ದೆಹಲಿ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಎಎಪಿಗೆ ಚಿಕ್ಕ ರಾಜ್ಯದ ಗೆಲುವು ಯಾವ್ಯಾವ ಕಾರಣಕ್ಕೆ ಮುಖ್ಯ?

'ಮನೆ ಗೆದ್ದು ಮಾರು ಗೆಲ್ಲು' ಎಂಬ ಮಾತಿನಂತೆ ಅರವಿಂದ ಕೇಜ್ರಿವಾಲ್ ದೆಹಲಿ ಗೆದ್ದು ಬೇರೆಯದನ್ನೇ ಗೆಲ್ಲಲೊರಟಿದ್ದಾರೆ. ಮಾತಿನಷ್ಟೇ ಅವರ ಮೌನವೂ ಸ್ಟ್ರಾಟಜಿ. ದೆಹಲಿ ಚುನಾವಣಾ ಗೆಲುವಿನ ಬಳಿಕ ಅರವಿಂದ ಕೇಜ್ರಿವಾಲ್ ಕನಸುಗಳು ಗರಿಗೆದರಿದರೆ ಅಚ್ಚರಿ ಪಡಬೇಕಿಲ್ಲ.

ಅರವಿಂದ ಕೇಜ್ರಿವಾಲ್, ಪ್ರಧಾನಿ ಮೋದಿ, ಸೋನಿಯಾ ಗಾಂಧಿ.

ಅರವಿಂದ ಕೇಜ್ರಿವಾಲ್, ಪ್ರಧಾನಿ ಮೋದಿ, ಸೋನಿಯಾ ಗಾಂಧಿ.

  • Share this:
ನವದೆಹಲಿ: ಈ ಬಾರಿಯ ದೆಹಲಿ ವಿಧಾನಸಭಾ ಚುನಾವಣೆ ಹಲವು ಕಾರಣಗಳಿಗೆ ಬಹಳ ಮುಖ್ಯವಾದುದು. ದೆಹಲಿ ಚಿಕ್ಕ ರಾಜ್ಯವಾದರೂ ಇಲ್ಲಿನ ಸೋಲು- ಗೆಲುವುಗಳು ಬೀರುವ ಪರಿಣಾಮಗಳು‌ ಮಾತ್ರ ದೊಡ್ಡವು.

ಹಲವು ಕಾರಣಗಳಿಗೆ ಎಂಬುದನ್ನು ಹಲವು ಪಕ್ಷಗಳ ದೃಷ್ಟಿಯಿಂದ ನೋಡಬೇಕಾಗುತ್ತದೆ. ಬಿಜೆಪಿ ದೃಷ್ಟಿಯಿಂದ ನೋಡುವುದಾದರೆ, 2014ರಿಂದ ಮೇಲಕ್ಕೇರಿದ್ದ ಬಿಜೆಪಿ ಗೆಲುವಿನ‌ ಗ್ರಾಫ್ 2017ರಿಂದ ಕೆಳಮುಖವಾಗತೊಡಗಿದೆ. 2019ರಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೂ ಅದು ರಾಜ್ಯಗಳಲ್ಲಿ ಇದ್ದ ಅಧಿಕಾರವನ್ನು ಕಳೆದುಕೊಳ್ಳುತ್ತಿದೆ. ಮಹಾರಾಷ್ಟ್ರದಲ್ಲಿ 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ' ಎಂಬಂತಾಯಿತು. ಹರಿಯಾಣದಲ್ಲಿ ಪ್ರಯಾಸ ಪಡಬೇಕಾಯಿತು. ಜಾರ್ಖಂಡಿನಲ್ಲಿ ಅಧಿಕಾರ ಮರೀಚಿಕೆಯಾಯಿತು. ಈ ರೀತಿಯ ಸತತ ಸೋಲಿನಿಂದ ಹೊರಬರಲು ಮಾತ್ರವಲ್ಲ, ಮುಂಬರುವ ಸಾಲು ಸಾಲು ಚುನಾವಣೆಗಳಿಗೆ ಹೊಸ ಹುಮ್ಮಸ್ಸಿನಿಂದ ಅಣಿಯಾಗುವ ದೃಷ್ಟಿಯಿಂದ ಬಿಜೆಪಿಗೆ ಗೆಲುವು ಬೇಕಾಗಿದೆ. ಒಂದೊಮ್ಮೆ ಈಗ ದೆಹಲಿ ಚುನಾವಣೆಯಲ್ಲಿ ಸೋತರೆ ಈ ವರ್ಷಾಂತ್ಯದಲ್ಲೇ ಬರುವ ಬಿಹಾರ ಚುನಾವಣೆ ಮೇಲೆ ಪರಿಣಾಮ ಬೀರಲಿದೆ. ಬಿಹಾರ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದೇಯಾದರೆ ಮುಂದೆ ಅದು ಮತ್ತೊಮ್ಮೆ ಸರಣಿ ಸ್ವರೂಪ ಪಡೆದುಕೊಳ್ಳಬಹುದು. ಹಾಗಾಗಿ ಚುನಾವಣಾ ರಾಜಕಾರಣದ ದೃಷ್ಟಿಯಿಂದ ಉಳಿದೆಲ್ಲಾ ಪಕ್ಷಗಳಿಗಿಂತ ಬಿಜೆಪಿಗೆ ದೆಹಲಿ ವಿಧಾನಸಭೆ ಗೆಲುವು ಬಹಳ ಮುಖ್ಯವಾಗಿದೆ.

ನಂತರದ ಸರದಿ; ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ಕಾಯಿದೆಗಳ ವಿಷಯದಲ್ಲಿ. ಈ ಎರಡು ಕಾಯಿದೆಗಳ ವಿಷಯದಲ್ಲಿ ದೇಶಾದ್ಯಂತ ಬಿಜೆಪಿ ನಾಯಕರು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಪ್ರತಿರೋಧ ವ್ಯಕ್ತವಾಗಿದೆ. ಹಾಗಾಗಿ ಜನ ಈ ಕಾಯಿದೆಗಳ ಪರ ಇದ್ದಾರೆ ಎಂದು ಹೇಳಿ ಸಮರ್ಥಿಸಿಕೊಳ್ಳಲು ಮತ್ತು ಪ್ರತಿಭಟನಾನಿರತರಿಗೆ ತಕ್ಕ ಉತ್ತರ ನೀಡಲು ಬಿಜೆಪಿ ಗೆಲುವಿನ ನಿರೀಕ್ಷೆಯಲ್ಲಿದೆ.

ಇದಲ್ಲದೆ ಸದ್ಯ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು, ನಿರುದ್ಯೋಗ, ಬೆಲೆ ಏರಿಕೆಯಂಥ ಸಮಸ್ಯೆಗಳು ಹೆಚ್ಚು ಚರ್ಚೆಯಾಗುತ್ತಿವೆ. ಪ್ರತಿಪಕ್ಷಗಳಿಗೆ ಅಸ್ತ್ರಗಳಾಗಿ ಪರಿಣಮಿಸಿವೆ. ಸರ್ಕಾರ ಮತ್ತು ಅದರ ನೇತಾರರಿಗೆ ಸಮಸ್ಯೆಗಳ ಬಗ್ಗೆ ಸಮರ್ಥಿಸಿಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಚುನಾವಣೆಯ ಗೆಲುವಿನಿಂದ ವಿಷಯಾಂತರ ಮತ್ತು ಸಮರ್ಥನೆ ಸಾಧ್ಯ ಎಂದುಕೊಂಡಿದೆ. ಇಂಥ ಹಲವು ಕಾರಣಗಳಿಗೆ ಗೆಲುವು ಬೇಕಾಗಿದೆ.

ಆಮ್ ಆದ್ಮಿ ಪಕ್ಷದ ದೃಷ್ಟಿಯಿಂದ ನೋಡುವುದಾದರೆ ಈವರೆಗೆ ಬಂದ ಎಲ್ಲಾ ಸಮೀಕ್ಷೆಗಳು ಆಮ್ ಆದ್ಮಿ ಪಕ್ಷವೇ ಗೆಲ್ಲಲಿದೆ ಎಂದಿವೆ. ದಿಲ್ಲಿ ಗಲ್ಲಿ ಗಲ್ಲಿಗಳಲ್ಲಿ ಅಲೆದಾಡಿದರೆ ಸಮೀಕ್ಷೆಗಳು ಸತ್ಯಕ್ಕೆ ಸನಿಹವಾಗಿವೆ ಎಂದೇ ಅನಿಸಲಿದೆ. ಆದರೆ ಬಿಜೆಪಿ ಹಾಕಿರುವ 'ಶ್ರಮ'ಕ್ಕೆ ಕೆಲ ಸತ್ಯ ಬದಲಿಸುವ ಶಕ್ತಿ ಇದೆ ಎಂಬ ಲೆಕ್ಕಾಚಾರವೂ ಕೇಳಿಬರುತ್ತಿದೆ‌. ಅದರಲ್ಲೂ ಬಹಿರಂಗ ಪ್ರಚಾರದ ಕಡೆಯ ದಿನ 'ಬಿಜೆಪಿಯ ಚಾಣಾಕ್ಯ' ಅಮಿತ್ ಶಾ 'ಶಾಕಿಂಗ್' ಫಲಿತಾಂಶ ಬರಲಿದೆ ಎಂದು ಭವಿಷ್ಯ ನುಡಿದಿರುವುದು ಸತ್ಯ ಸುಳ್ಳಾಗುವುದರ ಸುಳಿವು ಎಂದೂ ಹೇಳಲಾಗುತ್ತದೆ. ಉತ್ತರ ಪ್ರದೇಶದ ಚುನಾವಣೆ ಸಂದರ್ಭದಲ್ಲಿ ಮೋದಿ ಕೂಡ ವಾರಣಾಸಿಯಲ್ಲಿ ಇಂಥದೇ 'ಶಾಕಿಂಗ್ ವಾಗ್ದಾನ' ಮಾಡಿದ್ದರು.

ಇನ್ನೂ ಮೊದಲೆಲ್ಲಾ ವಾಚಾಳಿಯಂತೆ ಗೋಚರಿಸಿ ಪಂಜಾಬ್-ಗೋವಾ ಸೋಲಿನ ಬಳಿಕ ಮೌನಕ್ಕೆ ಶರಣಾಗಿ, ಕಾಯಕಕ್ಕೆ ಬದ್ದರಾದ ಅರವಿಂದ ಕೇಜ್ರಿವಾಲ್ ಮಹತ್ವಾಕಾಂಕ್ಷಿ ರಾಜಕಾರಣಿ ಎಂಬುದನ್ನೂ ಮರೆಯುವಂತಿಲ್ಲ. 'ಮನೆ ಗೆದ್ದು ಮಾರು ಗೆಲ್ಲು' ಎಂಬ ಮಾತಿನಂತೆ ಅರವಿಂದ ಕೇಜ್ರಿವಾಲ್ ದೆಹಲಿ ಗೆದ್ದು ಬೇರೆಯದನ್ನೇ ಗೆಲ್ಲಲೊರಟಿದ್ದಾರೆ. ಮಾತಿನಷ್ಟೇ ಅವರ ಮೌನವೂ ಸ್ಟ್ರಾಟಜಿ. ದೆಹಲಿ ಚುನಾವಣಾ ಗೆಲುವಿನ ಬಳಿಕ ಅರವಿಂದ ಕೇಜ್ರಿವಾಲ್ ಕನಸುಗಳು ಗರಿಗೆದರಿದರೆ ಅಚ್ಚರಿ ಪಡಬೇಕಿಲ್ಲ.

ಇದನ್ನು ಓದಿ: ದೆಹಲಿ ಚುನಾವಣೆ: ಬಿಜೆಪಿ, ಎಎಪಿ ಅಬ್ಬರದ ಬಹಿರಂಗ ಪ್ರಚಾರಕ್ಕೆ ತೆರೆ; ಶನಿವಾರದ ಮತದಾನಕ್ಕೆ ಕಾತರ

ಕಾಂಗ್ರೆಸ್ ಪಕ್ಷಕ್ಕೆ ತಾನು ಗೆಲ್ಲಲು ಸಾಧ್ಯವಿಲ್ಲ ಎಂಬುದು ಗೊತ್ತಿದೆ. ಅದರಿಂದಾಗಿ ಅದು ಪ್ರಮುಖ ವೈರಿ ಬಿಜೆಪಿಯ ಸೋಲಿಗಾಗಿ ಮಾತ್ರವೇ ಸ್ಪರ್ಧೆ ಮಾಡಿದೆ. ತನ್ನ ಒಂದು ಕಣ್ಣು ಹೋದರೂ ಪರವಾಗಿಲ್ಲ, ವೈರಿಯ ಎರಡೂ ಕಣ್ಣನ್ನು ತೆಗೆಯಲು ನಿಶ್ಚಯಿಸಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮುಖಭಂಗವಾದರೆ ಬಿಜೆಪಿಯ ನೈತಿಕ ಸ್ಥೈರ್ಯ ಕುಸಿಯಲಿದೆ ಎಂಬುದು ಕಾಂಗ್ರೆಸ್ ಲೆಕ್ಕಾಚಾರ. ಅಂಥ ಪರಿಸ್ಥಿತಿ ಎದುರಾದರೆ ದೇಶಾದ್ಯಂತ ಬಿಜೆಪಿ ವಿರುದ್ಧ ಜನಾಭಿಪ್ರಾಯ ರೂಪಿಸಬಹುದು ಎಂಬುದು ಅದರ ಯೋಜನೆ.
First published: