ನವದೆಹಲಿ: ರಾಷ್ಟ್ರೀಯ ಭದ್ರತೆಯ (National security )ವಿಚಾರದಲ್ಲಿ ಸರ್ಕಾರದ ವಿರುದ್ಧ ಆರೋಪ ಮಾಡೋವಾಗ ಕಾಂಗ್ರೆಸ್ ಪಕ್ಷ ಇತ್ತೀಚಿನ ದಿನಗಳಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಎಂದು ಹೇಳಬಹುದು. ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra)ಬ್ಯುಸಿಯಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi ) ಹೊಸ ವರ್ಷದ ಮುನ್ನಾದಿನ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದರು. ಗಡಿ ಪ್ರದೇಶದಲ್ಲಿ ಚೀನಾ (China) ಭಾರತದ ಭೂ ಪ್ರದೇಶವನ್ನು ಅತಿಕ್ರಮಣ ಮಾಡುತ್ತಿದೆ. ಆದರೆ ಕೇಂದ್ರ ಸರ್ಕಾರ ಇದರ ಬಗ್ಗೆ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪ ಮಾಡಿದ್ದರು.
ಸುದ್ದಿಗಾರರೊಂದಿಗೆ ಮಾತನಾಡಿದ್ದ ವೇಳೆ ‘ನಾನು ಸರ್ಕಾರದ ಬಗ್ಗೆ ಮಾತನಾಡಿದರೆ ಸೇನೆಯ ಬಗ್ಗೆ ನಾನು ಮಾತನಾಡುತ್ತಿದ್ದೇನೆ ಎಂದು ಅವರು ಹೇಳುತ್ತಾರೆ’ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ‘ನಾನು ಸೇನೆಯ ಬಗ್ಗೆ ಮಾತನಾಡಿಯೇ ಇಲ್ಲ. ಸರ್ಕಾರದ ಬಗ್ಗೆ ಮಾತನಾಡಿದ್ದೇನೆ ಅಷ್ಟೇ. ಸರ್ಕಾರಕ್ಕೂ ಸೇನೆಗೂ ವ್ಯತ್ಯಾಸವಿದೆ. ನಾನು ಸರ್ಕಾರದ ತಪ್ಪು ನಿರ್ಧಾರಗಳನ್ನು ಎತ್ತಿ ಹಿಡಿದಿದ್ದೇನೆ. ಆದ್ದರಿಂದ ಸರ್ಕಾರವು ಸೇನೆ, ನೌಕಾಪಡೆ ಮತ್ತು ವಾಯುಪಡೆಯ ಹಿಂದೆ ಅಡಗಿ ಕುಳಿತುಕೊಳ್ಳಬಾರದು. ಅದು ಹೇಡಿತನ. ತಪ್ಪಾಗಿದೆ ಎಂದರೆ ನಾವು ಅವರಿಗೆ ಸಹಾಯ ಮಾಡುತ್ತೇವೆ ಅಂತಾ ಹೇಳೋದಲ್ಲ. ನಾವೇ ಅಲ್ಲ, ಇಡೀ ಪ್ರತಿಪಕ್ಷಗಳು ಸರ್ಕಾರಕ್ಕೆ ಸಹಾಯ ಮಾಡುತ್ತವೆ. ಆದರೆ ಏನಾಯಿತು ಎಂದು ನಮಗೆ ತಿಳಿಸಿ' ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದರು.
ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ಹೇಳಿಕೆ
ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಯೋಧರ ಮಧ್ಯೆ ನಡೆದ ಘರ್ಷಣೆ, 2016ರ ಸರ್ಜಿಕಲ್ ಸ್ಟ್ರೈಕ್, ವಾಯುಪಡೆ ನಡೆಸಿದ 2019ರ ಬಾಲಾಕೋಟ್ ದಾಳಿ ಸೇರಿದಂತೆ ಇನ್ನಿತರ ಸಂದರ್ಭಗಳಲ್ಲಿ ಕಾಂಗ್ರೆಸ್ ಸೇನಾಪಡೆಯನ್ನು ಅವಮಾನಿಸಿದೆ ಮತ್ತು ಅವರ ಶೌರ್ಯವನ್ನು ಪ್ರಶ್ನಿಸುತ್ತಿದೆ ಎಂದು ಆಡಳಿತಾರೂಢ ಬಿಜೆಪಿ ಆರೋಪ ಮಾಡಿದ್ದರಿಂದ, ರಾಹುಲ್ ಗಾಂಧಿ ನೀಡಿದ್ದ ಈ ಹೇಳಿಕೆ ರಾಜಕೀಯ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಇದರ ಜೊತೆಗೆ, ಬಿಜೆಪಿ ಪಕ್ಷ ತನ್ನ ರಾಜಕೀಯ ಲಾಭಕ್ಕಾಗಿ ಸೇನೆಯ ಶೌರ್ಯಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸದಿದ್ದರೆ ರಾಷ್ಟ್ರೀಯ ಭದ್ರತೆಯ ವಿಚಾರದಲ್ಲಿ ಪಕ್ಷವು ತನ್ನ ಟೀಕೆಗಳನ್ನು ಸೂಕ್ಷ್ಮವಾಗಿ ಹೇಳಲಿದೆ ಎಂದು ಕಾಂಗ್ರೆಸ್ನ ಹಲವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ಗೆ ಹಿನ್ನಡೆಯಾಗಲು ಕಾರಣ!
ಈ ಹಿಂದೆ ಕೂಡ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದ ಕೊನೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ವಿರುದ್ಧವೂ ಕಾಂಗ್ರೆಸ್ ಇದೇ ರೀತಿಯ ಆರೋಪ ಮಾಡಿತ್ತು. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ವಾಜಪೇಯಿ ಸರ್ಕಾರದ ವಿರುದ್ಧ ಹೇಳಿಕೆ ಬಿಡುಗಡೆ ಮಾಡಿ, ‘ಸರ್ಕಾರವು ಪಾಕಿಸ್ತಾನದ ಆಕ್ರಮಣದ ಬಗ್ಗೆ ಉದ್ದೇಶಪೂರ್ವಕವಾಗಿ ರಾಷ್ಟ್ರವನ್ನು ಕತ್ತಲೆಯಲ್ಲಿ ಇರಿಸಿದೆ’ ಎಂದು ಆರೋಪಿಸಿತ್ತು. 'ಸತ್ಯದ ಬಹಿರಂಗಪಡಿಸುವಿಕೆ'ಯಿಂದ ರಾಷ್ಟ್ರದ ಮುಂದೆ ವಾಜಪೇಯಿ ಅವರು ಅಪಹಾಸ್ಯಕ್ಕೆ ಒಳಗಾಗಬಹುದು ಎಂದು ಕಾಂಗ್ರೆಸ್ ಛೇಡಿಸಿತ್ತು. ಅಲ್ಲದೇ, ವಾಜಪೇಯಿ ಸರ್ಕಾರದ ನಿರ್ಲಕ್ಷ್ಯದಿಂದ ದೇಶಕ್ಕೆ ಸೇವೆ ನೀಡಬಲ್ಲ ಅನೇಕ ಕೆಚ್ಚೆದೆಯ ಜೀವಗಳನ್ನು ದೇಶ ಕಳೆದುಕೊಂಡಿದೆ ಎಂದು ಕಾಂಗ್ರೆಸ್ ಕಿಡಿಕಾರಿತ್ತು. ಪರಿಣಾಮ ವಾಜಪೇಯಿ ಸರ್ಕಾರದ ವಿರುದ್ಧ ನಡೆಸಿದ ದಾಳಿಯೇ ಕಾಂಗ್ರೆಸ್ಗೆ ಹಿನ್ನಡೆಯಾಗಿ ತಿಂಗಳ ನಂತರ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಸೋಲುಂಟಾಗಿತ್ತು.
ವಾಜಪೇಯಿ ಸರ್ಕಾರದ ವಿರುದ್ಧ ದೇಶದ್ರೋಹಿ ಹೇಳಿಕೆ
ಮೂರು ವರ್ಷಗಳ ನಂತರ ಮತ್ತೆ ಚುನಾವಣಾ ಪ್ರಚಾರದ ಸಮಯದಲ್ಲಿ ಆಗಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸರ್ಕಾರ ಪಾಕಿಸ್ತಾನದಿಂದ ಸಕ್ಕರೆಯನ್ನು ಆಮದು ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಅಲ್ಲದೇ ಸರ್ಕಾರದ ವಿರುದ್ಧ ದೇಶದ್ರೋಹಿಗಳು ಎಂಬ ಪದವನ್ನೂ ಬಳಸಿದ್ದರು. ಸೋನಿಯಾ ಗಾಂಧಿ ಹೇಳಿಕೆ ವಿರುದ್ಧ ತಿರುಗಿ ಬಿದ್ದಿದ್ದ ಬಿಜೆಪಿ ವಾಜಪೇಯಿ ಅಂತಹ ಹಿರಿಯ ರಾಜಕಾರಣಿಗಳನ್ನೂ ರಾಷ್ಟ್ರದೋಹಿ ಎಂದು ಕರೆಯುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಕಾಂಗ್ರೆಸ್, ನಾವು ವಾಜಪೇಯಿ ಅವರ ಹೆಸರನ್ನು ಉಲ್ಲೇಖಿಸಿಲ್ಲ. ಪಾಕ್ನಿಂದ ಸಕ್ಕರೆ ಆಮದು ಮಾಡಿಕೊಳ್ತಿರುವವರನ್ನು ದೇಶದ್ರೋಹಿಗಳು ಎಂದಿದ್ದೇವೆ ಎಂದು ತಿರುಗೇಟು ನೀಡಿತ್ತು.
ಇದನ್ನೂ ಓದಿ: Rahul Gandhi: ‘ನಾನು ವರುಣ್ ಗಾಂಧಿಯನ್ನು ಪ್ರೀತಿಯಿಂದ ತಬ್ಬಿಕೊಳ್ಳಬಲ್ಲೆ, ಆದರೆ..’ ಸೋದರನ ಬಗ್ಗೆ ರಾಹುಲ್ ಹೇಳಿದ್ದೇನು?
ಸಂಚಲನ ಹುಟ್ಟಿಸಿದ್ದ ಸುಷ್ಮಾ ಸ್ವರಾಜ್ ಹೇಳಿಕೆ
ಯುಪಿಎ ಸರ್ಕಾರ ಪಾಕಿಸ್ತಾನದೊಂದಿಗೆ ಆಡಳಿತಾತ್ಮಕವಾಗಿ ಕಾಣಿಸಿಕೊಂಡಾಗಲೆಲ್ಲ ಬಿಜೆಪಿ ವಾಗ್ದಾಳಿಯನ್ನು ಮಾಡುತ್ತಲೇ ಬಂದಿದೆ. ದೇಶದಲ್ಲಿ ಭಯೋತ್ಪಾದಕ ಕೃತ್ಯಗಳು ಸಂಭವಿಸಿದಾಗ ವಿರೋಧ ಪಕ್ಷ ಬಿಜೆಪಿ ಯುಪಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು ಮಾತ್ರವಲ್ಲದೇ, ಯುದ್ಧೋನ್ಮಾದದ ಹೇಳಿಕೆಗಳನ್ನು ನೀಡುತ್ತಾ ಬಂದಿದೆ. ಇದಕ್ಕೆ ಉದಾಹರಣೆಯೆಂಬಂತೆ 2013ರಲ್ಲಿ ಜಮ್ಮು ಕಾಶ್ಮೀರದ ಪೂಂಚ್ ಸೆಕ್ಟರ್ಗೆ ನುಸುಳಿದ್ದ ಪಾಕ್ನ ಭಯೋತ್ಪಾದಕರು ಭಾರತೀಯ ಸೇನೆಯ ಸುಧಾಕರ ಸಿಂಗ್ ಮತ್ತು ಹೇಮರಾಜ್ ಅವರನ್ನು ಹತ್ಯೆ ಮಾಡಿದ್ದರು. ಈ ವೇಳೆ ಸುಷ್ಮಾ ಸ್ವರಾಜ್ ಅವರು ಒಂದು ತಲೆಗೆ ಹತ್ತು ತಲೆಗಳನ್ನು ತನ್ನಿರಿ ಎಂದು ಕರೆ ನೀಡಿದ್ದರು. ಭಾರತೀಯ ಸೇನಾ ಪಡೆಗಳು ಏನನ್ನೂ ಮಾಡಲು ಸಮರ್ಥವಾಗಿವೆ. ಅದರೆ ಸರ್ಕಾರ ಅವರನ್ನು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳಲು ಬಿಡಬೇಕು ಎಂದೂ ಸುಷ್ಮಾ ಸ್ವರಾಜ್ ಹೇಳಿದ್ದರು.
ಬಿಜೆಪಿ ವಿರುದ್ಧ ಸಪ್ಪೆಯಾದ ಕಾಂಗ್ರೆಸ್ ಹೋರಾಟ
ಇನ್ನು 2016ರಲ್ಲಿ ನಡೆದ ಸರ್ಜಿಕಲ್ ಸ್ಟ್ರೈಕ್ ಘಟನೆಯನ್ನು ಬಿಜೆಪಿಯು ತನ್ನ ಸಾಧನೆ ಎಂಬಂತೆ ಬಿಂಬಿಸಲು ಹೊರಟ ನಂತರ ಕಾಂಗ್ರೆಸ್ ಎಚ್ಚೆತ್ತುಕೊಂಡಿತು. ಸೇನೆ ನಡೆಸಿದ ಕಾರ್ಯಾಚರಣೆಯನ್ನು ಸ್ವಾಗತಿಸಿ ಅಭಿನಂದಿಸಿದ ಕಾಂಗ್ರೆಸ್, ಇದರ ಲಾಭವನ್ನು ಬಿಜೆಪಿ ಪಡೆಯಲು ಯತ್ನಿಸಿದಾಗ ಮತ್ತೆ ಬಿಜೆಪಿಯನ್ನು ಟೀಕಿಸಿತು. ಸೈನಿಕರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಎಂಬಂತೆ ಬಿಜೆಪಿ ಜನರ ಮುಂದೆ ತೋರ್ಪಡಿಸಿದಾಗ ಕಾಂಗ್ರೆಸ್ ಅದಕ್ಕೆ ಸರಿಯಾದ ರೀತಿಯಲ್ಲಿ ಪ್ರತ್ಯುತ್ತರ ನೀಡಲು ವಿಫಲವಾಯಿತು. ಪರಿಣಾಮ ಬಿಜೆಪಿ ಪರ ಜನರ ಒಲವು ಹೆಚ್ಚಿತು. ಇನ್ನೊಂದೆಡೆ ಬಾಲಾಕೋಟ್ ವೈಮಾನಿಕ ದಾಳಿಯ ಯಶಸ್ಸನ್ನು ಕೂಡ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿತು. ಪರಿಣಾಮ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಬೇಕಾಯಿತು.
ದಿಗ್ವಿಜಯ್ ಸಿಂಗ್ ಹೇಳಿಕೆಗೆ ಕಾಂಗ್ರೆಸ್ನ ಅಸಮ್ಮತಿ
ಇದೆಲ್ಲದರ ಮಧ್ಯೆ ಕಾಂಗ್ರೆಸ್ ರಾಷ್ಟ್ರೀಯ ಭದ್ರತೆಯ ವಿಚಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ ಅನ್ನೋದು ಸ್ಪಷ್ಟವಾಗಿದ್ದು, ಇತ್ತೀಚಿಗೆ ಕಾಂಗ್ರೆಸ್ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ನೀಡಿದ ಸೇನಾ ಕಾರ್ಯಾಚರಣೆಯ ಹೇಳಿಕೆ ವಿವಾದವಾಗುತ್ತಿದ್ದಂತೆ ಈ ವಿವಾದದಿಂದ ಅಂತರ ಕಾಯ್ದುಕೊಳ್ಳಲು ಕೈ ಪಾಳಯ ಪ್ರಯತ್ನಿಸಿದೆ. ಅತ್ತ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ನ ಹಿರಿಯ ನಾಯಕರು ಈ ಹೇಳಿಕೆ ಪಕ್ಷದ್ದಲ್ಲ, ದಿಗ್ವಿಜಯ್ ಸಿಂಗ್ ಅವರ ವೈಯಕ್ತಿಕ ಹೇಳಿಕೆ ಎಂದು ಹೇಳಿದ್ದಾರೆ. ರಾಷ್ಟ್ರೀಯ ಭದ್ರತೆಯ ವಿಚಾರಗಳ ಮೇಲೆ ಮೋದಿ ಸರ್ಕಾರದ ವಿರುದ್ಧ ದಾಳಿ ನಡೆಸುವಾಗ ಎಚ್ಚರಿಕೆಯ ಹೆಜ್ಜೆ ಇಡಬೇಕು ಅನ್ನೋದನ್ನು ಕಾಂಗ್ರೆಸ್ ಅರಿತುಕೊಂಡಿದೆ ಅನ್ನೋದು ಸ್ಪಷ್ಟವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ