ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ವೇಳೆ ಮಹೇಶ್ ಬಾಬು ನಟನೆಯ ಸಿನಿಮಾದ ಸದ್ದು


Updated:July 20, 2018, 1:18 PM IST
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ವೇಳೆ ಮಹೇಶ್ ಬಾಬು ನಟನೆಯ ಸಿನಿಮಾದ ಸದ್ದು
ಮಹೇಶ್ ಬಾಬು

Updated: July 20, 2018, 1:18 PM IST
- ನ್ಯೂಸ್18 ಕನ್ನಡ

ನವದೆಹಲಿ(ಜು. 20): ಕೇಂದ್ರದ ವಿರುದ್ಧ ಟಿಡಿಪಿ ಮಂಡಿಸಿರುವ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ತೀವ್ರ ವಾಗ್ವಾದಗಳು ನಡೆದವು. ಕುಮಾರಸ್ವಾಮಿ, ಜನಾರ್ದನ ರೆಡ್ಡಿ ಹೆಸರುಗಳೂ ಬಂದು ಹೋದವು. ಟಿಡಿಪಿಯ ಗುಂಟೂರು ಸಂಸದ ಜಯದೇವ್ ಗಲ್ಲಾ ಅವರ ಒಂದು ಗಂಟೆಯ ಭಾಷಣದಲ್ಲಿ ಕೇಂದ್ರದಿಂದ ಆಂಧ್ರಕ್ಕಾಗಿರುವ ಅನ್ಯಾಯವನ್ನು ಎತ್ತಿತೋರಿಸಲಾಯಿತು. ಈ ವೇಳೆ ಅವರು ಮಹೇಶ್ ಬಾಬು ನಟನೆಯ ಟಾಲಿವುಡ್ ಸೂಪರ್ ಹಿಟ್ ಸಿನಿಮಾ “ಭರತ್ ಆನೆ ನೇನು” (ಭರತ್ ಆದ ನಾನು) ಉದಾಹರಣೆಯನ್ನೂ ನೀಡಿದರು. ಈ ತೆಲುಗು ಸಿನಿಮಾಗೂ ಆಂಧ್ರದ ಜನರ ಪರಿಸ್ಥಿತಿಗೂ ಹೋಲಿಕೆಯಾಗುತ್ತಿದೆ ಎಂದು ಜಯದೇವ್ ಗಲ್ಲಾ ಅಭಿಪ್ರಾಯಪಟ್ಟರು.

ಏನಿದು ಸಿನಿಮಾ?
ಈ ವರ್ಷದ ಏಪ್ರಿಲ್ 20ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್​ನಲ್ಲಿ ಯಶಸ್ಸು ಕಂಡಿರುವ “ಭರತ್ ಆನೆ ನೇನು” ಸಿನಿಮಾ ಒಂದು ರಾಜಕೀಯ ಥ್ರಿಲ್ಲರ್ ಕಥೆ ಹೊಂದಿದೆ. ಕೊರಟಾಲ ಶಿವ ನಿರ್ದೇಶಿಸಿರುವ ಹಾಗೂ ಮಹೇಶ್ ಬಾಬು, ಪ್ರಕಾಶ್ ರೈ ಮೊದಲಾದವರು ಅಭಿನಯಿಸಿರುವ ಈ ಚಿತ್ರದ ನಾಯಕ ಒಬ್ಬ ಮುಖ್ಯಮಂತ್ರಿಯಾಗಿ ಜನರಿಗೆ ರೋಲ್ ಮಾಡೆಲ್ ಆಗುತ್ತಾನೆ. ತಾನು ಕೊಟ್ಟ ಭರವಸೆ ಅಥವಾ ವಚನವನ್ನು ಶತಾಯಗತಾಯ ಉಳಿಸಿಕೊಳ್ಳುವ ಮನೋಭಾವ ನಾಯಕನದ್ದು. ಚುನಾವಣೆಗೆ ಮುನ್ನ ಹಲವು ಭರವಸೆಗಳನ್ನು ಕೊಡುವ ರಾಜಕಾರಣಿಗಳು, ಅಧಿಕಾರಕ್ಕೆ ಬಂದ ಬಳಿಕ ಎಲ್ಲವನ್ನೂ ಮರೆತುಬಿಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಭರತ್ ಆನೆ ನೇನು ಸಿನಿಮಾದ ಕಥೆ ನಮ್ಮ ರಾಜಕಾರಣಿಗಳಿಗೆ ನೀತಿಪಾಠವಾಗಿದೆ.

ಆಂಧ್ರಪ್ರದೇಶಕ್ಕೆ ವಿಶೇಷ ನೆರವು ಸಿಗುವ ಭರವಸೆಯೊಂದಿಗೆ ಎನ್​ಡಿಎ ಮೈತ್ರಿಕೂಟ ಸೇರಿದ್ದ ಟಿಡಿಪಿ ನಿರಾಸೆಗೊಂಡು ಈಗ ಕೂಟದಿಂದ ಹೊರಬಂದಿದೆ. ಕೇಂದ್ರವು ತಾನು ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ ಎಂಬುದು ಟಿಡಿಪಿ ಆರೋಪ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ವೇಳೆ ಟಿಡಿಪಿ ಸಂಸದ ಜಯದೇವ್ ಗಲ್ಲಾ ಅವರು ಇದೇ ಹಿನ್ನೆಲೆಯಲ್ಲಿ ಭರತ್ ಆನೆ ನೇನು ಸಿನಿಮಾವನ್ನು ಕೋಟ್ ಮಾಡಿದ್ದಾರೆ.

ನಾನು ತಿನ್ನುವುದಿಲ್ಲ, ಬೇರೆಯವರನ್ನೂ ತಿನ್ನಲು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಈಗ ಭ್ರಷ್ಟ ಆರೋಪಿ ಜನಾರ್ದನ ರೆಡ್ಡಿ ಪರವಾಗಿ ನಿಂತಿದ್ದಾರೆ ಎಂದು ಮೋದಿಯವರ ವಚನಭ್ರಷ್ಟತೆಗೆ ಟಿಡಿಪಿ ಸಂಸದರು ಉದಾಹರಣೆ ನೀಡಿದರು.
First published:July 20, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ