ಮಾಜಿ ಪ್ರಧಾನ ಮಂತ್ರಿ (Former Prime Minister) ಚೌಧರಿ ಚರಣ್ ಸಿಂಗ್ ಜನ್ಮದಿನವನ್ನು (Chaudhary Charan Singh) (ಡಿಸೆಂಬರ್ 23) ರಾಷ್ಟ್ರೀಯ ರೈತರ ದಿನವಾಗಿ (ಕಿಸಾನ್ ದಿವಸ್) ಆಚರಿಸಲಾಗುತ್ತದೆ.(National Farmers' Day ) ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ( Rajnath Singh ) ಈ ದಿನದ ಅಂಗವಾಗಿ ದೇಶದ ರೈತರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಭಾರತದ ಅಭಿವೃದ್ಧಿ ಪ್ರಯಾಣಕ್ಕೆ ಕೈಜೋಡಿಸಿದ ಹಾಗೂ ಸಮಾಜದ ದುರ್ಬಲ ವರ್ಗಗಳ ಸಬಲೀಕರಣಕ್ಕಾಗಿ ಜೀವಮಾನದಾದ್ಯಂತ ಶ್ರಮಿಸಿದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ರನ್ನು ರಾಜನಾಥ್ ಸಿಂಗ್ ಸ್ಮರಿಸಿದ್ದು, “ರೈತರ ಉನ್ನತ ನಾಯಕ” (peasant leader)ಎಂದು ಕರೆದಿದ್ದಾರೆ.
ದೇಶದ ರೈತರಿಗೆ ಶುಭಾಶಯ ಕೋರಿ ಟ್ವೀಟ್ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್:
ಚೌಧರಿ ಚರಣ್ ಸಿಂಗ್ ಜನ್ಮದಿನವಾದ ಡಿಸೆಂಬರ್ 23 ಅನ್ನು ರೈತರ ದಿನವನ್ನಾಗಿ ಆಚರಿಸಲಾಗುತ್ತದೆ. ತಮ್ಮ ಪರಿಶ್ರಮದ ಮೂಲಕ ಹೊಲದಲ್ಲಿ ಬೆಳೆ ಹಾಗೂ ದೇಶದಲ್ಲಿ ಸಂತೋಷ ಸೃಷ್ಟಿಸುವ ದೇಶದ ಬೆನ್ನುಲುಬು ಎಂದೇ ಕರೆಯಲಾದ ಎಲ್ಲಾ ಪರಿಶ್ರಮಿ ರೈತರಿಗೆ ಈ ದಿನದ ಹೃತ್ಪೂರ್ವಕ ಅಭಿನಂದನೆಗಳು. ಪ್ರಧಾನಮಂತ್ರಿ ಶ್ರೀ @narendramodi (ನರೇಂದ್ರ ಮೋದಿ) ಅವರ ಸರ್ಕಾರವು ರೈತರ ಕಲ್ಯಾಣಕ್ಕಾಗಿ ಸಂಪೂರ್ಣವಾಗಿ ಸಮರ್ಪಿತವಾಗಿದೆ.
ದೇಶದ ಮಾಜಿ ಪ್ರಧಾನ ಮಂತ್ರಿಗಳಾದ ಚೌಧುರಿ ಚರಣ್ ಸಿಂಗ್ಗೆ ಸಾಷ್ಟಾಂಗ ವಂದನೆಗಳು. ಸಮಾಜದ ಅಭಿವೃದ್ಧಿ ಪ್ರಯಾಣಕ್ಕೆ ಕೈಜೋಡಿಸಿದ ಹಾಗೂ ಸಮಾಜದಲ್ಲಿರುವ ದುರ್ಬಲ ವರ್ಗಗಳ ಸಬಲೀಖರಣಕ್ಕಾಗಿ ಜೀವಮಾನವಿಡೀ ಶ್ರಮಿಸಿದ ಚರಣ್ ಸಿಂಗ್ ದೇಶದಲ್ಲಿ ಪ್ರಜಾಪ್ರಭುತ್ವ ಬಲಪಡಿಸುವಲ್ಲಿ ಪರಿಣಾಮಕಾರಿ ಪಾತ್ರ ವಹಿಸಿದ್ದಾರೆ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಡಿಸೆಂಬರ್ 23 ಅನ್ನು ರಾಷ್ಟ್ರೀಯ ರೈತರ ದಿನವಾಗಿ ಆಚರಿಸುವ ಹಿಂದಿನ ಉದ್ದೇಶವೇನು?
ದೇಶದ ಐದನೇ ಪ್ರಧಾನಿಗಳಾದ ಚೌಧರಿ ಚರಣ್ ಸಿಂಗ್ ಜನ್ಮದಿನವನ್ನು ಗುರುತಿಸುವ ಸಲುವಾಗಿ ಪ್ರತಿ ವರ್ಷ ಡಿಸೆಂಬರ್ 23 ಅನ್ನು ರಾಷ್ಟ್ರೀಯ ರೈತರ ದಿನ ಅಥವಾ ಕಿಸಾನ್ ದಿವಸವನ್ನಾಗಿ ಆಚರಿಸಲಾಗುತ್ತದೆ. ರೈತ ನಾಯಕ ಎಂದೇ ಚಿರಪರಿಚತವಾಗಿದ್ದ ಚೌಧರಿ ಚರಣ್ ಸಿಂಗ್ ರೈತರ ಜೀವನ ಸುಧಾರಿಸುವುದಕ್ಕಾಗಿ ಹಲವಾರು ನೀತಿಗಳನ್ನು ಜಾರಿಗೆ ತಂದರು.
ಚೌಧರಿ ಚರಣ್ ಸಿಂಗ್ ಉತ್ತರ ಪ್ರದೇಶದ ಹಾಪುರದ ನೂರ್ಪುರದಲ್ಲಿ ಜನಿಸಿದರು. ಅವರು ಜುಲೈ 28, 1979 ಮತ್ತು ಜನವರಿ 14, 1980ರ ನಡುವೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ‘ಭಾರತದ ರೈತರ ಚಾಂಪಿಯನ್’ ಎಂದೇ ಕರೆಯಿಸಿಕೊಂಡಿದ್ದ ಚೌಧರಿ ಚರಣ್ ಸಿಂಗ್ ಜನ್ಮದಿನವನ್ನು ಕಿಸಾನ್ ದಿವಸ್ ಆಗಿ ಆಚರಿಸಲು ಭಾರತ ಸರಕಾರವು 2001ರಲ್ಲಿ ನಿರ್ಧರಿಸಿತು.
ರೈತರ ಕಷ್ಟಕ್ಕೆ ಬೆಂಬಲವಾಗಿ ನಿಂತರು:
ಮಹಾತ್ಮಾ ಗಾಂಧಿಯವರಿಂದ ಪ್ರೇರಿತವಾದ ಸ್ವಾತಂತ್ರ್ಯ ಚಳುವಳಿಯ ಭಾಗವಾಗಿ ಚರಣ್ ಸಿಂಗ್ ರಾಜಕೀಯಕ್ಕೆ ಪ್ರವೇಶ ಮಾಡಿದರು. 1937ರಲ್ಲಿ ಯುನೈಟೆಡ್ ಪ್ರಾಂತ್ಯಗಳ ಶಾಸಕಾಂಗ ಸಭೆಗೆ ಆಯ್ಕೆಯಾದರು. ಹಳ್ಳಿಗಳ ಆರ್ಥಿಕ ಸ್ಥಿತಿಗಳಿಗೆ ಹಾನಿಕಾರಕವಾಗಿದ್ದ ಕಾನೂನುಗಳ ಕುರಿತು ಇವರು ಹೆಚ್ಚಿನ ಆಸಕ್ತಿ ಕಾಳಜಿ ವಹಿಸಿದ್ದರು. ಸಣ್ಣ ಹಾಗೂ ಅತಿಮುಖ್ಯವಲ್ಲದ ರೈತರ ಸಮಸ್ಯೆಗಳನ್ನು ಮುನ್ನಲೆಗೆ ತರುವಲ್ಲಿ ಚರಣ್ ಸಿಂಗ್ ಪ್ರಮುಖ ಪಾತ್ರ ವಹಿಸಿದ್ದಾರೆ.
ಕ್ರಾಂತಿಕಾರಿ ಭೂಸುಧಾರಣಾ ಕಾನೂನುಗಳ ಕರಡು ಹಾಗೂ ಅಂಗೀಕಾರ ದೃಢಪಡಿಸಿದ ನಂತರ 1950ರಿಂದಲೇ ಉತ್ತರ ಪ್ರದೇಶದಲ್ಲಿ ಗಮನಸೆಳೆದ ಪ್ರಬಲ ವ್ಯಕ್ತಿ ಎಂದೆನಿಸಿದರು. 1959ರಲ್ಲಿ ಅವರು ಮೊದಲ ಬಾರಿಗೆ ಆಗಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರ "ಸಮಾಜವಾದಿ ಮತ್ತು ಸಾಮೂಹಿಕ ಭೂ ನೀತಿಗಳನ್ನು" ವಿರೋಧಿಸಿದರು. 1967ರಲ್ಲಿ ಕಾಂಗ್ರೆಸ್ ಪಕ್ಷದಿಂದ ಪಕ್ಷಾಂತರಗೊಂಡು ವಿರೋಧ ಪಕ್ಷದ ಪರವಾಗಿ ನಿಂತರು. ಅವರು 1967ರಲ್ಲಿ ಮತ್ತು ನಂತರ 1970ರಲ್ಲಿ ಉತ್ತರ ಪ್ರದೇಶದ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿಯಾದರು.
Published by:vanithasanjevani vanithasanjevani
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ