದಿದೆ ಎಂಬುದನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಇದೇ ಕಾರಣಕ್ಕೆ ಅನೇಕ ಮಾನವ ಹಕ್ಕುಗಳ ಗುಂಪುಗಳು ಮತ್ತು ಕೆಲವು ಭಾರತೀಯ ರಾಜಕಾರಣಿಗಳು ಅಫ್ಘಾನಿಸ್ತಾನದ ಕಡೆಗೆ ದೇಶದ ಆಶ್ರಯ ನೀತಿಯನ್ನು ಟೀಕಿಸಿದ್ದಾರೆ.
"ಭಾರತ ಸರ್ಕಾರವು ಈಗ ಹತಾಶ ಅಫಘಾನ್ ನಿರಾಶ್ರಿತರನ್ನು ಹಿಂಸೆಯಿಂದ ಮತ್ತು ಖಚಿತ ಸಾವಿನಿಂದ ಕಾಪಾಡಲು ಯತ್ನಿಸದೆ, ಸಾವಿನ ಮನೆಯಲ್ಲಿರುವವರು ಹಿಂದೂಗಳೇ ಅಥವಾ ಮುಸ್ಲಿಮರೇ? ಎಂಬ ದೃಷ್ಟಿಕೋನದಿಂದ ನೋಡುತ್ತಿರುವುದು ಅಮಾನವೀಯ" ಎಂದು ವಿರೋಧ ಪಕ್ಷದ ರಾಜಕಾರಣಿ ಕವಿತಾ ಕೃಷ್ಣನ್ ಟ್ವಿಟ್ ಮೂಲಕ ಟೀಕಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ